FPI: ಭಾರತದ ಷೇರುಪೇಟೆಯಿಂದ ಎಫ್ಪಿಐ ಹೊರಬೀಳುತ್ತಿರುವುದೇಕೆ? ಶೆಲ್ ಕಂಪನಿಗಳನ್ನು ದೂರವಿಡಲು ಸೆಬಿ ಮಾಡಿದ ನಿಯಮ ಕಾರಣವಾ?
SEBI New Rule: 2024ರ ಜನವರಿ ತಿಂಗಳಲ್ಲಿ ಎಫ್ಪಿಐಗಳ 16,601 ಕೋಟಿ ರೂ ಹೂಡಿಕೆಗಳು ಭಾರತದ ಈಕ್ವಿಟಿಯಿಂದ ಹೊರಹೋಗಿವೆ. ಹೂಡಿಕೆದಾರರ ವಿವರ ಬಹಿರಂಗಪಡಿಸುವಂತೆ ಎಫ್ಪಿಐಗಳಿಗೆ ಸೆಬಿ ನಿಯಮ ರೂಪಿಸಿತ್ತು. ಶೆಲ್ ಕಂಪನಿಗಳನ್ನು ದೂರವಿಡಲು ಸೆಬಿ ರೂಪಿಸಿದ ನಿಯಮಕ್ಕೆ ಎಫ್ಪಿಐಗಳು ಬೆದರಿದವಾ?
ನವದೆಹಲಿ, ಜನವರಿ 24: ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಭಾರತದ ಷೇರುಪೇಟೆಯನ್ನು ಪ್ರವಹಿಸಿದ್ದ ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆದಾರರು (FPI- foreign portfolio investment) ಹೊಸ ವರ್ಷದ ಮೊದಲ ತಿಂಗಳಲ್ಲಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಹೊರನಡೆಯತೊಡಗಿದ್ದಾರೆ. ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳು ಈ ವಾರ ಶೇ. 4ರಷ್ಟು ಕುಸಿತ ಕಂಡಿವೆ. ಇದರ ಪರಿಣಾಮವಾಗಿ ಲಕ್ಷಾಂತರ ಕೋಟಿ ರೂ ಮೌಲ್ಯದ ಷೇರುಸಂಪತ್ತು ಕರಗಿಹೋಗಿದೆ. ಫಾರೀನ್ ಪೋರ್ಟ್ಫೋಲಿಯೋ ಇನ್ವೆಸ್ಟರ್ಗಳು ತಮ್ಮ ಹೂಡಿಕೆಗಳನ್ನು ಹಿಂಪಡೆದುಕೊಳ್ಳುತ್ತಿರುವುದು ಷೇರುಸಂಪತ್ತು ಕರಗಲು ಪ್ರಮುಖ ಕಾರಣ ಎನ್ನಲಾಗಿದೆ.
ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಸಿಟರಿ ಲಿ ಪ್ರಕಟಿಸಿದ ಇತ್ತೀಚಿನ ಮಾಹಿತಿ ಪ್ರಕಾರ ಭಾರತದ ಷೇರು ಮಾರುಕಟ್ಟೆಯಲ್ಲಿ ಎಫ್ಪಿಐಗಳು ಹಿಂತೆಗೆದುಕೊಂಡಿರುವ ಒಟ್ಟು ಹೂಡಿಕೆ ಮೊತ್ತ 16,601ಕೋಟಿ ರೂ ಇದೆ.
ಇದನ್ನೂ ಓದಿ: Indian Economy: ರಾಯ್ಟರ್ಸ್ ಸಮೀಕ್ಷೆ: 2023-24ರಲ್ಲಿ ಭಾರತದ ಆರ್ಥಿಕತೆ ಶೇ. 6.9ರಷ್ಟು ವೃದ್ಧಿ ಸಾಧ್ಯತೆ
ಸೆಬಿ ಹೊಸ ನಿಯಮ ಎಫ್ಪಿಐ ನಿರ್ಗಮನಕ್ಕೆ ಕಾರಣವಾ?
ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆಗಳು ತಮ್ಮ ಶೇ. 50ರಷ್ಟು ಎಯುಎಂ ಹಣವನ್ನು ಒಂದೇ ಸಮೂಹ ಸಂಸ್ಥೆ ಮೇಲೆ ಹೂಡಿಕೆ ಮಾಡಿದ್ದರೆ ಮತ್ತು ಇಲ್ಲಿಯ ಷೇರು ಮಾರುಕಟ್ಟೆಯಲ್ಲಿ 25,000 ಕೋಟಿ ರೂಗೂ ಹೆಚ್ಚು ಹೂಡಿಕೆಗಳಿದ್ದರೆ, ಇಂಥ ಎಫ್ಪಿಐಗಳು ತಮ್ಮ ಹೂಡಿಕೆದಾರರ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಸೆಬಿ ಸಂಸ್ಥೆ ಕಳೆದ ವರ್ಷ ನಿಯಮ ಹಾಕಿತ್ತು. ಕೃತಕವಾಗಿ ಷೇರುಬೆಲೆ ನಿಯಂತ್ರಿಸಲು ಶೆಲ್ ಕಂಪನಿಗಳ ಬಳಕೆಯನ್ನು ನಿಯಂತ್ರಿಸಲು ಈ ನಿಯಮ ರೂಪಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: Tax: ನೇರ ತೆರಿಗೆ, ಐಟಿಆರ್ ಸಲ್ಲಿಕೆಯಲ್ಲಿ 10 ವರ್ಷದಲ್ಲಿ ಭರ್ಜರಿ ಹೆಚ್ಚಳ: ಸಿಬಿಡಿಟಿ ಅಂಕಿ ಅಂಶ ಬಿಡುಗಡೆ
ಹೂಡಿಕೆದಾರರ ವಿವರ ಬಹಿರಂಗಪಡಿಸಲು ಎಫ್ಪಿಐಗಳಿಗೆ 2024 ಜನವರಿ 29 ರವರೆಗೂ ಕಾಲಾವಕಾಶ ಇದೆ. ಒಂದು ವೇಳೆ ವಿವರ ತಿಳಿಸದಿದ್ದರೆ ತಮ್ಮ ಹೂಡಿಕೆಯನ್ನು ಇಳಿಸಬೇಕು ಎಂದು ಸೂಚಿಸಿದೆ. ಆದರೆ, ಹೂಡಿಕೆ ತಗ್ಗಿಸಲು ಮತ್ತಷ್ಟು ಆರು ತಿಂಗಳ ಕಾಲಾವಕಾಶ ಇರುತ್ತದೆ.
ಏನಿದು ಎಫ್ಪಿಐ?
ಎಫ್ಪಿಐ ಎಂದರೆ ಫಾರೀನ್ ಪೋರ್ಟ್ಫೋಲಿಯೋ ಇನ್ವೆಸ್ಟ್ಮೆಂಟ್. ಮ್ಯೂಚುವಲ್ ಫಂಡ್ ರೀತಿಯದ್ದು. ಆದರೆ ಬೇರೆ ದೇಶಗಳ ಹೂಡಿಕೆದಾರರ ಹಣವನ್ನು ಎಫ್ಪಿಐ ಹೊಂದಿರುತ್ತದೆ. ಎಫ್ಪಿಐಗಳು ಹೂಡಿಕೆ ಮಾಡಿದ ಕಂಪನಿಯಲ್ಲಿ ಹೂಡಿಕೆದಾರರಿಗೆ ನೇರವಾಗಿ ಷೇರುಪಾಲು ಇರುವುದಿಲ್ಲ. ಈಕ್ವಿಟಿಯಲ್ಲಿ ಮಾತ್ರವಲ್ಲ ಗವರ್ನ್ಮೆಂಟ್ ಬಾಂಡ್, ಕಾರ್ಪೊರೇಟ್ ಬಾಂಡ್, ಮ್ಯುಚುವಲ್ ಫಂಡ್, ಇಟಿಎಫ್ ಮೊದಲಾದವುಗಳಲ್ಲೂ ಎಫ್ಪಿಐಗಳು ಹೂಡಿಕೆದಾರರ ಹಣವನ್ನು ಇರಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ