ನವದೆಹಲಿ, ಫೆ. 4: ಪಾನ್ ಮಸಾಲ, ಗುಟ್ಕಾ ಇತ್ಯಾದಿ ತಂಬಾಕು ಉತ್ಪನ್ನಗಳ (tobacco products) ತಯಾರಕರು ತಮ್ಮ ಪ್ಯಾಕಿಂಗ್ ಯಂತ್ರೋಪಕರಣವನ್ನು (packing machinery) ನೊಂದಾಯಿಸದೇ ಹೋದರೆ ಒಂದು ಲಕ್ಷ ರೂ ದಂಡ ಕಟ್ಟಬೇಕಾಗುತ್ತದೆ. ಹಾಗಂತ ಸರ್ಕಾರ ಹೊಸ ಕಟ್ಟಳೆ ಹೊರಡಿಸಿದೆ. ತಂಬಾಕು ಉದ್ಯಮದಿಂದ ಸರ್ಕಾರ ಬರುವ ಆದಾಯದಲ್ಲಿ ಸೋರಿಕೆ (Tax evasion) ತಡೆಯುವ ಯತ್ನವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್ 1ರಿಂದ ಈ ಹೊಸ ಕಾನೂನು ಜಾರಿಗೆ ಬರುತ್ತದೆ. ತಂಬಾಕು ಉತ್ಪನ್ನ ತಯಾರಿಸುವ ಯಂತ್ರವನ್ನು ಜಿಎಸ್ಟಿ ಪ್ರಾಧಿಕಾರದಲ್ಲಿ ನಮೂದಿಸುವುದು ಕಡ್ಡಾಯವಾಗಿರಲಿದೆ. ಈ ಮುಂಚೆಯೇ ಈ ನಿಯಮ ಇತ್ತಾದರೂ ಬಹಳಷ್ಟು ಮಂದಿ ಇದನ್ನು ಪಾಲಿಸುತ್ತಿರಲಿಲ್ಲ. ಈಗ ಕೇಂದ್ರೀಯ ಜಿಎಸ್ಟಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು ಅದರಂತೆ ಒಂದು ಲಕ್ಷ ರೂ ದಂಡ ವಿಧಿಸುವ ಕ್ರಮ ಸೇರಿಸಲಾಗಿದೆ.
2024ರ ಹಣಕಾಸು ಮಸೂದೆಯಲ್ಲಿ ಈ ಜಿಎಸ್ಟಿ ಕಾಯ್ದೆಗೆ ತಿದ್ದುಪಡಿ ಇದೆ. ಯಂತ್ರೋಪಕರಣವನ್ನು ನೊಂದಾಯಿಸದೇ ಹೋದಲ್ಲಿ ಒಂದು ಲಕ್ಷ ರೂ ದಂಡ ವಿಧಿಸುವುದರ ಒತೆಗೆ ಆ ಯಂತ್ರೋಪಕರಣವನ್ನೇ ಜಫ್ತಿ ಮಾಡಿಕೊಳ್ಳುವ ಅಧಿಕಾರವನ್ನು ಜಿಎಸ್ಟಿ ಅಧಿಕಾರಿಗಳು ಹೊಂದಿರುತ್ತಾರೆ.
ಇದನ್ನೂ ಓದಿ: ವರ್ಕ್ ಫ್ರಂ ಹೋಮ್ ಬೇಡ ಎಂದ ಸಾಫ್ಟ್ವೇರ್ ಕಂಪನಿ ವಿರುದ್ಧ ತಿರುಗಿಬಿದ್ದ 5,000ಕ್ಕೂ ಹೆಚ್ಚು ಉದ್ಯೋಗಿಗಳು
ಪಾನ್ ಮಸಾಲ ಮತ್ತು ಗುಟ್ಕಾ ವ್ಯವಹಾರದಲ್ಲಿ ತೆರಿಗೆ ಕಳ್ಳತನ ಆಗುತ್ತಿರುವುದು ಬೆಳಕಿಗೆ ಬಂದಿತ್ತು. ಈ ತೆರಿಗೆ ಆದಾಯ ಸೋರಿಕೆ ಆಗುವುದನ್ನು ತಡೆಯಲು ರಾಜ್ಯ ಹಣಕಾಸು ಸಚಿವರನ್ನೊಳಗೊಂಡ ಸಮಿತಿ ವರದಿ ಮಂಡಿಸಿತ್ತು. ಕಳೆದ ವರ್ಷ (2023) ಫೆಬ್ರುವರಿಯಲ್ಲಿ ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ವರದಿಗೆ ಅನುಮೋದನೆ ಕೊಡಲಾಯಿತು. ಯಂತ್ರೋಪಕರಣಗಳನ್ನು ಜಿಎಸ್ಟಿ ಪ್ರಾಧಿಕಾರದಲ್ಲಿ ನೊಂದಾಯಿಸುವುದನ್ನು ಕಡ್ಡಾಯಗೊಳಿಸಬೇಕೆಂಬ ಸಲಹೆ ಆ ವರದಿಯಲ್ಲಿ ತಿಳಿಸಲಾಗಿತ್ತು.
ಆದರೂ ಕೂಡ ಬಹಳಷ್ಟು ಗುಟ್ಕಾ ಕಂಪನಿಗಳು ಈ ನಿಯಮ ಪಾಲಿಸುತ್ತಿಲ್ಲ ಎಂಬುದು ಗೊತ್ತಾಯಿತು. ಹೀಗಾಗಿ, ಹಣಕಾಸು ಮಸೂದೆ ಮೂಲಕ ಕಾನೂನಿನಲ್ಲಿ ತಿದ್ದುಪಡಿ ತಂದು, ನೊಂದಣಿಯಾದ ಪ್ರತಿಯೊಂದು ಯಂತ್ರೋಪಕರಣಕ್ಕೂ ಒಂದು ಲಕ್ಷ ರೂ ದಂಡ ಹಾಕುವ ಕ್ರಮ ಘೋಷಿಸಲಾಗಿದೆ. ಮಾರ್ಚ್ 31ರವರೆಗೂ ಇದಕ್ಕೆ ಕಾಲಾವಕಾಶ ಇದೆ.
ಇದನ್ನೂ ಓದಿ: ಕೇವಲ 27ರ ವಯಸ್ಸಿಗೆ ಬಿಲಿಯನೇರ್ ಆದ ಪರ್ಲ್ ಕಪೂರ್; ಇವರು ಕಟ್ಟಿದ ಝೈಬರ್ 365 ಏಷ್ಯಾದ ಅತಿವೇಗದ ಯೂನಿಕಾರ್ನ್
ಗುಟ್ಕಾ ಮತ್ತು ಪಾನ್ ಮಸಾಲ ತಯಾರಿಸುವ ಪ್ರತಿಯೊಂದು ಯಂತ್ರ ಹಾಗೂ ಅದರ ಉತ್ಪನ್ನ ಸಾಮರ್ಥ್ಯದ ವಿವರವನ್ನು ಜಿಎಸ್ಟಿ ಎಸ್ಆರ್ಎಂ-1 ಫಾರ್ಮ್ನಲ್ಲಿ ನಮೂದಿಸಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ