Solar: 3 ಕಿ.ವ್ಯಾ. ಮೇಲ್ಛಾವಣಿ ಸೌರ ವಿದ್ಯುತ್ ಸಿಸ್ಟಂ ಬೆಲೆ ಬೆಲೆ 10,000 ರೂ ಇಳಿಕೆ ಸಾಧ್ಯತೆ

GST rationalization effect on PM Surya Ghar scheme: ಸೌರ ಉಪಕರಣಗಳ ಮೇಲಿನ ಜಿಎಸ್​ಟಿಯನ್ನು ಶೇ. 12ರಿಂದ ಶೇ. 5ಕ್ಕೆ ಇಳಿಸಲಾಗಿದೆ. ಇದರ ಪರಿಣಾಮವಾಗಿ ನವೀಕರಣ ವಿದ್ಯುತ್ ದರ ಕಡಿಮೆಗೊಳ್ಳಲಿದೆ. ಒಂದು ಅಂದಾಜು ಪ್ರಕಾರ ಮೂರು ಕಿಲೋವ್ಯಾಟ್ ರೂಫ್​ಟಾಪ್ ಸೋಲಾರ್ ಸಿಸ್ಟಂನ ಬೆಲೆಯಲ್ಲಿ 9,000 ರೂನಿಂದ 10,500 ರೂನಷ್ಟು ತಗ್ಗಬಹುದು.

Solar: 3 ಕಿ.ವ್ಯಾ. ಮೇಲ್ಛಾವಣಿ ಸೌರ ವಿದ್ಯುತ್ ಸಿಸ್ಟಂ ಬೆಲೆ ಬೆಲೆ 10,000 ರೂ ಇಳಿಕೆ ಸಾಧ್ಯತೆ
ಸೋಲಾರ್

Updated on: Sep 17, 2025 | 3:09 PM

ನವದೆಹಲಿ, ಸೆಪ್ಟೆಂಬರ್ 17: ಜಿಎಸ್​ಟಿ ಇಳಿಕೆ (GST rationalization) ಪರಿಣಾಮ ನವೀಕರಣ ಇಂಧನದ ಇಡೀ ವ್ಯವಸ್ಥೆಯಾದ್ಯಂತ ದರಗಳ ಇಳಿಕೆ ಆಗಲಿದೆ. ಇದರಿಂದಾಗಿ ಮನೆಗಳ ಮೇಲ್ಛಾವಣಿ ಮೇಲೆ ಅಳವಡಿಸುವ ಸೌರ ವಿದ್ಯುತ್ ಸಿಸ್ಟಂಗಳ ಬೆಲೆಯಲ್ಲೂ ಇಳಿಕೆ ಆಗುವ ನಿರೀಕ್ಷೆ ಇದೆ. ಒಂದು ಅಂದಾಜು ಪ್ರಕಾರ, ಸಾಧಾರಣ ಮನೆಗೆ ಸಾಕಾಗುವ 3 ಕಿ.ವ್ಯಾ. ಸೋಲಾರ್ ಸಿಸ್ಟಂನ ಬೆಲೆಯಲ್ಲಿ ಸುಮಾರು 9,000 ರೂನಿಂದ 10,500 ರೂವರೆಗೆ ಕಡಿಮೆ ಆಗಬಹುದು. ಜಿಎಸ್​ಟಿ ದರ ಇಳಿಕೆಯಿಂದ ಜನಸಾಮಾನ್ಯರು ಸೌರ ವಿದ್ಯುತ್ ಅಳವಡಿಕೆಯತ್ತ ಆಸಕ್ತಿ ತೋರುವುದು ಹೆಚ್ಚಾಗಲಿದೆ ಎಂದು ಕೇಂದ್ರ ನವೀಕರಣ ಇಂಧನ ಸಚಿವಾಲಯ ಕೂಡ ನಿರೀಕ್ಷಿಸುತ್ತಿದೆ.

ಸೌರ ಉಪಕರಣಗಳ ಮೇಲೆ ಶೇ. 12ರಷ್ಟಿದ್ದ ಜಿಎಸ್​ಟಿಯನ್ನು ಶೇ. 5ಕ್ಕೆ ಇಳಿಸಲಾಗುತ್ತಿದೆ. ಇದರಿಂದ ನವೀಕರಣ ಇಂಧನ ಯೋಜನೆಗಳ ವೆಚ್ಚ ಕಡಿಮೆಗೊಳ್ಳುತ್ತದೆ. ವಿದ್ಯುತ್ ತಯಾರಿಕೆಯ ವೆಚ್ಚ ಕಡಿಮೆ ಆಗುತ್ತದೆ. ವಿದ್ಯುತ್ ಬೆಲೆ ಕಡಿಮೆಗೊಳ್ಳುತ್ತದೆ. ಜನಸಾಮಾನ್ಯರು, ರೈತರು, ಕೈಗಾರಿಕೆಗಳು ಮೊದಲಾದವರಿಗೆ ಕಡಿಮೆ ಬೆಲೆಗೆ ವಿದ್ಯುತ್ ಲಭ್ಯವಾಗಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ: ಭಾರತವನ್ನು ಸರ್ವಶ್ರೇಷ್ಠ ದೇಶವನ್ನಾಗಿ ಮಾಡಲು ದೇವರೇ ಅವತರಿಸಿದ್ದಾನೆ: ನರೇಂದ್ರ ಮೋದಿ ಬಗ್ಗೆ ವಿವಿಧ ಉದ್ಯಮಿಗಳು ಹೇಳಿದ್ದು…

ಒಂದು ಮೆ.ವ್ಯಾ. ಸಾಮರ್ಥ್ಯದ ಸೋಲಾರ್ ಪ್ರಾಜೆಕ್ಟ್​ಗೆ ಸುಮಾರು 4 ಕೋಟಿ ರೂ ಆಗಬಹುದು. ಜಿಎಸ್​ಟಿ ಇಳಿಕೆಯಿಂದ ಸುಮಾರು 25 ಲಕ್ಷ ರೂ ಉಳಿಸಲು ಸಾಧ್ಯ. ಹಾಗೆಯೇ, 500 ಮೆ.ವ್ಯಾ. ಸೋಲಾರ್ ಪಾರ್ಕ್​ನ ಯೋಜನಾ ವೆಚ್ಚದಲ್ಲೂ 100 ಕೋಟಿ ರೂ ಮಿಗುತ್ತದೆ ಎಂದು ನವೀಕರಣ ಇಂಧನ ಸಚಿವಾಲಯ ಅಭಿಪ್ರಾಯಪಟ್ಟಿದೆ.

ಡಿಸ್ಕಾಂ ಕಂಪನಿಗಳಿಗೆ 2,000-3,000 ಕೋಟಿ ರೂ ಉಳಿತಾಯ?

ಜಿಎಸ್​ಟಿಯನ್ನು ಇಳಿಕೆ ಮಾಡಿರುವುದರಿಂದ ನವೀಕರಣ ವಿದ್ಯುತ್ಛಕ್ತಿಯ ದರಗಳೂ ಕಡಿಮೆಗೊಳ್ಳುತ್ತದೆ. ಡಿಸ್ಕಾಂ ಕಂಪನಿಗಳ ವಿದ್ಯುತ್ ಖರೀದಿ ವೆಚ್ಚ ಕಡಿಮೆ ಆಗುತ್ತದೆ. ಸುಮಾರು 2,000 ಕೋಟಿ ರೂನಿಂದ 3,000 ಕೋಟಿ ರೂವರೆಗೆ ವೆಚ್ಚದಲ್ಲಿ ಉಳಿತಾಯ ಆಗಹುದು.

ಕೃಷಿ ಸೋಲಾರ್ ಪಂಪ್​ಸೆಟ್​ಗಳ ಬೆಲೆ ಕಡಿಮೆ

ಕೃಷಿ ಬಳಕೆಯ ಸೋಲಾರ್ ಪಂಪ್​ಸೆಟ್ ಒದಗಿಸುವ ಪಿಎಂ ಕುಸುಮ್ ಸ್ಕೀಮ್ ಬಳಸುವ ರೈತರಿಗೂ ಜಿಎಸ್​ಟಿ ಇಳಿಕೆಯು ವರದಾನವಾಗಲಿದೆ. ಐದು ಎಚ್​ಪಿ ಸೋಲಾರ್ ಪಂಪ್​ನ ವೆಚ್ಚ ಸುಮಾರು ಎರಡೂವರೆ ಲಕ್ಷ ರೂ ಇದೆ. ಜಿಎಸ್​ಟಿ ಇಳಿಕೆ ಬಳಿಕ ಇದರ ಬೆಲೆ 17,500 ರೂಗಳಷ್ಟು ಕಡಿಮೆ ಆಗಲಿದೆ.

ಇದನ್ನೂ ಓದಿ: ಜಿಎಸ್​ಟಿ ಕಡಿತದ ಎಫೆಕ್ಟ್; ಮದರ್ ಡೈರಿ ಹಾಲು ಬೆಲೆ 2 ರೂ, ತುಪ್ಪದ ಬೆಲೆ 30 ರೂ ಇಳಿಕೆ

2030ಕ್ಕೆ ಭಾರತದಲ್ಲಿ ಸೋಲಾರ್ ಎನರ್ಜಿ ತಯಾರಿಕೆ ಸಾಮರ್ಥ್ಯ 100 ಗೀಗಾ ವ್ಯಾಟ್ ಆಗಿರಬೇಕು ಎನ್ನುವ ಗುರಿ ಇಡಲಾಗಿದೆ. ಜಿಎಸ್​ಟಿ ಇಳಿಕೆಯು ಈ ನಿಟ್ಟಿನಲ್ಲಿ ಸಹಕಾರಿ ಎನಿಸಲಿದೆ. ಅಷ್ಟೇ ಅಲ್ಲ, ಒಂದು ಗಿಗಾವ್ಯಾಟ್ ಸೋಲಾರ್ ತಯಾರಿಕೆಯಲ್ಲಿ 5,000 ಉದ್ಯೋಗಗಳು ಸೃಷ್ಟಿಯಾಗುತ್ತವೆ. 100 ಗಿ.ವ್ಯಾ. ಮಟ್ಟದಲ್ಲಿ 5 ಲಕ್ಷ ಉದ್ಯೋಗಗಳು ಸೃಷ್ಟಿಯಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ