ಮನೆಯನ್ನು ಕಟ್ಟಿಸುತ್ತಿದ್ದೀರಾ? ಹಾಗಿದ್ದರೆ ನೀವು ಈ ಲೇಖನವನ್ನು ಖಂಡಿತಾ ಓದಬೇಕು. ಏಕೆಂದರೆ ಬಜೆಟ್ ಅಳತೆ ಮೀರುವುದು ಎಲ್ಲಿ, ಎಚ್ಚರವಾಗಿ ಇರಬೇಕಾದದ್ದು ಎಲ್ಲಿ, ಮನೆ ಪೂರ್ಣ ಆಗುವ ಹೊತ್ತಿಗೆ ಸಿಕ್ಕಾಪಟ್ಟೆ ಒತ್ತಡದ ಸ್ಥಿತಿ ಏಕೆ ನಿರ್ಮಾಣ ಆಗುತ್ತದೆ ಅನ್ನೋದನ್ನು ಈ ಲೇಖನ ವಿವರಿಸುತ್ತದೆ. ಜತೆಗೆ ಮನೆಯನ್ನು ಕಟ್ಟುವುದಕ್ಕೆ ಮಟೀರಿಯಲ್ ಕಾಂಟ್ರ್ಯಾಕ್ಟ್ ಕೊಡುವುದು ಉತ್ತಮವೋ ಅಥವಾ ಲೇಬರ್ ಕಾಂಟ್ರ್ಯಾಕ್ಟ್ ನೀಡುವುದು ಸರಿಯೋ ಎಂಬ ಬಗ್ಗೆಯೂ ಸ್ವಲ್ಪ ಮಟ್ಟಿಗೆ ಸಲಹೆ ಸಿಕ್ಕಂತೆ ಆಗುತ್ತದೆ. ಹಾಗಿದ್ದರೆ ಇನ್ನು ಹೆಚ್ಚು ತಡ ಮಾಡದೆ ಮುಂದೆ ಓದಿ.
ಮಟಿರೀಯಲ್ ಕಾಂಟ್ರ್ಯಾಕ್ಟ್ ನೀಡಬೇಕೋ ಅಥವಾ ಲೇಬರ್ ಕಾಂಟ್ರ್ಯಾಕ್ಟ್?
ಮೊದಲಿಗೆ ಏನು ಹೀಗಂದರೆ ಅಂತ ತಿಳಿಯಿರಿ. ಮನೆ ಕಟ್ಟುವುದಕ್ಕೆ ಬೇಕಾದ ಎಲ್ಲ ವಸ್ತುಗಳನ್ನು ಮಾಲೀಕರೇ ತಂದುಕೊಡುತ್ತಾರೆ. ಅದರ ನಿರ್ಮಾಣಕ್ಕೆ ಬೇಕಾದ ಕಾರ್ಮಿಕರ ಜವಾಬ್ದಾರಿಯನ್ನು ಮಾತ್ರ ಪೂರ್ತಿಯಾಗಿ ಬೇರೆಯವರಿಗೆ ವಹಿಸಲಾಗುತ್ತದೆ. ಇದಕ್ಕೆ ಚದರಡಿಗೆ ಇಷ್ಟು ಎಂದಿರುತ್ತದೆ. ಉದಾಹರಣೆಗೆ 12 ಚದರದ ಮನೆಗೆ ಲೇಬರ್ ಮಾತ್ರ ಅಂದಾಜು 3,84,000 ರೂಪಾಯಿ ಆಗುತ್ತದೆ ಅಂತಿಟ್ಟುಕೊಳ್ಳಿ. ಕಟ್ಟಡ ನಿರ್ಮಾಣಕ್ಕೆ ಬೇಕಾದ ಇಟ್ಟಿಗೆ, ಸಿಮೆಂಟ್, ಕಬ್ಬಿಣ ಇತ್ಯಾದಿಯನ್ನು ಸಮಯಕ್ಕೆ ಸರಿಯಾಗಿ ತಂದುಕೊಡಬೇಕು. ಇದರಲ್ಲಿ ಯಾವುದು ಲೇಬರ್ ಕಾಂಟ್ರ್ಯಾಕ್ಟ್ನಲ್ಲಿ ಒಳಗೊಂಡಿರುತ್ತದೆ ಹಾಗೂ ಯಾವುದು ಇಲ್ಲ ಎಂಬ ಬಗ್ಗೆ ಲಿಖಿತವಾದ ಒಪ್ಪಂದ ಮಾಡಿಕೊಳ್ಳುವುದು ಒಳ್ಳೆಯದು.
ಇನ್ನು ಮಟಿರೀಯಲ್ ಕಾಂಟ್ರ್ಯಾಕ್ಟ್. ಒಟ್ಟಾರೆಯಾಗಿ ಮನೆಯನ್ನು ಕಟ್ಟಿಕೊಡುವುದಕ್ಕೆ ಚದರಡಿಗೆ ಇಷ್ಟು ಎಂದು ಮಾತನಾಡಿ, ಹಣವನ್ನು ನೀಡುವುದು. ಉದಾಹರಣೆಗೆ 12 ಚದರದ ಮನೆಗೆ ಚದರಕ್ಕೆ 1,95,000 ರೂಪಾಯಿ ಅಂದುಕೊಳ್ಳಿ. 23,40,000 ರೂಪಾಯಿ ಆಗುತ್ತದೆ. ಇದರಲ್ಲಿ ಕಟ್ಟಡದ ಪ್ಲ್ಯಾನ್ ಅಪ್ರೂವಲ್, ವಿದ್ಯುತ್, ನೀರು- ಒಳಚರಂಡಿ ಸಂಪರ್ಕ ಹೀಗೆ ವಿವಿಧ ಅಂಶಗಳು ಒಳಗೊಂಡಿರುವುದಿಲ್ಲ. ಅದೇ ರೀತಿ ವಾರ್ಡ್ರೋಬ್, ಅಡುಗೆ ಮನೆಯ ಮರದ ಕೆಲಸಗಳು, ಟೀವಿ ಕ್ಯಾಬಿನ್ ಹೀಗೆ ಯಾವುದು ಸೇರುತ್ತದೆ ಎಂಬುದನ್ನು ಆರಂಭದಲ್ಲೇ ಮಾತನಾಡಿಕೊಂಡು, ಇಂಥದ್ದೇ ಗುಣಮಟ್ಟದ, ಇಂಥದ್ದೇ ಬ್ರ್ಯಾಂಡ್ ಅಥವಾ ಕಂಪೆನಿಯ ವಸ್ತುಗಳನ್ನು ಬಳಸುವ ಬಗ್ಗೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ.
ಯಾವುದು ಉತ್ತಮ?: ಲೇಬರ್ ಕಾಂಟ್ರ್ಯಾಕ್ಟ್ ವಹಿಸುವಾಗ ಮಾಲೀಕರು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಜತೆಗೆ ಕಟ್ಟಡ ನಿರ್ಮಾಣದ ಬಗ್ಗೆ ತಿಳಿವಳಿಕೆ ಹೆಚ್ಚೇ ಇರಬೇಕು. ಆದರೆ ಹಣವನ್ನು ಉಳಿಸುವುದಕ್ಕೆ ಹಾಗೂ ತಮಗೆ ಮೆಚ್ಚಿದ ವಸ್ತುಗಳನ್ನು ಆಯ್ಕೆ ಮಾಡುವುದಕ್ಕೆ ಅವಕಾಶ ಇರುತ್ತದೆ. ಮಟಿರೀಯಲ್ ಕಾಂಟ್ರ್ಯಾಕ್ಟ್ನಲ್ಲಿ ಓಡಾಟದ ಶ್ರಮ ಇರುವುದಿಲ್ಲ. ಆದರೆ ಖರ್ಚಿನ ಪ್ರಮಾಣ ಜಾಸ್ತಿ ಆಗುತ್ತದೆ. ಏಕೆಂದರೆ ಕಟ್ಟಡ ನಿರ್ಮಿಸುವವರು ಶ್ರಮಕ್ಕೆ ಪ್ರತಿಯಾಗಿ ಅದರ ಲಾಭವನ್ನು ಪಡೆಯುತ್ತಾರೆ. ಒಂದಿಷ್ಟು ಸಿದ್ಧತೆ, ಓಡಾಟ ಸಾಧ್ಯವಿದ್ದಲ್ಲಿ, ಉತ್ತಮ ಕೆಲಸಗಾರರ ಆಯ್ಕೆ ಮಾಡಿಕೊಂಡಲ್ಲಿ ಲೇಬರ್ ಕಾಂಟ್ರ್ಯಾಕ್ಟ್ ಆರಿಸಿಕೊಳ್ಳುವುದು ಸರಿ.
ಖರ್ಚು ಮಿತಿ ಮೀರುವುದು ಎಲ್ಲಿ ಮತ್ತು ಏಕೆ?
ಮನೆ ಕಟ್ಟುವ ಆರಂಭದಲ್ಲೇ ಅಂತಿಮವಾಗಿ ಹೀಗೇ ಇರಬೇಕು ಮತ್ತು ಇಷ್ಟೇ ಇರಬೇಕು ಎಂಬ ಬಗ್ಗೆ ಸ್ಪಷ್ಟತೆ ಇಟ್ಟುಕೊಂಡಿರಬೇಕು. ಶೇ 5ಕ್ಕಿಂತ ಹೆಚ್ಚಿನ ವ್ಯತ್ಯಾಸ ಮಾಡಬಾರದು. ಸಿಮೆಂಟ್, ಕಬ್ಬಿಣ, ಫ್ಲೋರಿಂಗ್ ಟೈಲ್ಸ್, ಮರ ಅಥವಾ ಪರ್ಯಾಯಗಳು… ಹೀಗೆ ಎಲ್ಲದರ ಬಗ್ಗೆಯೂ ದೃಢವಾದ ನಿರ್ಧಾರ ಇಟ್ಟುಕೊಂಡಿರಬೇಕು. ಸಾಮಾನ್ಯವಾಗಿ ಕಟ್ಟಡ ಕಡಿಮೆ ಖರ್ಚಿನಲ್ಲಿ ನಿಂತುಕೊಳ್ಳುತ್ತದೆ. ಆದರೆ ಆ ನಂತರ ಕಿಟಕಿ, ಬಾಗಿಲು, ಪೇಂಟಿಂಗ್, ಫ್ಲೋರಿಂಗ್, ಬಾತ್ರೂಮ್- ಟಾಯ್ಲೆಟ್ಗೆ ಸಂಬಂಧಿಸಿದ ವಸ್ತುಗಳು, ಗೇಟ್… ಇಂಥವುಗಳ ವಿಚಾರದಲ್ಲಿ ಬಿಡಿ-ಬಿಡಿಯಾಗಿ ಲೆಕ್ಕ ಹಾಕಿ, ಬಜೆಟ್ನ ಮೀರಿ ಹೋಗುವವರೇ ಹೆಚ್ಚು. ಇವೆಲ್ಲವೂ ಆದ ಮೇಲೆ ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ, ಮನೆಯ ಒಳಗೆ ಬೇಕಾದ ಪೀಠೋಪಕರಣ, ಲೈಟ್- ಫ್ಯಾನ್ಗಳು, ಎಲೆಕ್ಟ್ರಿಕಲ್ ವಸ್ತುಗಳು, ವಾರ್ಡ್ರೋಬ್ ಇತ್ಯಾದಿಗಳ ಖರ್ಚು ಇರುತ್ತವೆ. ಆ ಬಗ್ಗೆಯೂ ಲೆಕ್ಕ ಹಾಕಿಕೊಂಡಿರಬೇಕು.
ಆದರೆ, ಬಹಳ ಜನ ಬಿಡಿ ಬಿಡಿಯಾಗಿ ವೆಚ್ಚ ಜಾಸ್ತಿ ಮಾಡಿಕೊಂಡು ಹೋಗುತ್ತಾರೆ. ಉದಾಹರಣೆಗೆ, ಫ್ಲೋರಿಂಗ್ಗಾಗಿ 80 ರೂಪಾಯಿ ಚದರಡಿಯ ಟೈಲ್ಸ್ ಅಂದುಕೊಂಡಿದ್ದಲ್ಲಿ ಅಲ್ಲಿಗೇ ಅಥವಾ ನಾಲ್ಕೈದು ರೂಪಾಯಿ ಹೆಚ್ಚಾದರೆ ಸರಿ (ಕೆಲವು ಸಲ ಹಣದುಬ್ಬರದಿಂದ ಹೆಚ್ಚಾಗಬಹುದು). ಆದರೆ 120-150 ಅಥವಾ 200 ರೂಪಾಯಿ ಚದರಡಿಗೆ ಎಂದು ಹೋಗುತ್ತಾರೆ. ಬ್ರ್ಯಾಂಡ್ ಅಂದುಕೊಂಡು ಹೆಚ್ಚು ಖರ್ಚು ಮಾಡುತ್ತಾರೆ. ಮೊದಲೇ ಹೇಳಿದಂತೆ ಬಿಡಿಬಿಡಿಯಾಗಿ ಲೆಕ್ಕ ಹಾಕಿದಾಗ ಅಂದುಕೊಂಡ ಬಜೆಟ್ನಲ್ಲಿ ಇರುವಂತೆ ಕಂಡರೂ ನಂತರೂ ಕೈ ಮೀರಿ ಹೋಗುತ್ತದೆ.
ಮನೆ ಕಟ್ಟುವಾಗ ಮುಖ್ಯವಾದ ಅಂಶಗಳು ಯಾವುವು?
ಯೋಜನೆ, ಸಿದ್ಧತೆ, ಅನುಷ್ಠಾನ ಹಾಗೂ ಶ್ರಮ. ಮನೆ ಕಟ್ಟುವ ಮುಂಚೆ ಪ್ಲ್ಯಾನಿಂಗ್ ಕಡೆ ಹೆಚ್ಚಿನ ಗಮನ ನೀಡಬೇಕು. ಒಂದು ಕುಟುಂಬದ ಅಗತ್ಯಗಳನ್ನು ತಿಳಿದು, ಅದಕ್ಕೆ ತಕ್ಕಂತೆ ನಕ್ಷೆ ಮೊದಲುಗೊಂಡು ಎಲ್ಲಿ ಮಾಡಿಸುವುದು, ಲೇಬರ್ ಕಾಂಟ್ರ್ಯಾಕ್ಟ್ ವಹಿಸೇಕಾ ಅಥವಾ ಮಟಿರೀಯಲ್ ಕಾಂಟ್ರ್ಯಾಕ್ಟ್ ನೀಡಬೇಕಾ ಯೋಜನೆ ಮಾಡಿಕೊಳ್ಳಬೇಕು. ಆ ನಂತರ ಪ್ಲ್ಯಾನಿಂಗ್ ಅಪ್ರೂವಲ್, ಇಟ್ಟಿಗೆ, ಸಿಮೆಂಟ್, ಕಲ್ಲು, ಕಬ್ಬಿಣ ಇತ್ಯಾದಿ ಎಲ್ಲಿ ಖರೀದಿಸಬೇಕು ಎಂಬುದಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಅದಾದ ನಂತರ ಅದರ ಅನುಷ್ಠಾನ. ಇವೆಲ್ಲಕ್ಕೂ ಶ್ರಮ ಪಡಲು ಸಿದ್ಧರಿರಬೇಕು. ಇಷ್ಟು ಹೊತ್ತು ಪ್ರಸ್ತಾವವೇ ಮಾಡದ ಅಂಶವೊಂದಿದೆ. ಅದು ಹಣಕಾಸು ವ್ಯವಸ್ಥೆ. ಪೂರ್ತಿ (ಶೇ 100ರಷ್ಟು) ಹಣ ಇಟ್ಟುಕೊಂಡು ಮನೆ ಕಟ್ಟುವುದಕ್ಕೆ ಸಾಧ್ಯವಿಲ್ಲ ಅಂತಾದರೂ ಮಾರ್ಜಿನ್ ಮೊತ್ತ ಇಟ್ಟುಕೊಳ್ಳುವುದು ಅತ್ಯಗತ್ಯ.
ಇದನ್ನೂ ಓದಿ: Home Loan EMI: ಅಬ್ಬಾ! ಹೋಮ್ ಲೋನ್ ಮರುಪಾವತಿಯಲ್ಲೂ ಎಷ್ಟೊಂದು ಬಗೆ?