ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST) ಮಂಡಳಿಯ 48ನೇ ಸಭೆ ನಾಳೆ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಯಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಆನ್ಲೈನ್ ಗೇಮಿಂಗ್ ಮೇಲೆ ಜಿಎಸ್ಟಿ ಪ್ರಮಾಣ ಹೆಚ್ಚಿಸುವುದೂ ಸೇರಿದಂತೆ ಹಲವು ಮಹತ್ವದ ವಿಚಾರಗಳು ಚರ್ಚೆಯಾಗುವ ನಿರೀಕ್ಷೆ ಇದೆ. ಆನ್ಲೈನ್ ಗೇಮಿಂಗ್ (Online Gaming) ಮೇಲೆ ತೆರಿಗೆ ಸ್ಲ್ಯಾಬ್ ಹೆಚ್ಚಿಸುವುದೂ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ. ಕ್ಯಾಸಿನೋಗಳು, ಆನ್ಲೈನ್ ಗೇಮಿಂಗ್ ಹಾಗೂ ಕುದುರೆ ರೇಸಿಂಗ್ಗಳ ಮೇಲೆ ಜಿಎಸ್ಟಿ ಪ್ರಮಾಣ ಹೆಚ್ಚಿಸುವಂತೆ ರಾಜ್ಯಗಳ ಹಣಕಾಸು ಸಚಿವರ ಸಮಿತಿ ಇತ್ತೀಚೆಗೆ ವರದಿ ಸಿದ್ಧಪಡಿಸಿತ್ತು. ವರದಿಯನ್ನು ಡಿಸೆಂಬರ್ 15ರಂದು ಹಣಕಾಸು ಸಚಿವರಿಗೆ ಸಲ್ಲಿಕೆ ಮಾಡಲಾಗಿದೆ. ಸಚಿವರ ಸಮಿತಿಯ ನೇತೃತ್ವ ವಹಿಸಿರುವ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ನಿರ್ಮಲಾ ಸೀತಾರಾಮನ್ ಅವರಿಗೆ ವರದಿಯನ್ನು ನೀಡಿದ್ದಾರೆ.
ಆದರೆ, ಆನ್ಲೈನ್ ಗೇಮಿಂಗ್ಗೆ ಸಂಬಂಧಿಸಿದ ಚೌಕಟ್ಟು ರೂಪಿಸುವಲ್ಲಿ ಸಚಿವರ ಸಮಿತಿ ಒಮ್ಮತಕ್ಕೆ ಬಂದಿಲ್ಲ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆನ್ಲೈನ್ ಗೇಮಿಂಗ್ ಮೇಲಿನ ಜಿಎಸ್ಟಿಯನ್ನು ಶೇಕಡಾ 28ಕ್ಕೆ ಹೆಚ್ಚಿಸುವ ಬಗ್ಗೆ ಸಚಿವರ ಸಮಿತಿ ಒಮ್ಮತಕ್ಕೆ ಬಂದಿದೆ. ಆದರೆ, ಒಟ್ಟು ಗೇಮಿಂಗ್ ಆದಾಯದ ಮೇಲೆ ತೆರಿಗೆ ವಿಧಿಸಬೇಕೇ ಅಥವಾ ಶುಲ್ಕದ ನಿವ್ವಳ ಮೊತ್ತದ ಮೇಲೆ ಜಿಎಸ್ಟಿ ವಿಧಿಸಬೇಕೇ ಎಂಬ ಬಗ್ಗೆ ಸಹಮತಕ್ಕೆ ಬಂದಿಲ್ಲ ಎಂದು ಮಾಧ್ಯಮ ವರದಿಗಳು ಉಲ್ಲೇಖಿಸಿವೆ.
ಇದನ್ನೂ ಓದಿ: GST Council Meet: ಮುಂದಿನ ವಾರ ಜಿಎಸ್ಟಿ ಮಂಡಳಿ ಸಭೆ; ಆರೋಗ್ಯ ವಿಮೆ ತೆರಿಗೆ ಇಳಿಕೆ ನಿರೀಕ್ಷೆ
ಆರೋಗ್ಯ ವಿಮೆ ಮೇಲಿನ ತೆರಿಗೆಯನ್ನು ಶೇಕಡಾ 18ರಿಂದ 12ಕ್ಕೆ ಇಳಿಕೆ ಮಾಡಬೇಕು ಎಂಬ ಬೇಡಿಕೆ ಬಗ್ಗೆಯೂ ಚರ್ಚೆಯಾಗುವ ನಿರೀಕ್ಷೆ ಇದೆ. ಜಿಎಸ್ಟಿ ಮೇಲ್ಮನವಿ ನ್ಯಾಯಮಂಡಳಿ ಸ್ಥಾಪಿಸುವ ಹಾಗೂ ತೆರಿಗೆ ವಂಚನೆಗೆ ಕ್ರಿಮಿನಲ್ ಕಾನೂನು ಕ್ರಮ ಕೈಗೊಳ್ಳಬೇಕಾದ ಮಿತಿಯನ್ನು ಹೆಚ್ಚಿಸುವ ಬಗ್ಗೆಯೂ ಸಮಾಲೋಚನೆ ನಸಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಮಂಡಳಿಯ 48ನೇ ಸಭೆ ಡಿಸೆಂಬರ್ 17ರಂದು ನಡೆಯಲಿದೆ ಎಂದು ಇತ್ತೀಚೆಗೆ ಟ್ವೀಟ್ ಮೂಲಕ ಜಿಎಸ್ಟಿ ಮಂಡಳಿ ಮಾಹಿತಿ ನೀಡಿತ್ತು. ಮಂಡಳಿಯ 47ನೇ ಸಭೆ ಜೂನ್ 28 ಮತ್ತು 29ರಂದು ಚಂಡೀಗಢದಲ್ಲಿ ನಡೆದಿತ್ತು. ಪ್ಯಾಕೇಜ್ಡ್ ಮತ್ತು ಲೇಬಲ್ ಅಂಟಿಸಿರುವ ಮೊಸರು, ಲಸ್ಸಿ, ಮಜ್ಜಿಗೆಯನ್ನು ಜಿಎಸ್ಟಿ ವ್ಯಾಪ್ತಿಗೆ ತರುವ ಮಹತ್ವದ ನಿರ್ಧಾರವನ್ನು ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಹೀಗಾಗಿ ಈ ಬಾರಿಯ ಜಿಎಸ್ಟಿ ಮಂಡಳಿ ಸಭೆ ಕೂಡ ಕುತೂಹಲಕ್ಕೆ ಕಾರಣವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ