ಇಳಿಯುತ್ತಾ ಪೆಟ್ರೋಲ್, ಡೀಸೆಲ್ ದರ: ನಾಳೆ ಜಿಎಸ್​ಟಿ ಮಂಡಳಿ ಸಭೆ,  ಜಿಎಸ್‌ಟಿ ವ್ಯಾಪ್ತಿಗೆ ಇಂಧನ ತರುವ ವಿಚಾರ ಚರ್ಚೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 16, 2021 | 8:50 PM

ನಾಳೆಯ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಗಲಿದೆ? ತೈಲೋತ್ಪನ್ನ ನಿಜಕ್ಕೂ ಜಿಎಸ್‌ಟಿ ವ್ಯಾಪ್ತಿಗೆ ಬರುತ್ತವೆಯೇ? ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿಲುವು ಏನು? ಇಲ್ಲಿದೆ ವಿವರ

ಇಳಿಯುತ್ತಾ ಪೆಟ್ರೋಲ್, ಡೀಸೆಲ್ ದರ: ನಾಳೆ ಜಿಎಸ್​ಟಿ ಮಂಡಳಿ ಸಭೆ,  ಜಿಎಸ್‌ಟಿ ವ್ಯಾಪ್ತಿಗೆ ಇಂಧನ ತರುವ ವಿಚಾರ ಚರ್ಚೆ
ಸಾಂದರ್ಭಿಕ ಚಿತ್ರ
Follow us on

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆ ಬೇಡವೇ ಎನ್ನುವ ಬಗ್ಗೆ ನಾಳೆ (ಸೆ.17) ಲಖನೌದಲ್ಲಿ ನಡೆಯುವ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಒಂದು ವೇಳೆ ಏನಾದರೂ ಜಿಎಸ್​ಟಿ ವ್ಯಾಪ್ತಿಗೆ ಪೆಟ್ರೋಲ್ ಬಂದರೆ ಅದರ ಬೆಲೆ ಕರ್ನಾಟಕದಲ್ಲಿ ₹ 59 ಆಗಲಿದೆ. ದೇಶದ ಜನರಿಗೆ ಬೆಲೆ ಏರಿಕೆಯಿಂದ ದೊಡ್ಡ ರಿಲೀಫ್ ಸಿಕ್ಕಂತೆ ಆಗಲಿದೆ. ಹಾಗಾದರೆ, ನಾಳೆಯ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಏನೆಲ್ಲಾ ಚರ್ಚೆಯಾಗಲಿದೆ? ತೈಲೋತ್ಪನ್ನ ನಿಜಕ್ಕೂ ಜಿಎಸ್‌ಟಿ ವ್ಯಾಪ್ತಿಗೆ ಬರುತ್ತವೆಯೇ? ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿಲುವು ಏನು? ಇಲ್ಲಿದೆ ವಿವರ

ಉತ್ತರ ಪ್ರದೇಶದ ಲಖನೌದಲ್ಲಿ ನಾಳೆ 45ನೇ ಜಿಎಸ್‌ಟಿ ಮಂಡಳಿಯ ಸಭೆ ಭೌತಿಕವಾಗಿ ನಡೆಯಲಿದೆ. ಕೊರೊನಾ ಸಾಂಕ್ರಾಮಿಕ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಭೌತಿಕ ಸಭೆ ನಡೆಯುತ್ತಿರುವುದು ವಿಶೇಷ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಚೌಧರಿ, ಕೇಂದ್ರ ಹಣಕಾಸು ಇಲಾಖೆಯ ಅಧಿಕಾರಿಗಳು ಹಾಗೂ ಎಲ್ಲ ರಾಜ್ಯಗಳ ಹಣಕಾಸು ಸಚಿವರು ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಮುಖ್ಯವಾಗಿ ಕೇಂದ್ರ-ರಾಜ್ಯಗಳ ಹಣಕಾಸು ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಫಿಟ್​ಮೆಂಟ್ ಸಮಿತಿಯು ಮಾಡಿರುವ ಶಿಫಾರಸುಗಳ ಬಗ್ಗೆ ಚರ್ಚೆ ನಡೆಯಲಿದೆ.

ಜಿಎಸ್‌ಟಿ ಮಂಡಳಿಯಲ್ಲಿ ಚರ್ಚೆಯಾಗಬೇಕಾದ ಅಜೆಂಡಾದ ಬಗ್ಗೆ ಮುಂಚೆಯೇ ನಿರ್ಧರಿಸಲಾಗಿರುತ್ತೆ. ಅವುಗಳ ಬಗ್ಗೆ ಚರ್ಚೆಯಾಗಲಿದೆ. ಜೊತೆಗೆ ಜಿಎಸ್‌ಟಿ ಮಂಡಳಿಯ ಅಧ್ಯಕ್ಷರು ಕೆಲ ಹೊಸ ವಿಷಯಗಳನ್ನು ಸಭೆಯಲ್ಲಿ ಚರ್ಚೆಗೆ ಸೇರಿಸಬಹುದು. ಸಭೆಯಲ್ಲಿ ಬಹಳ ಮುಖ್ಯವಾಗಿ ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಿಬೇಕೇ ಬೇಡವೇ ಎನ್ನುವ ಬಗ್ಗೆ ಚರ್ಚೆಯಾಗಲಿದೆ ಎಂದು ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಕೇರಳ ಹೈಕೋರ್ಟ್, ಜೂನ್ ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸುವ ಬಗ್ಗೆ ಜಿಎಸ್‌ಟಿ ಮಂಡಳಿಯು ಚರ್ಚೆ ನಡೆಸಲಿ ಎಂದು ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಲಿದೆ. ಇದು ಈಗ ಕುತೂಹಲಕ್ಕೂ ಕಾರಣವಾಗಿದೆ. ಜಿಎಸ್‌ಟಿ ಮಂಡಳಿಯ ಸಭೆ ಕೆಲ ನಿರೀಕ್ಷೆಗೂ ಕಾರಣವಾಗಿದೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಲು, ಇವುಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸದೇ ಇರೋದೇ ಕಾರಣ ಎಂದು ಆರ್ಥಿಕ ತಜ್ಞರು ಸಹ ಹೇಳಿದ್ದಾರೆ.

ನಮ್ಮ ದೇಶದಲ್ಲಿ ಎಲ್ಲ ಬೆಲೆಗಳೂ ಗಗನಮುಖಿಯಾಗಿವೆ. ಉತ್ಪನ್ನಗಳ ಸರಕು-ಸಾಗಣೆ ದರ ಏರಿಕೆಯಾಗಿರುವುದರಿಂದ ಬೆಲೆಗಳು ಏರಿಕೆಯಾಗಿವೆ. ಸರಕು-ಸಾಗಣೆ ದರ ಹೆಚ್ಚಾಗಲು ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಆಗಿರುವುದೇ ಕಾರಣ. ನಮ್ಮ ದೇಶದಲ್ಲಿ ಈಗ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ₹ 105ಕ್ಕೆ ಏರಿಕೆಯಾಗಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್​ಗೆ ₹ 94ಕ್ಕೆ ಏರಿಕೆಯಾಗಿದೆ. ಇದರಿಂದಾಗಿ ಸರಕು-ಸಾಗಣೆ ದರವೂ ಏರಿಕೆಯಾಗಿದೆ. ಪೆಟ್ರೋಲ್, ಡೀಸೆಲ್ ದರ ಇಳಿಕೆಯಾದರೆ, ಸರಕು-ಸಾಗಣೆ ದರ ಕೂಡ ಇಳಿಕೆಯಾಗಲಿದೆ. ಇದರ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆ ಕೂಡ ಇಳಿಕೆಯಾಗಲಿದೆ. ಇವು ಒಂದಕ್ಕೊಂದು ಅಂತರ್ ಸಂಬಂಧ ಹೊಂದಿವೆ.

ಈಗ ಪೆಟ್ರೋಲ್, ಡೀಸೆಲ್ ಮೇಲೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ವಿಧಿಸುತ್ತಿದೆ. ರಾಜ್ಯ ಸರ್ಕಾರಗಳು ಮೌಲ್ಯವರ್ಧಿತ ತೆರಿಗೆ ವಿಧಿಸುತ್ತಿವೆ. ನಮ್ಮ ದೇಶದಲ್ಲಿ 2017ರಲ್ಲೇ ಜಿಎಸ್‌ಟಿ ಜಾರಿಗೆ ತಂದು ದೇಶಾದ್ಯಂತ ಏಕರೂಪದ ತೆರಿಗೆಯನ್ನು ವಿಧಿಸಲಾಗುತ್ತೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೇ, ಪೆಟ್ರೋಲ್, ಡೀಸೆಲ್, ಎಟಿಎಫ್, ನೈಸರ್ಗಿಕ ಅನಿಲ ಹಾಗೂ ಕಚ್ಚಾತೈಲವನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಿಲ್ಲ. ಇವನ್ನು ಕೆಲ ಕಾಲದವರೆಗೂ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಮ್ಮತದ ತೀರ್ಮಾನ ತೆಗೆದುಕೊಂಡಿವೆ. ಆದರೆ, ಇದೇ ತೀರ್ಮಾನ ಈಗ ದೇಶದ ಜನರಿಗೆ ಬಾರಿ ಹೊರೆಯಾಗಿ ಪರಿಣಮಿಸಿದೆ.

ಒಂದು ವೇಳೆ ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ಗರಿಷ್ಠ ಶೇ 28 ರಷ್ಟು ಮಾತ್ರ ಸರಕು ಮತ್ತು ಸೇವಾ ಸುಂಕ (ಗೂಡ್ಸ್ ಅಂಡ್ ಸರ್ವೀಸ್ ಟ್ಯಾಕ್ಸ್ – ಜಿಎಸ್​ಟಿ) ವಿಧಿಸಬೇಕಾಗುತ್ತದೆ. ಪೆಟ್ರೋಲ್‌ ಮೂಲ ಬೆಲೆಯ ಮೇಲೆ ಶೇ 28ರಷ್ಟು ತೆರಿಗೆ ವಿಧಿಸಿದರೆ, ಪೆಟ್ರೋಲ್ ದರ ತಾನೇ ತಾನಾಗಿಯೇ ಕಡಿಮೆಯಾಗುತ್ತೆ. ಆದರೆ, ಆಗ ರಾಜ್ಯಗಳಿಗೆ ಪೆಟ್ರೋಲ್, ಡೀಸೆಲ್ ಮೇಲೆ ವ್ಯಾಟ್ ವಿಧಿಸಲು ಸಾಧ್ಯವಾಗುವುದಿಲ್ಲ. ರಾಜ್ಯ ಸರ್ಕಾರಗಳ ಪ್ರಮುಖ ತೆರಿಗೆ ಮೂಲವಾದ ವ್ಯಾಟ್​ನಿಂದ ಬರುತ್ತಿದ್ದ ಆದಾಯದ ಪ್ರಮಾಣವೇ ಅರ್ಧದಷ್ಟು ಕುಸಿಯಲಿದೆ.

ಕೇಂದ್ರ-ರಾಜ್ಯ ವಿಧಿಸುತ್ತಿರುವ ತೆರಿಗೆ ಎಷ್ಟು?
ಪೆಟ್ರೋಲ್, ಡೀಸೆಲ್ ಮೇಲೆ ಕೇಂದ್ರ ಸರ್ಕಾರವು ಎಕ್ಸೈಸ್ ಸುಂಕದ ಮೂಲಕ ತೆರಿಗೆ ವಿಧಿಸುತ್ತಿದೆ. ಕೇಂದ್ರ ಸರ್ಕಾರವು ಪ್ರತಿ ಲೀಟರ್ ಪೆಟ್ರೋಲ್ ಮೇಲೆ ₹ 32.8 ಅಬಕಾರಿ ಸುಂಕ ವಿಧಿಸುತ್ತಿದೆ. ಕೇಂದ್ರ ಸರ್ಕಾರವು ಪ್ರತಿ ಲೀಟರ್ ಡೀಸೆಲ್ ಮೇಲೆ ₹ 31.8 ಅಬಕಾರಿ ಸುಂಕ ವಿಧಿಸುತ್ತಿದೆ. ಇದೇ ರೀತಿ ರಾಜ್ಯಗಳು ಕೂಡ ಪೆಟ್ರೋಲ್, ಡೀಸೆಲ್ ಮೇಲೆ ಬೇರೆ ಬೇರೆ ದರದ ವ್ಯಾಟ್ ವಿಧಿಸುತ್ತಿವೆ. ಕರ್ನಾಟಕವು ಪೆಟ್ರೋಲ್​ನ ಮೂಲ ದರದ ಮೇಲೆ ಶೇ 35ರಷ್ಟು ಮಾರಾಟ ತೆರಿಗೆ ವಿಧಿಸುತ್ತಿದೆ. ಅಂದರೆ ಪೆಟ್ರೋಲ್​ನ ಪ್ರತಿ ಲೀಟರ್ ಮೂಲ ದರ ಕರ್ನಾಟಕದಲ್ಲಿ ₹ 41.8 ಮಾತ್ರ. ಕರ್ನಾಟಕ ಸರ್ಕಾರವೇ ಪೆಟ್ರೋಲ್ ಮೇಲೆ ಪ್ರತಿ ಲೀಟರ್​ಗೆ ₹ 27 ಮಾರಾಟ ತೆರಿಗೆ ವಿಧಿಸುತ್ತಿದೆ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ ಗ್ರಾಹಕರು ಶೇ 55ರಷ್ಟು ತೆರಿಗೆ ಪಾವತಿಸುತ್ತಿದ್ದಾರೆ.

ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ಬೆಲೆ ಎಷ್ಟಾಗುತ್ತೆ?
ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ಬಂದರೇ ಮೂಲ ದರದ ಮೇಲೆ ಶೇ 28ರಷ್ಟು ಮಾತ್ರ ಜಿಎಸ್‌ಟಿ ವಿಧಿಸಬೇಕಾಗುತ್ತೆ. ಏಕೆಂದರೆ, ನಮ್ಮ ದೇಶದಲ್ಲಿ ಗರಿಷ್ಠ ಜಿಎಸ್‌ಟಿ ದರವೇ ಶೇ 28ರಷ್ಟು ಇದೆ. ಇದಕ್ಕಿಂತ ಹೆಚ್ಚಿನ ಪ್ರಮಾಣದ ಜಿಎಸ್‌ಟಿ ವಿಧಿಸಲು ಅವಕಾಶವಿಲ್ಲ. ಹೀಗಾಗಿ ಪೆಟ್ರೋಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ, ಪೆಟ್ರೋಲ್ ದರವು ಪ್ರತಿ ಲೀಟರ್‌ಗೆ ಡೀಲರ್ ಕಮೀಷನ್ ಸೇರಿ ₹ 59.2ಕ್ಕೆ ಇಳಿಕೆಯಾಗಲಿದೆ. ಸದ್ಯ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹ 105 ಇದ್ದು, 59.2 ರೂಪಾಯಿಗೆ ದರ ಇಳಿಕೆಯಾದರೆ ಗ್ರಾಹಕರಿಗೆ ಹೊರೆ ಕಡಿಮೆಯಾದಂತೆ ಆಗುತ್ತದೆ. ಡೀಸೆಲ್ ಬೆಲೆಯು ಇದೇ ರೀತಿ ಜಿಎಸ್‌ಟಿ ವ್ಯಾಪ್ತಿಗೆ ಬಂದರೆ ಪ್ರತಿ ಲೀಟರ್​ಗೆ ₹ 50 ರೂಪಾಯಿಗೆ ಇಳಿಕೆಯಾಗಲಿದೆ. ಸದ್ಯ ಪ್ರತಿ ಲೀಟರ್ ಡೀಸೆಲ್ ಬೆಲೆಯು ₹ 94 ಇದೆ. ಆದರೆ, ಪೆಟ್ರೊಲ್, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆದಾಯ ನಷ್ಟವಾಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸುವ ಶೇ 28ರಷ್ಟು ಜಿಎಸ್‌ಟಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಾನವಾಗಿ ಹಂಚಿಕೊಳ್ಳಬೇಕಾಗುತ್ತದೆ.

ಒಂದು ವೇಳೆ ಪೆಟ್ರೋಲ್-ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ಬಂದರೆ ಇದರಿಂದ ಕರ್ನಾಟಕ ಸರ್ಕಾರಕ್ಕೆ ತಿಂಗಳಿಗೆ ₹ 1500 ಕೋಟಿಯಷ್ಟು ಆದಾಯ ಖೋತಾ ಆಗಲಿದೆ. ಜಿಎಸ್​ಟಿ ಹಂಚಿಕೆಯಿಂದ ತಿಂಗಳಿಗೆ ₹ 600 ಕೋಟಿ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಕೇಂದ್ರ-ರಾಜ್ಯಗಳ ವಿರೋಧ
ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರೋಧವಿದೆ. ಕರ್ನಾಟಕ ಸರ್ಕಾರ ಕೂಡ ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆ. ಕರ್ನಾಟಕದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಭಾಗಿಯಾಗುತ್ತಿಲ್ಲ. ತಮ್ಮ ಪ್ರತಿನಿಧಿಯಾಗಿ ಐಎಎಸ್ ಅಧಿಕಾರಿ ಶಿಖಾ ಅವರನ್ನು ಕಳಿಸುತ್ತಿದ್ದಾರೆ. ಶಿಖಾ ಅವರಿಗೆ ಮುಖ್ಯಮಂತ್ರಿ ಎರಡು ಪತ್ರ ನೀಡಿದ್ದಾರೆ. ಮೊದಲನೆಯದು 2022ರ ನಂತರವೂ ರಾಜ್ಯಗಳಿಗೆ ಕೇಂದ್ರದಿಂದ ಜಿಎಸ್‌ಟಿ ನಷ್ಟ ಪರಿಹಾರ ನೀಡಬೇಕು ಎಂದು ಕೇಂದ್ರದ ಮುಂದೆ ಬೇಡಿಕೆ ಇಡುವ ಪತ್ರ. ಇನ್ನೊಂದು ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸುವುದನ್ನು ವಿರೋಧಿಸುವ ಪತ್ರ. ಈ ಎರಡು ಪತ್ರಗಳನ್ನು ನಾಳೆ ಶಿಖಾ ಅವರು ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಓದಿ ಕರ್ನಾಟಕ ಸರ್ಕಾರದ ನಿಲುವನ್ನು ಜಿಎಸ್‌ಟಿ ಮಂಡಳಿಯ ಮುಂದೆ ಇಡಲಿದ್ದಾರೆ.

ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಗೆ ಸಂಬಂಧಿಸಿದಂತೆ, ಪ್ರತೇಕ ತೆರಿಗೆ ಫಿಕ್ಸ್ ಮಾಡುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ. ಕರ್ನಾಟಕ ಮಾತ್ರವಲ್ಲದೇ, ಬಹುತೇಕ ರಾಜ್ಯಗಳು ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ.

ರಾಜ್ಯಗಳಿಂದ ವಿರೋಧ
ನಮ್ಮ ನಿಲುವು ಸ್ಪಷ್ಟವಾಗಿದೆ. ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದಕ್ಕೆ ನಮ್ಮ ವಿರೋಧವಿದೆ. ಒಂದು ವೇಳೆ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಕಡಿಮೆ ಮಾಡಲು ಬಯಸಿದರೆ, ಕೇಂದ್ರ ಸರ್ಕಾರ ಸಂಗ್ರಹಿಸುತ್ತಿರುವ ಅಬಕಾರಿ ಸುಂಕವನ್ನು ಕಡಿಮೆ ಮಾಡಲಿ. ಈಗ ಪ್ರತಿ ಲೀಟರ್​ಗೆ 30 ರೂಪಾಯಿವರೆಗೂ ಸಂಗ್ರಹಿಸುತ್ತಿದ್ದಾರೆ. ಈ ಮೊದಲು ಇಷ್ಟೊಂದು ಸುಂಕ ಸಂಗ್ರಹಿಸುತ್ತಿರಲಿಲ್ಲ ಎಂದು ಕೇರಳದ ಹಣಕಾಸು ಸಚಿವ ಟಿ.ಎನ್.ಬಾಲಗೋಪಾಲ್ ಹೇಳಿದ್ದಾರೆ.

ಬಿಹಾರದ ಹಣಕಾಸು ಸಚಿವ ತಾರಾಕಿಶೋರ್ ಪ್ರಸಾದ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ನಾನು ಮಾತನಾಡಲ್ಲ. ಸೆ.17ರಂದು ಲಖನೌದಲ್ಲಿ ಜಿಎಸ್‌ಟಿ ಮಂಡಳಿಯ ಸಭೆ ಇದೆ. ಸಭೆಯಲ್ಲಿ ರಾಜ್ಯ ಹಾಗೂ ದೇಶದ ಹಿತಾಸಕ್ತಿಯಿಂದ ಸೂಕ್ತ ತೀರ್ಮಾನಗಳನ್ನು ಜಿಎಸ್‌ಟಿ ಮಂಡಳಿ ಕೈಗೊಳ್ಳಲಿದೆ ಎಂದಿದ್ದಾರೆ.

ಹರಿಯಾಣದ ಕೃಷಿ ಸಚಿವ ದಲಾಲ್ ಹೇಳುವ ಪ್ರಕಾರ, ಪೆಟ್ರೊಲ್, ಡೀಸೆಲ್ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೊಂದೇ ಹೊಣೆಯಲ್ಲ. ರಾಜ್ಯ ಸರ್ಕಾರಗಳು ಕೂಡ ತೆರಿಗೆ ವಿಧಿಸುತ್ತಿವೆ. ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸುವುದಕ್ಕೆ ರಾಜ್ಯ ಸರ್ಕಾರಗಳೇ ವಿರೋಧಿಸುತ್ತಿವೆ. ಏಕೆಂದರೇ, ರಾಜ್ಯಗಳ ಆದಾಯ ಸಂಗ್ರಹ ಮೂಲವೇ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಆಗಿದೆ ಎಂದಿದ್ದಾರೆ.

ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಹ ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. 2020-21ರಲ್ಲಿ ದೆಹಲಿಯ ಆದಾಯ ಸಂಗ್ರಹವು ಅಂದಾಜು ಮಾಡಿದ್ದಕ್ಕಿಂತ ಶೇ 41ರಷ್ಟು ಕಡಿಮೆಯಾಗಿದೆ. ಮುಂದಿನ ವರ್ಷದಿಂದ ಬೇರೆ ರಾಜ್ಯಗಳಂತೆ ದೆಹಲಿಗೂ ಜಿಎಸ್‌ಟಿ ನಷ್ಟ ಪರಿಹಾರ ಸಿಗುವುದು ಬಂದ್ ಆಗಲಿದೆ. ಜಿಎಸ್‌ಟಿ ಸಂಗ್ರಹವು ನಿರೀಕ್ಷಿಸಿದ್ದಕ್ಕಿಂತ ಶೇ 23ರಷ್ಟು ಕಡಿಮೆ ಇದೆ ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.

(GST Council Meeting will Discuss about Brining Petrol Diesel under GST Regime)

ಇದನ್ನೂ ಓದಿ: ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ತರುವ ಕೇಂದ್ರ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರ ವಿರೋಧ; ಸೆ. 17ಕ್ಕೆ ಸಭೆ

ಇದನ್ನೂ ಓದಿ: GST: ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿಯೊಳಗೆ ತರಬಹುದಾ? ಶುಕ್ರವಾರದ ತನ ಕಾದು ನೋಡಬೇಕು