ಮೊಬೈಲ್ ಫೋನ್ ಕಳುವಾದರೆ ಚಿಂತಿಸದಿರಿ, ಈ ಸರ್ಕಾರಿ ಪೋರ್ಟಲ್​ನಲ್ಲಿ ಮಾಹಿತಿ ಹಾಕಿ ಸಾಕು

Process of recovering lost mobile phones using CEIR portal: ಫೋನ್ ಕಳೆದುಹೋದರೆ ಅದನ್ನು ಮರಳಿ ಪಡೆಯುವುದು ಈಗ ಹೆಚ್ಚು ಸುಲಭವಿದೆ. ದೂರ ಸಂಪರ್ಕ ಇಲಾಖೆಯು ಸಿಇಐಆರ್ ಪೋರ್ಟಲ್ ಅನ್ನು ಇದಕ್ಕೆಂದೇ ರೂಪಿಸಿದೆ. ನಿಮ್ಮ ಕಳುವಾದ ಫೋನ್​ನ ಐಎಂಇಐ ಸೇರಿದಂತೆ ವಿವಿಧ ವಿವರಗಳನ್ನು ಈ ಪೋರ್ಟಲ್​ನಲ್ಲಿ ಹಾಕಿದರೆ ಸಾಕು, ಫೋನ್ ಅನ್ನು ಪೊಲೀಸರು ಟ್ರೇಸ್ ಮಾಡುತ್ತಾರೆ.

ಮೊಬೈಲ್ ಫೋನ್ ಕಳುವಾದರೆ ಚಿಂತಿಸದಿರಿ, ಈ ಸರ್ಕಾರಿ ಪೋರ್ಟಲ್​ನಲ್ಲಿ ಮಾಹಿತಿ ಹಾಕಿ ಸಾಕು
ಫೋನ್ ಕಳುವು

Updated on: Nov 06, 2025 | 5:43 PM

ಮೊಬೈಲ್ ಫೋನ್ ಅನ್ನು ಯಾರಾದರೂ ಕದ್ದಾಗ ಅದರಲ್ಲಿರುವ ಸಿಮ್ ತೆಗೆದುಬಿಡುತ್ತಾರೆ. ಇದರಿಂದ ನೀವು ನಂಬರ್​ಗೆ ಫೋನ್ ಮಾಡಿದಾಗ ಅದು ರೀಚ್ ಆಗುವುದಿಲ್ಲ. ಮೊಬೈಲ್ ಹೋಯ್ತೆಂದು (lost mobile) ನಿರ್ಧರಿಸಿ, ಸಿಮ್ ಬ್ಲಾಕ್ ಮಾಡಿಸಿ ಬದಲೀ ಸಿಮ್ ಪಡೆದು ಸುಮ್ಮನಾಗಿ ಬಿಡುತ್ತೇವೆ. ಆದರೆ, ಕಳೆದುಹೋದ ಮೊಬೈಲ್ ಫೋನ್ ಅನ್ನೂ ಕೂಡ ರಿಕವರ್ ಮಾಡಲು ಸಾಧ್ಯ ಎಂಬುದು ಅನೇಕರಿಗೆ ತಿಳಿದಿಲ್ಲ. ಅದಕ್ಕಾಗೆಂದೇ ಕೇಂದ್ರ ದೂರಸಂಪರ್ಕ ಇಲಾಖೆಯು ಸೆಂಟ್ರಲ್ ಎಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ಎನ್ನುವ ಪೋರ್ಟಲ್ ಅನ್ನು ರೂಪಿಸಿದೆ.

ಸಿಇಐಆರ್, ಹೊಸದಾಗಿ ನಿರ್ಮಿಸಲಾದ ಪೋರ್ಟಲ್ ಅಲ್ಲ. ಕೆಲವು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಈ ಪೋರ್ಟಲ್​ಗೆ ಹೋಗಿ ನಿಮ್ಮ ಮೊಬೈಲ್​ನ ಕೆಲ ವಿವರಗಳನ್ನು ನಮೂದಿಸಿದರೆ ಸಾಕು. ಪೊಲೀಸರು ಮೊಬೈಲ್ ಅನ್ನು ಟ್ರೇಸ್ ಮಾಡಿ ಕಂಡು ಹಿಡಿಯುತ್ತಾರೆ.

ಈ ಪೋರ್ಟಲ್​ನಲ್ಲಿ 2023ರ ಮೇ 16ರಿಂದ ಈಚೆ 50 ಲಕ್ಷಕ್ಕೂ ಹೆಚ್ಚು ಮೊಬೈಲ್ ಫೋನ್​ಗಳ ಕಳುವಾಗಿರುವುದನ್ನು ದಾಖಲಿಸಲಾಗಿದೆ. ಈ ಪೈಕಿ 31 ಲಕ್ಷ ಫೋನ್​ಗಳನ್ನು ಬ್ಲಾಕ್ ಮಾಡಲಾಗಿದೆ. 19 ಲಕ್ಷ ಮೊಬೈಲ್​ನಗಳನ್ನು ಟ್ರೇಸ್ ಮಾಡಲಾಗಿದೆ. 4.22 ಲಕ್ಷ ಮೊಬೈಲ್​ಗಳನ್ನು ಅದರ ಮಾಲೀಕರಿಗೆ ಕೊಡಲಾಗಿದೆ.

ಇದನ್ನೂ ಓದಿ: ಪಿಎಂ ಕೌಶಲ್ ವಿಕಾಸ್ ಯೋಜನೆಯ ದುರುಪಯೋಗ; 178 ಟ್ರೈನಿಂಗ್ ಪಾರ್ಟ್ನರ್​ಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ಸರ್ಕಾರ

2024ರ ಮಾರ್ಚ್​ನಿಂದ 2025ರ ಅಕ್ಟೋಬರ್​ವರೆಗೂ 894 ಮೊಬೈಲ್ ಫೋನ್​ಗಳು ಕಳುವಾಗಿರುವುದು ಸಿಇಐಆರ್ ಪೋರ್ಟಲ್​ನಲ್ಲಿ ದಾಖಲಾಗಿತ್ತು. ಬೆಂಗಳೂರು ಪೊಲೀಸರು ಇದನ್ನು ಪರಿಶೀಲಿಸಿ ಆ ಫೋನ್​ಗಳನ್ನು ಟ್ರೇಸ್ ಮಾಡಿದ್ದಾರೆ. ಈ ಪೈಕಿ 522 ಫೋನ್​ಗಳನ್ನು ಮಾಲೀಕರಿಗೆ ಮರಳಿಸಿದ್ದಾರೆ. ಉಳಿದ 372 ಫೋನ್​ಗಳನ್ನೂ ಮಾಲೀಕರಿಗೆ ಹಿಂದಿರುಗಿಸುವ ಪ್ರಕ್ರಿಯೆಯಲ್ಲಿದ್ದಾರೆ.

ಸಿಇಐಆರ್ ಪೋರ್ಟಲ್​ನಲ್ಲಿ ಏನೇನು ಮಾಹಿತಿ ಹಾಕಬೇಕು

  • ಕಳುವಾದ ಫೋನ್​ನ ಮೊಬೈಲ್ ನಂಬರ್​ಗಳು.
  • ಎರಡು ಸಿಮ್ ಸ್ಲಾಟ್ ಇದ್ದರೆ ಎರಡರದ್ದೂ ಐಎಂಇಐ ನಂಬರ್​ಗಳು
  • ಫೋನ್​ನ ಬ್ರ್ಯಾಂಡ್ (ಸ್ಯಾಮ್ಸುಂಗ್ ಅಥವಾ ಆ್ಯಪಲ್ ಅಥವಾ ವಿವೋ ಇತ್ಯಾದಿ)
  • ಫೋನ್​ನ ಮಾಡಲ್, ಬೆಲೆ
  • ಫೋನ್ ಖರೀದಿಸಿದ್ದಕ್ಕೆ ಪುರಾವೆಯಾಗಿ ಇನ್ವಾಯ್ಸ್ ದಾಖಲೆ
  • ಫೋನ್ ಕಳುವಾದ ಸ್ಥಳ, ದಿನಾಂಕ, ರಾಜ್ಯ, ಜಿಲ್ಲೆ, ಪೊಲೀಸ್ ಸ್ಟೇಷನ್, ಕಂಪ್ಲೇಂಟ್ ನಂಬರ್ ಇತ್ಯಾದಿ
  • ಮಾಲೀಕರ ಹೆಸರು, ವಿಳಾಸ, ವ್ಯಕ್ತಿ ಯ ಗುರುತು ದಾಖಲೆ, ಇಮೇಲ್ ಐಡಿ ಇತ್ಯಾದಿ ವಿವರ.

ಈ ಪೈಕಿ ಐಎಂಇಐ ಸಂಖ್ಯೆ ಬಹಳ ಮುಖ್ಯ. ಕಳುವಾದಾಗ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಬೇಕು. ಮೊಬೈಲ್ ಫೋನ್ ಖರೀದಿಸಿದ್ದಕ್ಕೆ ಇನ್ವಾಯ್ಸ್ ಬಿಲ್ ಎತ್ತಿ ಇಟ್ಟುಕೊಂಡಿದ್ದರೆ ಅದನ್ನು ಮರಳಿ ಪಡೆಯಲು ಕಾನೂನು ತೊಡಕು ಇರುವುದಿಲ್ಲ.

ಇದನ್ನೂ ಓದಿ: ಕೇವಲ 30 ರೂಗೆ ರಾಕೆಟ್ ಸರ್ವಿಸ್; ಚೆನ್ನೈ ಕಂಪನಿಯಿಂದ ಮರುಬಳಕೆಯ ಎಲೆಕ್ಟ್ರಿಕ್ ರಾಕೆಟ್ ಆವಿಷ್ಕಾರ

ನೀವು ಈ ಸಿಇಐಆರ್ ಪೋರ್ಟಲ್​ನಲ್ಲಿ ಫೋನ್ ಕಳುವಾಗಿರುವುದನ್ನು ದಾಖಲಿಸಿದ ಬಳಿಕ ಪೊಲೀಸರು ಟ್ರೇಸ್ ಮಾಡಲು ಆರಂಭಿಸುತ್ತಾರೆ. ಕಳುವಾದ ಫೋನ್​ಗೆ ಯಾರಾದರೂ ಕೂಡ ಬೇರೆ ಸಿಮ್ ಹಾಕಿ ಉಪಯೋಗಿಸುತ್ತಿದ್ದರೂ ಐಎಂಇಐ ಮೂಲಕ ಅದು ಗೊತ್ತಾಗಿ ಹೋಗುತ್ತದೆ. ಪೊಲೀಸರು ಸುಲಭವಾಗಿ ಟ್ರೇಸ್ ಮಾಡುತ್ತಾರೆ.

ದೂರು ಕೊಡಲು ಪೋರ್ಟಲ್​ನ ಪೇಜ್​​ಗೆ ಹೋಗಲು ನೇರ ಲಿಂಕ್: www.ceir.gov.in/Request/CeirUserBlockRequestDirect.jsp

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ