ಎರಡು ಕ್ವಾರ್ಟರ್​ನಲ್ಲಿ ಭಾರತ ಉತ್ತಮ ಬೆಳವಣಿಗೆಯಾಗಿದ್ದು ಅದೃಷ್ಟದಿಂದಷ್ಟೇ: ರಘುರಾಮ್ ರಾಜನ್

|

Updated on: Dec 18, 2023 | 12:20 PM

Raghuram Rajan on Indian Economy: ಈ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.6ರಷ್ಟು ಬೆಳವಣಿಗೆ ಕಾಣಲು ಅದೃಷ್ಟ ಕಾರಣ ಎಂದು ರಘುರಾಮ್ ರಾಜನ್ ಹೇಳಿದ್ದಾರೆ. 2022ರ ಡಿಸೆಂಬರ್​ನಲ್ಲಿ ರಾಹುಲ್ ಗಾಂಧಿ ಜೊತೆ ಮಾತನಾಡುತ್ತಾ ರಾಜನ್ ಅವರು ಭಾರತದ ಜಿಡಿಪಿ ಶೇ. 5ರಷ್ಟು ಬೆಳೆದರೆ ಹೆಚ್ಚು ಎಂದಿದ್ದರು. ಪ್ರಬಲ ಜಾಗತಿಕ ಬೆಳವಣಿಗೆ ಆಗಿದ್ದು ಮತ್ತು ಇನ್​ಫ್ರಾಸ್ಟ್ರಕ್ಚರ್ ಮೇಲೆ ಸರ್ಕಾರದ ಬಂಡವಾಳ ವೆಚ್ಚ ಹೆಚ್ಚಾಗಿದ್ದರಿಂದ ಭಾರತಕ್ಕೆ ಅದೃಷ್ಟ ಎಂದಿದ್ದಾರೆ.

ಎರಡು ಕ್ವಾರ್ಟರ್​ನಲ್ಲಿ ಭಾರತ ಉತ್ತಮ ಬೆಳವಣಿಗೆಯಾಗಿದ್ದು ಅದೃಷ್ಟದಿಂದಷ್ಟೇ: ರಘುರಾಮ್ ರಾಜನ್
ರಘುರಾಮ್ ರಾಜನ್
Follow us on

ನವದೆಹಲಿ, ಡಿಸೆಂಬರ್ 18: ಭಾರತೀಯ ರಿಸರ್ವ್ ಬ್ಯಾಂಕ್​ನ ಮಾಜಿ ಗವರ್ನರ್ ರಘುರಾಮ್ ರಾಜನ್ (Raghuram Rajan) ಹಾಲಿ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಟೀಕೆ ಮುಂದುವರಿಸಿದ್ದಾರೆ. ಈ ಹಣಕಾಸು ವರ್ಷದ ಮೊದಲೆರಡು ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ನಿರೀಕ್ಷೆಮೀರಿ ಶೇ. 7.5ಕ್ಕಿಂತ ಹೆಚ್ಚು ಬೆಳೆದದ್ದು ಅದೃಷ್ಟವಶಾತ್ ಮಾತ್ರ ಎಂದು ರಾಜನ್ ಹೇಳಿದ್ದಾರೆ. ಕುತೂಹಲ ಎಂದರೆ ಒಂದು ವರ್ಷದ ಹಿಂದೆ ರಾಹುಲ್ ಗಾಂಧಿ ಜೊತೆಗಿನ ಅನೌಪಚಾರಿಕ ಮಾತುಕತೆ ವೇಳೆ ರಘುರಾಮ್ ರಾಜನ್ ಅವರು ಎರಡನೇ ಕ್ವಾರ್ಟರ್​ನಲ್ಲಿ ಭಾರತದ ಆರ್ಥಿಕತೆ ಶೇ. 5ರಷ್ಟು ಬೆಳೆದರೆ ಅದು ಅದೃಷ್ಟ ಎಂದು ಅಂದಾಜು ಮಾಡಿದ್ದರು. ಆದರೆ, ಜುಲೈನಿಂದ ಸೆಪ್ಟೆಂಬರ್​ವರೆಗಿನ ಎರಡನೇ ಕ್ವಾರ್ಟರ್​ನಲ್ಲಿ ಭಾರತದ ಜಿಡಿಪಿ ಶೇ. 7.6ರಷ್ಟು ಬೆಳೆದು ಎಲ್ಲರನ್ನೂ ಬೆರಗಾಗಿಸಿತ್ತು. ಈ ವಿಚಾರವನ್ನು ಇಂಡಿಯಾ ಟುಡೇ ವಾಹಿನಿಯ ಸಂದರ್ಶನವೊಂದರ ವೇಳೆ ಪ್ರಸ್ತಾಪಿಸಿದಾಗ, ಭಾರತದ ಈ ಜಿಡಿಪಿ ಬೆಳವಣಿಗೆ ಶೇ. 7.6ರಷ್ಟು ಬೆಳೆಯಲು ಎರಡು ಅದೃಷ್ಟಗಳನ್ನು ಹೆಸರಿಸಿದ್ದಾರೆ.

ರಾಜನ್ ಪ್ರಕಾರ ಭಾರತಕ್ಕೆ ಸಂದ ಎರಡು ಅದೃಷ್ಟಗಳು ಯಾವುವು?

ಈ ಹಣಕಾಸು ವರ್ಷದಲ್ಲಿ (2023-24ರಲ್ಲಿ) ಭಾರತದ ಜಿಡಿಪಿ ಮೊದಲ ಕ್ವಾರ್ಟರ್​ನಲ್ಲಿ ಶೇ. 7.8, ಎರಡನೇ ಕ್ವಾರ್ಟರ್​ನಲ್ಲಿ ಶೇ. 7.6ರಷ್ಟು ಬೆಳೆದಿತ್ತು. ಸ್ವತಃ ಆರ್​ಬಿಐ ಕೂಡ ಇಷ್ಟು ಬೆಳವಣಿಗೆಯನ್ನು ನಿರೀಕ್ಷೆ ಮಾಡಿರಲಿಲ್ಲ ಎಂಬುದು ನಿಜ. ಕಳೆದ ಡಿಸೆಂಬರ್​ನಲ್ಲಿ ರಾಜನ್ ಮಾಡಿದ್ದ ಅಂದಾಜು ಸಂಪೂರ್ಣ ತಲೆಕೆಳಗಾಗಿದೆ. ಆದರೆ, ತಮ್ಮ ಮಾತನ್ನು ಸಮರ್ಥಿಸಿಕೊಂಡಿರುವ ಮಾಜಿ ಆರ್​ಬಿಐ ಗವರ್ನರ್, ಎರಡು ಅದೃಷ್ಟಗಳನ್ನು ಕಾರಣವಾಗಿ ಉದಾಹರಿಸಿದ್ದಾರೆ.

ಇದನ್ನೂ ಓದಿ: ಚಿದಂಬರಂ, ರಾಜನ್​ರಿಗೆ ಮ್ಯಾನುಫ್ಯಾಕ್ಚರಿಂಗ್ ಪಾಠ ಬೋಧಿಸಿ, ಟ್ರೋಲ್ ಮಾಡಿದ ಸಚಿವ ಎ ವೈಷ್ಣವ್

  1. ಪ್ರಬಲ ಜಾಗತಿಕ ಬೆಳವಣಿಗೆ
  2. ಇನ್​ಫ್ರಾಸ್ಟ್ರಕ್ಚರ್ ಮೇಲೆ ಸರ್ಕಾರದ ಬಂಡವಾಳ ಹೆಚ್ಚಿದ್ದು.

‘ಹಿಂದಿನ ಕ್ವಾರ್ಟರ್​ನಲ್ಲಿ ಅಮೆರಿಕ ಶೇ. 5.2ರಷ್ಟು ಬೆಳೆದಿತ್ತು. ಅಮೆರಿಕ ಶೇ. 2ರಷ್ಟು ಬೆಳವಣಿಗೆ ಸಾಧ್ಯತೆ ಹೊಂದಿತ್ತು. ಆದರೆ, ಈ ಸಾಧ್ಯತೆಗಿಂತ ಶೇ. 2-3ರಷ್ಟು ಹೆಚ್ಚು ಬೆಳೆದಿದೆ. ಅದೇ ಭಾರತವನ್ನು ನೋಡಿದಾಗ ಅದಕ್ಕೆ ಶೇ. 6ರ ಬೆಳವಣಿಗೆಯ ಸಾಮರ್ಥ್ಯ ಇತ್ತು. ಅದು ಶೇ. 7.6ರಷ್ಟು ಬೆಳೆದಿದೆ. ಅಂದರೆ 1.5 ಪ್ರತಿಶತದಷ್ಟು ಬೆಳವಣಿಗೆ ಹೆಚ್ಚಿದೆ,’ ಎಂದು ರಘುರಾಮ್ ರಾಜನ್ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ಹತ್ತಕ್ಕಿಂತ ಕಡಿಮೆ ಇದ್ದ ಭಾರತೀಯ ಸ್ಪೇಸ್ ಸ್ಟಾರ್ಟಪ್​ಗಳ ಸಂಖ್ಯೆ ನಾಲ್ಕೇ ವರ್ಷದಲ್ಲಿ 1,180ಕ್ಕೆ: ಸಚಿವ ಜಿತೇಂದ್ರ ಸಿಂಗ್

ಗಮನಾರ್ಹವೆಂಬಂತೆ, ರಘುರಾಮ್ ರಾಜನ್ ತಮ್ಮ ಎರಡನೇ ಕಾರಣದಲ್ಲಿ ಸರ್ಕಾರದ ಕ್ರಮವನ್ನು ಮೆಚ್ಚಿಕೊಂಡಿದ್ದಾರೆ. ‘ಇನ್​ಫ್ರಾಸ್ಟ್ರಕ್ಚರ್ ಮೇಲೆ ಸರ್ಕಾರ ಬಂಡವಾಳ ವೆಚ್ಚ ಹೆಚ್ಚು ಮಾಡಿದ್ದು ಸರಿಯಾದ ಕ್ರಮ. ಆರ್ಥಿಕತೆ ಮಂದಗೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಇನ್​ಫ್ರಾಸ್ಟ್ರಕ್ಚರ್ ಮೇಲೆ ನಾವು ಹೂಡಿಕೆ ಮಾಡಿದರೆ ಅದು ಆರ್ಥಿಕತೆಗೆ ಬಲ ಕೊಡುತ್ತದೆ. ಈ ವಿಚಾರದಲ್ಲಿ ಸರ್ಕಾರವನ್ನು ಮೆಚ್ಚಿಕೊಳ್ಳಬೇಕು,’ ಎಂದು ರಘುರಾಮ್ ರಾಜನ್ ಈ ಸಂದರ್ಶನದಲ್ಲಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ