ನವದೆಹಲಿ, ಜುಲೈ 25: ಆದಾಯ ತೆರಿಗೆ ರಿಟರ್ನ್ (IT Return Filing) ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ಅದಾದ ಬಳಿಕವೂ ಐಟಿ ರಿಟರ್ನ್ ಫೈಲ್ ಮಾಡಬಹುದಾದರೂ ದಂಡ ಪಾವತಿಸಬೇಕಾಗುತ್ತದೆ. ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವ ವಿಚಾರದಲ್ಲಿ ಕೆಲವಾರು ಬಾರಿ ಗಡುವು ವಿಸ್ತರಣೆ ಆದಂತೆ ಐಟಿ ರಿಟರ್ನ್ ಫೈಲ್ ವಿಚಾರದಲ್ಲೂ ಡೆಡ್ಲೈನ್ 15 ದಿನ ವಿಸ್ತರಣೆ ಆಗಬಹುದು ಎಂದು ಕೆಲವರು ನಿರೀಕ್ಷಿಸಿದ್ದಾರೆ. ಆದರೆ, ಸದ್ಯಕ್ಕೆ ತಿಳಿದುಬಂದಿರುವ ಮಾಹಿತಿ ಪ್ರಕಾರ ಐಟಿಆರ್ ಫೈಲಿಂಗ್ ಮಾಡುವ ಗಡುವನ್ನು ವಿಸ್ತರಿಸುವುದು ಅನುಮಾನ. ಕಳೆದ ವರ್ಷ ಐಟಿಆರ್ ಸಲ್ಲಿಕೆಗೆ ನಿಗದಿಯಾಗಿದ್ದ ಡೆಡ್ಲೈನ್ ವಿಸ್ತರಣೆ ಮಾಡಲಾಗಿರಲಿಲ್ಲ. ಈ ಬಾರಿಯೂ ಗಡುವು ಹೆಚ್ಚಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಇತ್ತೀಚೆಗೆ ಕೇಂದ್ರ ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಆದಾಯ ತೆರಿಗೆ ಪಾವತಿದಾರರು ಆದಷ್ಟೂ ಶೀಘ್ರದಲ್ಲಿ ರಿಟರ್ನ್ ಫೈಲ್ ಮಾಡಬೇಕೆಂದು ಹೇಳಿದ್ದರು. ಅವರ ಮಾತಿನಲ್ಲಿ, ಐಟಿಆರ್ ಡೆಡ್ಲೈನ್ ವಿಸ್ತರಣೆಯಾಗುವ ಯಾವ ಸುಳಿವೂ ಇಲ್ಲ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಐಟಿ ರಿಟರ್ನ್ ಸಲ್ಲಿಸಿರುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. ಇಲ್ಲಿಯವರೆಗೆ 7.40 ಕೋಟಿ ಐಟಿಆರ್ಗಳು ಸಲ್ಲಿಕೆಯಾಗಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 24ರಂದು ಮಾಹಿತಿ ನೀಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಐಟಿಆರ್ ಸಲ್ಲಿಕೆ ಪ್ರಮಾಣದಲ್ಲಿ ಶೇ. 6.18ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: IT Return: ಒಂದಿಷ್ಟು ತೆರಿಗೆ ಉಳಿಸಲು ಆದಾಯ ಕಡಿಮೆ ತೋರಿಸದಿರಿ; ಜೈಲಿಗೆ ಹೋಗಬೇಕಾದೀತು ಜೋಕೆ..!
ಈ ವರ್ಷ ಸಲ್ಲಿಕೆಯಾಗಿರುವ 7.40 ಐಟಿಆರ್ ಪೈಕಿ 5.16 ಕೋಟಿ ಮಂದಿ ಶೂನ್ಯ ತೆರಿಗೆ ಬಾಧ್ಯತೆಯನ್ನು ಘೋಷಿಸಿದ್ದಾರೆ ಎಂದು ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ITR: ಬ್ಯಾಂಕ್ ಅಕೌಂಟ್ ತಪ್ಪಾಗಿ ಹಾಕಿ ಐಟಿಆರ್ ಸಲ್ಲಿಸಿಬಿಟ್ರಾ? ಇಲ್ಲಿದೆ ಸರಿಪಡಿಸುವ ಉಪಾಯ
ಸರ್ಕಾರ ಐಟಿ ರಿಟರ್ನ್ ಸಲ್ಲಿಕೆಯ ಪ್ರಕ್ರಿಯೆಯನ್ನು ಸರಳಗೊಳಿಸುತ್ತಾ ಬರುತ್ತಿದೆ. ಈಗ ಐಟಿಆರ್ ಫಾರ್ಮ್ಗಳಲ್ಲಿ ಬಹಳಷ್ಟು ಮಾಹಿತಿಯನ್ನು ಮುಂಚಿತವಾಗಿಯೇ ಭರ್ತಿ ಮಾಡಲಾಗಿರುತ್ತದೆ. ಹೀಗಾಗಿ, ತೆರಿಗೆ ಪಾವತಿದಾರರಿಗೆ ಐಟಿಆರ್ ಸಲ್ಲಿಸುವ ಸಮಯ ಹೆಚ್ಚು ಹಿಡಿಯುವುದಿಲ್ಲ. ಇಮೇಲ್ ಮತ್ತು ಎಸ್ಸೆಮ್ಮೆಸ್ ಮೂಲಕ ತೆರಿಗೆ ಪಾವತಿದಾರರಿಗೆ ಐಟಿಆರ್ ಸಲ್ಲಿಸಲು ಸರ್ಕಾರ ಅಲರ್ಟ್ ಮೆಸೇಜ್ಗಳನ್ನು ಸಲ್ಲಿಸುತ್ತದೆ. ಈ ಮೂಲಕ ಈ ವರ್ಷ ಐಟಿಆರ್ ಸಲ್ಲಿಕೆ ಪ್ರಮಾಣ ಹೆಚ್ಚಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ