ಯಾವ ಸಿನಿಮಾ ಕಥೆಗೂ ಕಡಿಮೆ ಇಲ್ಲದಂಥ ರೋಚಕತೆ ಒಳಗೊಂಡಿರುವ ವರದಿ ಇದು. ಈವರೆಗಿನ ಅತಿದೊಡ್ಡ ಕ್ರಿಪ್ಟೊಕರೆನ್ಸಿ ಕಳುವು ಪ್ರಕರಣದ ಸೂತ್ರಧಾರಿಗಳೆನಿಸಿಕೊಂಡ ಹ್ಯಾಕರ್ಗಳು ಒಟ್ಟು ಮೊತ್ತದ ಶೇ 33ರಷ್ಟು, ಅಂದರೆ ಡಿಜಿಟಲ್ ಕಾಯಿನ್ ರೂಪದಲ್ಲಿ ಅಪಹರಿಸಿದ್ದರ ಪೈಕಿ 600 ಮಿಲಿಯನ್ ಅಮೆರಿಕನ್ ಡಾಲರ್ ಹಿಂತಿರುಗಿಸಿದ್ದಾರೆ ಎಂದು ಬ್ಲಾಕ್ಚೈನ್ ಸಂಶೋಧಕರು ಬುಧವಾರ ತಿಳಿಸಿದ್ದಾರೆ. ಪಾಲಿ ನೆಟ್ವರ್ಕ್ ಎಂಬುದು ಒಂದು ವಿಕೇಂದ್ರೀಕೃತ ಹಣಕಾಸು ಪ್ಲಾಟ್ಫಾಮ್. ಅದು ಈ ಹ್ಯಾಕ್ ಬಗ್ಗೆ ಟ್ವಿಟ್ಟರ್ನಲ್ಲಿ ಘೋಷಣೆ ಮಾಡಿತ್ತು. ಯಾವ ಡಿಜಿಟಲ್ ವ್ಯಾಲೆಟ್ಗಳಿಗೆ ಆ ಟೋಕನ್ಗಳು ಹೋಗಿವೆ ಎಂಬ ಮಾಹಿತಿಯನ್ನು ನೀಡಿತ್ತು. ಘೋಷಣೆ ಮಾಡುವ ಸಂದರ್ಭದಲ್ಲಿ ಕಾಯಿನ್ಗಳ ಮೌಲ್ಯ 600 ಮಿಲಿಯನ್ ಯುಎಸ್ಡಿಗಿಂತ ಸ್ವಲ್ಪ ಜಾಸ್ತಿ ಎನ್ನಲಾಗಿದೆ.
ಪಾಲಿ ನೆಟ್ವರ್ಕ್ ಆ ನಂತರ ಹ್ಯಾಕರ್ಗಳನ್ನು ಒತ್ತಾಯಿಸಿ, ತನ್ನ ವಿವಿಧ ಡಿಜಿಟಲ್ ವಿಳಾಸಗಳಿಗೆ ಹಣ ಹಿಂತಿರುಗಿಸುವಂತೆ ತಿಳಿಸಿದೆ. ಕಾನೂನು ಕ್ರಮ ಕೈಗೊಳ್ಳುವ ಯೋಜನೆಯಲ್ಲಿದ್ದೇವೆ ಎಂದು ಬೆದರಿಕೆಯನ್ನೂ ಹಾಕಿದೆ. ಬ್ಲಾಕ್ಚೈನ್ ಫೊರೆನ್ಸಿಕ್ಸ್ ಕಂಪೆನಿ ಚೈನಾಲಿಸಿಸ್ ಹೇಳಿದಂತೆ, ಹತ್ತಿರ ಹತ್ತಿರ 260.97 ಮಿಲಿಯನ್ ಡಾಲರ್ ಮೌಲ್ಯದ ಕ್ರಿಪ್ಟೊಕರೆನ್ಸಿ ಕಾಯಿನ್ಗಳ ಸ್ವರೂಪದಲ್ಲಿ ಹಿಂತಿರುಗಿದೆ. ಇನ್ನು ತಮಾಷೆ ಸಂಗತಿ ಏನೆಂದರೆ, ಹ್ಯಾಕರ್ಸ್ ಈ ಕಳುವು ಮಾಡಿದ್ದು “ತಮಾಷೆಗಾಗಿ” ಎಂದು ಹೇಳಿಕೊಂಡಿದ್ದಾರೆ. ವ್ಯವಸ್ಥೆ ಎಷ್ಟು ದುರ್ಬಲವಾಗಿದೆ ಎಂಬುದನ್ನು ಇತರರು ಬಯಲಿಗೆ ಇಡುವ ಮುನ್ನ ತಾವು ಆ ಕೆಲಸ ಮಾಡಲು ಮುಂದಾದೆವು ಎಂದಿರುವುದಾಗಿ ಎಲಿಪ್ಟಿಕ್ ಹಾಗೂ ಚೈನಾಲಿಸಿಸ್ ಸಂದೇಶದ ಮಾಹಿತಿ ಹಂಚಿಕೊಂಡಿವೆ. ಅಂದಹಾಗೆ ಇದು ಹ್ಯಾಕರ್ಗಳ ಗುಂಪು ಮಾಡಿದೆಯೋ ಅಥವಾ ಒಬ್ಬ ವ್ಯಕ್ತಿಯ ಕೆಲಸವೋ ಎಂಬುದು ಗೊತ್ತಾಗಿಲ್ಲ. ಇನ್ನು ರಾಯಿಟರ್ಸ್ ಸುದ್ದಿ ಸಂಸ್ಥೆಯು ಅಂಥ ಯಾವ ಸಂದೇಶದ ಬಗ್ಗೆ ಖಾತ್ರಿ ಪಡಿಸಿಲ್ಲ.
33 ಮಿಲಿಯನ್ ಡಾಲರ್ ಸ್ಥಗಿತ
ಕ್ರಿಪ್ಟೊಕರೆನ್ಸಿ ಸಂಸ್ಥೆಯಾದ ಟೀಥರ್ನ ಅಧಿಕಾರಿಯೊಬ್ಬರು ಟ್ವಿಟ್ಟರ್ನಲ್ಲಿ ತಿಳಿಸಿರುವಂತೆ, ಹ್ಯಾಕ್ಗೆ ಸಂಬಂಧಿಸಿದಂತೆ ಕಂಪೆನಿತು 33 ಮಿಲಿಯನ್ ಡಾಲರ್ ಸ್ಥಗಿತಗೊಳಿಸಿದೆ. ಇನ್ನು ಮೇಲ್ಮಟ್ಟದ ಆಡಳಿತ ವರ್ಗವು ಪಾಲಿ ನೆಟ್ವರ್ಕ್ಗೆ ಸಹಾಯ ಮಾಡುವುದಾಗಿ ತಿಳಿಸಿದೆ. ಎಲಿಪ್ಟಿಕ್ ಸಹ ಸಂಸ್ಥಾಪಕ ಮಾತನಾಡಿ, ಇಷ್ಟು ದೊಡ್ದ ಮೊತ್ತದ ಕಳುವು ಮಾಡಿದ ಕ್ರಿಪ್ಟೊ ಅಕ್ರಮ ವರ್ಗಾವಣೆ ಮಾಡುವುದು ತಲೆ ನೋವಿನ ಸಂಗತಿ. ಆದ್ದರಿಂದಲೇ ಹಿಂತಿರುಗಿಸಿರಬಹುದು ಎನ್ನುತ್ತಾರೆ. “ಕ್ರಿಪ್ಟೊಗಳನ್ನು ಕಳವು ಮಾಡಬಹುದು. ಆದರೆ ಅದನ್ನು ವರ್ಗಾವಣೆ ಮಾಡುವುದು ಹಾಗೂ ನಗದು ಮಾಡಿಸಿಕೊಳ್ಳುವುದು ವಿಪರೀತ ಕಷ್ಟ. ಏಕೆಂದರೆ ಬ್ಲಾಕ್ಚೈನ್ನಲ್ಲಿ ಪಾರದರ್ಶಕತೆ ಇದೆ. ಇದರ ಜತೆಗೆ ಹಣಕಾಸು ಸಂಸ್ಥೆಗಳು ಬ್ಲಾಕ್ಚೈನ್ ಅನಲಿಟಿಕ್ಸ್ ಅನ್ನು ವಿಶಾಲವಾಗಿ ಬಳಕೆ ಮಾಡುತ್ತವೆ,” ಎನ್ನುತ್ತಾರೆ ರಾಬಿನ್ಸನ್.
ಟೋಕಿಯೋದಲ್ಲಿ ಹೀಗೇ ಆಗಿತ್ತು
ಈ ಪ್ರಕರಣದ ಬಗ್ಗೆ ಪಾಲಿ ನೆಟ್ವರ್ಕ್ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ತನಿಖಾ ಸಂಸ್ಥೆಗಳು ಈ ಬಗ್ಗೆ ಏನಾದರೂ ತನಿಖೆ ನಡೆಸುತ್ತಿವೆಯಾ ಎಂಬ ಮಾಹಿತಿ ಸಹ ಸಿಕ್ಕಿಲ್ಲ. ಈ ಹಿಂದೆ ಟೋಕಿಯೋ ಮೂಲದ ಎಕ್ಸ್ಚೇಂಜ್ ಕಾಯಿನ್ಚೆಕ್ನಿಂದ 2018ರಲ್ಲಿ 530 ಮಿಲಿಯನ್ ಡಾಲರ್ ಡಿಜಿಟಲ್ ಕಾಯಿನ್ ಕಳುವಾಗಿತ್ತು. Mt. Gox ಎಕ್ಸ್ಚೇಂಜ್ ಕೂಡ ಟೋಕಿಯೋದಲ್ಲಿ ಇದ್ದು, 2014ನೇ ಇಸವಿಯಲ್ಲಿ 50 ಕೋಟಿ ಅಮೆರಿಕನ್ ಡಾಲರ್ನ ಬಿಟ್ ಕಾಯಿನ್ ಕಳೆದುಕೊಂಡು, ಬರ್ಬಾದ್ ಆಯಿತು.
Decentralised Finance (DeFi) ಪ್ಲಾಟ್ಫಾರ್ಮ್ಗಳು ವ್ಯಕ್ತಿಗಳಿಗೆ ಕ್ರಿಪ್ಟೊಕರೆನ್ಸಿಯಲ್ಲಿ ವಹಿವಾಟು ನಡೆಸಲು ಅವಕಾಶ ಮಾಡಿಕೊಡುತ್ತವೆ. ಇದಕ್ಕೆ ಬ್ಯಾಂಕ್ಗಳು, ಎಕ್ಸ್ಚೇಂಜ್ಗಳ ಅಗತ್ಯ ಇರುವುದಿಲ್ಲ. ಕಳೆದ ವರ್ಷದಿಂದ ಈಚೆಗೆ ಈ ವಲಯ ಭಾರೀ ಮಟ್ಟದಲ್ಲಿ ಬೆಳೆದಿದೆ. ಪ್ಲಾಟ್ಫಾರ್ಮ್ಗಳು 80 ಬಿಲಿಯನ್ ಡಾಲರ್ಗೂ ಹೆಚ್ಚು ಮೌಲ್ಯದ ಡಿಜಿಟಲ್ ಕಾಯಿನ್ಗಳನ್ನು ನಿರ್ವಹಣೆ ಮಾಡುತ್ತಿವೆ. DeFi ಹೇಳುವಂತೆ, ಜನರಿಗೆ ಹಾಗೂ ಉದ್ಯಮಗಳಿಗೆ ಹಣಕಾಸು ಸೇವೆ ಬೇಕೆಂದಾಗ ಸಲೀಸಾದ ಸಂಪರ್ಕ ಒದಗಿಸುತ್ತದೆ. ತಂತ್ರಜ್ಞಾನದ ಸಹಾಯದಿಂದ ವೆಚ್ಚ ಕಡಿಮೆ ಆಗುತ್ತದೆ ಹಾಗೂ ಆರ್ಥಿಕ ಚಟುವಟಿಕೆಗೆ ಉತ್ತೇಜನ ಸಿಗುತ್ತದೆ. ಆದರೆ ತಾಂತ್ರಿಕ ದೌರ್ಬಲ್ಯಗಳ ಕಾರಣಕ್ಕೆ ಹ್ಯಾಕರ್ಗಳ ದಾಳಿಗೆ ತುತ್ತಾಗುತ್ತಿದೆ.
ಇದನ್ನೂ ಓದಿ: Cryptocurrency Bit Coin: ಬಿಟ್ಕಾಯಿನ್ಗೆ ಕಾನೂನು ಮಾನ್ಯತೆ ನೀಡುವ ಮೊದಲ ದೇಶವಾಗಲಿದೆ ಎಲ್ ಸಲ್ವಡಾರ್
(Hackers Returned 260 Million USD Crypto Assets Value That Is Third Of They Stolen)