Jack Dorsey: ಅದಾನಿ ಆಯ್ತು, ಜ್ಯಾಕ್ ಡಾಸೀ ಮೇಲೆ ಹಿಂಡನ್ಬರ್ಗ್ ದಾಳಿ; 4,300 ಕೋಟಿ ಸಂಪತ್ತು ಕಳೆದುಕೊಂಡ ಟ್ವಿಟ್ಟರ್ ಸ್ಥಾಪಕ

|

Updated on: Mar 24, 2023 | 12:48 PM

Hindenburg Research Report Effect: ಟ್ವಿಟ್ಟರ್ ಸಹ-ಸಂಸ್ಥಾಪಕ ಜ್ಯಾಕ್ ಡಾಸೀ ಸಿಇಒ ಆಗಿರುವ ಬ್ಲಾಕ್ ಎಂಬ ಪೇಮೆಂಟ್ ಕಂಪನಿಯಿಂದ ಅವ್ಯವಹಾರ ನಡೆದಿದೆ ಎಂದು ಹಿಂಡನ್ಬರ್ಗ್ ರಿಸರ್ಚ್ ವರದಿ ಪ್ರಕಟಿಸಿದೆ. ಇದರ ಬೆನ್ನಲ್ಲೇ ಬ್ಲಾಕ್ ಷೇರುಗಳು ಶೇ. 20ಕ್ಕಿಂತಲೂ ಹೆಚ್ಚು ಕುಸಿದಿವೆ.

Jack Dorsey: ಅದಾನಿ ಆಯ್ತು, ಜ್ಯಾಕ್ ಡಾಸೀ ಮೇಲೆ ಹಿಂಡನ್ಬರ್ಗ್ ದಾಳಿ; 4,300 ಕೋಟಿ ಸಂಪತ್ತು ಕಳೆದುಕೊಂಡ ಟ್ವಿಟ್ಟರ್ ಸ್ಥಾಪಕ
ಜ್ಯಾಕ್ ಡಾಸೀ
Follow us on

ವಾಷಿಂಗ್ಟನ್: ಗೌತಮ್ ಅದಾನಿಯ ಬೃಹತ್ ಸಾಮ್ರಾಜ್ಯ ಪಟಪಟನೇ ಉರುಳಿಬೀಳುವಂತೆ ಮಾಡಿದ್ದ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ (Hindenburg Research) ಇದೀಗ ಟ್ವಿಟ್ಟರ್​ನ ಸಂಸ್ಥಾಪಕ ಜ್ಯಾಕ್ ಡಾಸೀ (Jack Dorsey) ವಿರುದ್ಧ ಸ್ಫೋಟಕ ವರದಿ ಪ್ರಕಟಿಸಿದೆ. ಈ ವರದಿ ಬಂದ ಬೆನ್ನಲ್ಲೇ ಜ್ಯಾಕ್ ಡಾಸೀ ಸಿಇಒ ಆಗಿರುವ ಬ್ಲಾಕ್ (Block Inc.) ಎಂಬ ಪೇಮೆಂಟ್ ಕಂಪನಿಯ ಷೇರುಗಳು ಭಾರೀ ಕುಸಿತದ ಹಾದಿಯಲ್ಲಿವೆ. ಮಾರ್ಚ್ 23ರಂದು ಒಂದೇ ದಿನ ಬ್ಲಾಕ್ ಕಂಪನಿಯ ಷೇರುಗಳು ಶೇ. 22ರಷ್ಟು ಬೆಲೆ ಕಳೆದುಕೊಂಡಿದ್ದವು. ಬ್ಲಾಕ್​ನಲ್ಲಿ ಹೆಚ್ಚಿನ ಷೇರು ಹೊಂದಿರುವ ಜ್ಯಾಕ್ ಡಾಸೀ ಸಂಪತ್ತು 526 ಮಿಲಿಯನ್ ಡಾಲರ್ (ಸುಮಾರು 4,300 ಕೋಟಿ ರುಪಾಯಿ) ಮೊತ್ತದಷ್ಟು ಕರಗಿ ಹೋಗಿದೆ. ಡಾಸೀ ಒಟ್ಟು ಶೇ. 11ರಷ್ಟು ಆಸ್ತಿ ಕಳೆದುಕೊಂಡಿದ್ದಾರೆ. ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಜ್ಯಾಕ್ ಡಾರ್ಸೀ ಒಟ್ಟು ಆಸ್ತಿ ಮೌಲ್ಯ ಈಗ 4.4 ಬಿಲಿಯನ್ ಡಾಲರ್​ನಷ್ಟಿದೆ. ಅಂದರೆ ಸುಮಾರು, 36,000 ಕೋಟಿ ರುಪಾಯಿಯಷ್ಟು ಆಸ್ತಿ ಮಾತ್ರ ಜ್ಯಾಕ್ ಡಾಸೀ ಬಳಿ ಉಳಿದಿದೆ.

ಜ್ಯಾಕ್ ಡಾಸೀ ಬಗ್ಗೆ ಹಿಂಡನಬರ್ಗ್ ರಿಸರ್ಚ್ ವರದಿ ಏನು ಹೇಳಿದೆ?

ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ ಸಾಮಾನ್ಯವಾಗಿ ಉತ್ಪ್ರೇಕ್ಷಿತ ರೀತಿಯಲ್ಲಿ ಬೆಳವಣಿಗೆ ಸಾಧಿಸಿದ, ಸಂದೇಹಾಸ್ಪದ ರೀತಿಯಲ್ಲಿ ಲಾಭಗಳನ್ನು ಮಾಡುವ ಕಂಪನಿಗಳ ವ್ಯವಹಾರಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡುತ್ತದೆ. ಗೌತಮ್ ಅದಾನಿ ಅವರ ಅದಾನಿ ಗ್ರೂಪ್ ಕಂಪನಿ ಕಳೆದ ಕೆಲ ವರ್ಷಗಳಲ್ಲಿ ಅಗಾಧ ವೇಗದಲ್ಲಿ ವ್ಯವಹಾರ ವಿಸ್ತರಣೆ ಮಾಡಿದ್ದು, ಷೇರುಪೇಟೆಯಲ್ಲಿ ಅದರ ಕಂಪನಿಗಳ ಷೇರುಗಳ ಮೌಲ್ಯ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗುವುದರ ಹಿಂದೆ ಅದಾನಿ ಗ್ರೂಪ್​ನ ವಂಚನೆ ಇದೆ ಎಂದು ಹಿಂಡನ್ಬರ್ಗ್ ರಿಸರ್ಚ್ ನಾನಾ ದಾಖಲೆಗಳ ಸಮೇತ ವರದಿ ಬಿಡುಗಡೆ ಮಾಡಿತ್ತು.

ಇದನ್ನೂ ಓದಿAccenture Layoffs: ಅಕ್ಸೆಂಚರ್​ನಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರೆ 19,000 ಮಂದಿ; ಪರಿಹಾರಕ್ಕಾಗಿ 10,000 ಕೋಟಿ ಎತ್ತಿಟ್ಟ ಕಂಪನಿ

ಅದೇ ರೀತಿ ಜ್ಯಾಕ್ ಡಾರ್ಸೀ ಒಡೆತನದ ಬ್ಲಾಕ್ ಕಂಪನಿಯೂ ವಂಚನೆಯ ಹಾದಿ ಹಿಡಿದಿದೆ ಎಂಬುದು ಹಿಂಡನಬರ್ಗ್ ಆರೋಪ. ಬ್ಲಾಕ್ ಎಂಬುದು ಪೇಮೆಂಟ್ ಪ್ಲಾಟ್​ಫಾರ್ಮ್ ಕಂಪನಿಯಾಗಿದೆ. ಕ್ಯಾಷ್ ಆ್ಯಪ್, ಆಫ್ಟರ್ ಪೇ ಮೊದಲಾದ ವಿವಿಧ ರೀತಿಯ ವ್ಯವಹಾರಗಳನ್ನೂ ಅದು ಹೊಂದಿದೆ.

ಬ್ಲಾಕ್ ಕಂಪನಿ ತನ್ನ ಪೇಮೆಂಟ್ ಪ್ಲಾಟ್​ಫಾರ್ಮ್​ನಲ್ಲಿ ವಂಚಕರ ಖಾತೆಗಳಿರುವುದು ಗೊತ್ತಿದ್ದರೂ ಅವನ್ನು ನಿಷೇಧಿಸಿಲ್ಲ. ಅಲ್ಲದೇ ತನ್ನ ಗ್ರಾಹಕರ ಸಂಖ್ಯೆಯನ್ನು ವಾಸ್ತವಕ್ಕಿಂತ ತೀರಾ ಹೆಚ್ಚು ತೋರಿಸಿದೆ. ಅದರ ಶೇ. 75ರಷ್ಟು ಬಳಕೆದಾರರು ನಕಲಿ ಅಥವಾ ವಂಚಕರೇ ಆಗಿದ್ದಾರೆ. ಅದರ ಷೇರುಮೌಲ್ಯ ಕೂಡ ನೈಜ ಬೆಲೆಗಿಂತ ಶೇ. 75ರಷ್ಟು ಉಬ್ಬಿದೆ ಎಂದು ಹಿಂಡನ್ಬರ್ಗ್ ರಿಸರ್ಚ್ ಕಂಪನಿ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.

ಜ್ಯಾಕ್ ಡಾಸೀ ಅವರ ಬ್ಲಾಕ್ ಕಂಪನಿ ಇದೀಗ ಹಿಂಡನ್ಬರ್ಗ್ ರಿಸರ್ಚ್ ವರದಿಯಲ್ಲಿನ ಆರೋಪಗಳನ್ನು ತಳ್ಳಿಹಾಕಿದ್ದು, ತಾನು ಕಾನೂನು ಕ್ರಮ ಕೈಗೊಳ್ಳಲು ಮುಂದಾಗುವುದಾಗಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿM3M Hurun’s Rich List 2023: ವಿಶ್ವ ಶ್ರೀಮಂತರಲ್ಲಿ ಅಂಬಾನಿ 9ನೇ ಸ್ಥಾನ; ಅದಾನಿ ಶ್ರೀಮಂತಿಕೆ ಎಷ್ಟು?

ಜ್ಯಾಕ್ ಡಾಸೀ ಬ್ಲಾಕ್ ಕಂಪನಿಯನ್ನು 2009ರಲ್ಲಿ ಹುಟ್ಟುಹಾಕಿದ್ದರು. ಟ್ವಿಟ್ಟರ್ ಅನ್ನೂ ಅವರೇ ಸ್ಥಾಪಿಸಿದ್ದು. ಟ್ವಿಟ್ಟರ್ ಇದೀಗ ಎಲಾನ್ ಮಸ್ಕ್ ಪಾಲಾಗಿದೆ. ಆದರೆ, ಟ್ವಿಟ್ಟರ್​ನಲ್ಲಿ ಜ್ಯಾಕ್ ಡಾಸೀ ಷೇರು ಪಾಲು 388 ಮಿಲಿಯನ್ ಡಾಲರ್ ಮಾತ್ರ ಉಳಿದಿದೆ. ಆದರೆ, ಬ್ಲಾಕ್ ಕಂಪನಿಯಲ್ಲಿ ಅವರ ಬಹುತೇಕ ಆಸ್ತಿ ಇರುವುದು. ಅಲ್ಲಿ ಅವರು 3 ಬಿಲಿಯನ್ ಡಾಲರ್ ಮೊತ್ತದಷ್ಟು ಷೇರುಗಳನ್ನು ಹೊಂದಿದ್ದಾರೆ. ಹೀಗಾಗಿ, ಬ್ಲಾಕ್​ನ ಷೇರುಗಳು ಪತನಗೊಳ್ಳುತ್ತಿದ್ದರೆ ಅದು ನೇರವಾಗಿ ಜ್ಯಾಕ್ ಡಾಸೀಯ ಆಸ್ತಿ ಕರಗಿದಂತೆಯೇ ಆಗುತ್ತಿದೆ.

ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯ ಕೆಲಸವೇ ಇದಾ?

ಇನ್ನು ಹಿಂಡನ್ಬರ್ಗ್ ರಿಸರ್ಚ್ ಎಂಬುದು ಒಂದು ಶಾರ್ಟ್ ಸೆಲ್ಲರ್ (Short Seller) ಕಂಪನಿ. ಅಂದರೆ ಒಂದು ಕಂಪನಿಯ ಷೇರು ಮೌಲ್ಯ ತೀರಾ ಉಬ್ಬಿದ್ದು, ಅದರ ನೈಜ ಬೆಲೆ ಇನ್ನೂ ಕಡಿಮೆ ಇರುತ್ತದೆ ಎಂದು ಅನಿಸಿದರೆ ಅಂಥ ಕಂಪನಿಯನ್ನು ಶಾರ್ಟ್ ಸೆಲ್ಲರ್ ಟಾರ್ಗೆಟ್ ಮಾಡುತ್ತದೆ. ಈ ಕಂಪನಿಯ ಷೇರುಬೆಲೆ ಕಡಿಮೆ ಆಗುತ್ತದೆ ಎಂದು ಬಹಿರಂಗವಾಗಿಯೇ ಅಂದಾಜು ಮಾಡುತ್ತದೆ. ಬಳಿಕ ಆ ಕಂಪನಿಯ ಒಂದಿಷ್ಟು ಷೇರುಗಳನ್ನು ಖರೀದಿಸಿ ಮತ್ತೆ ಮಾರುತ್ತದೆ. ಕಂಪನಿಯ ಷೇರುಬೆಲೆ ಕಡಿಮೆ ಆದರೆ ಶಾರ್ಟ್ ಸೆಲ್ಲರ್​ಗಳು ಆ ಕಡಿಮೆ ಬೆಲೆಗೆ ಷೇರುಗಳನ್ನು ಖರೀದಿಸಿ ಕಂಪನಿಗೆ ಅದನ್ನು ಮಾರುತ್ತದೆ. ಇದರಿಂದ ಲಾಭ ಮಾಡಿಕೊಳ್ಳುತ್ತದೆ.

ಇದನ್ನೂ ಓದಿBusinesswomen: ಕಡಿಮೆ ಹಣಕ್ಕೆ ಹೊಸ ಬಿಸಿನೆಸ್; ಉದ್ಯಮಶೀಲ ಮಹಿಳೆಯರನ್ನು ಕೈಬೀಸಿ ಕರೆಯುತ್ತಿದೆ ಫ್ರಾಂಚೈಸಿ ಉದ್ಯಮ

ಹಿಂಡನ್ಬರ್ಗ್ ಇಂಥ ಒಂದು ಶಾರ್ಟ್ ಸೆಲ್ಲರ್ ಕಂಪನಿ. ಅನೈಜವಾಗಿ ಬೆಳವಣಿಗೆ ಹೊಂದಿದವೆಂದು ಅದು ಭಾವಿಸುವ ಕಂಪನಿಗಳ ಬಗ್ಗೆ ಆಳವಾದ ತನಿಖೆ ನಡೆಸಿ ವರದಿ ಬಿಡುಗಡೆ ಮಾಡುತ್ತದೆ. ಆ ಬಳಿಕ ಶಾರ್ಟ್ ಸೆಲಿಂಗ್ ಕಾರ್ಯಕ್ಕೆ ಮುಂದಾಗುತ್ತದೆ.

ಅದಾನಿ ಗ್ರೂಪ್​ಗಿಂತ ಮುಂಚೆ 2020ರಲ್ಲಿ ನಿಕೋಲಾ ಕಾರ್ಪ್ ಎಂಬ ಎಲೆಕ್ಟ್ರಿಕ್ ಕಾರು ಕಂಪನಿಯನ್ನೂ ಹಿಂಡನ್ಬರ್ಗ್ ಇದೇ ರೀತಿ ಟಾರ್ಗೆಟ್ ಮಾಡಿತ್ತು. ಆಗ ನಿಕೋಲಾ ಕಂಪನಿಯ ಷೇರು ಬೆಲೆ ಭಾರೀ ಮಟ್ಟದಲ್ಲಿ ಕುಸಿದಿತ್ತು. ಅಲ್ಲದೇ ನಿಕೋಲಾ ಕಂಪನಿಯ ಅವ್ಯವಹಾರದ ಬಗ್ಗೆ ತನಿಖೆ ಕೂಡ ನಡೆದು ಅದರ ಸ್ಥಾಪಕ ಟ್ರೆವರ್ ಮಿಲ್ಟನ್ ತಪ್ಪಿತಸ್ಥ ಎಂಬುದು ಸಾಬೀತಾಗಿತ್ತು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:48 pm, Fri, 24 March 23