ಮುಂಬೈ: ದೀಪಾವಳಿಯ (Diwali) ಹಬ್ಬದ ಧನತ್ರಯೋದಶಿ ಅಥವಾ ಧನ್ತೇರಸ್ (Dhanteras) ಪ್ರಯುಕ್ತ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ (gold), ಬೆಳ್ಳಿ ಮತ್ತು ಆಭರಣ (jewellery) ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ. ಕಳೆದ ವರ್ಷದ ದೀಪಾವಳಿ ಸಂದರ್ಭದ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಮಾರಾಟದಲ್ಲಿ ಶೇಕಡಾ 35ರಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಮಾರುಕಟ್ಟೆ ಮಂಕಾಗಿಸಿದ ಭಾರತ-ಪಾಕ್ ಟಿ20 ಪಂದ್ಯ:
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದ ಸಂದರ್ಭದಲ್ಲಿ ಆಭರಣ ಮಳಿಗೆಗಳು ಬಿಕೋ ಎನ್ನುತ್ತಿದ್ದವು. ದೇಶದಾದ್ಯಂತ ಪಂದ್ಯ ನಡೆಯುತ್ತಿದ್ದ ವೇಳೆ ಮಳಿಗೆಗಳು ಖಾಲಿಯಾಗಿದ್ದರೆ, ನಂತರ ಜನ ಚಿನ್ನ, ಆಭರಣ ಖರೀದಿಗೆ ಮಾಮೂಲಿಯಂತೆ ಆಗಮಿಸತೊಡಗಿದರು ಎಂದು ಆಭರಣ ವ್ಯಾಪಾರಿಗಳು ತಿಳಿಸಿದ್ದಾರೆ.
ಚಿನ್ನದ ದರದಲ್ಲಿ ತುಸು ಮಟ್ಟಿನ ಹೆಚ್ಚಳವಾಗಿದ್ದರೂ ಗ್ರಾಹಕರು ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಧನ್ತೇರಸ್ ಮುಹೂರ್ತ ಇರುವ ಶನಿವಾರ ಹಾಗೂ ಭಾನುವಾರಗಳಂದು ಮಾರಾಟದಲ್ಲಿ ಏರಿಕೆ ಕಾಣಿಸಿದೆ ಎಂದು ಅವರು ಹೇಳಿದ್ದಾರೆ. ಹಿಂದೂ ಧರ್ಮದಲ್ಲಿ ಧನ್ತೇರಸ್ ಅನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದ್ದು, ಆ ದಿನಗಳಲ್ಲಿ ಖರೀದಿ ಮಾಡುವುದರಿಂದ ಶುಭವಾಗಲಿದೆ ಎಂಬ ನಂಬಿಕೆ ಜನರಲ್ಲಿದೆ.
ಇದನ್ನೂ ಓದಿ: Petrol Price on October 24: ದೀಪಾವಳಿಗೆ ಗ್ರಾಹಕರಿಗೆ ಗುಡ್ ನ್ಯೂಸ್; ಈ ರಾಜ್ಯದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಕುಸಿತ
ದೆಹಲಿಯಲ್ಲಿ ಭಾನುವಾರ 10 ಗ್ರಾಂ ಚಿನ್ನದ ದರ, ತೆರಿಗೆಗಳನ್ನು ಹೊರತುಪಡಿಸಿ 50,139 ರೂ. ಆಗಿತ್ತು. 2021ರ ಧನ್ತೇರಸ್ ದಿನ ಇದು 47,644 ರೂ. ಆಗಿತ್ತು.
ಸಾಮಾನ್ಯವಾಗಿ ಧನ್ತೇರಸ್ ದಿನ ದೇಶದಲ್ಲಿ 20ರಿಂದ 30 ಟನ್ ಮಾರಾಟವಾಗುತ್ತದೆ. ಚಿನ್ನ, ಆಭರಣ ಮಾತ್ರವಲ್ಲದೆ ವಾಹನ ಹಾಗೂ ಇತರ ಉಪಕರಣಗಳ ಖರೀದಿ ಭರಾಟೆಯೂ ಜೋರಾಗಿರುತ್ತದೆ.
ಧನ್ತೇರಸ್ ದಿನ ಮಾರುತಿ ಸುಜುಕಿ ಅಂದಾಜು 21,000 ವಾಹನಗಳ ಮಾರಾಟ ಮಾಡಿದೆ ಎಂದು ಕಂಪನಿಯ ಮಾರುಕಟ್ಟೆ ಮತ್ತು ಮಾರಾಟ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.
ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 10ರಷ್ಟು ಹೆಚ್ಚು. ಆದರೆ, 2018 ಹಾಗೂ 2019ಕ್ಕಿಂತ ಕಡಿಮೆ. ಅತಿಯಾದ ಬೇಡಿಕೆ, ಪೂರೈಕೆ ಸಮಸ್ಯೆ, ಕಾಯುವಿಕೆ ಅವಧಿ ಇತ್ಯಾದಿಗಳೂ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ