ಮೆಟಾದ ಈ ಪ್ರಯೋಗ ಯಶಸ್ವಿಯಾಗಿದ್ದರೆ ಅಲ್ಲೋಲಕಲ್ಲೋಲವಾಗುತ್ತಿತ್ತಾ ಜಗತ್ತು?; ಏನಿದು ಪ್ರಾಜೆಕ್ಟ್ ಓಟಿ?

Meta's Project OT terrified its employees: ಫೇಸ್​ಬುಕ್, ಇನ್ಸ್​​ಟಾಗ್ರಾಮ್, ವಾಟ್ಸಾಪ್ ಇತ್ಯಾದಿಗಳ ಬಾಸ್ ಆದ ಮೆಟಾ ಸಂಸ್ಥೆ ಇತ್ತೀಚೆಗೆ ಪ್ರಾಜೆಕ್ಟ್ ಓಟಿ ಕಾರ್ಯಗತಗೊಳಿಸಲು ಸಿದ್ಧವಿತ್ತು. ಈ ಪ್ರಾಜೆಕ್ಟ್ ಓಟಿ ಎಂಬುದು ಕಂಪನಿಯ ಹೆಚ್ಚಿನ ಚಟುವಟಿಕೆಗಳನ್ನು, ಕೆಲಸಗಳನ್ನು ಎಐ ಏಜೆಂಟ್​ಗಳಿಗೆ ಒಪ್ಪಿಸುವುದಾಗಿತ್ತು. ಶೇ. 60ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡ ಮನೆಗೆ ಮರುಳುವುದಿತ್ತು. ಆದರೆ, ಕೊನೆಯಲ್ಲಿ ಈ ಪ್ರಾಜೆಕ್ಟನ್ನು ಮೆಟಾ ಕೈಬಿಟ್ಟಿತು.

ಮೆಟಾದ ಈ ಪ್ರಯೋಗ ಯಶಸ್ವಿಯಾಗಿದ್ದರೆ ಅಲ್ಲೋಲಕಲ್ಲೋಲವಾಗುತ್ತಿತ್ತಾ ಜಗತ್ತು?; ಏನಿದು ಪ್ರಾಜೆಕ್ಟ್ ಓಟಿ?
ಮೆಟಾ
Image Credit source: Jakub Porzycki/NurPhoto via Getty Images

Updated on: Aug 27, 2026 | 2:48 PM

ನವದೆಹಲಿ, ಆಗಸ್ಟ್ 27: ಎಐ ರೇಸ್​ನಲ್ಲಿ ಎಲ್ಲರಿಗಿಂತ ಮುಂದಿರಲು ಸತತ ಪ್ರಯತ್ನದಲ್ಲಿರುವ ಮೆಟಾ ಬಹಳ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಓಟಿ (Project OT) ಅನ್ನು ಜಾರಿಗೊಳಿಸಲು ಹೊರಟು, ಹಿಂದಕ್ಕೆ ಸರಿದ ಸಂಗತಿ ಬೆಳಕಿಗೆ ಬಂದಿದೆ. ಮೆಟಾ (Meta) ಸಂಸ್ಥೆಯು ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿ, ಅವರ ಜಾಗದಲ್ಲಿ ಕೃತಕ ಬುದ್ಧಿಮತ್ತೆಯನ್ನು (AI) ಬಳಸಿಕೊಳ್ಳಲು ರೂಪಿಸಲಾಗಿದ್ದ ಈ ರಹಸ್ಯ ಯೋಜನೆಯಿಂದ ಆಡಳಿತ ಮಂಡಳಿಯು ಹಿಂದೆ ಸರಿದಿದೆ.

ಏನಿದು ಮೆಟಾದ ಈ ಪ್ರಾಜೆಕ್ಟ್ OT?

ಮೆಟಾ ಸಂಸ್ಥೆಯು ತನ್ನ ಉದ್ಯೋಗಿಗಳನ್ನು ‘ಎಐ ನೇಟಿವ್’ (AI-Native) ಮಾಡಲು ‘ಪ್ರಾಜೆಕ್ಟ್ OT’ (Organization Transformation) ಎಂಬ ಯೋಜನೆಯನ್ನು ರೂಪಿಸಿತ್ತು. ಎಐ ನೇಟಿವ್ ಎಂದರೆ ಎಐ ತಂತ್ರಜ್ಞಾನವನ್ನು ಪೂರ್ಣವಾಗಿ ಬಳಸುವ ಜ್ಞಾನ ಇರುವ ಉದ್ಯೋಗಿ. ಈ ಯೋಜನೆಯಡಿ ಸಂಸ್ಥೆಯ ಹಲವು ತಂಡಗಳ ಗಾತ್ರವನ್ನು ಶೇ. 60 ರಷ್ಟು ಕಡಿತಗೊಳಿಸಿ, ಕೆಲಸಗಳನ್ನು AI ಏಜೆಂಟ್‌ಗಳಿಗೆ ವಹಿಸುವ ಆಲೋಚನೆ ಇತ್ತು. ಆದರೆ, ಕೊನೆಯ ಕ್ಷಣದಲ್ಲಿ ಮೆಟಾ ಮುಖ್ಯಸ್ಥ ಮಾರ್ಕ್ ಝುಕರ್ಬರ್ಗ್ ಈ ಪ್ರಯತ್ನ ಕೈಬಿಡಲು ನಿರ್ಧರಿಸಿದರು.

ಇದನ್ನೂ ಓದಿ: ಇರಾನ್​ನ ಕರೆನ್ಸಿ ಮಹಾಕುಸಿತ; ಒಂದು ಡಾಲರ್​ಗೆ 20 ಲಕ್ಷ ರಿಯಾಲ್; ಇರಾನ್ ಆರ್ಥಿಕತೆ ತತ್ತರ

ಉದ್ಯೋಗಿಗಳ ಪ್ರತಿಭಟನೆ: ಈ ಯೋಜನೆಯ ವಿವರಗಳು ಹೊರಬಿದ್ದಾಗ ಮೆಟಾ ಉದ್ಯೋಗಿಗಳಲ್ಲಿ ತೀವ್ರ ಅಸಮಾಧಾನ ಮತ್ತು ಭಯ ಉಂಟಾಗಿ ಪ್ರತಿಭಟನೆಯ ವಾತಾವರಣ ನಿರ್ಮಾಣವಾಯಿತು. ಇದು ಪ್ರಾಜೆಕ್ಟ್ ಓಟಿ ಕೈಬಿಡಲು ಒಂದು ಕಾರಣ.

ಎಐ ತಂತ್ರಜ್ಞಾನದ ಹಿನ್ನಡೆ: ಆಂತರಿಕ ತಪಾಸಣೆಯ ವೇಳೆ, ಸ್ವಾಯತ್ತ ಎಐ (Autonomous AI Agents) ತಂತ್ರಜ್ಞಾನವು ನಿರೀಕ್ಷಿಸಿದಷ್ಟು ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯನ್ನು (Productivity) ನೀಡಲು ವಿಫಲವಾಗಿದೆ ಎಂಬುದು ಕಂಡುಬಂದಿದೆ. ಪ್ರಾಜೆಕ್ಟ್ ಓಟಿಯಿಂದ ಹಿಂದಕ್ಕೆ ಸರಿಯಲು ಮೆಟಾಗಿದ್ದ ಎರಡನೇ ಕಾರಣ ಇದು.

ಮೇ ತಿಂಗಳಿನಲ್ಲಿ ಶೇ. 10 ರಷ್ಟು ಸಿಬ್ಬಂದಿಯನ್ನು ವಜಾಗೊಳಿಸಿದ ನಂತರ, ನವೆಂಬರ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಎರಡನೇ ಹಂತದ ಭಾರಿ ಉದ್ಯೋಗ ಕಡಿತ ಹಾಗೂ ಎಐ ಬದಲಿ ಯೋಜನೆಯನ್ನು ಮಾರ್ಕ್ ಜುಕರ್‌ಬರ್ಗ್ ರದ್ದುಗೊಳಿಸಿದರು.

ಇದನ್ನೂ ಓದಿ: ಮಂತ್ರಿಯಾಗ್ತಾರಾ ಟಾಟಾ ಸನ್ಸ್ ಮಾಜಿ ಛೇರ್ಮನ್? ಎನ್ ಚಂದ್ರಶೇಖರನ್ ರಾಜಕೀಯ ಪ್ರವೇಶದ ಬಗ್ಗೆ ದಟ್ಟ ವದಂತಿ

ಪ್ರಾಜೆಕ್ಟ್ ಓಟಿ ಯಶಸ್ವಿಯಾಗಿದ್ದರೆ ಏನು ಕಥೆ?

ವೆಚ್ಚ ಕಡಿತ ಮತ್ತು ತಂತ್ರಜ್ಞಾನ ಮರುಸಂಘಟನೆಗಾಗಿ ಈ ಯೋಜನೆ ರೂಪಿಸಲಾಗಿತ್ತು ಎಂದು ಮೆಟಾ ಸ್ಪಷ್ಟಪಡಿಸಿದೆಯಾದರೂ, ಮಾನವ ಉದ್ಯೋಗಿಗಳನ್ನು ಸಂಪೂರ್ಣವಾಗಿ ಎಐ ಮೂಲಕ ಭರ್ತಿ ಮಾಡುವುದು ಸದ್ಯಕ್ಕೆ ಸಾಧ್ಯವಿಲ್ಲ ಎಂಬುದು ಈ ಘಟನೆಯಿಂದ ಸಾಬೀತಾಗಿದೆ. ಒಂದು ವೇಳೆ, ಮೆಟಾದ ಈ ಪ್ರಾಜೆಕ್ಟ್ ಯಶಸ್ವಿಯಾಗಿದ್ದೇ ಆದಲ್ಲಿ ಏನಾಗುತ್ತಿತ್ತು?

ಇತರ ಟೆಕ್ ಕಂಪನಿಗಳು ಕೂಡ ಮೆಟಾ ಹಾದಿಯಲ್ಲೇ ನಡೆಯುತ್ತಿದ್ದವು. ಹಲವು ಲಕ್ಷ ಟೆಕ್ಕಿಗಳು ಕೆಲ ತಿಂಗಳುಗಳಲ್ಲೇ ಕೆಲಸ ಕಳೆದುಕೊಳ್ಳಬೇಕಾಗುತ್ತಿತ್ತು. ಆದರೆ, ಎಐ ಏಜೆಂಟ್​ಗಳ ಅಳವಡಿಕೆ ನಿರೀಕ್ಷಿಸಿದಷ್ಟು ಸುಲಭವಾಗಿ ಆಗುತ್ತಿಲ್ಲ ಎನ್ನುವುದು ವೇದ್ಯವಾಗಿದೆ. ಇಲಾನ್ ಮಸ್ಕ್ ಕೂಡ ತಾನು ಅಂದುಕೊಂಡಷ್ಟು ವೇಗವಾಗಿ ಎಐ ಅಳವಡಿಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಐಎ ಆವಿಷ್ಕಾರಗಳು ಮನುಷ್ಯರ ಕೆಲಸ ಕಿತ್ತುಕೊಳ್ಳುವಷ್ಟು ಸಮರ್ಥಗೊಳ್ಳಲು ಕೆಲ ವರ್ಷಗಳಾದರೂ ಬೇಕಾಗಬಹುದು ಎಂಬುದು ತಜ್ಞರ ಹೊಸ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us