ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 14: ಇಂಟರ್ನೆಟ್ ತಂತ್ರಜ್ಞಾನ ಸಂಸ್ಥೆ ಗೂಗಲ್ನ ಮಾತೃಸಂಸ್ಥೆ ಆಲ್ಫಬೆಟ್ ಮತ್ತೆ ಲೇ ಆಫ್ (Layoffs) ಕಾರ್ಯಕ್ಕೆ ಕೈಹಾಕಿದೆ. ವರದಿ ಪ್ರಕಾರ, ಆಲ್ಫಬೆಟ್ ತನ್ನ ಕೆಲ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಈ ಹಿಂದೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿಯನ್ನು ಕೆಲಸದಿಂದ ಕಿತ್ತುಹಾಕಿದ್ದ ಈ ಸಂಸ್ಥೆ ಈಗ ಅಷ್ಟು ಮಟ್ಟದಲ್ಲಿ ಲೇ ಆಫ್ ಮಾಡಿಲ್ಲ. ಮಾಧ್ಯಮಗಳಿಗೆ ಬಂದಿರುವ ಮಾಹಿತಿ ಪ್ರಕಾರ ಕೆಲ ನೂರುಗಳ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗಿರುವುದು ತಿಳಿದುಬಂದಿದೆ. ಗೂಗಲ್ ಇತ್ಯಾದಿ ಸಂಸ್ಥೆಗಳಿಗೆ ನೇಮಕಾತಿ ಮಾಡುವ ಮಂದಿಯೇ ಕೆಲಸ ಕಳೆದುಕೊಂಡಿರುವುದು. ತನ್ನ ಗ್ಲೋಬಲ್ ರೆಕ್ರುಟಿಂಗ್ ತಂಡದ (Global recruiting team) ಉದ್ಯೋಗಿಗಳೇ ಕೆಲಸ ಕಳೆದುಕೊಂಡಿದ್ದಾರೆ.
ಆಲ್ಫಬೆಟ್ ಜುಲೈನಿಂದ ಸೆಪ್ಟೆಂಬರ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಲೇ ಆಫ್ ಕ್ರಮಕ್ಕೆ ಕೈಹಾಕಿದ ಮೊದಲ ದೊಡ್ಡ ಟೆಕ್ ಕಂಪನಿ ಎನಿಸಿದೆ. ಆದರೆ, 2023ರ ವರ್ಷದ ಮೊದಲಾರ್ಧದಲ್ಲಿ ವಿಶ್ವದ ದೈತ್ಯ ಟೆಕ್ ಕಂಪನಿಗಳು ಭರಪೂರವಾಗಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ.
ಜನವರಿ ತಿಂಗಳಲ್ಲಿ ಆಲ್ಫಬೆಟ್ ಸಂಸ್ಥೆ ಬರೋಬ್ಬರಿ 12,000 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಫೇಸ್ಬುಕ್ನ ಮಾತೃಸಂಸ್ಥೆ ಮೆಟಾ, ಮೈಕ್ರೋಸಾಫ್ಟ್, ಅಮೇಜಾನ್ ಮೊದಲಾದ ಟೆಕ್ ದೈತ್ಯರೂ ಕೂಡ ಸಾವಿರಾರು ಮಂದಿಯನ್ನು ಲೇ ಆಫ್ ಮಾಡಿದ್ದಿದೆ.
ಇದನ್ನೂ ಓದಿ: ಮೂಲ ದಾಖಲೆ ಮರಳಿಸಲು ವಿಳಂಬವಾದರೆ ದಿನಕ್ಕೆ 5,000 ರೂ ದಂಡ: ಬ್ಯಾಂಕುಗಳಿಗೆ ಆರ್ಬಿಐ ನಿರ್ದೇಶನ
ಈ ದೊಡ್ಡ ಟೆಕ್ ಕಂಪನಿಗಳು ಈ ಕ್ಯಾಲಂಡರ್ ವರ್ಷದ ಮೂರನೇ ಕ್ವಾರ್ಟರ್ನಲ್ಲಿ ಹೆಚ್ಚು ಉದ್ಯೋಗಕಡಿತಕ್ಕೆ ಕೈಹಾಕಿಲ್ಲ. ಆದರೆ, ಅಮೆರಿಕದ ಬೇರೆ ಹಲವು ಸಂಸ್ಥೆಗಳಿಂದ ಲೇ ಆಫ್ ಕಾರ್ಯ ನಡೆಯುತ್ತಿದೆ. ಜುಲೈಗೆ ಹೋಲಿಸಿದರೆ ಆಗಸ್ಟ್ನಲ್ಲಿ ಅಮೆರಿಕದಲ್ಲಿ ಕೆಲಸ ಕಳೆದುಕೊಂಡವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಅಲ್ಲಿನ ನಿರುದ್ಯೋಗಿ ಭತ್ಯೆ ಪಡೆಯುವವರ ಸಂಖ್ಯೆ ಸೆಪ್ಟೆಂಬರ್ 9ಕ್ಕೆ ಅಂತ್ಯಗೊಳ್ಳುವ ವಾರದಲ್ಲಿ ಶೇ. 8ರಷ್ಟು ಏರುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ