ಮುಂಬೈ: ಈ ವರ್ಷದ ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಚಿನ್ನದ ಬೇಡಿಕೆಯು 2020ನೇ ಇಸವಿಯ ಇದೇ ಅವಧಿಗೆ ಹೋಲಿಸಿದಲ್ಲಿ ಶೇ 23ರಷ್ಟು ಕಡಿಮೆಯಾಗಿ, 815.7 ಟನ್ (ಒಂದು ಟನ್ಗೆ 1000 ಕೇಜಿ) ಮುಟ್ಟಿದೆ. ಮುಖ್ಯವಾಗಿ ಗೋಲ್ಡ್ ಟ್ರೇಡೆಡ್ ಫಂಡ್ಗಳ (ETF)ಹೊರಹರಿವು ಹೆಚ್ಚಾಗಿರುವುದು ಮತ್ತು ಕೇಂದ್ರ ಬ್ಯಾಂಕ್ಗಳು ಖರೀದಿ ಕಡಿಮೆ ಮಾಡಿರುವುದು ಇದಕ್ಕೆ ಕಾರಣ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ (WGC)ವರದಿ ತಿಳಿಸಿದೆ. 2020ರ ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ 1059.9 ಟನ್ ಇತ್ತು ಎಂಬುದು WGC 2021 ಮೊದಲನೇ ತ್ರೈಮಾಸಿಕ ವರದಿಯಿಂದ ತಿಳಿದುಬಂದಿದೆ.
ಜನವರಿಯಿಂದ ಮಾರ್ಚ್ ತ್ರೈಮಾಸಿಕದಲ್ಲಿ ಹೂಡಿಕೆಯ ಬೇಡಿಕೆ ಶೇ 71ರಷ್ಟು ಕುಸಿದು 161.6 ಟನ್ ತಲುಪಿದೆ. 2020ರ ಇದೇ ತ್ರೈಮಾಸಿಕದಲ್ಲಿ 549.6 ಟನ್ ಇತ್ತು. ಅದಕ್ಕೆ ಮುಖ್ಯ ಕಾರಣ ಭಾರೀ ಪ್ರಮಾಣದಲ್ಲಿ ಆದ ಗೋಲ್ಡ್ ಇಟಿಎಫ್ಗಳ ಹೊರಹರಿವು. 2021ರ ಮೊದಲ ತ್ರೈಮಾಸಿಕದಲ್ಲಿ ಇಟಿಎಫ್ಗಳಲ್ಲಿ ಪ್ರಬಲವಾದ ಹೊರಹರಿವು ಇದ್ದು, 177.9 ಟನ್ ಕಳೆದುಕೊಂಡಿದೆ. 2020ರ ಮೊದಲ ತ್ರೈಮಾಸಿಕದಲ್ಲಿ ಇದು 299.1 ಟನ್ ಇತ್ತು. ಹೆಚ್ಚಿನ ಬಡ್ಡಿ ದರ ಹಾಗೂ ಹಳದಿ ಲೋಹದ ಬೆಲೆಯಲ್ಲಿನ ಇಳಿಕೆ ಟ್ರೆಂಡ್ ಕಾರಣಕ್ಕೆ ಹೂಡಿಕೆದಾರರ ಭಾವನೆಗಳ ಮೇಲೆ ಪರಿಣಾಮ ಆಗಿದೆ.
ಚಿನ್ನದ ಗಟ್ಟಿ ಮತ್ತು ನಾಣ್ಯಗಳ ಮೇಲಿನ ಹೂಡಿಕೆ ಶೇ 36ರಷ್ಟು ಜಾಸ್ತಿ
ಆದರೆ, ಚಿನ್ನದ ಗಟ್ಟಿ ಮತ್ತು ನಾಣ್ಯಗಳ ಮೇಲಿನ ಹೂಡಿಕೆ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ 36ರಷ್ಟು ಜಾಸ್ತಿಯಾಗಿ, 339.5 ಟನ್ ಆಗಿದೆ. ಹೋದ ವರ್ಷ ಈ ಅವಧಿಯಲ್ಲಿ 250.5 ಟನ್ ಇತ್ತು. ಇದಕ್ಕೆ ಮುಖ್ಯ ಕಾರಣ ಆಗಿದ್ದು ಕಡಿಮೆ ಬೆಲೆಗೆ ಖರೀದಿಗೆ ಅವಕಾಶ ಸಿಕ್ಕಿದೆ. ಹಣದುಬ್ಬರ ಪ್ರಮಾಣ ಹೆಚ್ಚಿರುವುದು ಜತೆಯಾಗಿದೆ. ಈ ತ್ರೈಮಾಸಿಕದಲ್ಲಿ ಔನ್ಸ್ಗೆ ಶೇ 4.21ರಷ್ಟು ಕಡಿಮೆಯಾಗಿ, 1795 ಅಮೆರಿಕನ್ ಡಾಲರ್ ಮುಟ್ಟಿದೆ. ಕಳೆದ ವರ್ಷ ಅಕ್ಟೋಬರ್- ಡಿಸೆಂಬರ್ನಲ್ಲಿ 1874 ಅಮೆರಿಕನ್ ಡಾಲರ್ ಇತ್ತು. ಕಳೆದ ವರ್ಷದ ಜನವರಿಯಿಂದ ಮಾರ್ಚ್ ಅವಧಿಗೆ ಹೋಲಿಸಿದರೆ ಶೇ 13.32ರಷ್ಟು ಹೆಚ್ಚಳವಾಗಿತ್ತು. ಕಳೆದ ವರ್ಷ 1583 ಅಮೆರಿಕನ್ ಡಾಲರ್ ಇತ್ತು.
ಈ ಮಧ್ಯೆ ಕೇಂದ್ರ ಬ್ಯಾಂಕ್ಗಳು ನಿವ್ವಳವಾಗಿ ಒಟ್ಟಾರೆ 95 ಟನ್ ಖರೀದಿ ಮಾಡಿವೆ. 2020ರ ಇದೇ ಅವಧಿಯಲ್ಲಿ 124.1 ಟನ್ ಖರೀದಿ ಆಗಿತ್ತು. ಅಲ್ಲಿಗೆ ಶೇ 23ರಷ್ಟು ಕಡಿಮೆ ಆದಂತಾಗಿದೆ. ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ವರ್ಷದ ಜನವರಿಯಿಂದ ಮಾರ್ಚ್ ಮಧ್ಯೆ 18.7 ಟನ್ ಚಿನ್ನ ಖರೀದಿಸಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿನ 18 ಟನ್ಗಿಂತಲೂ ಸ್ವಲ್ಪ ಪ್ರಮಾಣದಲ್ಲಿ ಜಾಸ್ತಿ ಇದೆ. 2020ರ ಹೊಡೆತದ ನಂತರ ಆಭರಣದ ಬೇಡಿಕೆ ಮೊದಲ ತ್ರೈಮಾಸಿಕದಲ್ಲಿ ಚೇತರಿಕೆ ಕಂಡಿತು. ಆದರೆ ಈ ಹಿಂದಿನ ಐತಿಹಾಸಿಕ ಮಟ್ಟಕ್ಕೆ ಹೋಲಿಸಿದಲ್ಲಿ ಕಡಿಮೆಯೇ ಇದೆ.
ಭಾರತ ಮತ್ತು ಚೀನಾದಲ್ಲಿನ ಚೇತರಿಕೆಯಿಂದ ಆಭರಣಕ್ಕೆ ಬೇಡಿಕೆ
ಆಭರಣದ ಬೇಡಿಕೆ ಶೇ 52ರಷ್ಟು ಏರಿಕೆ ಕಂಡು, 477.4 ಟನ್ ಮುಟ್ಟಿದೆ. 2020ರ ಇದೇ ಅವಧಿಯಲ್ಲಿ 313.2 ಟನ್ ಇತ್ತು. ಇದಕ್ಕೆ ಮುಖ್ಯ ಕಾರಣ ಭಾರತ ಮತ್ತು ಚೀನಾದಲ್ಲಿನ ಚೇತರಿಕೆ ಎನ್ನುತ್ತಾರೆ ವಿಶ್ಲೇಷಕರು. ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಬಳಸುವ ಚಿನ್ನದ ಬೇಡಿಕೆ ಕಳೆದ ವರ್ಷಕ್ಕಿಂತ ಶೇ 11ರಷ್ಟು ಈ ತ್ರೈಮಾಸಿಕದಲ್ಲಿ ಜಾಸ್ತಿ ಆಗಿದೆ. ಗ್ರಾಹಕರ ವಿಶ್ವಾಸದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ.
ವಿಶ್ವದಾದ್ಯಂತ ಇರುವ ದೇಶಗಳು ಚೇತರಿಕೆ ಕಾಣುತ್ತಿವೆ. ಆರ್ಥಿಕತೆಗಳು ಬಹಳ ಎಚ್ಚರಿಕೆಯಿಂದ ಮತ್ತೆ ಆರಂಭ ಆಗುತ್ತಿವೆ. ಆದ್ದರಿಂದ ಗ್ರಾಹಕರಲ್ಲಿ ಪ್ರೋತ್ಸಾಹದಾಯಕವಾದ ವಿಶ್ವಾಸ ಮರಳುತ್ತಿದೆ. ಚಿನ್ನದ ಆಭರಣಗಳ ಬೇಡಿಕೆಯಲ್ಲಿ ಅಮೋಘ ಬೆಳವಣಿಗೆ ಕಂಡುಬಂದಿರುವುದೇ ಇದನ್ನು ಸೂಚಿಸುತ್ತದೆ ಎಂದು WGC ಹಿರಿಯ ಮಾರ್ಕೆಟ್ ವಿಶ್ಲೇಷಕರಾದ ಲೂಸಿ ಸ್ಟ್ರೀಟ್ ಹೇಳಿದ್ದಾರೆ.
ಇದನ್ನೂ ಓದಿ: ಚಿನ್ನ, ಬಟ್ಟೆ ಅಂಗಡಿ ಮುಚ್ಚಿಸುವ ನಿರ್ಧಾರ ಕೈಬಿಡಿ; ಮಾಜಿ ಎಂಎಲ್ಸಿ ಟಿ ಎ ಶರವಣ ಮನವಿ
(Global gold demand in 2021 January to March decreased by 23%, according World Gold Council (WGC))