2022ರ ಏಪ್ರಿಲ್ನಲ್ಲಿ ಗೋಧಿ (Wheat) ಹಿಟ್ಟಿನ ತಿಂಗಳ ಸರಾಸರಿ ಚಿಲ್ಲರೆ ಮಾರಾಟ ಬೆಲೆ 12 ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿ, ಕೇಜಿಗೆ 32.38 ರೂಪಾಯಿ ತಲುಪಿತ್ತು. ದೇಶದಲ್ಲಿ ಗೋಧಿ ಉತ್ಪಾದನೆಯಲ್ಲಿ ಇಳಿಕೆ ದಾಖಲಿಸಿ, ದಾಸ್ತಾನು ಕೂಡ ಕಡಿಮೆಯಾದ ಮೇಲೆ ಹೀಗೆ ಗೋಧಿ ಹಿಟ್ಟಿನ ಬೆಲೆಯಲ್ಲಿ 2010ರ ಜನವರಿ ನಂತರ ಇಂಥದ್ದೊಂದು ಏರಿಕೆ ಕಂಡುಬಂತು. ಕಾರ್ಯ ನಿರ್ವಹಣೆ ಮತ್ತು ಕಾರ್ಯತಂತ್ರ ಅಗತ್ಯಕ್ಕಿಂತ ಭಾರತದ ಗೋಧಿ ದಾಸ್ತಾನು ಮಹತ್ತರವಾಗಿ ಹೆಚ್ಚಾಗಿದೆ. ಮತ್ತು ಮುಖ್ಯವಾಗಿ ಈ ಕಾರಣಕ್ಕೆ ಬೆಲೆ ಗಗನಕ್ಕೆ ಏರಿದೆ. ಒಟ್ಟಾರೆಯಾಗಿ 2022-23ರಲ್ಲಿ ಭಾರತದಲ್ಲಿ ಗೋಧಿ ಉತ್ಪಾದನೆಯು 1050 ಎಲ್ಎಂಟಿ ಮುಟ್ಟುವ ಅಂದಾಜಿದೆ.
ಭಾರತದಲ್ಲಿ ಗೋಧಿ ಹಿಟ್ಟಿನ ಬೆಲೆ ಹೆಚ್ಚಾಗಲು ಕಾರಣಗಳು ಇಲ್ಲಿವೆ:
– 2022ರ ಮಾರ್ಚ್ಗೆ ಕೊನೆಯಾದ ವರ್ಷಕ್ಕೆ ಭಾರತ 70 ಎಲ್ಎಂಟಿ ಗೋಧಿ ರಫ್ತು ಮಾಡಿದೆ. ಇನ್ನು ಪ್ರಸಕ್ತ ಹಣಕಾಸು ವರ್ಷ (2022-23) ರಷ್ಯಾ-ಉಕ್ರೇನ್ ಬಿಕ್ಕಟ್ಟು ಜಾಗತಿಕವಾಗಿ ಪೂರೈಕೆ ಕೊರತೆ ಸೃಷ್ಟಿಸಿರುವುದರಿಂದ ರಫ್ತು ಹೆಚ್ಚಾಗುವ ಸಾಧ್ಯತೆ ಇದೆ.
– ಜಾಗತಿಕವಾಗಿಯೇ ಗೋಧಿ ಹಿಟ್ಟು ಬೆಲೆಯಲ್ಲಿ ಏರಿಕೆ ಆಗಿದೆ. ಮತ್ತು ಏಪ್ರಿಲ್ನಲ್ಲಿ ಭಾರತ ಅತಿ ಹೆಚ್ಚಿನ ಏರಿಕೆ ಕಂಡಿದೆ. 2022ರ ಮಾರ್ಚ್ ತಿಂಗಳಲ್ಲಿ ಗೋಧಿಯ ಚಿಲ್ಲರೆ ಮಾರಾಟ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆ ಆಗಿ, ಕೇಜಿಗೆ 28.67 ರೂಪಾಯಿ ಮುಟ್ಟಿತ್ತು. ವರ್ಷದ ಹಿಂದೆ, ಅಂದರೆ 2021ರ ಮಾರ್ಚ್ನಲ್ಲಿ ಇದು 27.90 ರೂಪಾಯಿ ಇತ್ತು.
– ಇನ್ನು 2022ರ ಮಾರ್ಚ್ಗೆ ಗೋಧಿ ಹಿಟ್ಟಿನ ರೀಟೇಲ್ ಮಾರಾಟ ದರ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿ ಕೇಜಿಗೆ 32.03 ರೂಪಾಯಿ ಮುಟ್ಟಿತು. ವರ್ಷದ ಹಿಂದೆ, 2021ರ ಮಾರ್ಚ್ನಲ್ಲಿ ಕೇಜಿಗೆ 31.77 ರೂಪಾಯಿ ಇತ್ತು.
– ಎಎನ್ಐ ಸುದ್ದಿ ಸಂಸ್ಥೆಗೆ ಮೂಲಗಳು ತಿಳಿಸಿರುವಂತೆ, ದೇಶೀಯ ಗೋಧಿ ಬೆಲೆ ಹಾಗೂ ಈಗಿನ ಋತುವಿನಲ್ಲಿ ಆಗುತ್ತಿರುವ ಖರೀದಿ ಎರಡನ್ನೂ ಸರ್ಕಾರ ನಿಗಾ ಮಾಡುತ್ತಿದೆ. ಯಾವುದೇ ಕೊರತೆಯನ್ನು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿಯಲ್ಲಿ ಗೋಧಿ ಮಾರಾಟದ ಮೂಲಕ ನೀಗಿಸಲಾಗುವುದು.
– ಎಲ್ಲ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಗೋಧಿ ಪೂರೈಸಿದ ನಂತರ 100 ಎಲ್ಎಂಟಿ ಬಾಕಿ ದಾಸ್ತಾನು 2022-23ರ ವರ್ಷದಲ್ಲಿ ಇರುವ ನಿರೀಕ್ಷೆ ಸರ್ಕಾರಕ್ಕೆ ಇದೆ ಎಂದು ಮೂಲಗಳು ತಿಳಿಸಿವೆ.
ಬನಶಂಕರಿ 3ನೇ ಹಂತದಲ್ಲಿ ಎಸ್ಎಸ್ವಿ ಪ್ರಾವಿಷನ್ ಸ್ಟೋರ್ಸ್ ಹೆಸರಿನ ಮಳಿಗೆ ನಡೆಸುವ ಬಿ.ಎಸ್.ವಿಶ್ವನಾಥ್ ಬೆಲೆ ಏರಿಕೆ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿ, ಅಡುಗೆ ಎಣ್ಣೆ ಬೆಲೆ ಏರಿಕೆ ಆಗುತ್ತಲೇ ರವೆ, ಮೈದಾ ಹಿಟ್ಟು ಬೇರೆ ಬೇರೆ ವಸ್ತುಗಳ ಬೆಲೆಯೂ ಏರಿಕೆ ಆಗಿದೆ. ಕಳೆದ ಕೆಲವು ದಿನಗಳಿಂದಲೇ ಆಗಿರುವಂಥ ಬೆಲೆ ಏರಿಕೆ ಇದು ಎಂದು ಹೇಳಿದರು. ಆದರೆ ಈ ರೀತಿ ಏರಿಕೆ ಆಗುವುದಕ್ಕೆ ತಮಗೆ ಕಾರಣ ಗೊತ್ತಿಲ್ಲ ಅಂತಲೂ ತಿಳಿಸಿದರು.
ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:28 pm, Mon, 9 May 22