ವಾಷಿಂಗ್ಟನ್, ನವೆಂಬರ್ 16: ಗೂಗಲ್ಗೆ ಹೆಚ್ಚಿನ ಆದಾಯ ಬರುವುದು ಅದರ ಸರ್ಚ್ ಎಂಜಿನ್ನಿಂದ. ಈ ಆದಾಯದಲ್ಲಿ ಬೇರೆ ಬೇರೆ ಸಂಬಂಧಿತ ವ್ಯಕ್ತಿ, ಕಂಪನಿಗಳಿಗೆ ಪಾಲು ಹಂಚಿಕೆ ಮಾಡುತ್ತದೆ. ಹಾಗೆಯೇ, ಆ್ಯಪಲ್ ಸಂಸ್ಥೆಗೆ ಗೂಗಲ್ ಒಂದು ವರ್ಷದಲ್ಲಿ ಮಾಡುವ ಆದಾಯ ಹಂಚಿಕೆ (revenue sharing) 10 ಬಿಲಿಯನ್ ಡಾಲರ್ಗೂ (ಸುಮಾರು 83,000 ಕೋಟಿರೂ) ಹೆಚ್ಚಂತೆ. ಗೂಗಲ್ನ ಮಾತೃ ಸಂಸ್ಥೆ ಆಲ್ಫಬೆಟ್ನ ಸಿಇಒ ಸುಂದರ್ ಪಿಚೈ (Sundar Pichai) ಅವರೇ ಖುದ್ದಾಗಿ ಈ ಮಾಹಿತಿ ನೀಡಿದ್ದಾರೆ. ಅಮೆರಿಕದಲ್ಲಿ ಗೂಗಲ್ ವಿರುದ್ಧ ಕೋರ್ಟ್ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಯಲ್ಲಿ ಸುಂದರ್ ಪಿಚೈ ತಮ್ಮ ಸಂಸ್ಥೆ ಪ್ರತೀ ವರ್ಷ ಆ್ಯಪಲ್ಗೆ ಸರ್ಚ್ ಆದಾಯ ಎಷ್ಟು ಹಂಚಿಕೆ ಮಾಡುತ್ತದೆ ಎಂಬ ವಿವರ ಬಹಿರಂಗಪಡಿಸಿದ್ದಾರೆ. ಆ್ಯಪಲ್ನ ಸಫಾರಿ ಬ್ರೌಸರ್ನಿಂದ ಗೂಗಲ್ಗೆ ಬರುವ ಆದಾಯದಲ್ಲಿ ಶೇ. 36ರಷ್ಟು ಪಾಲನ್ನು ಆ್ಯಪಲ್ಗೆ ಕೊಡುತ್ತಿರುವುದಾಗಿ ಗೂಗಲ್ ಸಿಇಒ ಹೇಳಿದ್ದಾರೆ.
ಗೂಗಲ್ ವಿರುದ್ಧ ಮೊಕದ್ದಮೆ ಸಲ್ಲಿರುವ ಎಪಿಕ್ ಗೇಮ್ಸ್ (Epic Games) ಮಾಧ್ಯಮ ಸಂಸ್ಥೆ ಪ್ರಕಾರ ಗೂಗಲ್ ಸಂಸ್ಥೆ ಆ್ಯಪಲ್ಗೆ ಒಂದು ವರ್ಷದಲ್ಲಿ ಕೊಡುವ ಹಣ 18 ಬಿಲಿಯನ್ ಡಾಲರ್ (1.5 ಲಕ್ಷ ಕೋಟಿ ರೂ) ಅಂತೆ.
ಇದನ್ನೂ ಓದಿ: ಮುಂದಿನ ವರ್ಷ ಭಾರತದ ಆರ್ಥಿಕತೆಗೆ ಈ ಮೂರು ವಿದ್ಯಮಾನಗಳಿಂದ ಅಪಾಯ ಸಾಧ್ಯತೆ: ಮಾರ್ಗನ್ ಸ್ಟಾನ್ಲೀ
ಆ್ಯಪಲ್ನ ಸಫಾರಿ ಬ್ರೌಸರ್ನಲ್ಲಿ ಡೀಫಾಲ್ಟ್ ಸರ್ಚ್ ಎಂಜಿನ್ ಆಗಿ ಗೂಗಲ್ ಸರ್ಚ್ ಅನ್ನು ಇರಿಸುವುದಕ್ಕೆ ಈ ಹಣ ನೀಡಲಾಗುತ್ತದೆ. ಆ್ಯಪಲ್ ಮಾತ್ರವಲ್ಲ ಎಲ್ಲಾ ಮೊಬೈಲ್ ತಯಾರಕರ ಜೊತೆಗೂ ಗೂಗಲ್ ಈ ರೀತಿ ಒಪ್ಪಂದ ಮಾಡಿಕೊಳ್ಳುತ್ತದೆ. ಡೀಫಾಲ್ಟ್ ಸರ್ಚ್ ಎಂಜಿನ್ ಆಗಿದ್ದರೆ ಹೆಚ್ಚಿನ ಜನರು ಅದನ್ನು ಬಳಸುತ್ತಾರೆ. ಅದರಿಂದ ಗೂಗಲ್ಗೆ ಸಾಕಷ್ಟು ಜಾಹೀರಾತು ಆದಾಯ ಸಿಗುತ್ತದೆ. ಇದರಲ್ಲಿ ಶೇ. 36ರಷ್ಟು ಪಾಲನ್ನು ಆ್ಯಪಲ್ ಕಂಪನಿಗೆ ಒದಗಿಸುತ್ತದೆ.
ವಾಷಿಂಗ್ಟನ್ನಲ್ಲಿ ನಡೆಯುತ್ತಿರುವ ಗೂಗಲ್ ವಿರುದ್ಧದ ಮೊಕದ್ದಮೆಯ ವಿಚಾರಣೆಯಲ್ಲಿ ಎಪಿಕ್ ಗೇಮ್ಸ್ ಸಂಸ್ಥೆಯ ವಕೀಲರು, ಸ್ಯಾಮ್ಸುಂಗ್ ವಿಚಾರವನ್ನು ಪ್ರಸ್ತಾಪಿಸಿ ಗೂಗಲ್ನಿಂದ ಅನ್ಯಾಯ ಆಗುತ್ತಿದೆ ಎಂದು ಆರೋಪಿಸಿದ್ದಾರೆ. ಆ್ಯಪಲ್ಗೆ ಕೊಡುತ್ತಿರುವಷ್ಟು ಆದಾಯ ಪಾಲನ್ನು ಸ್ಯಾಮ್ಸುಂಗ್ಗೆ ಕೊಡುತ್ತಿಲ್ಲ ಎಂಬುದು ಆಕ್ಷೇಪ. ಇದಕ್ಕೆ ಗೂಗಲ್ ಸಮಜಾಯಿಷಿ ಕೊಟ್ಟಿದ್ದು, ಆ್ಯಪಲ್ ಮತ್ತು ಆಜೆಂಜ್ ಅನ್ನು ಒಂದೇ ತಕ್ಕಡಿಗೆ ಹಾಕಲು ಆಗುವುದಿಲ್ಲ. ಎರಡಕ್ಕೂ ಬೇರೆ ಮಾನದಂಡಗಳನ್ನು ಬಳಸಲಾಗುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: RBI: ಈ ಎರಡು ಬಜಾಜ್ ಫೈನಾನ್ಸ್ ಸ್ಕೀಮ್ ಅಡಿಯಲ್ಲಿ ಸಾಲ ನೀಡದಂತೆ ಆರ್ಬಿಐನಿಂದ ನಿರ್ಬಂಧ
ಸ್ಯಾಮ್ಸುಂಗ್ ಹ್ಯಾಂಡ್ಸೆಟ್ಗಳು ಆಂಡ್ರಾಯ್ಡ್ ತಂತ್ರಾಂಶ ಬಳಸುತ್ತವೆ. ಆಂಡ್ರಾಯ್ಡ್ ಲೈಸೆನ್ಸ್ ಗೂಗಲ್ ಬಳಿ ಇದೆ. ಆಂಡ್ರಾಯ್ಡ್ ಬಳಕೆಗೆ ಪ್ರತಿಯಾಗಿ ಸ್ಯಾಮ್ಸಂಗ್ ಮೊಬೈಲ್ಗಳಲ್ಲಿ ಗೂಗಲ್ನದ್ದು ಡೀಫಾಲ್ಟ್ ಸರ್ಚ್ ಎಂಜಿನ್ ಆಗಿರಬೇಕು, ಡೀಫಾಲ್ಟ್ ಪ್ಲೇ ಸ್ಟೋರ್ ಆಗಿರಬೇಕು ಎಂಬಿತ್ಯಾದಿ ಷರತ್ತುಗಳಿರುತ್ತವೆ. ಗೂಗಲ್ ಈ ಕಾರಣಕ್ಕೆ ಆ್ಯಪಲ್ಗೆ ಕೊಡುವಷ್ಟು ಆದಾಯ ಪಾಲನ್ನು ಸ್ಯಾಮ್ಸುಂಗ್ ಕಂಪನಿಗೆ ಕೊಡುವುದಿಲ್ಲ. ಗೂಗಲ್ ಸಿಇಒ ಸುಂದರ್ ಪಿಚೈ ಈ ವಿಚಾರವನ್ನೂ ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ