ಮೇಡ್ ಇನ್ ಇಂಡಿಯಾ ಸ್ಮಾರ್ಟ್​ಫೋನ್; 2024-25ರಲ್ಲಿ 1.70 ಲಕ್ಷ ಕೋಟಿ ರೂ ರಫ್ತು ಗುರಿ

|

Updated on: Jan 15, 2025 | 9:32 AM

Smartphone exports from India: 2024-25ರ ಹಣಕಾಸು ವರ್ಷದಲ್ಲಿ ಭಾರತದಿಂದ 20 ಬಿಲಿಯನ್ ಡಾಲರ್ ಮೌಲ್ಯದ ಸ್ಮಾರ್ಟ್​ಫೋನ್​ಗಳ ರಫ್ತಾಗಬಹುದು ಎಂದು ಸರ್ಕಾರ ನಿರೀಕ್ಷಿಸಿದೆ. ಆ್ಯಪಲ್ ಐಫೋನ್​ಗಳ ತಯಾರಿಕೆ ಮತ್ತು ರಫ್ತು ಹೆಚ್ಚಾಗಿರುವುದರಿಂದ ಒಟ್ಟಾರೆ ಸ್ಮಾರ್ಟ್​ಫೋನ್ ರಫ್ತು ಈ ವರ್ಷ ಅಧಿಕಗೊಳ್ಳಬಹುದು. 2023-24ರಲ್ಲಿ 15 ಬಿಲಿಯನ್ ಡಾಲರ್ ಮೌಲ್ಯದ ಸ್ಮಾರ್ಟ್​ಫೋನ್​ಗಳ ರಫ್ತಾಗಿತ್ತು. ಇದರಲ್ಲಿ ಆ್ಯಪಲ್ ಪಾಲು 10 ಬಿಲಿಯನ್ ಡಾಲರ್ ಇತ್ತು.

ಮೇಡ್ ಇನ್ ಇಂಡಿಯಾ ಸ್ಮಾರ್ಟ್​ಫೋನ್; 2024-25ರಲ್ಲಿ 1.70 ಲಕ್ಷ ಕೋಟಿ ರೂ ರಫ್ತು ಗುರಿ
ಸ್ಮಾರ್ಟ್​ಫೋನ್ ರಫ್ತು
Follow us on

ನವದೆಹಲಿ, ಜನವರಿ 15: ಪ್ರಸಕ್ತ ಹಣಕಾಸು ವರ್ಷದಲ್ಲಿ 20 ಬಿಲಿಯನ್ ಡಾಲರ್ ಪ್ರಮಾಣದಷ್ಟು ಸ್ಮಾರ್ಟ್​ಫೋನ್ ರಫ್ತು ಮಾಡುವ ನಿರೀಕ್ಷೆಯಲ್ಲಿ ಸರ್ಕಾರ ಇದೆ. 2023-24ರ ಹಣಕಾಸು ವರ್ಷದಲ್ಲಿ ಭಾರತದಿಂದ 15 ಬಿಲಿಯನ್ ಡಾಲರ್​ನಷ್ಟು ಸ್ಮಾರ್ಟ್​ಫೋನ್​ಗಳು ಜಾಗತಿಕ ಮಾರುಕಟ್ಟೆಗೆ ಪೂರೈಕೆಯಾಗಿದ್ದವು. ಈಗ 2024-25ರ ವರ್ಷದಲ್ಲಿ ಶೇ. 30ರಷ್ಟು ಹೆಚ್ಚು ಸ್ಮಾರ್ಟ್​ಫೋನ್​ಗಳ ರಫ್ತಿಗೆ ಗುರಿ ಇಡಲಾಗಿದೆ. ಹಿಂದಿನ ವರ್ಷದಲ್ಲಿ ಆದ 15 ಬಿಲಿಯನ್ ಡಾಲರ್ ಸ್ಮಾರ್ಟ್​ಫೋನ್ ರಫ್ತಿನಲ್ಲಿ ಆ್ಯಪಲ್​ನ ಪಾಲು 10 ಬಿಲಿಯನ್ ಡಾಲರ್ ಇತ್ತು. ಈ ವರ್ಷವೂ ಆ್ಯಪಲ್ ಐಫೋನ್​ಗಳ ರಫ್ತು ಗಣನೀಯವಾಗಿ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಸ್ಮಾರ್ಟ್​ಫೋನ್ ರಫ್ತು ಹೊಸ ಮೈಲಿಗಲ್ಲು ಮುಟ್ಟುವ ನಿರೀಕ್ಷೆ ಇದೆ.

ಔದ್ಯಮಿಕ ದತ್ತಾಂಶದ ಪ್ರಕಾರ ಏಪ್ರಿಲ್​ನಿಂದ ನವೆಂಬರ್ ತಿಂಗಳವರೆಗೆ ಮೇಡ್ ಇನ್ ಇಂಡಿಯಾ ಸ್ಮಾರ್ಟ್​ಫೋನ್​ಗಳ ರಫ್ತು ಪ್ರಮಾಣ 12 ಬಿಲಿಯನ್ ಡಾಲರ್ ಗಡಿ ದಾಟಿದೆ. ಡಿಸೆಂಬರ್​ನದ್ದು ಸೇರಿ ಇನ್ನೂ ನಾಲ್ಕು ತಿಂಗಳಲ್ಲಿ ಮತ್ತಷ್ಟು ಎಂಟು ಬಿಲಿಯನ್ ಡಾಲರ್ ಮೌಲ್ಯದ ಸ್ಮಾರ್ಟ್​ಫೋನ್​ಗಳ ರಫ್ತಾಗಬಹುದು ಎಂಬುದು ಸರ್ಕಾರದ ಎಣಿಕೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್​ನಲ್ಲಿ ಸರ್ಕಲ್ ರೇಟ್ ಎಂದರೇನು? ಮಾರ್ಕೆಟ್ ರೇಟ್​ಗೂ ಅದಕ್ಕೂ ಏನು ವ್ಯತ್ಯಾಸ? ಇಲ್ಲಿದೆ ವಿವರ

ಜಾಗತಿಕ ಸ್ಮಾರ್ಟ್​ಫೋನ್ ಮಾರುಕಟ್ಟೆ 2022 ಮತ್ತು 2023ರಲ್ಲಿ ಕಳೆಗುಂದಿತ್ತು. 2024ರಲ್ಲಿ ಮಾರುಕಟ್ಟೆ ಗರಿಗೆದರಿದೆ. ಒಟ್ಟಾರೆ ಜಾಗತಿಕ ಆರ್ಥಿಕತೆಯ ಬೆಳವಣಿಗೆ ಉತ್ತಮವಾಗಿರುವುದರಿಂದ ಸ್ಮಾರ್ಟ್​ಫೋನ್ ಮಾರುಕಟ್ಟೆ ಕೂಡ ಚೇತರಿಸಿಕೊಂಡಿರಬಹುದು. ಹೀಗಾಗಿ, ಭಾರತದ ಸ್ಮಾರ್ಟ್​ಫೋನ್ ರಫ್ತು ಈ ವರ್ಷ ಸೇರಿದಂತೆ ಮುಂಬರುವ ದಿನಗಳಲ್ಲಿ ಗಣನೀಯವಾಗಿ ಹೆಚ್ಚಬಹುದು ಎನ್ನಲಾಗಿದೆ.

ಪಿಎಲ್​ಐ ಸ್ಕೀಮ್​ನ ಪರಿಣಾಮವಾಗಿ ಭಾರತವು ಇಂದು ಚೀನಾ ಬಿಟ್ಟರೆ ಅತಿ ಹೆಚ್ಚು ಮೊಬೈಲ್ ಫೋನ್ ತಯಾರಿಸುವ ದೇಶವಾಗಿದೆ. 2023-24ರಲ್ಲಿ 4.10 ಲಕ್ಷ ಕೋಟಿ ರೂ ಮೌಲ್ಯದ ಮೊಬೈಲ್ ಫೋನ್​ಗಳನ್ನು ತಯಾರಿಸಲಾಗಿದೆ. ಒಟ್ಟು 10 ಕಂಪನಿಗಳಿಗೆ ಮೊಬೈಲ್ ಫೋನ್ ತಯಾರಿಸಲು ಪಿಎಲ್​ಐ ಸ್ಕೀಮ್​ನ ಸೌಲಭ್ಯ ಕೊಡಲಾಗಿದೆ. ಈ ಉದ್ಯಮವು ಈಗಾಗಲೇ ಮೂರು ಲಕ್ಷ ನೇರ ಉದ್ಯೋಗ ಹಾಗೂ ಆರು ಲಕ್ಷ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿರುವುದು ಗಮನಾರ್ಹ.

ಲ್ಯಾಪ್​ಟಾಪ್ ತಯಾರಿಕೆ ಘಟಕಕ್ಕೆ ಚಾಲನೆ

ತೈವಾನ್ ಮೂಲದ ಎಂಎಸ್​ಐ ಸಹಯೋಗದಲ್ಲಿ ಭಾರತದ ಸಿರ್ಮಾ ಟೆಕ್ನಾಲಜೀಸ್ (Syrma SGS Technologies) ಸಂಸ್ಥೆ ಚೆನ್ನೈನಲ್ಲಿ ಲ್ಯಾಪ್​ಟಾಪ್ ತಯಾರಿಸಲು ಹೊಸ ಅಸೆಂಬ್ಲಿ ಲೈನ್ ಅನ್ನು ತೆರೆದಿದೆ. ಕೇಂದ್ರ ಸಚಿವ ಡಾ. ಎ ವೈಷ್ಣವ್ ಮೊನ್ನೆ ಈ ಘಟಕಕ್ಕೆ ಚಾಲನೆ ನೀಡಿದ್ದಾರೆ. ಈ ಸಿರ್ಮಾ ಎಸ್​ಜಿಎಸ್​ನ ಘಟಕದಲ್ಲಿ ವರ್ಷಕ್ಕೆ ಒಂದು ಲಕ್ಷ ಲ್ಯಾಪ್​ಟಾಪ್​ಗಳನ್ನು ಅಸೆಂಬಲ್ ಮಾಡಬಹುದಾಗಿದೆ. ಮುಂದಿನ ಒಂದೆರಡು ವರ್ಷದಲ್ಲಿ ಇಲ್ಲಿ ಲ್ಯಾಪ್​ಟಾಪ್ ಅಸೆಂಬ್ಲಿಂಗ್ ಸಾಮರ್ಥ್ಯ ಹತ್ತು ಲಕ್ಷಕ್ಕೆ ಹೆಚ್ಚಾಗಬಹುದು.

ಇದನ್ನೂ ಓದಿ: ಪರ್ಸನಲ್ ಲೋನ್: ನಿಶ್ಚಿತ ಬಡ್ಡಿದರ ಆಯ್ಕೆಗೆ ಅವಕಾಶ ಇರಬೇಕು: ಆರ್​ಬಿಐ ನಿಯಮ

ಸಿರ್ಮಾ ಎಸ್​ಜಿಎಸ್ ಟೆಕ್ನಾಲಜಿ ಸಂಸ್ಥೆ ಚೆನ್ನೈನಲ್ಲಿ ನಾಲ್ಕು ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಘಟಕಗಳನ್ನು ಹೊಂದಿದೆ. ಅದರಲ್ಲಿ ಒಂದರಲ್ಲಿ ಲ್ಯಾಪ್​ಟಾಪ್ ತಯಾರಿಕೆ ನಡೆಯುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ