ಬೆಂಗಳೂರು, ಜನವರಿ 25: ವರ್ಷದ ಹಿಂದೆ 380 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದ ಸ್ವಿಗ್ಗಿ ಸಂಸ್ಥೆ ಒಂದು ವರ್ಷದ ಅಂತರದಲ್ಲಿ ಎರಡನೇ ಬಾರಿ ಲೇ ಆಫ್ಗೆ (Swiggy layoffs) ಕೈಹಾಕಿದೆ. ಈ ಬಾರಿ 400 ಮಂದಿ ಸ್ವಿಗ್ಗಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಸ್ವಿಗ್ಗಿಯ ಒಟ್ಟೂ ಉದ್ಯೋಗಿವರ್ಗದಲ್ಲಿ ಶೇ. 7ರಷ್ಟು ಮಂದಿಗೆ ಕೆಲಸ ಹೋಗಲಿದೆ. 2023ರ ಜನವರಿ ತಿಂಗಳಲ್ಲಿ 380 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದನ್ನು ಗಣಿಸಿದರೆ ಒಂದು ವರ್ಷದ ಅಂತರದಲ್ಲಿ ಶೇ. 13ಕ್ಕೂ ಹೆಚ್ಚು ಉದ್ಯೋಗಿಗಳ ಲೇ ಆಫ್ ಆದಂತಾಗುತ್ತದೆ.
ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಸ್ವಿಗ್ಗಿ ಐಪಿಒಗೆ ತೆರೆದುಕೊಳ್ಳಲು ಮುಂದಾಗಿದೆ. ಐಪಿಒ ಮೂಲಕ ಒಂದು ಬಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸುವ ಗುರಿ ಇಟ್ಟಿರುವ ಸ್ವಿಗ್ಗಿ ಸಂಸ್ಥೆಗೆ ಹೂಡಿಕೆದಾರರ ವಿಶ್ವಾಸ ಗಳಿಸಬೇಕಿದೆ. ಈ ನಿಟ್ಟಿನಲ್ಲಿ ತನ್ನ ಉದ್ಯೋಗಿಗಳ ಪ್ರಮಾಣವನ್ನು ಕಡಿಮೆ ಮಾಡಿ ಸಂಸ್ಥೆ ಹೆಚ್ಚು ಆರೋಗ್ಯಯುತವಾಗಿ ಕಾಣುವಂತೆ ಮಾಡುವ ಪ್ರಯತ್ನ ಸ್ವಿಗ್ಗಿಯದ್ದು.
ಇದನ್ನೂ ಓದಿ: Budget 2024: ಲಾರ್ಜ್ ಲ್ಯಾಂಗ್ವೇಜ್ ಮಾಡಲ್, ಜಿಪಿಯು ಕಂಪ್ಯೂಟಿಂಗ್ ಅಭಿವೃದ್ಧಿಯಾಗಲಿ; ಬಜೆಟ್ನಿಂದ ಎಐ ವಲಯದವರ ನಿರೀಕ್ಷೆ
ಸ್ವಿಗ್ಗಿಯ ಮುಖ್ಯ ಎದುರಾಳಿ ಜೊಮಾಟೊ ಕಳೆದ ವರ್ಷ ಐಪಿಒಗೆ ತೆರೆದುಕೊಂಡಿತ್ತು. 2023ರ ಮಾರ್ಚ್ ತಿಂಗಳಲ್ಲಿ 50 ರೂ ಇದ್ದ ಅದರ ಷೇರು ಬೆಲೆ ಈಗ 135 ರೂ ಬೆಳೆದಿದೆ. ಆದರೂ ಲಿಸ್ಟಿಂಗ್ ಪ್ರೈಸ್ಗಿಂತ ಹೆಚ್ಚೇನೂ ಅಂತರ ಇಲ್ಲ. ಸ್ವಿಗ್ಗಿ ಇನ್ನೊಂದು ಅಥವಾ ಎರಡು ತಿಂಗಳೊಳಗೆ ಐಪಿಒಗೆ ತೆರೆದುಕೊಂಡು ಷೇರು ಮಾರುಕಟ್ಟೆಗೆ ಎಂಟ್ರಿ ಪಡೆಯುವ ನಿರೀಕ್ಷೆ ಇದೆ.
ಫುಡ್ ಡೆಲಿವರಿ ಕ್ಷೇತ್ರಕ್ಕೆ ಜೊಮಾಟೋಗಿಂತ ಸ್ವಿಗ್ಗಿ ಬೇಗ ಬಂತಾದರೂ ಇತ್ತೀಚಿನ ದಿನಗಳಲ್ಲಿ ಜೊಮಾಟೋ ಬಹಳ ವೇಗದಲ್ಲಿ ಬೆಳೆಯುತ್ತಿದೆ. ಸಾಕಷ್ಟು ಹೂಡಿಕೆಗಳನ್ನು ಆಕರ್ಷಿಸುತ್ತಿದೆ. ಈ ಕ್ಷೇತ್ರದ ಶೇ. 60ಕ್ಕೂ ಹೆಚ್ಚು ಪಾಲು ಜೊಮಾಟೋದ್ದಾಗಿದೆ. ಈ ಹಿನ್ನೆಲೆಯಲ್ಲಿ ಸ್ವಿಗ್ಗಿ ಕೂಡ ಪ್ರತಿಸ್ಪರ್ಧೆ ಒಡ್ಡಬೇಕೆಂದರೆ ಬಂಡವಾಳದ ಅವಶ್ಯಕತೆ ಇದೆ. ಇದೇ ಕಾರಣಕ್ಕೆ ಐಪಿಒ ಪ್ರವೇಶ ಮಾಡಬಯಸಿದೆ.
ಐಪಿಒ ಪ್ರಕ್ರಿಯೆಯ ಹೊಣೆಯನ್ನು ಕೋಟಕ್ ಮಹೀಂದ್ರ ಕ್ಯಾಪಿಟಲ್, ಜೆಪಿ ಮಾರ್ಗನ್, ಬೋಫಾ ಸೆಕ್ಯೂರಿಟೀಸ್, ಜೆಫೆರೀಸ್ ಮೊದಲಾದ ಏಳು ಇನ್ವೆಸ್ಟ್ಮೆಂಟ್ ಬ್ಯಾಂಕುಗಳಿಗೆ ಸ್ವಿಗ್ಗಿ ನೀಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ