ಹೆಲ್ತ್ ಇನ್ಷೂರೆನ್ಸ್; ಕಾರ್ಪೊರೇಟ್ ಪಾಲಿಸಿ ಜೊತೆಗೆ ವೈಯಕ್ತಿಕ ವಿಮೆಯೂ ಇರಲಿ: ನಿತಿನ್ ಕಾಮತ್ ಸಲಹೆ
Nithin Kamath explains the importance of personal health insurance: ಭಾರತದಲ್ಲಿ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಹೊಂದಿರುವವರ ಸಂಖ್ಯೆ ಬಹಳ ಕಡಿಮೆ. ಇನ್ಷೂರೆನ್ಸ್ ಅರಿವು ಹೆಚ್ಚು ಇರುವ ನಗರ ಭಾಗಗಳಲ್ಲೂ ಆರೋಗ್ಯ ವಿಮೆ ಹೊಂದಿರುವವರ ಸಂಖ್ಯೆ ಕಡಿಮೆ ಇದೆ. ಕಾರ್ಪೊರೇಟ್ ಉದ್ಯೋಗಿಗಳು ತಮ್ಮ ಕಂಪನಿ ಮಾಡಿಸುವ ಇನ್ಷೂರೆನ್ಸ್ ಕವರೇಜ್ ಹೊಂದಿರುತ್ತಾರೆ. ಆದರೆ, ಪರ್ಸನಲ್ ಪಾಲಿಸಿ ಮಾಡಿಸದೆ ತಪ್ಪು ಮಾಡುತ್ತಾರೆ. ನಿತಿನ್ ಕಾಮತ್ ಈ ಬಗ್ಗೆ ಒಂದಿಷ್ಟು ಕಿವಿ ಮಾತು ಹೇಳಿದ್ದಾರೆ.

ಬೆಂಗಳೂರು, ಮಾರ್ಚ್ 26: ಇವತ್ತು ಬಹುತೇಕ ಎಲ್ಲಾ ಕಾರ್ಪೊರೇಟ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಹೆಲ್ತ್ ಇನ್ಷೂರೆನ್ಸ್ (Health Insurance) ಸೌಲಭ್ಯ ಒದಗಿಸುತ್ತವೆ. ಈ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ಬಳಿ ಕಾರ್ಪೊರೇಟ್ ಹೆಲ್ತ್ ಇನ್ಷೂರೆನ್ಸ್ ಸೌಲಭ್ಯ ಇದೆ ಎಂದು ಹೇಳಿ ವೈಯಕ್ತಿಕ ಇನ್ಷೂರೆನ್ಸ್ ಪಾಲಿಸಿ ಮಾಡಿಸುವ ಗೋಜಿಗೆ ಹೋಗುವುದಿಲ್ಲ. ಇದು ತಪ್ಪು ಎಂದು ಬಹಳ ಹಣಕಾಸು ತಜ್ಞರು ಅಭಿಪ್ರಾಯಪಡುತ್ತಾರೆ. ಈ ಅನಿಸಿಕೆಗೆ ಝೀರೋಧ ಸಹ-ಸಂಸ್ಥಾಪಕ ನಿತಿನ್ ಕಾಮತ್ ಧ್ವನಿಗೂಡಿಸಿದ್ದಾರೆ.
‘ಬಹಳ ಜನರು ತಮ್ಮ ಕಂಪನಿಯ ಗ್ರೂಪ್ ಇನ್ಷೂರೆನ್ಸ್ ಸಾಕಷ್ಟಾಯಿತು ಎಂದು ಭಾವಿಸಿ, ಪರ್ಸನಲ್ ಹೆಲ್ತ್ ಪಾಲಿಸಿಯನ್ನೇ ಹೊಂದಿಲ್ಲ ಎಂಬುದನ್ನು ತಿಳಿದು ಬಹಳವೇ ಅಚ್ಚರಿಯಾಗಿತು. ಹೆಚ್ಚಿನ ಕಾರ್ಪೊರೇಟ್ ಪ್ಲಾನ್ಗಳು ಸಮಗ್ರ ಕವರೇಜ್ಗೆ ಒತ್ತು ಕೊಡುವುದಿಲ್ಲ. ಕಡಿಮೆ ಬೆಲೆಗೆ ಪಾಲಿಸಿ ಪಡೆಯಲಾಗಿರುತ್ತದೆ’ ಎಂದು ನಿತಿನ್ ಕಾಮತ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪಿಎಂ ಎಸ್ವೈಎಂ ಸ್ಕೀಮ್; ತಿಂಗಳಿಗೆ ಕೇವಲ 55 ರೂ ಹೂಡಿಕೆ; ಉತ್ತಮ ಮಾಸಿಕ ವರಮಾನ ಸೃಷ್ಟಿ
ಕಾರ್ಪೊರೇಟ್ ಹೆಲ್ತ್ ಇನ್ಷೂರೆನ್ಸ್ ಯಾಕೆ ಸಾಕಾಗಲ್ಲ?
ಕಾರ್ಪೊರೇಟ್ ಹೆಲ್ತ್ ಇನ್ಷೂರೆನ್ಸ್ ಅನ್ನು ಕಡಿಮೆ ಬೆಲೆಗೆ ನೆಗೋಶಿಯೇಟ್ ಮಾಡಿ ಪಡೆಯಲಾಗಿರುತ್ತದೆ. ಇದರಲ್ಲಿ ಹಲವು ಪರಿಮಿತಿಗಳಿರುತ್ತವೆ. ವಾರ್ಡ್ ಬಾಡಿಗೆ ಕವರೇಜ್ನಲ್ಲಿ ಮಿತಿ ಇರುತ್ತದೆ. ಸರ್ಜನ್ ಫೀ, ಪ್ರೊಸೀಜರ್ ಶುಲ್ಕ, ಆಸ್ಪತ್ರೆ ವೆಚ್ಚ ಇತ್ಯಾದಿ ಖರ್ಚುಗಳಿಗೆ ಪೂರ್ಣ ಕವರೇಜ್ ಸಿಗದೇ ಇರಬಹುದು. ಹೆಚ್ಚಿನ ಪಾಲಿಸಿಗಳಲ್ಲಿ ನಿಮ್ಮ ಒಟ್ಟೂ ಆಸ್ಪತ್ರೆ ವೆಚ್ಚದಲ್ಲಿ ಶೇ. 80ಕ್ಕಿಂತ ಕಡಿಮೆ ಮೊತ್ತವನ್ನು ಭರಿಸಲಾಗಬಹುದು. ನಿತಿನ್ ಕಾಮತ್ ಈ ಅಂಶಗಳನ್ನು ತಮ್ಮ ಟ್ವೀಟ್ನಲ್ಲಿ ಎತ್ತಿ ತೋರಿಸಿದ್ದಾರೆ.
ಕಾರ್ಪೊರೇಟ್ ಹೆಲ್ತ್ ಪಾಲಿಸಿಗಳು ಸಾಮಾನ್ಯವಾಗಿ 5ರಿಂದ 10 ಲಕ್ಷ ರೂ ವಾರ್ಷಿಕ ಕವರೇಜ್ ಒದಗಿಸುತ್ತವೆ. ನೀವು ಆರೋಗ್ಯಯುತವಾಗಿದ್ದಾಗ ಈ ಕವರೇಜ್ ಬಹಳ ಹೆಚ್ಚಾಯಿತು ಎನಿಸಬಹುದು. ಆದರೆ, ಭಾರತದಲ್ಲಿ ವೈದ್ಯಕೀಯ ಹಣದುಬ್ಬರ ಶೇ. 14ರಷ್ಟು ಇದೆ. ಅಂದರೆ ವೈದ್ಯಕೀಯ ವೆಚ್ಚ ವರ್ಷಕ್ಕೆ ಶೇ. 14ರಷ್ಟು ಹೆಚ್ಚುತ್ತಲೇ ಇರಬಹುದು. ಹೀಗಾಗಿ, ಹೋಗುತ್ತಾ ಹೋಗುತ್ತಾ ಕಾರ್ಪೊರೇಟ್ ಹೆಲ್ತ್ ಇನ್ಷೂರೆನ್ಸ್ ಕವರೇಜ್ ಸಾಕಾಗದೇ ಹೋಗಬಹುದು.
ಇದನ್ನೂ ಓದಿ: ಮ್ಯೂಚುವಲ್ ಫಂಡ್ಗಳನ್ನು ಉಡುಗೊರೆಯಾಗಿ ನೀಡಬೇಕಾ? ಸೆಬಿ ಮುಂದಿದೆ ಹೊಸ ಪ್ಲಾನ್
ನಿತಿನ್ ಕಾಮತ್ ಸಲಹೆ ಇದು
ಕಾರ್ಪೊರೇಟ್ ಪಾಲಿಸಿ ಜೊತೆಯಲ್ಲೇ ಪರ್ಸನಲ್ ಪಾಲಿಸಿಯನ್ನೂ ಪಡೆದಿರಿ. ನೀವು ಆರೋಗ್ಯವಂತರಾಗಿದ್ದಾಗಲೇ ಪಾಲಿಸಿ ಪಡೆದರೆ ಕಡಿಮೆ ಬೆಲೆಗೆ ಸಿಗುತ್ತದೆ. ಕಾಯಿಲೆ ಬಂದ ಬಳಿಕ ಪಾಲಿಸಿ ಪಡೆಯಬೇಕೆಂದರೆ ದುಬಾರಿ ಪ್ರೀಮಿಯಮ್ ಕಟ್ಟಬೇಕಾಗುತ್ತದೆ. ಕಾರ್ಪೊರೇಟ್ ಪಾಲಿಸಿ ಮತ್ತು ಪರ್ಸನಲ್ ಎರಡೂ ಪಾಲಿಸಿ ಇದ್ದಾಗ ನೀವು ಇನ್ಷೂರೆನ್ಸ್ ಕ್ಲೇಮ್ಗೆ ಕಾರ್ಪೊರೇಟ್ ಪಾಲಿಸಿ ಬಳಸಿರಿ. ಪರ್ಸನಲ್ ಪಾಲಿಸಿಯನ್ನು ಸಾಧ್ಯವಾದಷ್ಟೂ ಬಳಸದೆ ಉಳಿಸಿ, ನೋಕ್ಲೇಮ್ ಬೋನಸ್ ಅನ್ನು ಸೇರುವಂತೆ ನೋಡಿಕೊಳ್ಳಿ. ಇದರಿಂದ ಮುಂದ್ಯಾವತ್ತಾದರೂ ಪರ್ಸನಲ್ ಪಾಲಿಸಿಯ ಅಗತ್ಯ ಬಹಳ ಬರುತ್ತದೆ ಎಂಬುದು ನಿತಿನ್ ಕಾಮತ್ ಅವರ ಸಲಹೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
