ಎಷ್ಟು ಮ್ಯುಚುವಲ್ ಫಂಡ್​ಗಳು ತಂತಮ್ಮ ಬೆಂಚ್​ಮಾರ್ಕ್ ಮುಟ್ಟಿವೆ? ಶೇ. 50ರಷ್ಟು ಫಂಡ್​ಗಳಿಂದ ನಿರಾಸೆ

|

Updated on: Dec 18, 2023 | 2:47 PM

Equity Mutual funds Performance: 2023ರ ವರ್ಷದಲ್ಲಿ ವಿವಿಧ ವಿಭಾಗದ ಇಂಡೆಕ್ಸ್​ಗಳಿಗೆ ಹೋಲಿಸಿದರೆ ಶೇ. 50ರಷ್ಟು ಈಕ್ವಿಟಿ ಮ್ಯುಚುವಲ್ ಫಂಡ್​ಗಳು ನಿರೀಕ್ಷೆಯ ಮಟ್ಟ ಮುಟ್ಟಿಲ್ಲ. ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ವಿಭಾಗದಲ್ಲಿ ಶೇ. 82ರಷ್ಟು ಮ್ಯುಚುವಲ್ ಫಂಡ್​ಗಳು ಬೆಂಚ್​ಮಾರ್ಕ್ ಮುಟ್ಟಲು ವಿಫಲವಾಗಿವೆ. ಸದ್ಯ ಮಾರುಕಟ್ಟೆಯಲ್ಲಿ 243 ಈಕ್ವಿಟಿ ಮ್ಯುಚುವಲ್ ಫಂಡ್​ಗಳಿವೆ. ಇದರಲ್ಲಿ 122 ಮ್ಯುಚುವಲ್ ಫಂಡ್​ಗಳು ಬೆಂಚ್​ಮಾರ್ಕ್ ಮಟ್ಟ ತಲುಪಿಲ್ಲ ಎನ್ನಲಾಗಿದೆ.

ಎಷ್ಟು ಮ್ಯುಚುವಲ್ ಫಂಡ್​ಗಳು ತಂತಮ್ಮ ಬೆಂಚ್​ಮಾರ್ಕ್ ಮುಟ್ಟಿವೆ? ಶೇ. 50ರಷ್ಟು ಫಂಡ್​ಗಳಿಂದ ನಿರಾಸೆ
ಮ್ಯುಚುವಲ್ ಫಂಡ್
Follow us on

ನವದೆಹಲಿ, ಡಿಸೆಂಬರ್ 18: ಈಕ್ವಿಟಿ ಮ್ಯೂಚುವಲ್ ಫಂಡ್ ಸ್ಕೀಮ್​ಗಳು 2023ರ ವರ್ಷದಲ್ಲಿ ಅವುಗಳ ಬೆಂಚ್​ಮಾರ್ಕ್ ಮಟ್ಟ ಮುಟ್ಟಲು ವಿಫಲವಾಗಿವೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ತಿಳಿಸಲಾಗಿದೆ. ಈಕ್ವಿಟಿಗೆ ಮಾತ್ರ ಹೂಡಿಕೆ ಮಾಡಿರುವ ಮ್ಯೂಚುವಲ್ ಫಂಡ್​ಗಳ ಸಂಖ್ಯೆ (Equity mutual funds) ಪ್ರಸಕ್ತ 243 ಇದೆ. ಇದರಲ್ಲಿ 122 ಈಕ್ವಿಟಿ ಸ್ಕೀಮ್​ಗಳು ತಂತಮ್ಮ ಬೆಂಚ್​ಮಾರ್ಕ್​ಗಳ ಸಾಧನೆಯ ಮಟ್ಟವನ್ನು ಮುಟ್ಟಲು ವಿಫಲವಾಗಿವೆ. ಅಂದರೆ, 2023ರಲ್ಲಿ ಇಂಡೆಕ್ಸ್ ಫಂಡ್​ಗಳು ಬಹುತೇಕ ಮ್ಯೂಚುವಲ್ ಫಂಡ್​ಗಳಿಗಿಂತ ಹೆಚ್ಚು ರಿಟರ್ನ್ ತಂದಿವೆ.

ಏನಿದು ಈಕ್ವಿಟಿ ಬೆಂಚ್​ಮಾರ್ಕ್?

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್, ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಸಾವಿರಾರು ಕಂಪನಿಗಳ ಷೇರುಗಳು ಲಿಸ್ಟ್ ಆಗಿರುತ್ತವೆ. ಅವುಗಳ ಷೇರುಸಂಖ್ಯೆ ಮತ್ತು ಬೆಲೆಯ ಆಧಾರದ ಮೇಲೆ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಹೀಗೆ ವಿವಿಧ ಪ್ರಾಕಾರವಾಗಿ ವರ್ಗೀಕರಣ ಮಾಡಲಾಗುತ್ತದೆ. ಹಾಗೆಯೇ ಬಿಎಸ್​ಇ ಮತ್ತು ಎನ್​ಎಸ್​ಇನಲ್ಲಿ ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಹಲವು ಸೂಚ್ಯಂಕಗಳಿರುತ್ತವೆ. ಸೆನ್ಸೆಕ್ಸ್ ಎಂಬುದು 30 ಆಯ್ದ ಅತಿದೊಡ್ಡ ಗಾತ್ರದ ಕಂಪನಿಗಳ ಪಟ್ಟಿಯಾಗಿದೆ. ಈ 30 ಕಂಪನಿಗಳ ಷೇರುಬೆಲೆ ಏರಿಳಿತದ ಮೇಲೆ ಸೆನ್ಸೆಕ್ಸ್ ಪಾಯಿಂಟ್​ಗಳಲ್ಲಿ ವ್ಯತ್ಯಯ ಆಗುತ್ತದೆ. ಲಾರ್ಜ್ ಕ್ಯಾಪ್ ಫಂಡ್​ಗೆ ಸೆನ್ಸೆಕ್ಸ್ ಬೆಂಚ್ ಮಾರ್ಕ್ ಆಗಿರುತ್ತದೆ.

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಲಾರ್ಜ್ ಕ್ಯಾಪ್ ಫಂಡ್​ಗಳಿಗೆ ನಿಫ್ಟಿ50 ಸೂಚ್ಯಂಕವು ಬೆಂಚ್ ಆಗಿದೆ. ಇದೇ ರೀತಿ ವಿವಿಧ ಸೂಚ್ಯಂಕಗಳು ಬಿಎಸ್​ಇ ಮತ್ತು ಎನ್​ಎಸ್​ಇನಲ್ಲಿ ಇವೆ.

ಇದನ್ನೂ ಓದಿ: ಎರಡು ಕ್ವಾರ್ಟರ್​ನಲ್ಲಿ ಭಾರತ ಉತ್ತಮ ಬೆಳವಣಿಗೆಯಾಗಿದ್ದು ಅದೃಷ್ಟದಿಂದಷ್ಟೇ: ರಘುರಾಮ್ ರಾಜನ್

ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್ ವಿಭಾಗದ ಮ್ಯೂಚುವಲ್ ಫಂಡ್​ಗಳ ಕಳಪೆ ಸಾಧನೆ

2023ರಲ್ಲಿ ಇಂಡೆಕ್ಸ್ ಫಂಡ್ ಅಥವಾ ಬೆಂಚ್​ಮಾರ್ಕ್​ಗಿಂತ ಕಳಪೆ ಸಾಧನೆ ಬಂದಿದ್ದು ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ವಿಭಾಗಗಳಲ್ಲಿ. ಎಕನಾಮಿಕ್ ಟೈಮ್ಸ್ ಡಾಟಾ ಪ್ರಕಾರ ಸ್ಮಾಲ್ ಕ್ಯಾಪ್ ವಿಭಾಗದ 24 ಮ್ಯುಚುವಲ್ ಫಂಡ್ ಪೈಕಿ 20 ಫಂಡ್​ಗಳು ಬೆಂಚ್​ಮಾರ್ಕ್​ ಮಟ್ಟಕ್ಕಿಂತ ಕಡಿಮೆ ಸಾಧನೆ ತೋರಿವೆ. ಹಾಗೆಯೇ, 29 ಮಿಡ್ ಕ್ಯಾಪ್ ಫಂಡ್​ಗಳ ಪೈಕಿ 24 ಫಂಡ್​ಗಳು ವಿಫಲವಾಗಿವೆ. ಅಂದರೆ ಈ ಎರಡೂ ವಿಭಾಗದ ಮ್ಯುಚುವಲ್ ಫಂಡ್​ಗಳಲ್ಲಿ ಶೇ. 83ರಷ್ಟು ಫಂಡ್​ಗಳು ನಿರೀಕ್ಷಿತ ಲಾಭ ತರಲು ಸೋತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ