ದೆಹಲಿ: ರಷ್ಯಾದಿಂದ ಆಮದು ಮಾಡಿಕೊಂಡ ಕಚ್ಚಾ ತೈಲವನ್ನು ಸಂಸ್ಕರಿಸಿ ಅಮೆರಿಕದ ನ್ಯೂಯಾರ್ಕ್ಗೆ ಕಳುಹಿಸಿದ ಭಾರತದ ಕ್ರಮದ ಬಗ್ಗೆ ಅಮೆರಿಕ ಅಸಮಾಧಾನ ವ್ಯಕ್ತಪಡಿಸಿದೆ. ಉಕ್ರೇನ್ ಮೇಲಿನ ದಾಳಿಯ ನಂತರ ಅಮೆರಿಕ ಸರ್ಕಾರವು ರಷ್ಯಾ ವಿರುದ್ಧ ಆರ್ಥಿಕ ದಿಗ್ಬಂಧನ ವಿಧಿಸಿದೆ. ರಷ್ಯಾದಿಂದ ಕಚ್ಚಾ ತೈಲ, ಕಲ್ಲಿದ್ದಲು, ಇಂಧನ, ಅನಿಲ ಸೇರಿದಂತೆ ಹಲವು ಬಗೆಯ ಉತ್ಪನ್ನಗಳ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿದೆ. ಆದರೂ ಭಾರತವು ಕಚ್ಚಾ ತೈಲದ ಮೂಲ ಬಚ್ಚಿಟ್ಟು ಸಂಸ್ಕರಿತ ಇಂಧನ ರವಾನಿಸಿರುವುದು ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ. ಈ ಮಾಹಿತಿಯನ್ನು ಅಮೆರಿಕದ ಖಜಾನೆ ಇಲಾಖೆ ತಿಳಿಸಿದೆ ಎಂದು ರಿಸರ್ವ್ ಬ್ಯಾಂಕ್ನ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಷ್ಯಾದಿಂದ ಬಂದಿದ್ದ ಟ್ಯಾಂಕರ್ನಲ್ಲಿದ್ದ ಕಚ್ಚಾ ತೈಲವನ್ನು ಗುಜರಾತ್ನ ಪಶ್ಚಿಮ ಕರಾವಳಿಯಲ್ಲಿ ಸಮುದ್ರ ಮಧ್ಯದಲ್ಲಿಯೇ ಭಾರತದ ಟ್ಯಾಂಕರ್ಗೆ ಲೋಡ್ ಮಾಡಲಾಯಿತು. ನಂತರ ಅದನ್ನು ಸಂಸ್ಕರಿಸಿ ಅಮೆರಿಕಕ್ಕೆ ರವಾನಿಸಲಾಯಿತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಡೆಪ್ಯೂಟಿ ಗವರ್ನರ್ ಮೈಕೆಲ್ ಪಾತ್ರಾ ಹೇಳಿದರು. ಎಲ್ಲಿಗೆ ಹೋಗುತ್ತಿದೆ ಎಂಬ ಮಾಹಿತಿ ಘೋಷಿಸದೇ ಹಡಗು ಬಂದರಿನಿಂದ ತೆರಳಿತು. ಸಮುದ್ರ ಮಧ್ಯದಲ್ಲಿ ಈ ಹಡಗಿಗೆ ಎಲ್ಲಿಗೆ ಹೋಗಬೇಕು ಎನ್ನುವ ಮಾಹಿತಿ ನೀಡಲಾಯಿತು. ಅದರಂತೆ ಈ ಹಡಗು ನ್ಯೂಯಾರ್ಕ್ಗೆ ತೆರಳಿತು ಎಂದು ಪಾತ್ರಾ ಹೇಳಿದ್ದಾರೆ. ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದ ವೇಳೆ ಈ ವಿಷಯವನ್ನು ಪಾತ್ರಾ ತಿಳಿಸಿದರು.
ಪಾತ್ರಾ ಅವರ ಹೇಳಿಕೆ ಕುರಿತು ತಕ್ಷಣಕ್ಕೆ ಪ್ರತಿಕ್ರಿಯಿಸಲು ದೆಹಲಿಯಲ್ಲಿರುವ ಅಮೆರಿಕ ದೂತಾವಾಸದ ಕಚೇರಿ ತಿಳಿಸಿದೆ. ಈ ಹೇಳಿಕೆಯು ಭಾರತ ಮತ್ತು ಅಮೆರಿಕ ಸಂಬಂಧಗಳ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಲಾಗಿದೆ. ಕಳೆದ ಫೆಬ್ರುವರಿಯಿಂದಲೂ ಅಮೆರಿಕ ಸರ್ಕಾರವು ಭಾರತಕ್ಕೆ ರಷ್ಯಾ ವಿರುದ್ಧ ನಿರ್ಬಂಧ ಹೇರಲು ಒತ್ತಾಯಿಸುತ್ತಲೇ ಇತ್ತು. ಆದರೆ ಈ ಒತ್ತಡಕ್ಕೆ ಮಣಿದಿರಲಿಲ್ಲ. ಆದರೆ ಈ ಹೇಳಿಕೆಯನ್ನು ಅಮೆರಿಕ ತನ್ನ ಮೂಗಿನ ನೇರಕ್ಕೆ ಬಳಸಿಕೊಳ್ಳುವ ಸಾಧ್ಯತೆಯಿದೆ.
ರಷ್ಯಾದ ಕಚ್ಚಾ ತೈಲವನ್ನು ಸಂಸ್ಕರಿಸಿ, ಡಿಸ್ಟಿಲೇಟ್ ಆಗಿ ರೂಪಾಂತರಿಸಲಾಯಿತು. ಇದನ್ನು ಏಕ ಬಳಕೆ ಪ್ಲಾಸ್ಟಿಕ್ ತಯಾರಿಕೆಗೆ ಬಳಸಲಾಗುತ್ತದೆ. ಭಾರತದಿಂದ ಡಿಸ್ಟಿಲೇಟ್ ಹೊತ್ತೊಯ್ದ ಹಡಗು ಮತ್ತು ಕಚ್ಚಾ ತೈಲವನ್ನು ಸಂಸ್ಕರಿಸಿದ ಸಂಸ್ಕರಣಾಗಾರವನ್ನು ಅವರು ಹೆಸರಿಸಿಲ್ಲ. ‘ಯುದ್ಧಗಳ ವೇಳೆ ಹಲವು ವಿಚಿತ್ರ ಬೆಳವಣಿಗೆಗಳು ನಡೆಯುತ್ತವೆ’ ಎಂದು ಅವರು ಹೇಳಿದ್ದರು.
ಭಾರತವು ವಿಶ್ವದ 3ನೇ ಅತಿದೊಡ್ಡ ತೈಲ ಆಮದು ರಾಷ್ಟ್ರವಾಗಿದೆ. ಈ ಮೊದಲು ಭಾರತದಲ್ಲಿ ರಷ್ಯಾದ ತೈಲವನ್ನು ಮಾರಾಟ ಮಾಡುತ್ತಿರಲಿಲ್ಲ. ಆದರೆ ಯುದ್ಧದ ನಂತರ ಪಾಶ್ಚಿಮಾತ್ಯ ದೇಶಗಳು ರಷ್ಯಾದ ತೈಲ ಖರೀದಿ ನಿರ್ಬಂಧಿಸಿರುವುದರಿಂದ ಭಾರತದ ಕಂಪನಿಗಳು ಕಡಿಮೆ ದರಕ್ಕೆ ಸಿಗುವ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತಿವೆ.
Published On - 8:27 am, Sun, 14 August 22