
ಬೈಕ್‌ನಲ್ಲಿ ಪ್ರಯಾಣಿಸುವಾಗ ರಸ್ತೆ ಮೇಲೆ ನಡೆಯುವ ಘಟನೆಗಳನ್ನು ವಿಡಿಯೊ ರೂಪದಲ್ಲಿ ದಾಖಲಿಸಿಕೊಳ್ಳಲು ಹೆಲ್ಮೆಟ್‌ಗೆ ಕ್ಯಾಮೆರಾ ಅಳವಡಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ರೈಡಿಂಗ್ ವಿಡಿಯೊ ಮಾಡುವುದರ ಜತೆಗೆ ಅಪಘಾತ, ಹಿಟ್ ಆ್ಯಂಡ್ ರನ್ (Hit and Run) ಅಥವಾ ವಾಹನ ಸವಾರರ ನಡುವೆ ಉಂಟಾಗುವ ವಿವಾದದ ಸಂದರ್ಭದಲ್ಲಿಯೂ ಕ್ಯಾಮೆರಾ ದಾಖಲೆ ಉಪಯೋಗಕ್ಕೆ ಬರಬಹುದು. ಗುರುಗ್ರಾಮದ ಮಹಿಳಾ ಬೈಕರ್ ಶಿವಾನಿ ಚೌಹಾಣ್ ಪ್ರಕರಣದಲ್ಲೂ ಹೆಲ್ಮೆಟ್ ಮತ್ತು ಬೈಕ್‌ನಲ್ಲಿ ಅಳವಡಿಸಿದ್ದ ಕ್ಯಾಮೆರಾಗಳ ದೃಶ್ಯಗಳು ಪ್ರಮುಖ ಸಾಕ್ಷಿಯಾಗಿವೆ. ಈ ಹಿನ್ನೆಲೆಯಲ್ಲಿ ಬೈಕ್ ಸವಾರರು ಹೆಲ್ಮೆಟ್‌ಗೆ ಕ್ಯಾಮೆರಾ ಹೇಗೆ ಅಳವಡಿಸಬಹುದು, ಅದಕ್ಕೆ ಎಷ್ಟು ವೆಚ್ಚವಾಗುತ್ತದೆ ಮತ್ತು ಇದರ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
ಹೆಲ್ಮೆಟ್‌ಗೆ ಕ್ಯಾಮೆರಾ ಅಳವಡಿಸಲು ಸಾಮಾನ್ಯವಾಗಿ ಆ್ಯಕ್ಷನ್ ಕ್ಯಾಮೆರಾ ಮತ್ತು ಅದಕ್ಕೆ ಹೊಂದುವ ಮೌಂಟ್ ಬಳಸಲಾಗುತ್ತದೆ. ಹೆಲ್ಮೆಟ್‌ನ ಮುಂಭಾಗ, ಬದಿಭಾಗ ಅಥವಾ ಗಲ್ಲದ ಭಾಗಕ್ಕೆ ಅಳವಡಿಸಬಹುದಾದ ವಿವಿಧ ಮೌಂಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳಲ್ಲಿ ಚಿನ್ ಮೌಂಟ್ ಹೆಚ್ಚು ಜನಪ್ರಿಯವಾಗಿದ್ದು, ಕ್ಯಾಮೆರಾ ಸವಾರನ ಕಣ್ಣಿನ ಸಮೀಪದ ಎತ್ತರದಲ್ಲಿ ಇರುವುದರಿಂದ ರಸ್ತೆಯ ದೃಶ್ಯವನ್ನು ಸಹಜವಾಗಿ ದಾಖಲಿಸಲು ಸಹಾಯ ಮಾಡುತ್ತದೆ.
ಕ್ಯಾಮೆರಾ ಅಥವಾ ಮೌಂಟ್ ಹೆಲ್ಮೆಟ್‌ನಿಂದ ಹೆಚ್ಚು ಹೊರಗೆ ಚಾಚಿಕೊಂಡಿರದಂತೆ ನೋಡಿಕೊಳ್ಳುವುದು ಮುಖ್ಯ. ಅಪಘಾತದ ಸಂದರ್ಭದಲ್ಲಿ ಹೊರಗೆ ಚಾಚಿಕೊಂಡಿರುವ ವಸ್ತುಗಳು ಹೆಚ್ಚುವರಿ ಅಪಾಯ ಉಂಟುಮಾಡುವ ಸಾಧ್ಯತೆ ಇರುವುದರಿಂದ ಸುರಕ್ಷಿತವಾಗಿ ಅಳವಡಿಸಬೇಕು. ಹೆಲ್ಮೆಟ್‌ನ ಮೂಲ ಸುರಕ್ಷತಾ ವಿನ್ಯಾಸಕ್ಕೆ ಹಾನಿಯಾಗುವ ರೀತಿಯಲ್ಲಿ ಯಾವುದೇ ಬದಲಾವಣೆ ಮಾಡಬಾರದು.
Maruti WagonR 2026: ಬರುತ್ತಿದೆ ಹೊಸ ವ್ಯಾಗನ್‌ಆರ್: ಹೊಸ ಎಂಜಿನ್, ಹೆಚ್ಚು ಮೈಲೇಜ್
ಕ್ಯಾಮೆರಾದ ಬೆಲೆ ಅದರ ಗುಣಮಟ್ಟ ಮತ್ತು ವೈಶಿಷ್ಟ್ಯಗಳನ್ನು ಅವಲಂಬಿಸಿರುತ್ತದೆ. ಸಾಮಾನ್ಯ ಆ್ಯಕ್ಷನ್ ಕ್ಯಾಮೆರಾಗಳು ಸುಮಾರು ₹3,000ರಿಂದ ₹8,000ರೊಳಗೆ ಸಿಗಬಹುದು. ಉತ್ತಮ ವಿಡಿಯೊ ಗುಣಮಟ್ಟ ಮತ್ತು ಸ್ಟೆಬಿಲೈಸೇಷನ್ ಹೊಂದಿರುವ ಮಾದರಿಗಳ ಬೆಲೆ ₹10,000ರಿಂದ ₹30,000 ಅಥವಾ ಅದಕ್ಕಿಂತ ಹೆಚ್ಚಿರಬಹುದು. ಮೌಂಟ್‌ಗೆ ಸುಮಾರು ₹500ರಿಂದ ₹2,000ರವರೆಗೆ ಖರ್ಚಾಗಬಹುದು. ಮೆಮೊರಿ ಕಾರ್ಡ್, ಹೆಚ್ಚುವರಿ ಬ್ಯಾಟರಿ ಮುಂತಾದವುಗಳನ್ನು ಸೇರಿಸಿದರೆ ಒಟ್ಟು ವೆಚ್ಚ ಹೆಚ್ಚಾಗಬಹುದು.
ಹೆಲ್ಮೆಟ್ ಕ್ಯಾಮೆರಾದ ಪ್ರಮುಖ ಪ್ರಯೋಜನವೆಂದರೆ ರಸ್ತೆ ಘಟನೆಗಳ ದಾಖಲೆ ಸಿಗುವುದು. ಅಪಘಾತ ಅಥವಾ ಹಿಟ್ ಆ್ಯಂಡ್ ರನ್ ನಡೆದಾಗ ಘಟನೆಯ ಸಂದರ್ಭವನ್ನು ಪರಿಶೀಲಿಸಲು ವಿಡಿಯೊ ನೆರವಾಗಬಹುದು. ವಾಹನಗಳ ನಡುವೆ ವಿವಾದ ಉಂಟಾದಾಗಲೂ ದೃಶ್ಯಗಳು ಉಪಯುಕ್ತ ದಾಖಲೆಯಾಗಬಹುದು.
ಕ್ಯಾಮೆರಾ ಮೊದಲೇ ಅಳವಡಿಸಿರುವ ಸ್ಮಾರ್ಟ್ ಹೆಲ್ಮೆಟ್‌ಗಳೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಇವು ಸಾಮಾನ್ಯ ಹೆಲ್ಮೆಟ್‌ಗಳಿಗಿಂತ ದುಬಾರಿಯಾಗಿದ್ದು, ಕ್ಯಾಮೆರಾ ಅಗತ್ಯವಿರುವವರು ಪ್ರತ್ಯೇಕ ಆ್ಯಕ್ಷನ್ ಕ್ಯಾಮೆರಾ ಮತ್ತು ಮೌಂಟ್ ಬಳಸುವುದು ಹೆಚ್ಚು ಸರಳ ಹಾಗೂ ಕಡಿಮೆ ವೆಚ್ಚದ ಆಯ್ಕೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ