ಮೂಲ ದಾಖಲೆ ಮರಳಿಸಲು ವಿಳಂಬವಾದರೆ ದಿನಕ್ಕೆ 5,000 ರೂ ದಂಡ: ಬ್ಯಾಂಕುಗಳಿಗೆ ಆರ್ಬಿಐ ನಿರ್ದೇಶನ
RBI instructions to Banks and NBFCs: ಬ್ಯಾಂಕುಗಳಲ್ಲಿ ಗ್ರಾಹಕರು ಪಡೆಯುವ ಯಾವುದೇ ಅಡಮಾನ ಸಾಲದ ಪ್ರಕರಣದಲ್ಲಿ, ಸಾಲ ಮುಗಿದು 30 ದಿನದೊಳಗೆ ಮೂಲದಾಖಲೆಗಳನ್ನು ಗ್ರಾಹಕರಿಗೆ ಮರಳಿಸಬೇಕು. ವಿಳಂಬವಾದರೆ ದಿನಕ್ಕೆ 5,000 ರೂನಂತೆ ದಂಡ ಕಟ್ಟಿಕೊಡಬೇಕು. ಮೂಲದಾಖಲೆ ಕಳೆದುಹೋದರೆ ಅಥವಾ ಹಾಳಾದರೆ ಅದರ ನಕಲುಪ್ರತಿಯನ್ನು ಪಡೆಯಲು ಬ್ಯಾಂಕುಗಳು ನೆರವಾಗಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ನವದೆಹಲಿ, ಸೆಪ್ಟೆಂಬರ್ 14: ಅಡಮಾನ ಇಟ್ಟು ಸಾಲ ಪಡೆದವರ ಗಮನಕ್ಕೆ… ಆಸ್ತಿಪತ್ರ ಇತ್ಯಾದಿ ಯಾವುದೇ ವಸ್ತು ಅಥವಾ ಮೂಲದಾಖಲೆಗಳನ್ನು ಅಡಮಾನ (Mortgage) ಇಟ್ಟು ಸಾಲ ಪಡೆಯುವ ಗ್ರಾಹಕರು ಪೂರ್ಣವಾಗಿ ಸಾಲ ಮರುಪಾವತಿ ಮಾಡಿದ ಬಳಿಕ, ಅವರಿಗೆ ಆ ವಸ್ತು ಅಥವಾ ದಾಖಲೆಯನ್ನು 30 ದಿನದೊಳಗಾಗಿ ಮರಳಿಸಬೇಕು. ಹಾಗಂತ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನ ಹೊರಡಿಸಿದೆ. ಇದು ಬ್ಯಾಂಕುಗಳಿಗೆ ಮಾತ್ರವಲ್ಲ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೂ ( NBFC) ಅನ್ವಯ ಆಗುತ್ತದೆ. ಆರ್ಬಿಐ ಮೊನ್ನೆ (ಸೆ. 12) ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ಈ ನಿರ್ದೇಶನಗಳು ಇವೆ. ಒಂದು ವೇಳೆ 30 ದಿನದೊಳಗೆ ದಾಖಲೆಗಳನ್ನು ಮರಳಿಸದಿದ್ದರೆ ದಿನಕ್ಕೆ 5,000 ರೂನಂತೆ ದಂಡ ಕಟ್ಟಿಕೊಡಬೇಕಾಗುತ್ತದೆ.
ಆರ್ಬಿಐನ ಈ ನಿರ್ದೇಶನವು 2023ರ ಡಿಸೆಂಬರ್ 1ರಿಂದ ಅನ್ವಯ ಆಗುತ್ತದೆ. ಡಿಸೆಂಬರ್ 1 ಅಥವಾ ನಂತರ ಸ್ಥಿರಾಸ್ತಿ ಅಥವಾ ಚರಾಸ್ತಿಯ ದಾಖಲೆಗಳನ್ನು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ವಾಪಸ್ ಮಾಡಬೇಕಾದ ಪ್ರಕರಣಗಳಿಗೆ ಈ ನಿರ್ದೇಶನಗಳು ಅನ್ವಯ ಆಗುತ್ತವೆ. 2003ರಲ್ಲೇ ಬ್ಯಾಂಕುಗಳಿಗೆ ನ್ಯಾಯಯುತ ನಡಾವಳಿಗಳ ಸಂಹಿತೆಯಲ್ಲಿ (Fair Practices Code) ಈ ಮಾರ್ಗಸೂಚಿಗಳಿವೆ. ಆದರೆ, ಗ್ರಾಹಕರ ದಾಖಲೆಗಳನ್ನು ಸಾಲ ತೀರಿ ಬಹಳಷ್ಟು ದಿನಗಳಾದರೂ ಮೂಲ ಅಡಮಾನ ದಾಖಲೆಗಳನ್ನು ಬ್ಯಾಂಕುಗಳು ಹಿಂದಿರುಗಿಸಿಲ್ಲ ಎಂಬಂತಹ ದೂರುಗಳು ಸಾಕಷ್ಟು ಬಂದಿದ್ದವು. ಈಗ ಹಿನ್ನೆಲೆಯಲ್ಲಿ ಆರ್ಬಿಐ ಇದೀಗ 2003ರಿಂದ ಜಾರಿಯಲ್ಲಿರುವ ಮಾರ್ಗಸೂಚಿಯಲ್ಲಿನ ನಿಯಮದ ಆಧಾರದ ಮೇಲೆ ಈಗ ಬ್ಯಾಂಕುಗಳು ಹಾಗೂ ಎನ್ಬಿಎಫ್ಸಿಗಳಿಗೆ ನಿರ್ದೇಶನ ನೀಡಿದೆ.
ಇದನ್ನೂ ಓದಿ: ಟೆಸ್ಲಾ ಸಂಸ್ಥೆಗೆ ಈ ವರ್ಷ ಭಾರತದಿಂದ 15,000 ಕೋಟಿ ರೂನಷ್ಟು ಮೌಲ್ಯದ ವಾಹನ ಬಿಡಿಭಾಗಗಳು ಸರಬರಾಜಾಗಲಿವೆ: ಸಚಿವ ಗೋಯಲ್
ಬ್ಯಾಂಕುಗಳು ಅಡಮಾನ ಸಾಲ ನೀಡುವಾಗಲೇ, ದಾಖಲೆಗಳನ್ನು ಯಾವಾಗ ಮರಳಿಸಲಾಗುವುದು, ಎಲ್ಲಿ ಆ ದಾಖಲೆಗಳನ್ನು ಪಡೆಯಬಹುದು ಎಂದು ಲಿಖಿತವಾಗಿ ತಿಳಿಸಿರಬೇಕು. ಆ ನಿಗದಿತ ವಾಯಿದೆಯೊಳಗೆ ಆಸ್ತಿ ದಾಖಲೆಗಳನ್ನು ವಾಪಸ್ ಮಾಡದೇ ಹೋದರೆ ಬ್ಯಾಂಕ್ ದಂಡ ಕಟ್ಟಿಕೊಡಬೇಕಾಗುತ್ತದೆ. ಗಡುವಿನ ಬಳಿಕ ದಿನಕ್ಕೆ 5,000 ರೂನಂತೆ ದಂಡದ ಮೊತ್ತ ಕೂಡುತ್ತಾ ಹೋಗುತ್ತದೆ.
ಒಂದು ವೇಳೆ ಅಡಮಾನಕ್ಕೆ ಇಟ್ಟಿದ್ದ ಮೂಲ ದಾಖಲೆಪತ್ರಗಳು ಕಳೆದುಹೋದರೆ ಅಥವಾ ಹಾಳಾದರೆ, ಕಾನೂನುಸಮ್ಮತವಾದ ನಕಲುಪತ್ರ ಅಥವಾ ಪ್ರಮಾಣಿತ ನಕಲನ್ನು ಮಾಡಿಸಲು ಬ್ಯಾಂಕುಗಳು ನೆರವಾಗಬೇಕು. ಅದರ ಖರ್ಚನ್ನು ಬ್ಯಾಂಕೇ ಭರಿಸಬೇಕು. ದಿನಕ್ಕೆ 5,000 ರೂನಂತೆ ದಂಡ ಕಟ್ಟಿಕೊಡುವುದರ ಜೊತೆಗೆ ಇದು ಹೆಚ್ಚುವರಿ ಜವಾಬ್ದಾರಿ ಬ್ಯಾಂಕಿನದ್ದಾಗಿರುತ್ತದೆ.
ಇದನ್ನೂ ಓದಿ: ಭಾರತದ ಆರ್ಥಿಕ ಕಾರಿಡಾರ್, ಆಟೊಮೊಬೈಲ್ ನೀತಿ: ರಷ್ಯಾ ಅಧ್ಯಕ್ಷರಿಂದ ನರೇಂದ್ರ ಮೋದಿ ಗುಣಗಾನ
ಮನೆ ಆಸ್ತಿಪತ್ರ, ವಾಹನ, ಬಾಂಡ್ ಪತ್ರ, ಇನ್ಷೂರೆನ್ಸ್ ಸರ್ಟಿಫಿಕೇಟ್ ಇತ್ಯಾದಿ ಯಾವುದೇ ಅಡಮಾನ ಸಾಲಕ್ಕೆ ಇದು ಅನ್ವಯ ಆಗುತ್ತದೆ. ಇಂಥ ಸಾಲ ನೀಡುವಾಗಲೇ ಮೂಲದಾಖಲೆಗಳನ್ನು ಯಾವಾಗ ಮತ್ತು ಹೇಗೆ ಮರಳಿಸಲಾಗುವುದು ಎಂಬುದನ್ನೂ ನಿರ್ದಿಷ್ಟಪಡಿಸಿರಬೇಕು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ