ಯುನೈಟೆಡ್ ಕಿಂಗ್ಡಂನ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಾರ್ಟಿ ಸೋಲನುಭವಿಸಿದೆ. ಲೇಬರ್ ಪಾರ್ಟಿ 14 ವರ್ಷದ ಬಳಿಕ ಅಧಿಕಾರಕ್ಕೆ ಮರಳುತ್ತಿದೆ. ಭಾರತ ಮೂಲದ ರಿಷಿ ಸುನಕ್ ಪ್ರಧಾನಿಯಾಗಿದ್ದರಿಂದ ಭಾರತಕ್ಕೆ ತುಸು ಸಮಾಧಾನದ ಸಂಗತಿಯಾಗಿತ್ತು. ಈಗ ಕೇರ್ ಸ್ಟಾರ್ಮರ್ ಪ್ರಧಾನಿಯಾಗುತ್ತಿದ್ದಾರೆ. ಬ್ರಿಟನ್ನಲ್ಲಿ ಯಾವುದೇ ಸರ್ಕಾರ ಬಂದರೂ ಎರಡೂ ದೇಶಗಳ ಮಧ್ಯೆ ರಾಜಕೀಯ, ವ್ಯಾವಹಾರಿಕ ಸಂಬಂಧದಲ್ಲಿ ಹೆಚ್ಚಿನ ವ್ಯತ್ಯಯ ಆಗುವ ಸಾಧ್ಯತೆ ಇಲ್ಲ. ಆದರೆ, ಕೆಲವೊಂದು ನೀತಿಗಳಲ್ಲಿ ಸಣ್ಣಪುಟ್ಟ ಬದಲಾವಣೆ ಆಗುವ ಸಾಧ್ಯತೆ ಇದೆ.
ಭಾರತ ಮತ್ತು ಬ್ರಿಟನ್ ಮಧ್ಯೆ ಕಳೆದ ಎರಡು ವರ್ಷದಿಂದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮಾತುಕತೆ ನಡೆಯುತ್ತಿದೆ. ಈವರೆಗೆ 14 ಸುತ್ತುಗಳ ಮಾತುಕತೆ ಆಗಿದೆ. ಇನ್ನೇನು ಸಹಿ ಬೀಳುವ ಸಾಧ್ಯತೆ ಇತ್ತು. ಈ ಹಂತದಲ್ಲಿ ಸರ್ಕಾರ ಬದಲಾಗುತ್ತಿದೆ.
ವಿಪಕ್ಷದಲ್ಲಿದ್ದಾಗ ಲೇಬರ್ ಪಾರ್ಟಿ ಈ ಎಫ್ಟಿಎಯಲ್ಲಿ ಕೆಲ ಅಂಶಗಳು ಬದಲಾಗಬೇಕು ಎಂದು ಒತ್ತಾಯಿಸುತ್ತಿತ್ತು. ಈಗ ಅದು ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಫ್ರೀ ಟ್ರೇಡ್ ಅಗ್ರೀಮೆಂಟ್ನಲ್ಲಿ ಕೆಲ ಅಂಶಗಳನ್ನು ಬದಲಾಯಿಸಲು ಮುಂದಾಗಬಹುದು. ಇದರಿಂದ ಒಪ್ಪಂದಕ್ಕೆ ಅಂಕಿತ ಬೀಳುವುದು ತಡವಾಗಬಹುದು.
ಇದನ್ನೂ ಓದಿ: ಭಾರತೀಯರು ಹೆಚ್ಚು ಹಾಟ್ ಡ್ರಿಂಕ್ಸ್ ಕುಡಿಯೋದು ಯಾಕೆ ಗೊತ್ತಾ? ಲಿಕ್ಕರ್ ಉದ್ಯಮದವರು ಹೇಳೋದಿದು
ಎಫ್ಟಿಎಯಿಂದ ಭಾರತದ ಐಟಿ, ಎಲೆಕ್ಟ್ರಿಕಲ್ ಮತ್ತು ಉಡುಪು ಉದ್ಯಮಕ್ಕೆ ಲಾಭ ಇದೆ. ಬ್ರಿಟನ್ನಿಂದ ಕಡಿಮೆ ಬೆಲೆಗೆ ಮದ್ಯ ಸರಬರಾಜು ಆಗಬಹುದಾದ್ದರಿಂದ ಭಾರತದ ಲಿಕ್ಕರ್ ಉದ್ಯಮ ಹೆಚ್ಚು ಪೈಪೋಟಿ ಎದುರಿಸಬೇಕಾಗಬಹುದು.
ಬ್ರಿಟನ್ ದೇಶದಲ್ಲಿ ಐಟಿ ಮತ್ತು ಫೈನಾನ್ಸ್ ಸೆಕ್ಟರ್ನಲ್ಲಿ ಕೆಲಸಕ್ಕೆ ಹೋಗಬಯಸುವ ಭಾರತೀಯರಿಗೆ ಯಂಗ್ ಪ್ರೊಫೆಷನಲ್ಸ್ ಸ್ಕೀಮ್ ಇದೆ. ಈ ಸ್ಕೀಮ್ನ ಕೆಲ ಕಠಿಣ ಷರುತ್ತುಗಳಲ್ಲಿ ಸಡಿಲಿಕೆ ಆಗಬೇಕು. ಬ್ರಿಟನ್ಗೆ ಹೋದ ಬಳಿಕ ಅಲ್ಲಿ ಕೆಲಸ ಬದಲಿಸುವ ಪ್ರಕ್ರಿಯೆಯೂ ಕೂಡ ಸರಳಗೊಳ್ಳಬೇಕು ಎಂದು ಭಾರತ ಸರ್ಕಾರ ಕೆಲ ವರ್ಷಗಳಿಂದಲೂ ಮನವಿ ಮಾಡುತ್ತಿದೆ. ಇದಕ್ಕೆ ಬ್ರಿಟನ್ ಸರ್ಕಾರ ಬಹುತೇಕ ಒಪ್ಪಿಕೊಂಡಿತ್ತು. ಈಗ ಸರ್ಕಾರವೇ ಬದಲಾಗಿ ಹೋಗಿದೆ. ಈ ವಿಚಾರದ ಬಗ್ಗೆ ಸರ್ಕಾರದ ನಿಲುವು ಬದಲಾಗುತ್ತದಾ ನೋಡಬೇಕು.
ಇದನ್ನೂ ಓದಿ: ಕೀರ್ ಸ್ಟಾರ್ಮರ್ ಗೆಲುವಿಗೆ ನರೇಂದ್ರ ಮೋದಿ ಅಭಿನಂದನೆ; ರಿಷಿ ಸುನಕ್‌ಗೆ ಥ್ಯಾಂಕ್ಸ್ ಎಂದ ಪ್ರಧಾನಿ
ಬ್ರಿಟನ್ ದೇಶಕ್ಕೆ ಭಾರತ ಮಾಡುವ ರಫ್ತಿಗೆ ಹೆಚ್ಚು ಕಾರ್ಬನ್ ಟ್ಯಾಕ್ಸ್ ವಿಧಿಸಲಾಗುತ್ತಿದೆ. ಯೂರೋಪಿಯನ್ ಯೂನಿಯನ್ ರೀತಿಯಲ್ಲಿ ತೆರಿಗೆ ಹೇರಿಕೆ ಮಾಡುತ್ತಿದೆ. ಇದರ ಪ್ರಮಾಣ ಕಡಿಮೆ ಮಾಡುವಂತೆ ಭಾರತ ಸರ್ಕಾರ ಮನವಿ ಮಾಡುತ್ತಿದೆ. ಲೇಬರ್ ಪಾರ್ಟಿ ನೇತೃತ್ವದ ಹೊಸ ಸರ್ಕಾರದ ನೀತಿ ಹೇಗಿರುತ್ತೆ ಮುಂದಿನ ದಿನಗಳಲ್ಲಿ ಗೊತ್ತಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ