ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೂರ್ವ ದೇಶಗಳೊಂದಿಗೆ ತನ್ನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಿದೆ. ಲುಕ್ ಈಸ್ಟ್ ನೀತಿ ಮೂಲಕ ಫಿಲಿಪೈನ್ಸ್, ಇಂಡೋನೇಷ್ಯಾ ಅಥವಾ ವಿಯೆಟ್ನಾಂ ಆಗಿರಲಿ, ಆಸಿಯಾನ್ ಮತ್ತು ಪೂರ್ವ ದೇಶಗಳೊಂದಿಗೆ ಭಾರತ ಸಂಬಂಧ ಗಟ್ಟಿಗೊಳಿಸಿದೆ. ಇದೇ ಹಾದಿಯಲ್ಲಿ ಪ್ರಧಾನಿ ಮೋದಿ ಇಂದು ಬ್ರೂನೇ ತಲುಪಿದ್ದಾರೆ. ಭಾರತದ ಪ್ರಧಾನಿಯೊಬ್ಬರು ಈ ಪುಟ್ಟ ದ್ವೀಪ ದೇಶಕ್ಕೆ ಭೇಟಿ ಮಾಡಿರುವುದು ಇದೇ ಮೊದಲು ಎಂಬುದು ಗಮನಾರ್ಹ. ಇದಕ್ಕಿಂತ ಮುಖ್ಯವಾದುದು ಭಾರತಕ್ಕೆ ಈ ಪುಟ್ಟ ದೇಶದೊಂದಿಗಿನ ಸಂಬಂಧ. ಭಾರತದ ಇಂಧನ ಭದ್ರತೆಗೆ ಬ್ರೂನೇ ಬಹಳ ಮುಖ್ಯ ಎನಿಸುತ್ತದೆ.
ಬ್ರೂನೆ ರಾಜಧಾನಿ ಬಂದರ್ ಸಿರಿ ಬಗವಾನ್ ತಲುಪಿದ ನಂತರ, ಪ್ರಧಾನಿ ಮೋದಿ ಬ್ರೂನೀ ಸುಲ್ತಾನರಾದ ಹಸನಲ್ ಬೊಲ್ಕಿಯಾ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಹಲವು ವ್ಯಾಪಾರ ಒಪ್ಪಂದಗಳಿಗೆ ಸಹಿ ಬೀಳಲಿವೆ. ಕಾರ್ಯತಂತ್ರಾತ್ಮಕವಾಗಿ ಮುಖ್ಯವಾಗಿರುವ ಸಹಕಾರ ಒಪ್ಪಂದಗಳಾಗಬಹುದು.
ಭಾರತ ಮತ್ತು ಬ್ರೂನೇ ನಡುವಿನ ವ್ಯಾಪಾರ ವಹಿವಾಟಿನಲ್ಲಿ ಬ್ರೂನೇ ತೂಕ ಹೆಚ್ಚು. ಇದಕ್ಕೆ ಕಾರಣ ಬ್ರೂನೇಯಿಂದ ಭಾರತದ ಆಮದುಗಳು ಅದರ ರಫ್ತಿಗಿಂತ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ, ಭಾರತ ಮತ್ತು ಬ್ರೂನೇ ನಡುವೆ ವ್ಯಾಪಾರ ಸಮತೋಲನ ಸ್ಥಾಪಿಸುವುದು ಪ್ರಧಾನಿ ನರೇಂದ್ರ ಮೋದಿಯವರ ಆದ್ಯತೆಯಾಗಿದೆ.
ಬ್ರೂನೆಯಿಂದ ಭಾರತ ಕಚ್ಚಾ ತೈಲ ಮತ್ತು ಎಲ್ಎನ್ಜಿ ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಈ ಆಮದು ಪ್ರಮಾಣ ಕ್ರಮೇಣವಾಗಿ ಇಳಿಕೆ ಆಗುತ್ತಾ ಬಂದಿದೆ. ಉದಾಹರಣೆಗೆ, 2021 ರಲ್ಲಿ, ಬ್ರೂನಿ ಭಾರತಕ್ಕೆ $ 474 ಮಿಲಿಯನ್ ರಫ್ತು ಮಾಡಿದ್ದರೆ, ಭಾರತದಿಂದ ಆದ ರಫ್ತು ಕೇವಲ $ 48 ಮಿಲಿಯನ್ ಆಗಿತ್ತು. ಎರಡೂ ದೇಶಗಳ ನಡುವಿನ ಒಟ್ಟು ವ್ಯಾಪಾರ 522 ಮಿಲಿಯನ್ ಡಾಲರ್ ಆಗಿತ್ತು.
ಮರುವರ್ಷವಾದ 2022 ರಲ್ಲಿ, ಬ್ರೂನಿಯ ರಫ್ತು $ 314 ಮಿಲಿಯನ್‌ಗೆ ಕಡಿಮೆಯಾಗಿದೆ, ಆದರೆ ಭಾರತದಿಂದ ಅದರ ಆಮದು $ 68 ಮಿಲಿಯನ್‌ಗೆ ಏರಿತು. ಅದೇ ರೀತಿ, 2023 ರಲ್ಲಿ, ಬ್ರೂನೇಗೆ ಭಾರತದ ರಫ್ತು $ 67 ಮಿಲಿಯನ್ ಆಗಿದ್ದರೆ, ಬ್ರೂನಿಯಿಂದ ಆಮದು $ 128 ಮಿಲಿಯನ್‌ಗೆ ಇಳಿದಿದೆ.
ರಷ್ಯಾದಿಂದ ಕಚ್ಚಾ ತೈಲ ಆಮದನ್ನು ಭಾರತ ಹೆಚ್ಚಿಸಿದ್ದರಿಂದ ಬ್ರೂನೇಯಿಂದ ಅದರ ಆಮದು ಸಹಜವಾಗಿ ಕಡಿಮೆ ಆಗಿದೆ. ಇನ್ನು, ಬ್ರೂನೇಗೆ ಭಾರತ ಮಾಡುವ ರಫ್ತಿನಲ್ಲಿ ಮುಖ್ಯವಾದುದು ವಾಹನಗಳು, ಸಾರಿಗೆ ಉಪಕರಣಗಳು, ಅಕ್ಕಿ ಮತ್ತು ಮಸಾಲೆಗಳು.
ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಸಮಯದಲ್ಲಿ, ಭಾರತ ಮತ್ತು ಬ್ರೂನೆ ದೇಶಗಳು ತಮ್ಮ ಮಿಲಿಟರಿ, ರಕ್ಷಣೆ, ಬಾಹ್ಯಾಕಾಶ ಮತ್ತು ಇತರ ತಾಂತ್ರಿಕ ಸಹಕಾರವನ್ನು ಹೆಚ್ಚಿಸುವತ್ತ ಗಮನಹರಿಸಬಹುದು. ಉಭಯ ದೇಶಗಳ ನಡುವೆ ಉಪಗ್ರಹ ಟ್ರ್ಯಾಕಿಂಗ್ ಕುರಿತು 2018 ರಲ್ಲಿ ಆದ ಸಹಕಾರ ಒಪ್ಪಂದವನ್ನು ಮುಂದಕ್ಕೆ ಕೊಂಡೊಯ್ಯಲು ಪರಿಗಣಿಸಬಹುದು. ಈ ನಿಟ್ಟಿನಲ್ಲಿ ಬಾಹ್ಯಾಕಾಶ ಸಹಕಾರದ ಕುರಿತು ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಬಹುದು.
ಬ್ರೂನೆಯು ಭಾರತಕ್ಕೆ ತನ್ನ LNG ಸರಬರಾಜು ಹೆಚ್ಚಿಸಲು ಯೋಜಿಸುತ್ತಿದೆ. ಹಾಗೆಯೇ, ಭಾರತ ಮತ್ತು ಬ್ರೂನಿ ರಕ್ಷಣಾ ಸಹಕಾರದ ಆರಂಭಿಕ ಹಂತಗಳ ಬಗ್ಗೆ ಚರ್ಚಿಸಲು ಪ್ರಾರಂಭಿಸುತ್ತಿವೆ. ಜಂಟಿ ಕಾರ್ಯನಿರತ ಗುಂಪಿನ (Joint working group) ರಚನೆ ಆಗಬಹುದು. ಭಾರತ ತನ್ನ ಬಾಹ್ಯಾಕಾಶ ಕಾರ್ಯಾಚರಣೆಗಳು ಮತ್ತು ಉಪಗ್ರಹ ಕಾರ್ಯಾಚರಣೆಗಳಿಗೆ ಸಹಾಯ ಮಾಡಲು ಕಮ್ಯಾಂಡ್ ಸ್ಟೇಷನ್ ನಿರ್ಮಿಸಬೇಕಾಗಿದೆ. ಇದನ್ನು ಬ್ರೂನಿಯಲ್ಲಿ ಸ್ಥಾಪಿಸಲು ಅನುಮತಿಸಲಾಗಿದೆ. ಪ್ರತಿಯಾಗಿ, ಭಾರತವು ಬ್ರೂನೆಗೆ ಬಾಹ್ಯಾಕಾಶ ಸಂಶೋಧನೆ ಮತ್ತು ವಿಜ್ಞಾನಿಗಳ ತರಬೇತಿಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಕಂಪನಿ ಮಾರಿ ನೌಕರರನ್ನು ಶ್ರೀಮಂತರನ್ನಾಗಿಸಿದ ಮಾಲೀಕ; ಭಾರತ ಮೂಲದ ಅಮೆರಿಕನ್ ಉದ್ಯಮಿ ಜೈ ಚೌಧರಿಯ ಕಥೆ ಇದು
ಇತ್ತೀಚೆಗೆ, ಕೆಲವು ಬ್ರೂನಿಯನ್ ಉದ್ಯಮಿಗಳು ಭಾರತದಲ್ಲಿ ಆರೋಗ್ಯ ಮತ್ತು ಐಟಿ ಸೇವಾ ವಲಯಗಳಲ್ಲಿ ವ್ಯಾಪಾರ ಮೇಳಗಳಲ್ಲಿ ಭಾಗವಹಿಸಿದ್ದಾರೆ. ಬ್ರೂನಿ ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು 4 ನೇ ಆಸಿಯಾನ್-ಇಂಡಿಯಾ ಎಕ್ಸ್‌ಪೋ ಮತ್ತು ಶೃಂಗಸಭೆಯಲ್ಲಿ ಭಾಗವಹಿಸಲು 2019ರ ಫೆಬ್ರವರಿಯಲ್ಲಿ ದಿಲ್ಲಿಗೆ ಭೇಟಿ ನೀಡಿದ್ದರು. ಇನ್ನೊಂದೆಡೆ, ಬ್ರೂನಿ ವ್ಯಾಪಾರ ಮೇಳಗಳಲ್ಲಿ ಭಾರತೀಯ ಭಾಗವಹಿಸುವಿಕೆ ವಿರಳವಾಗಿದೆ. ಜವಳಿ ಮತ್ತು ಕರಕುಶಲ ವಲಯದ ಭಾರತೀಯ ವ್ಯಾಪಾರಿಗಳು ಡಿಸೆಂಬರ್ 2019 ರಲ್ಲಿ ಬ್ರೂನಿ ಇಂಟರ್ನ್ಯಾಷನಲ್ ಟ್ರೇಡ್ ಎಕ್ಸ್ಪೋದಲ್ಲಿ ಭಾಗವಹಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಬ್ರೂನೆ ಭೇಟಿ ಬಳಿಕ ಸಿಂಗಾಪುರಕ್ಕೂ ತೆರಳಲಿದ್ದಾರೆ. ಸಿಂಗಾಪುರ ಭಾರತದ ಆರನೇ ಅತಿ ದೊಡ್ಡ ವ್ಯಾಪಾರ ಪಾಲುದಾರ. ಆಸಿಯಾನ್ ದೇಶಗಳಲ್ಲಿ ಭಾರತಕ್ಕೆ ಇದು ಅತ್ಯಂತ ಮಹತ್ವದ್ದಾಗಿದೆ. ಸಿಂಗಾಪುರವು ಭಾರತದಲ್ಲಿ ವಿದೇಶಿ ನೇರ ಹೂಡಿಕೆಯ ಅತಿದೊಡ್ಡ ಮೂಲವಾಗಿದೆ. 2000 ರಿಂದ, $160 ಶತಕೋಟಿ ಮೌಲ್ಯದ ಎಫ್‌ಡಿಐ ಸಿಂಗಾಪುರದಿಂದ ಬಂದಿದೆ ಮತ್ತು 2023 ರಲ್ಲಿ ಮಾತ್ರ, $11.77 ಬಿಲಿಯನ್ ಮೌಲ್ಯದ ಎಫ್‌ಡಿಐ ಸಿಂಗಾಪುರದಿಂದ ಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ