ಚೆನ್ನೈ, ಅಕ್ಟೋಬರ್ 21: ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಭಾರತ ಬಹಳ ತಡವಾಗಿ ಕಾಲಿಟ್ಟರೂ ಒಂದೊಂದೇ ದೃಢ ಹೆಜ್ಜೆ ಇಡುತ್ತಿದೆ. ಸಾಲು ಸಾಲಾಗಿ ಫ್ಯಾಬ್ರಿಕೇಶನ್ ಯೂನಿಟ್ಗಳು ಶುರುವಾಗುತ್ತಿವೆ. ಈಗಾಗಲೇ ಮೊದಲ ಚಿಪ್ ತಯಾರಿಕೆಯಾಗಿ ಅಮೆರಿಕದ ಗ್ರಾಹಕರನ್ನೂ ತಲುಪಿಯಾಗಿದೆ. ಚಿಪ್ ಡಿಸೈನ್ ಘಟಕಗಳೂ ಬಂದಿವೆ. ಇದೇ ಹೊತ್ತಲ್ಲಿ ಸೆಮಿಕಂಡಕ್ಟರ್ ಉದ್ಯಮದ ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಲಾಗುವ 7 ಎನ್ಎಂ ಚಿಪ್ (7nm processor) ಅಭಿವೃದ್ದಿಯತ್ತಲೂ ಭಾರತ ಸಾಗುತ್ತಿದೆ.
ಐಐಟಿ ಮದ್ರಾಸ್ನ (IIT Madras) ಸಂಶೋಧಕರ ತಂಡವೊಂದು 7nm ಪ್ರೋಸಸರ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಬಹುತೇಕ ಇದು ಅಂತಿಮ ಹಂತ ತಲುಪುತ್ತಿದ್ದು 2028ಕ್ಕೆ ಫ್ಯಾಬ್ರಿಕೇಶನ್ಗೆ ಸಿದ್ಧವಾಗಿರಲಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ ಐಐಟಿ ಮದ್ರಾಸ್ನ ಈ ರಿಸರ್ಚ್ ತಂಡವನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಶಕ್ತಿ ಚಿಪ್ ಎಂದು ಹೆಸರಿಸಲಾಗಿರುವ ಈ 7 ಎನ್ಎಂ ಪ್ರೋಸಸರ್ ಅನ್ನು ಐಐಟಿ ಸಂಶೋಧಕರು ಸಂಪೂರ್ಣ ಸ್ವಂತವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಇದು ಅತ್ಯಂತ ಮಹತ್ವದ ಸಂಗತಿ. ಇನ್ನ 2-3 ವರ್ಷದಲ್ಲಿ ಭಾರತವು 7 ಎನ್ಎಂ ಪ್ರೋಸಸರ್ ಅನ್ನು ತಯಾರಿಸುವ ಸಾಮರ್ಥ್ಯ ಹೊಂದಿರುತ್ತದೆ.
ಇದನ್ನೂ ಓದಿ: 800 ಕಿಮೀ ಶ್ರೇಣಿಯ ಬ್ರಹ್ಮೋಸ್ ಕ್ಷಿಪಣಿಗಳ ಪರೀಕ್ಷೆ; ಮುಂದಿನ ವರ್ಷವೇ ಸೇನೆಯ ಬಲ ಹೆಚ್ಚಿಸಲಿವೆ ಈ ಪ್ರಬಲ ಮಿಸೈಲ್ಗಳು
nm ಎಂದರೆ ನ್ಯಾನೋ ಮೀಟರ್. ಒಂದು ಮೀಟರ್ ಅನ್ನು 100 ಕೋಟಿ ಭಾಗಗಳಾಗಿ ಮಾಡಿದರೆ ಅದರಲ್ಲಿ ಒಂದು ಭಾಗವೇ ನ್ಯಾನೋಮೀಟರ್. ಟ್ರಾನ್ಸಿಸ್ಟರ್ ಟರ್ಮಿನಲ್ಗಳ ನಡುವಿನ ಅಂತರ ಇದು. 90 ಎನ್ಎಂ, 28 ಎನ್ಎಂ, 7 ಎನ್ಎಂ ಇತ್ಯಾದಿ ಚಿಪ್ಗಳಿವೆ. ಕಡಿಮೆ ಎನ್ಎಂ ಇದ್ದಲ್ಲಿ ಒಂದು ಚಿಪ್ನಲ್ಲಿ ಹೆಚ್ಚು ಟ್ರಾನ್ಸಿಸ್ಟರ್ಗಳನ್ನು ಸೇರಿಸಬಹುದು. ಇದರಿಂದ ಹೆಚ್ಚು ಬಲಿಷ್ಠ ಪ್ರೋಸಸರ್ಗಳು ಸಿದ್ಧಗೊಳ್ಳುತ್ತವೆ. 28 ಎನ್ಎಂ ಚಿಪ್ಗಿಂತ 7 ಎನ್ಎಂ ಚಿಪ್ಗಳು ಹೆಚ್ಚು ಪ್ರಬಲ ಕೆಲಸಗಳನ್ನು ಮಾಡಬಲ್ಲುವು.
ಭಾರತದಲ್ಲಿ ಈಗಾಗಲೇ 28 ಎನ್ಎಂ ಚಿಪ್ಗಳನ್ನು ತಯಾರಿಸಲಾಗುತ್ತಿದೆ. ಆದರೆ, 7 ಎನ್ಎಂ ಚಿಪ್ಗಳನ್ನು ತಯಾರಿಸಬಲ್ಲ ದೇಶಗಳ ಸಂಖ್ಯೆ ಬಹಳ ಕಡಿಮೆ. 7 ಎನ್ಎಂಗಿಂತ ಕಡಿಮೆಯ ಚಿಪ್ಸೆಟ್ಗಳನ್ನು ಈಗಾಗಲೇ ತಯಾರಿಸಲಾಗುತ್ತಿದೆ. 3 ಎನ್ಎಂ ಚಿಪ್ಗಳಿವೆ. 1 ಎನ್ಎಂ ಚಿಪ್ ತಯಾರಿಕೆಗೂ ಪ್ರಯತ್ನಿಸಲಾಗುತ್ತಿದೆ. ಆದರೆ, 7 ಎನ್ಎಂ ಚಿಪ್ ಅಭಿವೃದ್ಧಿಪಡಿಸುವುದೆಂದರೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಒಂದು ಹೊಸ ತಂತ್ರಜ್ಞಾನ ಮೈಲಿಗಲ್ಲು ಎಂದೇ ಪರಿಭಾವಿಸಲಾಗಿದೆ.
ಇದನ್ನೂ ಓದಿ: ಭಾರತದ ಬ್ರಹ್ಮೋಸ್ ಕ್ಷಿಪಣಿಗೆ ಹೆಚ್ಚಿದ ಬೇಡಿಕೆ; ರಹಸ್ಯವಾಗಿ 4,000 ಕೋಟಿ ರೂ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡ ಎರಡು ದೇಶಗಳು
ಇಲ್ಲಿಂದ ಮುಂದಿನ ಹಾದಿಯನ್ನು ಭಾರತ ಹೆಚ್ಚು ಸುಗಮವಾಗಿ ಸವೆಸಬಹುದು. ಅಂದರೆ, ಹೆಚ್ಚು ಸೂಕ್ಷ್ಮ ಚಿಪ್ಗಳನ್ನು ತಯಾರಿಸುವ ಸಾಮರ್ಥ್ಯ ಭಾರತಕ್ಕೆ ಸಿದ್ಧಿಸಲಿದೆ. ಅಂತೆಯೇ, ಭಾರತಕ್ಕೆ 7 ಎನ್ಎಂ ಚಿಪ್ ತಯಾರಿಕೆಯು ಬಹಳ ಮಹತ್ವದ್ದಾಗಿದೆ.
7 ಎನ್ಎಂ ಚಿಪ್ ತಯಾರಿಸುವ ಸಾಮರ್ಥ್ಯ ಪಡೆಯಲು ಬೇರೆ ದೇಶಗಳಿಗೆ ಹಲವು ದಶಕಗಳ ಪ್ರಯತ್ನವೇ ಬೇಕಾಯಿತು. ಭಾರತ ದಿಢೀರನೇ ಈ ಸಾಮರ್ಥ್ಯ ಪಡೆದಿಲ್ಲ ಎಂಬುದು ತಿಳಿದಿರಲಿ. 2018ರಲ್ಲೇ ಐಐಟಿ ಮದ್ರಾಸ್ನಲ್ಲಿ ಪ್ರೊ| ವಿ ಕಾಮಕೋಟಿ ಮಾರ್ಗದರ್ಶನದಲ್ಲಿ ಈ ಪ್ರೋಸಸರ್ ಅಭಿವೃದ್ಧಿಗೆ ಸಂಶೋಧನೆ ಮೊದಲಿಡಲಾಯಿತು.
ಇದನ್ನೂ ಓದಿ: ಶಕ್ತಿಶಾಲಿ ಏರ್ ಫೋರ್ಸ್; ಚೀನಾವನ್ನು ಹಿಂದಿಕ್ಕಿದ ಭಾರತ ವಿಶ್ವದ ನಂ. 3
ಆರ್ಐಎಸ್ಸಿ-ವಿ ಎನ್ನುವ ಓಪನ್ ಸೋರ್ಸ್ ಆರ್ಕಿಟೆಕ್ಚರ್ ಬಳಸಿ ಶಕ್ತಿ ಪ್ರೋಸಸರ್ ಅನ್ನು ರೂಪಿಸಲಾಗುತ್ತಿದೆ. ಆರ್ಮ್ ಹೋಲ್ಡಿಂಗ್ಸ್, ಇಂಟೆಲ್, ಎಎಂಡಿ ಇತ್ಯಾದಿ ಇತರ ಸಿದ್ಧ ಆರ್ಕಿಟೆಕ್ಚರ್ ಇವೆಯಾದರೂ ಅವುಗಳಿಗೆ ಪೇಟೆಂಟ್ ಇದೆ. ಹೀಗಾಗಿ, ಭಾರತವು ಸ್ವತಂತ್ರವಾಗಿ ಚಿಪ್ ತಯಾರಿಸಲು ಆಗುವುದಿಲ್ಲ. ಈ ಕಾರಣಕ್ಕೆ ಓಪನ್ ಸೋರ್ಸ್ ಆರ್ಕಿಟೆಕ್ಚರ್ ಬಳಸಿ ಚಿಪ್ ಅಭಿವೃದ್ಧಿಪಡಿಸಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ