ಎರಡೂ ಕೈ ಇಲ್ಲ, ಈಕೆ ಛಲ ಬಿಡಲ್ಲ; ಬಿಲ್ಲುಗಾರ್ತಿ ಶೀತಲ್ ದೇವಿ ಮುಂದೆ ನಮ್ಮ ನೋವು ಏನೂ ಅಲ್ಲ; ಉದ್ಯಮಿ ಆನಂದ್ ಮಹೀಂದ್ರ ಗಿಫ್ಟ್ ಮಾತು

Anand Mahindra ready to give any customised Mahindra car to Sheetal Devi: ಪ್ಯಾರಾಲಿಂಕ್ಸ್​ನಲ್ಲಿ ಅತ್ಯಂತ ಕಿರಿಯ ವಯಸ್ಸಿನ ಭಾರತೀಯ ಪ್ಯಾರಾ ಅಥ್ಲೀಟ್ ಆದ ಶೀತಲ್ ದೇವಿ ಎರಡೂ ಕೈಗಳಿಲ್ಲದೇ ಆರ್ಚರಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಪದಕ ಗೆಲ್ಲದಿದ್ದರೂ ಈಕೆಯ ಛಲಕ್ಕೆ ಎಲ್ಲರೂ ಮಾರು ಹೋಗಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರ ವರ್ಷದ ಹಿಂದೆ ಶೀತಲ್ ದೇವಿಗೆ ಕೊಟ್ಟಿದ್ದ ಭರವಸೆಯನ್ನು ಈಡೇರಿಸಲು ಸಿದ್ಧವಾಗಿದ್ದಾರೆ.

ಎರಡೂ ಕೈ ಇಲ್ಲ, ಈಕೆ ಛಲ ಬಿಡಲ್ಲ; ಬಿಲ್ಲುಗಾರ್ತಿ ಶೀತಲ್ ದೇವಿ ಮುಂದೆ ನಮ್ಮ ನೋವು ಏನೂ ಅಲ್ಲ; ಉದ್ಯಮಿ ಆನಂದ್ ಮಹೀಂದ್ರ ಗಿಫ್ಟ್ ಮಾತು
ಶೀತಲ್ ದೇವಿ
Follow us
|

Updated on: Sep 03, 2024 | 4:02 PM

ನವದೆಹಲಿ, ಸೆಪ್ಟೆಂಬರ್ 3: ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದವರ ಸಾಧನೆ ಸಮ್ಮರ್ ಒಲಿಂಪಿಕ್ಸ್​ನಲ್ಲಿ ಜಯಿಸಿದವರಿಗಿಂತ ಕಡಿಮೆ ಅಲ್ಲ. ಆದರೂ ಹೆಚ್ಚಿನ ಜನರು ಈ ವಿಶೇಷ ಚೇತನರ ಸಾಧನೆಗಳನ್ನು ಗಮನಿಸುವ ಗೋಜಿಗೆ ಹೋಗುವುದಿಲ್ಲ. ಇಲ್ಲಿ ಸ್ಪರ್ಧಿಸುವ ಪ್ರತಿಯೊಬ್ಬ ವ್ಯಕ್ತಿಯ ಕಥೆಯೂ ಸ್ಫೂರ್ತಿ ತರುವಂಥದ್ದು. ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಒಂದು ಹುಡುಗಿ ಇಡೀ ಜಗತ್ತಿನ ಗಮನ ಸೆಳೆದಿದ್ದಾಳೆ. ಈಕೆ ಪದಕ ಗೆಲ್ಲಲಿಲ್ಲ, ಆದರೆ ಮನ ಗೆದ್ದಿದ್ದಾಳೆ. ಈಕೆ 17 ವರ್ಷದ ಶೀತಲ್ ದೇವಿ. ಬಿಲ್ಲುಬಾಣ ಸ್ಪರ್ಧೆಗಳಲ್ಲಿ ಪಾಲ್ಗೊಂಡಾಕೆ. ಎರಡೂ ಕೈ ಇಲ್ಲ. ಕಾಲ, ಭುಜದ ಸಹಾಯದಿಂದಲೇ ಬಿಲ್ಲಿನಿಂದ ಬಾಣ ಹೊಡೆಯುವ ಪ್ರತಿಭೆ. ಪ್ರೀಕ್ವಾರ್ಟರ್​ಫೈನಲ್​ನಲ್ಲಿ ಸೋತರೂ ಈಕೆಯ ಆಟಕ್ಕೆ ಎಲ್ಲರೂ ದಂಗಾಗಿದ್ದಾರೆ.

ಉದ್ಯಮಿ ಆನಂದ್ ಮಹೀಂದ್ರ ಶೀತಲ್ ದೇವಿಯನ್ನು ಕೊಂಡಾಡಿದ್ದಾರೆ. ವರ್ಷದ ಹಿಂದೆ ತಾನು ಈಕೆಗೆ ಕೊಟ್ಟ ಮಾತನ್ನು ತಾನೇ ಸ್ಮರಿಸಿ ಅದನ್ನು ನೆರವೇರಿಸಲು ಸಿದ್ಧವಾಗಿದ್ದಾರೆ. ಇವರ ಮಾತುಗಳು ಎಂಥ ಕಲ್ಲು ಹೃದಯಿಗಳನ್ನು ಕರಗಿಸಬಲ್ಲುದು. ಶೀತಲ್ ದೇವಿ ಬಗ್ಗೆ ಯಾರಿಗಾದರೂ ಅಭಿಮಾನ ಉಕ್ಕಿ ಬರಬಹುದು.

‘ಅಸಾಧಾರಣ ಧೈರ್ಯ, ಬದ್ಧತೆ, ಛಲ ಇವ್ಯಾವುವೂ ಕೂಡ ಪದಕಗಳಿಗೆ ಸಂಬಂಧಿಸಿದ್ದಲ್ಲ… ಶೀತಲ್ ದೇವಿ ನೀವು ಈ ದೇಶಕ್ಕೆ ಮತ್ತು ಇಡೀ ವಿಶ್ವಕ್ಕೆ ಪ್ರೇರಣೆಯಾಗಿದ್ದೀರಿ… ನಮ್ಮ ಶ್ರೇಣಿಯ ಯಾವುದೇ ಕಾರನ್ನಾದರೂ ಆಯ್ಕೆ ಮಾಡಿಕೊಳ್ಳಿ. ಆ ಕಾರನ್ನು ನಿಮಗೆ ಚಲಾಯಿಸಲು ಸಾಧ್ಯವಾಗುವಂತೆ ಬದಲಾಯಿಸಿಕೊಡುತ್ತೇವೆ ಎಂದು ವರ್ಷದ ಹಿಂದೆ ನಾನು ಕೇಳಿದ್ದೆ…

‘ಆಗ ನೀವು 18 ವರ್ಷ ವಯಸ್ಸಾದ ಬಳಿಕ ಈ ಆಫರ್ ತೆಗೆದುಕೊಳ್ಳುವುದಾಗಿ ಹೇಳಿದಿರಿ. ಮುಂದಿನ ವರ್ಷವೇ ಆ ಸಂದರ್ಭವಾಗಿರುತ್ತದೆ. ನಿಮಗೆ ನೀಡಿದ ಭರವಸೆಯನ್ನು ಈಡೇರಿಸಲು ಎದುರು ನೋಡುತ್ತಿದ್ದೇನೆ,’ ಎಂದು ಮಹೀಂದ್ರ ಗ್ರೂಪ್ ಛೇರ್ಮನ್ ಆದ ಆನಂದ್ ಮಹೀಂದ್ರ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕಂಪನಿ ಮಾರಿ ನೌಕರರನ್ನು ಶ್ರೀಮಂತರನ್ನಾಗಿಸಿದ ಮಾಲೀಕ; ಭಾರತ ಮೂಲದ ಅಮೆರಿಕನ್ ಉದ್ಯಮಿ ಜೈ ಚೌಧರಿಯ ಕಥೆ ಇದು

ಶೀತಲ್ ದೇವಿ ನಮಗೆಲ್ಲಾ ಗುರು ಎಂದಿದ್ದ ಆನಂದ್ ಮಹೀಂದ್ರ

2023ರ ಅಕ್ಟೋಬರ್ 28ರಂದು ಆನಂದ್ ಮಹೀಂದ್ರ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಶೀತಲ್ ದೇವಿ ಬಗ್ಗೆ ಬರೆಯುತ್ತಾ, ಯಾವುದೇ ಕಾರನ್ನಾದರೂ ಗಿಫ್ಟ್ ಆಗಿ ಕೊಡುವುದಾಗಿ ಹೇಳಿದ್ದರು.

‘ನನ್ನ ಜೀವನದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳ ಬಗ್ಗೆ ಯಾವತ್ತೂ ಅಲವತ್ತುಕೊಳ್ಳೋದಿಲ್ಲ. ಶೀತಲ್ ದೇವಿ ನೀವು ನಮಗೆಲ್ಲಾ ಗುರು ಆಗಿದ್ದೀರಿ..’ ಎಂದೂ ಆನಂದ್ ಮಹೀಂದ್ರ ತಮ್ಮ ಪೋಸ್ಟ್​ನಲ್ಲಿ ತಿಳಿಸಿದ್ದರು.

ಆನಂದ್ ಮಹೀಂದ್ರ ಅವರ ಕಂಪನಿಯಲ್ಲಿ ಕೆಲ ಜನಪ್ರಿಯ ಮಾಡಲ್ ಕಾರುಗಳಿವೆ. ಎಕ್ಸ್​ಯುವಿ, ಸ್ಕಾರ್ಪಿಯೋ, ಬೊಲೇರೋ, ಥಾರ್, ಮರಾಜೋ ಮೊದಲಾದ ಜನಪ್ರಿಯ ಕಾರುಗಳಿವೆ. ಇವುಗಳ ಬೆಲೆ 60 ಲಕ್ಷ ರೂವರೆಗೂ ಇದೆ. ಶೀತಲ್ ದೇವಿ ಯಾವ ಕಾರು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವ ಕುತೂಹಲವಂತೂ ಇದೆ.

ಶೀತಲ್ ದೇವಿ ಅಸಾಧಾರಣ ಪ್ರತಿಭೆ ಮತ್ತು ಛಲವಂತೆ

ಶೀತಲ್ ದೇವಿ ಪ್ಯಾರಾಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ ಅತ್ಯಂತ ಕಿರಿಯ ವಯಸ್ಸಿನ ಭಾರತೀಯ ಅಥ್ಲೀಟ್ ಎನಿಸಿದ್ದಾರೆ. ಎರಡೂ ಕೈ ಇಲ್ಲದ ವಿಶ್ವದ ಮೊದಲ ಮತ್ತು ಏಕೈಕ ಮಹಿಳಾ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ಎನಿಸಿದ್ದಾರೆ. ಎರಡೂ ಕೈಗಳಿಲ್ಲದ ವಿಶ್ವದ ಏಕೈಕ ಸಕ್ರಿಯ ಬಿಲ್ಲುಗಾರಿಕೆ ಸ್ಪರ್ಧಿ ಅವರಾಗಿದ್ದಾರೆ.

ಇದನ್ನೂ ಓದಿ: Paralympics 2024: ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸುಮಿತ್ ಆಂಟಿಲ್

ಪ್ಯಾರಾಲಿಂಪಿಕ್ಸ್​ನಲ್ಲಿ ಯಾವುದಾದರೂ ಅಂಗ ಊನ ಆಗಿದ್ದವರು ಸ್ಪರ್ಧಿಸಬಹುದು. ಆರ್ಚರಿಯಲ್ಲಿ ಇರುವ ಬಹುತೇಕ ಎಲ್ಲಾ ಸ್ಪರ್ಧಾಳುಗಳು ಕಾಲುಗಳಿಲ್ಲದಿರುವವರೋ ಅಥವಾ ಒಂದು ಕೈ ಇಲ್ಲದಿರುವವರೋ ಆಗಿದ್ದಾರೆ. ಶೀತಲ್ ದೇವಿ ಮಾತ್ರವೇ ಎರಡೂ ಕೈಗಳಿಲ್ಲದ ಸ್ಪರ್ಧಿ. ತನ್ನ ಕಾಲ್ಬೆರಳನ್ನು ಬಳಸಿ ಬಿಲ್ಲು ಎತ್ತುತ್ತಾರೆ. ಹೆಗಲನ್ನು ಬಳಸಿ ಬಾಣ ಹೂಡಿ ಬಿಡುತ್ತಾರೆ. ಈ ಪ್ಯಾರಾಲಿಂಪಿಕ್ಸ್​ನಲ್ಲಿ ಆಕೆ ನಿಖರವಾಗಿ ಸೆಂಟರ್ ಪಾಯಿಂಟ್​ಗೆ ಬಿಲ್ಲು ಹೊಡೆದು ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿದ್ದರು. ಪ್ರಿಕ್ವಾರ್ಟರ್​ಫೈನಲ್​ನಲ್ಲಿ ಒಂದೇ ಒಂದು ಕೆಟ್ಟ ಬಾಣದಿಂದ ಈಕೆ ಚಿಲಿಯ ಮಾರಿಯಾನ ಝುನಿಗಾಗೆ ಸೋತಿದ್ದರು. ಅದೂ ಸೋಲಿನ ಅಂತರ 137:138 ಅಂಕ ಮಾತ್ರವೇ. ಏಳು ಬದಲು ಒಂಬತ್ತಕ್ಕೆ ಹೊಡೆದಿದ್ದರೆ ಶೀತಲ್ ದೇವಿ ಪದಕ ಗೆಲ್ಲುವ ಅವಕಾಶ ಇರುತ್ತಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ