ಇಪಿಎಫ್
Image Credit source: Getty Images
ಪ್ರಾವಿಡೆಂಟ್ ಫಂಡ್ ಸ್ಕೀಮ್ನಲ್ಲಿ ಯೂನಿವರ್ಸಲ್ ಅಕೌಂಟ್ ನಂಬರ್ (UAN) ಸಿಸ್ಟಂ ಜಾರಿಗೆ ಬರುವ ಮೊದಲು ಕೆಲಸ ಪ್ರಾರಂಭಿಸಿದ ಹಾಗೂ ಆ ಬಳಿಕ ಉದ್ಯೋಗ ಬದಲಾಯಿಸಿದ ಲಕ್ಷಾಂತರ ಉದ್ಯೋಗಿಗಳಿಗೆ ಶುಭಸುದ್ದಿ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಾದ ಇಪಿಎಫ್‌ಒ (EPFO) ತನ್ನ ನವೀಕರಿಸಿದ ಯೂನಿಫೈಡ್ ಮೆಂಬರ್ ಪೋರ್ಟಲ್ (EPFO 2.01) ನಲ್ಲಿ ‘ಸರ್ವಿಸ್ ಹಿಸ್ಟರಿ’ (Service History) ಎಂಬ ನೂತನ ಫೀಚರ್ ಹಾಗೂ ಆಧಾರ್ ಆಧಾರಿತ ಡಿಜಿಟಲ್ ಪೋರ್ಟಲ್ ಅನ್ನು ಪರಿಚಯಿಸಿದೆ.
ಇದರ ಮೂಲಕ ಉದ್ಯೋಗಿಗಳು ತಮ್ಮ ಹಳೆಯ ಅಥವಾ ಯುಎಎನ್‌ಗೆ ಲಿಂಕ್ ಆಗದೇ ಉಳಿದಿರುವ ಪಿಎಫ್ (PF) ಖಾತೆಗಳನ್ನು ಸುಲಭವಾಗಿ ಪತ್ತೆಹಚ್ಚಿ, ಪ್ರಸ್ತುತ ಚಾಲ್ತಿಯಲ್ಲಿರುವ ಯುಎಎನ್‌ಗೆ ವಿಲೀನಗೊಳಿಸಬಹುದು ಎಂದು ಹೇಳಲಾಗುತ್ತಿದೆ. ಯುಎಎನ್ ಮೊದಲು ಚಾಲನೆಗೆ ಬಂದಿದ್ದು 2014ರಲ್ಲಿ. ಆ ಮುಂಚೆ ಇದ್ದ ಪಿಎಫ್ ಅಕೌಂಟ್ಗಳಲ್ಲಿ ಕೆಲವು ಯುಎಎನ್‌ಗೆ ಲಿಂಕ್ ಆಗಿಲ್ಲದೆ ಇರಬಹುದು.
ಇದನ್ನೂ ಓದಿ: ಮೊಬೈಲ್ ಇದ್ರೆ ಸಾಕು ರೇಷನ್ ಕಾರ್ಡ್ ಇ-ಕೆವೈಸಿ ಸ್ಥಿತಿ ಪರಿಶೀಲಿಸ್ಬಹುದು
ಹಳೆಯ ಪಿಎಫ್ ಖಾತೆಗಳು ಯುಎಎನ್‌ಗೆ ಲಿಂಕ್ ಆಗದಿರಲು ಕಾರಣಗಳೇನು?
ಯುಎಎನ್ ವ್ಯವಸ್ಥೆ ಬರುವುದಕ್ಕಿಂತ ಮೊದಲು, ಪ್ರತಿ ಹೊಸ ಉದ್ಯೋಗದಲ್ಲೂ ಹೊಸ ‘ಮೆಂಬರ್ ಐಡಿ’ (Member ID) ಸೃಷ್ಟಿಯಾಗುತ್ತಿತ್ತು. ಯುಎಎನ್ ಬಂದ ಬಳಿಕ ಎಲ್ಲಾ ಮೆಂಬರ್ ಐಡಿಗಳು ಒಂದೇ ಯುಎಎನ್ ಅಡಿ ಪಟ್ಟಿ ಆಗಿವೆ. ಆದರೆ, ಹಳೆಯ ಮೆಂಬರ್ ಐಡಿಗಳು ಈ ಕೆಳಗಿನ ಕಾರಣಗಳಿಗೆ ಯುಎಎನ್‌ಗೆ ಲಿಂಕ್ ಆಗದೇ ಇದ್ದಿರಬಹುದು:
- ಹೆಸರು, ಜನ್ಮ ದಿನಾಂಕ ಅಥವಾ ತಂದೆಯ ಹೆಸರಿನಲ್ಲಿ ವ್ಯತ್ಯಾಸಗಳಿರುವುದು.
- ಹಳೆಯ ಕಂಪನಿಗಳು ಸೇವಾ ನಿರ್ಗಮನ ದಿನಾಂಕವನ್ನು (Date of Exit) ನಮೂದಿಸದಿರುವುದು.
- ಆಧಾರ್ ಮತ್ತು ಕೆವೈಸಿ (KYC) ವಿವರಗಳು ಸರಿಯಾಗಿ ಅಪ್‌ಡೇಟ್ ಆಗದೇ ಇರುವುದು.
ಈ ಎಲ್ಲಾ ಕಾರಣಗಳಿಂದಾಗಿ ಹಳೆಯ ಪಿಎಫ್ ಖಾತೆಗಳು ಪ್ರಸ್ತುತ ಯುಎಎನ್‌ನೊಂದಿಗೆ ಲಿಂಕ್ ಆಗದೆ ಪ್ರತ್ಯೇಕವಾಗಿ ಉಳಿದುಕೊಂಡಿರಬಹುದು.
ನೂತನ ಫೀಚರ್‌ನಿಂದ ಉದ್ಯೋಗಿಗಳಿಗೆ ಏನು ಪ್ರಯೋಜನ?
- ಸಂಪೂರ್ಣ ಸೇವಾ ವಿವರ ಒಂದೇ ಸ್ಥಳದಲ್ಲಿ: ಯೂನಿಫೈಡ್ ಮೆಂಬರ್ ಪೋರ್ಟಲ್‌ಗೆ ಲಾಗಿನ್ ಆಗಿ ‘Service History’ ವಿಭಾಗಕ್ಕೆ ಹೋದರೆ, ನಿಮ್ಮ ಎಲ್ಲಾ ಹಳೆಯ ಕಂಪನಿಗಳ ಹೆಸರುಗಳು, ಮೆಂಬರ್ ಐಡಿಗಳು, ಕೆಲಸಕ್ಕೆ ಸೇರಿದ ಮತ್ತು ಬಿಟ್ಟ ದಿನಾಂಕಗಳು ಒಂದೇ ಕಡೆ ಸಿಗಲಿವೆ.
- ಸುಲಭ ವರ್ಗಾವಣೆ ಮತ್ತು ಕ್ಲೈಮ್: ಹಳೆಯ ಪಿಎಫ್ ಬ್ಯಾಲೆನ್ಸ್ ಅನ್ನು ಪ್ರಸ್ತುತ ಚಾಲ್ತಿಯಲ್ಲಿರುವ ಯುಎಎನ್‌ಗೆ ವರ್ಗಾಯಿಸಲು (PF Transfer) ಅಥವಾ ಹಿಂಪಡೆಯಲು (PF Withdrawal) ಇದು ಸಹಕಾರಿಯಾಗಿದೆ.
- ಪಿಂಚಣಿ (EPS) ದಾಖಲೆಗಳ ಸರಿಹೊಂದಿಸುವಿಕೆ: ನಿವೃತ್ತಿಯ ನಂತರ ಪಿಂಚಣಿ ಸೌಲಭ್ಯ ಪಡೆಯಲು ಒಟ್ಟು ಸೇವಾ ಅವಧಿಯ (Total Service Period) ಸರಿಯಾದ ಲೆಕ್ಕಾಚಾರಕ್ಕೆ ಇದು ನೆರವಾಗುತ್ತದೆ.
ಇದನ್ನೂ ಓದಿ: ಪಿಎಫ್ ವೇತನ ಮಿತಿ 15,000 ರೂನಿಂದ 25,000 ರೂ ಏರಿಕೆ: ಹಣಕಾಸು ಸಚಿವಾಲಯ ಅನುಮೋದನೆ; ಏನಿದರ ಅನುಕೂಲ?
ಹಳೆಯ ಖಾತೆಯನ್ನು ಪತ್ತೆಹಚ್ಚಿ ಲಿಂಕ್ ಮಾಡುವುದು ಹೇಗೆ?
- ಪೋರ್ಟಲ್‌ನಲ್ಲಿ ಪರಿಶೀಲಿಸಿ: ಮೊದಲಿಗೆ ಇಪಿಎಫ್‌ಒ ಮೆಂಬರ್ ಪೋರ್ಟಲ್‌ಗೆ ಯುಎಎನ್ ಲಾಗಿನ್ ಆಗಿ ‘Service History’ ವಿಭಾಗದಲ್ಲಿ ನಿಮ್ಮ ಹಳೆಯ ಖಾತೆಗಳ ವಿವರ ಕಾಣಿಸುತ್ತಿದೆಯೇ ಎಂದು ನೋಡಿ.
- ಹಳೆಯ ಕಂಪನಿಯನ್ನು ಸಂಪರ್ಕಿಸಿ: ನಿಮ್ಮ ಹಳೆಯ ಮೆಂಬರ್ ಐಡಿ ಅಥವಾ ಯುಎಎನ್ ನೆನಪಿಲ್ಲದಿದ್ದರೆ, ನಿಮ್ಮ ಹಳೆಯ ಕಂಪನಿಯನ್ನು (Employer) ಸಂಪರ್ಕಿಸಬಹುದು. ಇಪಿಎಫ್‌ಒ ಎಂಪ್ಲಾಯರ್ ಪೋರ್ಟಲ್ ಮೂಲಕ ಅವರು ನಿಮ್ಮ ಹಳೆಯ ವಿವರಗಳನ್ನು ಹಿಂಪಡೆದು ನೀಡಬಹುದು.
- ಆಧಾರ್ ಆಧಾರಿತ ದೃಢೀಕರಣ: ಇಪಿಎಫ್‌ಒದ ಹೊಸ ವ್ಯವಸ್ಥೆಯಲ್ಲಿ ಆಧಾರ್ ದೃಢೀಕರಣದ ಮೂಲಕ ನಿಮ್ಮ ಹಳೆಯ ಖಾತೆಗಳನ್ನು ಪತ್ತೆಹಚ್ಚಿ, ಆನ್‌ಲೈನ್‌ನಲ್ಲೇ ‘ಜಾಯಿಂಟ್ ಡಿಕ್ಲರೇಷನ್’ (Joint Declaration) ಸಲ್ಲಿಸಿ ಕೆವೈಸಿ ನವೀಕರಿಸಲು ಅವಕಾಶವಿದೆ.
ಇಪಿಎಫ್‌ಒ ತನ್ನ ದತ್ತಾಂಶವನ್ನು ವಿಕೇಂದ್ರೀಕೃತ ವ್ಯವಸ್ಥೆಯಿಂದ ಕೇಂದ್ರೀಕೃತ ರಾಷ್ಟ್ರೀಯ ಡೇಟಾಬೇಸ್‌ಗೆ (Centralised Database) ಸ್ಥಳಾಂತರಿಸಿರುವುದರಿಂದ, ಈ ಸೇವೆಗಳು ಇನ್ನು ಮುಂದೆ ಹೆಚ್ಚು ಪಾರದರ್ಶಕ ಹಾಗೂ ವೇಗವಾಗಿ ನಡೆಯಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ