Dhanteras 2022: ದೀಪಾವಳಿಯ ಎರಡು ದಿನ 40 ಸಾವಿರ ಕೋಟಿ ರೂ. ವಹಿವಾಟು ನಿರೀಕ್ಷೆ; ಸಿಎಐಟಿ
ಈ ಬಾರಿ ಧನ್ತೇರಸ್ ಒಳಗೊಂಡಂತೆ ದೀಪಾವಳಿಯ ಎರಡು ದಿನಗಳಲ್ಲಿ 40,000 ಕೋಟಿ ರೂ. ಮೊತ್ತದ ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ ಶನಿವಾರ ಹೇಳಿದೆ.
ಮುಂಬೈ: ಈ ಬಾರಿ ಧನ್ತೇರಸ್ (Dhanteras) ಒಳಗೊಂಡಂತೆ ದೀಪಾವಳಿಯ (Diwali) ಎರಡು ದಿನಗಳಲ್ಲಿ 40,000 ಕೋಟಿ ರೂ. ಮೊತ್ತದ ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (CAIT) ಶನಿವಾರ ಹೇಳಿದೆ. ದೀಪಾವಳಿಯ ಮೊದಲ ದಿನವಾದ ಧನ್ತೇರಸ್ ಅಥವಾ ಧನತ್ರಯೋದಶಿಯನ್ನು ಖರೀದಿಗೆ ಪವಿತ್ರ ದಿನವೆಂದು ಭಾವಿಸಲಾಗಿದೆ. ಈ ದಿನದಂದು ಗ್ರಾಹಕರು ಚಿನ್ನ, ಬೆಳ್ಳಿಯ ಆಭರಣ, ಎಲ್ಲ ರೀತಿಯ ಪಾತ್ರೆಗಳು, ಅಡುಗೆ ಮನೆ ಉಪಕರಣಗಳು, ವಾಹನ, ಎಲೆಕ್ಟ್ರಿಕಲ್ ಸರಕು ಹಾಗೂ ಇತರ ಸಾಮಗ್ರಿಗಳ ಖರೀದಿ ಮಾಡುತ್ತಾರೆ.
ಈ ವರ್ಷ ಧನ್ತೇರಸ್ ವಾರಾಂತ್ಯದ ಜತೆಗೇ ಬರುತ್ತದೆ. ಶನಿವಾರ ಮಧ್ಯಾಹ್ನದಿಂದಲೇ ಶುಭ ಮುಹೂರ್ತ ಆರಂಭವಾಗಲಿದ್ದು ಭಾನುವಾರ ಸಂಜೆಯ ವರೆಗೂ ಇರಲಿದೆ. ಹೀಗಾಗಿ ಖರೀದಿ ಭರಾಟೆ ಜೋರಿರಬಹುದು ಎಂಬುದಾಗಿ ನಿರೀಕ್ಷಿಸಲಾಗಿದೆ ಎಂದು ಸಿಎಐಟಿ ಹೇಳಿದೆ.
ಧನ್ತೇರಸ್ ಪ್ರಯುಕ್ತ ಶನಿವಾರ ಮತ್ತು ಭಾನುವಾರಗಳಲ್ಲಿ ಹೆಚ್ಚು ಆಭರಣ ಮಾರಾಟವಾಗುವ ಬಗ್ಗೆ ದೇಶದಾದ್ಯಂತ ಆಭರಣ ವ್ಯಾಪಾರಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ಅಖಿಲ ಭಾರತ ಆಭರಣ ಮಾರಾಟಗಾರರ ಮತ್ತು ಅಕ್ಕಲಸಾಲಿಗರ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಪಂಕಜ್ ಆರೋರ ಹೇಳಿದ್ದಾರೆ. ಈ ವರ್ಷ ಕೃತಕ ಆಭರಣಗಳಿಗೂ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಚಿನ್ನ, ಬೆಳ್ಳಿಯ ಕಾಯಿನ್ಗಳು, ವಿಗ್ರಹಗಳೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Dhanteras 2022: ದೀಪಾವಳಿ ಸಂದರ್ಭದಲ್ಲಿ ಚಿನ್ನದ ಮೇಲಿನ ಹೂಡಿಕೆಗೆ ಐದು ಆಯ್ಕೆಗಳು
ಈ ಬಾರಿ ಹಬ್ಬದ ಪ್ರಯುಕ್ತ ಅಮೆಜಾನ್, ಫ್ಲಿಪ್ಕಾರ್ಟ್ನಂಥ ಆನ್ಲೈನ್ ಮಾರ್ಕೆಟಿಂಗ್ ತಾಣಗಳು ನಡೆಸಿದ್ದ ವಿಶೇಷ ಮಾರಾಟ ಮೇಳಗಳಲ್ಲಿಯೂ ಹೆಚ್ಚಿನ ಪ್ರಮಾಣದ ಮಾರಾಟವಾಗಿತ್ತು. ಅಮೆಜಾನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ 650 ಮಾರಾಟಗಾರರು ಕೋಟ್ಯಧಿಪತಿಗಳಾಗಿದ್ದರೆ, 23,000 ಮಾರಾಟಗಾರರು ಲಕ್ಷಾಧಿಪತಿಗಳಾಗಿದ್ದಾರೆ. 35,000 ಮಾರಾಟಗಾರರು ದಿನವೊಂದರ ಗರಿಷ್ಠ ಗಳಿಕೆ ದಾಖಲಿಸಿದ್ದಾರೆ ಎಂದು ಕಂಪನಿ ಈಚೆಗೆ ಹೇಳಿತ್ತು.
ಈ ಮಧ್ಯೆ, ಧನ್ತೇರಸ್ ಹಿನ್ನೆಲೆಯಲ್ಲಿ ಮುಹೂರ್ತ ಟ್ರೇಡಿಂಗ್ಗೆ ಷೇರುಪೇಟೆ ಸಜ್ಜಾಗಿದೆ. ದೀಪಾವಳಿಯ ಲಕ್ಷ್ಮೀ ಪೂಜೆಯ ದಿನ ಎನ್ಎಸ್ಇ ನಿಫ್ಟಿ ಮತ್ತು ಬಿಎಸ್ಇ ಸೆನ್ಸೆಕ್ಸ್ ನಡೆಸುವ ಒಂದು ಗಂಟೆ ಕಾಲ ವಹಿವಾಟಿನಲ್ಲಿ ತೊಡಗಿಕೊಳ್ಳಲು ಹೂಡಿಕೆದಾರರು ಕಾತರರಾಗಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ