2031ರವರೆಗೂ ಹಣದುಬ್ಬರ ಶೇ. 4ರಲ್ಲಿ ಇರುವಂತೆ ಮಾಡಿ: ಆರ್​ಬಿಐಗೆ ಟಾರ್ಗೆಟ್ ಕೊಟ್ಟ ಸರ್ಕಾರ

Govt mandates RBI to keep retail inflation rate at 4pc till 2031: ಮುಂದಿನ ಐದು ವರ್ಷಗಳಿಗೆ ಸರ್ಕಾರವು ಆರ್​ಬಿಐಗೆ ಹಣದುಬ್ಬರದ ಗುರಿ ನಿಗದಿ ಮಾಡಿದೆ. 2031ರ ಮಾರ್ಚ್​ವರೆಗೆ ಹಣದುಬ್ಬರ ಶೇ. 4ರ ಆಸುಪಾಸಿನಲ್ಲಿ ಇರಲಿ ಎನ್ನುವುದು ಸರ್ಕಾರ ಕೊಟ್ಟಿರುವ ಟಾರ್ಗೆಟ್. ಹಣದುಬ್ಬರವು ಎರಡು ಪ್ರತಿಶತಕ್ಕಿಂತ ಹೆಚ್ಚು ಆಚೆ ಈಚೆ ಹೋಗಬಾರದು. ಶೇ. 2-6ರ ಶ್ರೇಣಿಯಲ್ಲಿ ಇರಬೇಕು ಎನ್ನುವುದು ಈ ಗುರಿ.

2031ರವರೆಗೂ ಹಣದುಬ್ಬರ ಶೇ. 4ರಲ್ಲಿ ಇರುವಂತೆ ಮಾಡಿ: ಆರ್​ಬಿಐಗೆ ಟಾರ್ಗೆಟ್ ಕೊಟ್ಟ ಸರ್ಕಾರ
ಹಣದುಬ್ಬರ
Image Credit source: Shutterstock

Updated on: Mar 26, 2026 | 6:28 PM

ನವದೆಹಲಿ, ಮಾರ್ಚ್ 26: ಕೇಂದ್ರ ಸರ್ಕಾರ ತನ್ನ ಹಣದುಬ್ಬರ (Retail Inflation) ನಿಲುವನ್ನು ಮುಂದುವರಿಸಿದೆ. ಮುಂದಿನ ಐದು ವರ್ಷ, ಅಂದರೆ 2023ರ ಮಾರ್ಚ್​ವರೆಗೂ ರೀಟೇಲ್ ಹಣದುಬ್ಬರ ಶೇ. 4 ಅನ್ನು ಕಾಯ್ದುಕೊಳ್ಳುವಂತೆ ಆರ್​ಬಿಐಗೆ ಸರ್ಕಾರ ಗುರಿ ಕೊಟ್ಟಿದೆ. ರೀಟೇಲ್ ಹಣದುಬ್ಬರ ಶೇ. 4, ಆಚೀಚೆ ಎರಡು ಪ್ರತಿಶತ ಮೀರದಂತೆ ಇರಬೇಕು ಎಂಬುದು ಸರ್ಕಾರದ ನಿರ್ದೇಶನ. ಅಂದರೆ, ಹಣದುಬ್ಬರವು ಶೇ. 2ರಿಂದ ಶೇ. 6ರ ಶ್ರೇಣಿಯಲ್ಲೇ ಇರುವಂತೆ ನೋಡಿಕೊಳ್ಳಬೇಕೆಂದು ಆರ್ಬಿಐಗೆ ಸರ್ಕಾರ ತಿಳಿಸಿದೆ.

ಆರ್ಥಿಕತೆಯ ವೇಗವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರ್ದಿಷ್ಟ ಹಣದುಬ್ಬರವನ್ನು ನಿರೀಕ್ಷಿಸುತ್ತದೆ. ಹಣದುಬ್ಬರ ಆಚೀಚೆ ಏರುಪೇರಾದರೆ ಆರ್ಥಿಕ ಲಯಕ್ಕೆ ಧಕ್ಕೆಯಾಗುತ್ತದೆ. 2016ರಲ್ಲಿ ಸರ್ಕಾರವು ಹಣದುಬ್ಬರವನ್ನು ಐದು ವರ್ಷಗಳ ಕಾಲ ಶೇ. 4ರಷ್ಟು ಇಡಬೇಕೆಂದು ಆರ್​ಬಿಐಗೆ ನಿರ್ದೇಶನ ಕೊಟ್ಟಿತ್ತು. 2021ರಲ್ಲೂ ಅದೇ ನಿರ್ದೇಶನ ಮುಂದುವರಿಯಿತು. ಈಗ 2026ರಲ್ಲೂ ಅದನ್ನೇ ಗುರಿಯಾಗಿ ಮುಂದುವರಿಸಲಾಗಿದೆ. ಸತತ ಮೂರು ಬಾರಿ ಸರ್ಕಾರ ಶೇ. 4ರ ಹಣದುಬ್ಬರ ಗುರಿಯನ್ನು ಆರ್​ಬಿಐಗೆ ಕೊಟ್ಟಿದೆ. ಈ ಹಣದುಬ್ಬರ ಗುರಿ ಕೊಡುವ ನೀತಿ ಶುರುವಾಗಿದ್ದೇ 2016ರಲ್ಲಿ.

ಇದನ್ನೂ ಓದಿ: ಭಾರತದಲ್ಲಿ ನಯಾರಾ ಪೆಟ್ರೋಲ್ ದರ ಹೆಚ್ಚಳ; ಲೀಟರ್​ಗೆ 5 ರೂ ಬೆಲೆ ಏರಿಕೆ

ಕಳೆದ 10 ವರ್ಷದಲ್ಲಿ ಆರ್​ಬಿಐ ಸರ್ಕಾರ ತನಗೆ ಕೊಟ್ಟ ಗುರಿಯನ್ನು ಬಹುತೇಕ ಅಚ್ಚುಕಟ್ಟಾಗಿ ನಿಭಾಯಿಸಿದೆ. ಕೋವಿಡ್ ಕಾಲಘಟ್ಟದಲ್ಲಿ ಶೇ. 7 ದಾಟಿ ಹೋಗಿದ್ದು ಬಿಟ್ಟರೆ ಹೆಚ್ಚಿನ ಕ್ವಾರ್ಟರ್​ಗಳಲ್ಲಿ ಹಣದುಬ್ಬರವು ಶೇ. 2ರಿಂದ 6ರ ಶ್ರೇಣಿಯಲ್ಲಿ ಇದೆ.

ಕಳೆದ ಕೆಲ ತಿಂಗಳಿಂದ ಹಣದುಬ್ಬರ ದರವು ಶೇ. 4ರ ಒಳಗೆಯೇ ಇದೆ. ಜನವರಿಯಲ್ಲಿ ಶೇ. 2.74 ಇದ್ದ ಹಣದುಬ್ಬರ ದರ ಫೆಬ್ರುವರಿಯಲ್ಲಿ ಶೇ. 3.21ಕ್ಕೆ ಏರಿದೆ. ಹಣದುಬ್ಬರದ ಚಲನೆಯನ್ನು ನಿಯಂತ್ರಿಸುವ ರೀತಿಯಲ್ಲಿ ಆರ್​ಬಿಐ ತನ್ನ ನೀತಿಗಳನ್ನು ಪರಿಷ್ಕರಿಸಲು ಯತ್ನಿಸುತ್ತದೆ.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್; ಕಾರ್ಪೊರೇಟ್ ಪಾಲಿಸಿ ಜೊತೆಗೆ ವೈಯಕ್ತಿಕ ವಿಮೆಯೂ ಇರಲಿ: ನಿತಿನ್ ಕಾಮತ್ ಸಲಹೆ

ಹಣದುಬ್ಬರ ಅತಿಯಾಗಿದ್ದಾಗ ಆರ್​ಬಿಐ ತನ್ನ ರಿಪೋ ದರ ಅಥವಾ ಬಡ್ಡಿದರವನ್ನು ಏರಿಸುತ್ತದೆ. ಹಣದುಬ್ಬರ ನಿಯಂತ್ರಣಕ್ಕೆ ಇರುವ ಹಲವು ಮಾರ್ಗೋಪಾಯಗಳಲ್ಲಿ ರಿಪೋ ದರವೂ ಒಂದು. ಇಂಥ ಇನ್ನೂ ಕೆಲ ಅಸ್ತ್ರಗಳು ರಿಸರ್ವ್ ಬ್ಯಾಂಕ್ ಬಳಿ ಇವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us