Diwali Muhurat Trading: ದೀಪಾವಳಿ ಮುಹೂರ್ತ ಟ್ರೇಡಿಂಗ್ ಬಗ್ಗೆ ಇಲ್ಲಿದೆ ವಿವರ
ದೀಪಾವಳಿ ಮುಹೂರ್ತ ಟ್ರೇಡಿಂಗ್ ಎಂದರೇನು? ಈ ಅವಧಿಯಲ್ಲಿ ಏನೇನು ಟ್ರೇಡಿಂಗ್ ನಡೆಯುತ್ತದೆ? ಈ ವರ್ಷದ ಮುಹೂರ್ತ ಟ್ರೇಡಿಂಗ್ ಯಾವಾಗ, ಎಷ್ಟು ಗಂಟೆಗೆ ನಡೆಯಲಿದೆ ಎಂಬ ವಿವರಗಳು ಇಲ್ಲಿವೆ.
ಪ್ರತಿವರ್ಷ ದೀಪಾವಳಿ (Diwali) ಹಬ್ಬದ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ (Stock Market) ಮುಹೂರ್ತ ವಹಿವಾಟು ಅಥವಾ ಮುಹೂರ್ತ ಟ್ರೇಡಿಂಗ್ (Diwali Muhurat Trading) ನಡೆಯುತ್ತದೆ. ಹಿಂದೂಗಳ ಪ್ರಕಾರ ದೀಪಾವಳಿ ಒಂದು ಪವಿತ್ರ ಹಬ್ಬ. ಕತ್ತಲೆಯನ್ನು ದೂರ ಮಾಡಿ ಬೆಳಕನ್ನು ಪಸರಿಸುವ, ಅಜ್ಞಾನವನ್ನು ದೂರಮಾಡುವ ಹಬ್ಬ ಎಂದೇ ದೀಪಾವಳಿಯನ್ನು ಪರಿಗಣಿಸಲಾಗಿದೆ. ಷೇರು ವಹಿವಾಟುದಾರರು ಕೂಡ ದೀಪಾವಳಿಯ ಬಹಳ ಪವಿತ್ರವೆಂದು ಪರಿಗಣಿಸುತ್ತಾರೆ. ಇದೇ ಕಾರಣಕ್ಕೆ ದೀಪಾವಳಿಯಂದು ರಜೆ ಇದ್ದರೂ ಕೂಡ ಒಂದು ಗಂಟೆ ಕಾಲ ಷೇರು ವಹಿವಾಟು ನಡೆಸಲಾಗುತ್ತದೆ. ಇದನ್ನು ಮುಹೂರ್ತ ಟ್ರೇಡಿಂಗ್ ಎಂದು ಕರೆಯುತ್ತಾರೆ.
ಮುಹೂರ್ತ ಟ್ರೇಡಿಂಗ್ ಎಂದರೇನು?
ಹಿಂದೂ ಸಂಸ್ಕೃತಿ ಪ್ರಕಾರ ಮುಹೂರ್ತ ಎಂದರೆ ಉತ್ತಮವಾದ ಅಥವಾ ಪವಿತ್ರವಾದ ಸಮಯ ಎಂದರ್ಥ. ಮುಹೂರ್ತ ಚೆನ್ನಾಗಿದ್ದಾಗ ಆ ಸಮಯದಲ್ಲಿ ಮಾಡಿದ್ದೆಲ್ಲಾ ಒಳಿತಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಮುಹೂರ್ತ ವಹಿವಾಟಿನಲ್ಲಿ ಭಾಗಿಯಾಗುವುದರಿಂದ ಹಾಗೂ ಖರೀದಿ ಮಾಡುವುದರಿಂದ ವರ್ಷವಿಡೀ ಮಾರುಕಟ್ಟೆಯಲ್ಲಿ ಉತ್ತಮ ಗಳಿಕೆಯಾಗಲಿದೆ ಎಂಬ ನಂಬಿಕೆ ಹೂಡಿಕೆದಾರರಲ್ಲಿದೆ. ಪ್ರತಿ ವರ್ಷ ದೀಪಾವಳಿಯ ಲಕ್ಷ್ಮೀ ಪೂಜೆಯ ದಿನ ಒಂದು ಗಂಟೆ ಅವಧಿಗೆ ಮುಹೂರ್ತ ವಹಿವಾಟು ನಡೆಸಲಾಗುತ್ತದೆ.
ಏನೇನು ವಹಿವಾಟು ನಡೆಯುತ್ತದೆ?
ದೀಪಾವಳಿಯ ಲಕ್ಷ್ಮೀ ಪೂಜೆಯ ದಿನ ಎನ್ಎಸ್ಇ ನಿಫ್ಟಿ ಮತ್ತು ಬಿಎಸ್ಇ ಸೆನ್ಸೆಕ್ಸ್ ಒಂದು ಗಂಟೆ ಕಾಲ ವಹಿವಾಟು ನಡೆಸಲು ಅನುಮತಿ ನೀಡುತ್ತವೆ. ಈ ಅವಧಿಯಲ್ಲಿ ನಡೆಯುವ ವಹಿವಾಟಿನ ವಿವರ ಇಲ್ಲಿದೆ;
ಬ್ಲಾಕ್ ಡೀಲ್ ಸೆಷನ್: ಷೇರು ಮಾರಾಟಗಾರರು ಮತ್ತು ಖರೀದಿದಾರರು ಒಪ್ಪಂದ ಮಾಡಿಕೊಳ್ಳುವ ಪ್ರಕ್ರಿಯೆ ಇದು. ನಿರ್ದಿಷ್ಟ ಬೆಲೆ ಯೊಂದಕ್ಕೆ ಷೇರು ಮಾರಾಟ ಮಾಡುವ ಮತ್ತು ಖರೀದಿ ಮಾಡುವ ಬಗ್ಗೆ ಇಲ್ಲಿ ಒಪ್ಪಂದ ಏರ್ಪಡುತ್ತದೆ.
ಪ್ರಿ ಓಪನ್ ಸೆಷನ್: ಇದು ಸುಮಾರು 8 ನಿಮಿಷಗಳ ಕಾಲ ನಡೆಯುತ್ತದೆ.
ಮಾರ್ಕೆಟ್ ಸೆಷನ್: ಇದು ಒಂದು ಗಂಟೆ ನಡೆಯಲಿದ್ದು ಈ ಸಂದರ್ಭದಲ್ಲಿ ಸಾಮಾನ್ಯ ವಹಿವಾಟು ನಡೆಯುತ್ತದೆ.
ಕಾಲ್ ಆಕ್ಷನ್ ಸೆಷನ್: ಇದು ಇಲ್ಲಿಕ್ವಿಡ್ ಸೆಕ್ಯೂರಿಟಿಗಳ ಟ್ರೇಡಿಂಗ್ ನಡೆಯುವ ಸಮಯವಾಗಿದೆ.
ಮುಕ್ತಾಯದ ಅವಧಿ ಅಥವಾ ಕ್ಲೋಸಿಂಗ್ ಸೆಷನ್: ಟ್ರೇಡರ್ಗಳು ಮತ್ತು ಹೂಡಿಕೆದಾರರು ಕ್ಲೋಸಿಂಗ್ ಬೆಲೆಗೆ ಆರ್ಡರ್ ಮಾಡುತ್ತಾರೆ. ಬಳಿಕ ವಹಿವಾಟು ಕೊನೆಗೊಳ್ಳುತ್ತದೆ.
ಮುಹೂರ್ತ ಟ್ರೇಡಿಂಗ್ 2022ರ ಸಮಯ (ಸಂಜೆ)
- ಬ್ಲಾಕ್ ಡೀಲ್ ಸೆಷನ್: 05:45 – 06:00
- ಪ್ರಿ ಓಪನ್ ಸೆಷನ್: 06:00 – 06:08
- ಸಾಮಾನ್ಯ ಟ್ರೇಡಿಂಗ್: 06:15 – 07:15
- ಕಾಲ್ ಆಕ್ಷನ್ ಸೆಷನ್: 06:20 – 07:05
- ಕ್ಲೋಸಿಂಗ್ ಸೆಷನ್: 07:25 – 07:35
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Sat, 22 October 22