30 Years Of India’s Liberalisation: ಉದಾರೀಕರಣಕ್ಕೆ 30 ವರ್ಷ; ಹೇಗಿದ್ದ ಭಾರತ ಹೇಗಾಯಿತು?

| Updated By: Srinivas Mata

Updated on: Jul 24, 2021 | 7:23 AM

ಭಾರತದ ಉದಾರೀಕರಣಕ್ಕೆ ಜುಲೈ 24, 2021ಕ್ಕೆ ಭರ್ತಿ 30 ವರ್ಷ ತುಂಬಿತು. ಈ ಅವಧಿಯಲ್ಲಿ ಭಾರತದದ ಆರ್ಥಿಕತೆ ಹೇಗೆಲ್ಲ, ಎಷ್ಟೆಲ್ಲ ಬೆಳೆದಿದೆ ಎಂಬುದನ್ನು ಅಂಕಿ- ಅಂಶದ ಸಹಿತ ತೆರೆದಿಡುವ ಲೇಖನ ಇಲ್ಲಿದೆ.

30 Years Of Indias Liberalisation: ಉದಾರೀಕರಣಕ್ಕೆ 30 ವರ್ಷ; ಹೇಗಿದ್ದ ಭಾರತ ಹೇಗಾಯಿತು?
ನರೇಂದ್ರ ಮೊದಿ- ಮನಮೋಹನ್ ಸಿಂಗ್ (ಸಂಗ್ರಹ ಚಿತ್ರ)
Follow us on

ಭಾರತದ ಆರ್ಥಿಕತೆಯನ್ನು ನೋಡುವುದಾದರೆ, ಜುಲೈ 24, 1991ರ ಮೊದಲು ಹಾಗೂ ನಂತರ ಎಂದು ವಿಭಾಗ ಮಾಡಿಕೊಂಡು ಗಮನಿಸಬೇಕಾಗುತ್ತದೆ. ಇಂದಿಗೆ (ಜುಲೈ 24, 2021) 30 ವರ್ಷ ಸಂಪೂರ್ಣ ಆಗಿದೆ; ಭಾರತ ಉದಾರೀಕರಣಕ್ಕೆ ತೆರೆದುಕೊಂಡು. ಅಲ್ಲಿಯ ತನಕ ದೇಶದ ಆರ್ಥಿಕತೆಯ ವೇಗ ಬಹಳ ಕಡಿಮೆ ಇತ್ತು. ಆಮದು- ರಫ್ತುಗಳ ಕಠಿಣ ನಿಯಮಾವಳಿಗಳು, ಸ್ಥಳೀಯವಾಗಿಯೂ ಉದ್ಯಮ ಆರಂಭ ಮತ್ತು ನಡೆಸುವುದಕ್ಕೆ ಇದ್ದ ನಿಯಮಗಳ ಕಾರಣದಿಂದಾಗಿ ಭಾರತವೇ ಸಂಕಷ್ಟದಲ್ಲಿತ್ತು. ಅಂದಿನ ಸ್ಥಿತಿಯಿಂದ ಹೊರಬರುವುದಕ್ಕೆ ಪಿ.ವಿ. ನರಸಿಂಹ ರಾವ್ ನೇತೃತ್ವದ ಸರ್ಕಾರಕ್ಕೆ ಕಂಡಂಥ ಮಾರ್ಗ ಉದಾರೀಕರಣ. ಹಾಗಂತ ಈ ಬಗ್ಗೆ ಸ್ವಾಗತಾರ್ಹ ಮಾತುಗಳು ಬಂದವು ಅಂತೇನಲ್ಲ. ಇವತ್ತಿಗೂ ಆಗಿನ ನಿರ್ಧಾರದ ಬಗ್ಗೆ ಆಕ್ಷೇಪಗಳು ಕೇಳಿಬರುತ್ತವೆ. ಏಕೆಂದರೆ, ಹೇಗೆ ಭಾರತದ ಉದ್ಯಮಗಳು ಜಗತ್ತಿನ ನಾನಾ ಭಾಗಗಳಿಗೆ ಸೇವೆ ವಿಸ್ತರಿಸಲು ಕಾರಣವಾಯಿತೋ ಅದೇ ರೀತಿ ಜಗತ್ತಿನ ದೈತ್ಯ ಕಂಪೆನಿಗಳು ಎಗ್ಗಿಲ್ಲದೆ ಭಾರತದೊಳಕ್ಕೆ ಬಂದವು. ಅವುಗಳಿಗೆ ಸ್ಪರ್ಧೆ ನೀಡಲು ಇಲ್ಲಿನ ಸಣ್ಣ-ಪುಟ್ಟ ಉದ್ಯಮಗಳಿಗೆ ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣ ಆಗಿದೆ. ಒಟ್ಟಾರೆ ಅವಲಂಬನೆ ಹೆಚ್ಚಾಗಿದೆ, ಭಾರತಕ್ಕೆ ಇದರಿಂದ ಲಾಭವಾಯಿತೋ ಇಲ್ಲವೋ ಜಾಗತಿಕ ಮಟ್ಟದ ದೈತ್ಯ ಕಂಪೆನಿಗಳು ಭರ್ಜರಿ ಲಾಭ ಮಾಡಿಕೊಳ್ಳುತ್ತಿವೆ ಎನ್ನುತ್ತಾರೆ.

ಆದರೆ, ಇದು ವಾದದ ಒಂದು ಮಗ್ಗುಲಾಯಿತು. ಮತ್ತೊಂದೇನೆಂದರೆ, ಭಾರತದ ಕಂಪೆನಿಗಳು ಸಹ ವಿಶ್ವ ವ್ಯಾಪಿ ಹರಡುವುದಕ್ಕೆ ಸಾಧ್ಯವಾಯಿತು. ದೇಶದ ಪಾಲಿಗೆ ಪ್ರಮುಖ ಅಗತ್ಯವಾಗಿದ್ದ ವಿದೇಶಿ ವಿನಿಮಯ ಸಂಗ್ರಹದಲ್ಲಿ ಭಾರೀ ಸುಧಾರಣೆ ಆಯಿತು. ದೇಶದ ಜಿಡಿಪಿ, ತಲಾದಾಯ, ಹಣದುಬ್ಬರ ದರ ಇವೆಲ್ಲದರಲ್ಲಿ ಬಹಳ ಮುಂದಿದೆ ಭಾರತ. ಒಂದೇ ನಾಣ್ಯವಾದರೂ ಅದಕ್ಕೆ ಎರಡು ಮುಖ ಇರುತ್ತದೆ. ಅಂಕಿ- ಅಂಶವನ್ನೂ ಮುಂದಿಟ್ಟುಕೊಂಡು 30 ವರ್ಷದ ಹಿಂದಿನ ದೇಶದ ಸ್ಥಿತಿ ಹಾಗೂ ಇವತ್ತಿನ ಸ್ಥಿತಿ ಹೇಗಿದೆ ಎಂಬುದರ ವಿಶ್ಲೇಷಣೆ ನಿಮ್ಮೆದುರಿಗೆ ಇಡಲಾಗುತ್ತಿದೆ. ಬದಲಾವಣೆ ಸ್ಪಷ್ಟವಾಗಿ ಗೋಚರವಾಗುತ್ತದೆ.

ಜಿಡಿಪಿ
1991ರಲ್ಲಿ ಭಾರತದ ಜಿಡಿಪಿ 274.84 ಬಿಲಿಯನ್ (27,484 ಕೋಟಿ) ಅಮೆರಿಕನ್ ಡಾಲರ್ ಇತ್ತು. ಅಂದರೆ, ಸರಕು- ಸೇವೆ ಎಲ್ಲದರ ಮೂಲದಿಂದ ದೇಶದಲ್ಲಿ ಉತ್ಪಾದನೆ ಆಗುತ್ತಿದ್ದ ಪ್ರಮಾಣ ಇದು. ಇವತ್ತಿಗೆ 2.7 ಲಕ್ಷ ಕೋಟಿ ಡಾಲರ್ ಡಾಲರ್ ಆಗಿದೆ. ಹತ್ತಿರ ಹತ್ತಿರ ಹತ್ತು ಪಟ್ಟು ಹೆಚ್ಚಾಗಿದೆ.

ಇನ್ನು ಯಾವ್ಯಾವ ವಲಯದ ಕೊಡುಗೆ ಹೇಗಿದೆ ಎಂಬುದನ್ನು ಗಮನಿಸಿದರೆ ಆಸಕ್ತಿಕರ ಕಾಂಬಿನೇಷನ್ ಕಂಡುಬರುತ್ತದೆ.
ಕೃಷಿ ವಲಯ 1991ರಲ್ಲಿ ಶೇ 54ರಷ್ಟಿತ್ತು, ಇವತ್ತಿಗೆ ಶೇ 17ಕ್ಕೆ ಇಳಿದಿದೆ. ಸೇವಾ ವಲಯವು ಶೇ 39ರಿಂದ ಶೇ 54ಕ್ಕೆ ಏರಿಕೆ ಆಗಿದೆ. ಇನ್ನು ಕೈಗಾರಿಕೆ ಶೇ 30ರಿಂದ ಅಲ್ಪ ಪ್ರಮಾಣದಲ್ಲಿ ಕುಸಿದು, ಶೇ 29ಕ್ಕೆ ಬಂದಿದೆ. ಅಂದರೆ ಉದಾರೀಕರಣದ ಪರಿಣಾಮ ನೇರವಾಗಿ ಕಾಣಿಸುವ ಕಾಂಬಿನೇಷನ್ ಇದು. ಭಾರತದ ಸೇವಾ ವಲಯಕ್ಕೆ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಿದೆ.

ತಲಾದಾಯ
ಸರಾಸರಿಯಾಗಿ ತಲಾದಾಯ ಗಮನಿಸುವುದಾದರೆ, 1991ರಲ್ಲಿ 1210 ಅಮೆರಿಕನ್ ಡಾಲರ್ ಇತ್ತು. ಆ ಪ್ರಮಾಣ 2,227 ಅಮೆರಿಕನ್ ಡಾಲರ್ ಆಗಿದೆ. ಅಂದರೆ ದುಪ್ಪಟ್ಟು ಅಂತಲೂ ಆಗಿಲ್ಲ. ಆದರೆ ಈ ವಿಷಯಕ್ಕೆ ಬಂದರೆ ನೆರೆಯ ದೇಶಗಳ ಬೆಳವಣಿಗೆಗಿಂತ ಈಚೆಗೆ ಭಾರತ ಕಡಿಮೆ ಇದೆ ಅಂದುಕೊಂಡರೂ ಸ್ಥಿರವಾದ ಬೆಳವಣಿಗೆ ಸಾಧಿಸುತ್ತಾ ಇದೆ. ಆದ್ದರಿಂದ ಇದು ಕೂಡ ಸಕಾರಾತ್ಮಕ ಬೆಳವಣಿಗೆಯೇ.

ವಿದೇಶೀ ವಿನಿಮಯ ಸಂಗ್ರಹ
ಯಾವುದೇ ದೇಶಕ್ಕೆ ವಿದೇಶೀ ವಿನಿಮಯ ಸಂಗ್ರಹ ಬಹಳ ಮುಖ್ಯವಾದದ್ದು. ಏಕೆಂದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಖರೀದಿ ಮಾಡಿದ ಪದಾರ್ಥಗಳು, ವಸ್ತುಗಳಿಗೆ, ಸಾಲ ಮರುಪಾವತಿ ಇವೆಲ್ಲವನ್ನೂ ಮಾಡುವುದು ಈ ಮೂಲಕವೇ. ಹಾಗೂ ನಮ್ಮ ದೇಶದಲ್ಲಿ ಇರುವ ಉದ್ಯಮಗಳು ರಫ್ತಿನ ಮೂಲಕ, ವಿವಿಧ ದೇಶಗಳಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯರು ತಾಯ್ನಾಡಿಗೆ ಹಣ ರವಾನೆ ಮಾಡುತ್ತಿರುವುದು… ಹೀಗೆ ಇತ್ಯಾದಿ ಮೂಲಗಳಿಂದ ವಿದೇಶೀ ವಿನಿಮಯ ಸಂಗ್ರಹದಲ್ಲಿ ಭಾರತ ಉತ್ತಮ ಸ್ಥಾನದಲ್ಲಿದೆ.

ರಫ್ತು
1991ರಲ್ಲಿ 5.8 ಬಿಲಿಯನ್, ಅಂದರೆ 580 ಕೋಟಿ ಅಮೆರಿಕನ್ ಡಾಲರ್ ಇತ್ತು. ಈಗ -280 ಬಿಲಿಯನ್ ಡಾಲರ್ ಇದೆ.

ಸೆನ್ಸೆಕ್ಸ್​
ಇನ್ನು ದೇಶದ ಷೇರು ಮಾರುಕಟ್ಟೆ ಸೂಚ್ಯಂಕವು 30 ವರ್ಷಗಳ ಹಿಂದೆ 1000 ಪಾಯಿಂಟ್​ನಲ್ಲಿತ್ತು. ಅದು 52,975.80 ಪಾಯಿಂಟ್ (ಜುಲೈ 23, 2021ಕ್ಕೆ)ಗೆ ಜಿಗಿದಿದೆ. ವಿಶ್ವದ ಪ್ರಮುಖ ಬಂಡವಾಳ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಲಿಸ್ಟೆಡ್​ ಕಂಪೆನಿಗಳ ಮಾರುಕಟ್ಟೆ ಮೌಲ್ಯ ದಾಖಲೆ ಮಟ್ಟದಲ್ಲಿದೆ.

ಹಣದುಬ್ಬರ
1991ರಲ್ಲಿ ಹಣದುಬ್ಬರ ದರದ ಪ್ರಮಾಣ ಶೇ 16.7ರಷ್ಟಿತ್ತು. ಈಗಲೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗುರಿಗಿಂತ ಸ್ವಲ್ಪ ಜಾಸ್ತಿ ಇದೆ. ಹಾಗಂತ ವಿಪರೀತವಾಗಿದೆಯೇನೋ ಅಂದುಕೊಳ್ಳಬೇಡಿ. ನಿಗದಿ ಮಾಡಿಕೊಂಡ ಗುರಿಗಿಂತ ಸ್ವಲ್ಪ ಹೆಚ್ಚಾಗಿದೆ ಅಷ್ಟೇ. ಇದನ್ನು ಶೇ 6ರೊಳಗೆ ಮಿತಿಗೊಳಿಸಬೇಕು ಎಂಬುದು ಗುರಿ. ಆದರೆ ಈಗ ಶೇ 6.26ರಷ್ಟಿದೆ.

ಆಹಾರ ಧಾನ್ಯಗಳ ಉತ್ಪಾದನೆ
ಭಾರತದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಪ್ರಮಾಣ 1991ನೇ ಇಸವಿಯಲ್ಲಿ 170.6 ಟನ್​ನಷ್ಟಿತ್ತು. ಇವತ್ತಿಗೆ 305.43ಟನ್​ನಷ್ಟಿದೆ.

ಎಲ್ಲಿದ್ದ ದೇಶ ಈಗ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ನೋಡಿಕೊಳ್ಳುವುದಕ್ಕೆ ನಮ್ಮೆದುರು ಒಂದು ಅಳತೆಗೋಲಂತೂ ಇದೆ. ಪ್ರಾಯಶಃ ಕೊರೊನಾದ ಹೊಡೆತಕ್ಕೆ ಸಿಲುಕಿರಲಿಲ್ಲ ಅಂತಾಗಿದ್ದರೆ ಪರಿಸ್ಥಿತಿ ಇನ್ನಷ್ಟು ಸಕಾರಾತ್ಮಕವಾಗಿ ಇರುತ್ತಿತ್ತೋ ಏನೋ! ಆದರೆ ಈಗಿನ ಸ್ಥಿತಿಯಂತೂ ತೀರಾ ತೆಗೆದು ಹಾಕುವಂಥದ್ದೇನಲ್ಲ.

ಇದನ್ನೂ ಓದಿ: 30 Years Of Liberalisation: 2 ಕೋಟಿ ರೂ.ಗೆ ಖರೀದಿಸಲು ಬಂದಿದ್ದ ಇನ್ಫೋಸಿಸ್​​ ಬಂಡವಾಳ ಈಗ 6.5 ಲಕ್ಷಕೋಟಿ ಎಂದು ನೆನಪಿಸಿದ ಎನ್​ಆರ್​ಎನ್

(India Liberalisation Completes 30 Years What Numbers Says About Growth Story Of Country Economy )

Published On - 7:12 am, Sat, 24 July 21