ನವದೆಹಲಿ, ಫೆಬ್ರುವರಿ 21: ಭಾರತದ ಹತ್ತು ಪ್ರತಿಶತದ ದರದಲ್ಲಿ ಆರ್ಥಿಕ ವೃದ್ಧಿ (gdp growth) ಕಾಣಬೇಕಾದರೆ ರಫ್ತುಗಳ ಮೇಲೆ ಗಮನ ಹರಿಸಬೇಕು ಎಂದು ಮಾಜಿ ನೀತಿ ಆಯೋಗ್ ಮುಖ್ಯಸ್ಥ ಹಾಗೂ 16ನೇ ಹಣಕಾಸು ಆಯೋಗದ ಛೇರ್ಮನ್ ಅರವಿಂದ್ ಪನಗರಿಯಾ (Arvind Panagariya) ಅಭಿಪ್ರಾಯಪಟ್ಟಿದ್ದಾರೆ. ಪ್ರಸಕ್ತ ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎನಿಸಿರುವ ಭಾರತ ಇನ್ನೂ ಹೆಚ್ಚಿನ ವೇಗದಲ್ಲಿ ಪ್ರಗತಿ ಕಾಣುವ ಸಾಮರ್ಥ್ಯ ಹೊಂದಿದೆ ಎಂದು ಹಲವರು ಹೇಳುತ್ತಲೇ ಇದ್ದಾರೆ. ಅರವಿಂದ್ ಪನಗರಿಯಾ ಕೂಡ ಇತ್ತೀಚೆಗೆ ಇದೇ ಅಭಿಪ್ರಾಯ ಅನುಮೋದಿಸಿದ್ದರು. ಈಗ ಆ ಹೆಚ್ಚಿನ ಮಟ್ಟದಲ್ಲಿ ಭಾರತ ಬೆಳೆಯಲು ಹೇಗೆ ಸಾಧ್ಯವಾಗಬಹುದು ಎಂಬುದನ್ನು ಅವರು ವಿವರಿಸಲು ಯತ್ನಿಸಿದ್ದಾರೆ.
ಫೌಂಡೇಶನ್ ಫಾರ್ ಎಕನಾಮಿಕ್ ಡೆವಲಪ್ಮೆಂಟ್ ಎಂಬ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅರವಿಂದ್ ಪನಗರಿಯಾ, ಮುಕ್ತವಾಗಿರುವ ದೇಶಗಳು ಹೆಚ್ಚು ವೇಗದಲ್ಲಿ ಬೆಳೆಯುತ್ತವೆಂದು ಹೇಳಿದ್ದಾರೆ.
‘ಬಹಳ ಯಶಸ್ವಿಯಾಗಿರುವ ಸಿಂಗಾಪುರ, ತೈವಾನ್, ಸೌತ್ ಕೊರಿಯಾ, ಚೀನಾ ಮತ್ತು ಭಾರತದಂತಹ ದೇಶಗಳನ್ನು ಗಮನಿಸಿದ್ದೇನೆ. ಈ ದೇಶಗಳಲ್ಲಿ ಅಧಿಕ ವೇಗದ ಬೆಳವಣಿಗೆ ಆಗಿದೆ. ಯಾವ ದೇಶಗಳು ಮುಕ್ತವಾಗಿಯೋ ಅವು ವೇಗವಾಗಿ ಬೆಳೆದಿವೆ ಎಂಬುದು ನನ್ನ ಸ್ಪಷ್ಟ ಅನಿಸಿಕೆ,’ ಎಂದು 16ನೇ ಹಣಕಾಸು ಆಯೋಗದ ಮುಖ್ಯಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ತೈವಾನ್ನಲ್ಲಿ ಭಾರತೀಯರಿಗೆ ಉದ್ಯೋಗಾವಕಾಶ; ಭಾರತದ ಜೊತೆ ತೈವಾನ್ ಒಡಂಬಡಿಕೆ
ಭಾರತದ ಈಗಿನ ಆಮದು ಬದಲಿ ನೀತಿಯನ್ನು (import-substituting industrial policy) ಪನಗರಿಯಾ ಈ ವೇಳೆ ಸಮರ್ಥಿಸಿಕೊಂಡಿದ್ದಾರೆ. ಈ ಆಮದು ಬದಲಿ ನೀತಿ ಭಾರತಕ್ಕೆ ಮಾತ್ರ ಸೀಮಿತವಾದುದಲ್ಲ. ಬೇರೆ ಯಶಸ್ವಿ ದೇಶಗಳೂ ಇದನ್ನು ಅನುಸರಿಸುತ್ತವೆ. ಭಾರತದಲ್ಲಿ ಔದ್ಯಮಿಕ ಆಮದು ಬದಲಿ ನೀತಿಗೆ ಬೌದ್ಧಿಕ ಬೆಂಬಲ ಪ್ರಬಲವಾಗಿದೆ ಎಂದಿದ್ದಾರೆ.
ಇಲ್ಲಿ ಆಮದು ಬದಲಿ ನೀತಿ ಎಂದರೆ, ಒಂದು ವಸ್ತುವನ್ನು ಆಮದು ಮಾಡಿಕೊಳ್ಳುವ ಬದಲು ಅದನ್ನು ದೇಶೀಯವಾಗಿ ತಯಾರಿಸಲು ಯತ್ನಿಸುವುದು. ಭಾರತದಲ್ಲಿ ಈ ನೀತಿ ಈಗ ಮೇಕ್ ಇನ್ ಇಂಡಿಯಾ ಮೂಲಕ ಬಹಳ ಸ್ಪಷ್ಟವಾಗಿ ಜಾರಿಯಲ್ಲಿದೆ. ದೇಶದಲ್ಲಿ ಮಾರಾಟವಾಗುವ ಸ್ಮಾರ್ಟ್ಫೋನ್ಗಳು ಭಾರತದಲ್ಲೇ ತಯಾರಾಗುತ್ತಿವೆ. ವಿಮಾನಗಳನ್ನೂ ಇಲ್ಲಿಯೇ ತಯಾರಿಸಲಾಗುತ್ತಿದೆ. ವಿದೇಶಗಳ ಫೈಟರ್ ವಿಮಾನಗಳು ಮುಂದಿನ ದಿನಗಳಲ್ಲಿ ಮೇಡ್ ಇನ್ ಇಂಡಿಯಾ ಎನಿಸಲಿವೆ. ಹೀಗೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಈ ನೀತಿಯನ್ನು ಜಾರಿಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ಮೂಲಕ ಆಮದು ಕಡಿಮೆ ಮಾಡಿ ರಫ್ತು ಹೆಚ್ಚಿಸಲು ಸಹಾಯಕವಾಗಬಹುದು.
ಇದನ್ನೂ ಓದಿ: ಈರುಳ್ಳಿ ಬೆಲೆ ಈಗ ಕುಸಿತ; ಆದರೆ ಮಾರ್ಚ್ನಲ್ಲಿ ಕಣ್ಣೀರು ಬರಿಸಲಿದೆಯಂತೆ ಬೆಲೆ ಏರಿಕೆ
ಈ ಬಗ್ಗೆ ಬೆಳಕು ಚೆಲ್ಲಿದ ಅರವಿಂದ್ ಪನಗರಿಯಾ, ಜಾಗತಿಕವಾಗಿ ರಫ್ತು ಮಾರುಕಟ್ಟೆ 2022ರಲ್ಲಿ 32 ಟ್ರಿಲಿಯನ್ ಡಾಲರ್ನಷ್ಟಿತ್ತು. ಇದು ಭಾರತದ ಜಿಡಿಪಿಗಿಂತ ಹತ್ತು ಪಟ್ಟು ಹೆಚ್ಚು ಇದೆ ಎಂಬುದನ್ನು ವಿವರಿಸಿದರು.
ರಫ್ತು ಕ್ಷೇತ್ರದಲ್ಲಿ ಚೀನಾದ ಪ್ರಾಬಲ್ಯವನ್ನು ಎತ್ತಿ ತೋರಿಸಿದ ಅವರು, ಆ ದೇಶ ಮೂರ್ನಾಲ್ಕು ದಶಕಗಳ ಕಾಲ ಶೇ. 10ರ ದರದಲ್ಲಿ ಬೆಳೆದಿರುವುದನ್ನು ಹೇಳಿದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ