Onion Price: ಈರುಳ್ಳಿ ಬೆಲೆ ಈಗ ಕುಸಿತ; ಆದರೆ ಮಾರ್ಚ್​ನಲ್ಲಿ ಕಣ್ಣೀರು ಬರಿಸಲಿದೆಯಂತೆ ಬೆಲೆ ಏರಿಕೆ

|

Updated on: Feb 21, 2024 | 3:58 PM

Onion May become costlier from March: ಮಹಾರಾಷ್ಟ್ರದ ಪ್ರಮುಖ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಶೇ. 10ಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ. ಸರ್ಕಾರ ಈರುಳ್ಳಿ ರಫ್ತನ್ನು ನಿಷೇಧಿಸಿರುವ ಕ್ರಮವನ್ನು ಮಾರ್ಚ್ 31ರವರೆಗೂ ಮುಂದುವರಿಸುವುದಾಗಿ ಹೇಳಿಕೆ ನೀಡಿತ್ತು. ಇದರ ಗೊಂದಲದಿಂದ ಈರುಳ್ಳಿ ಬೆಲೆ ಇಳಿಕೆ ಆಗಿದೆ. ಈ ಸೀಸನ್​ನಲ್ಲಿ ಈರುಳ್ಳಿ ಆವಕ ಇಳಿಯುವುದರಿಂದ ಮಾರ್ಚ್​ನಲ್ಲಿ ಈರುಳ್ಳಿ ದುಬಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Onion Price: ಈರುಳ್ಳಿ ಬೆಲೆ ಈಗ ಕುಸಿತ; ಆದರೆ ಮಾರ್ಚ್​ನಲ್ಲಿ ಕಣ್ಣೀರು ಬರಿಸಲಿದೆಯಂತೆ ಬೆಲೆ ಏರಿಕೆ
ಈರುಳ್ಳಿ
Follow us on

ನವದೆಹಲಿ, ಫೆಬ್ರುವರಿ 21: ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧವನ್ನು (Onion export ban) ಮಾರ್ಚ್ 31ರವರೆಗೆ ಮುಂದುವರಿಸಲು ನಿರ್ಧರಿಸಿದ ಬೆನ್ನಲ್ಲೇ ಮಹಾರಾಷ್ಟ್ರದ ಎಪಿಎಂಸಿಯಲ್ಲಿ ಈರುಳ್ಳಿ ಬೆಲೆ (onion price) ಕುಸಿತ ಕಂಡಿದೆ. ನಾಶಿಕ್ ಜಿಲ್ಲೆಯ ಲಸಲ್​ಗಾಂವ್ ಮಂಡಿಯಲ್ಲಿ (Lasalgaon market) ಈರುಳ್ಳಿ ಬೆಲೆ ಕ್ವಿಂಟಾಲ್​ಗೆ 150-200 ರೂನಷ್ಟು ಕಡಿಮೆ ಆಗಿದೆ. ಕ್ವಿಂಟಾಲ್​ಗೆ 1,800 ರೂ ಇದ್ದ ಈರುಳ್ಳಿ ಬೆಲೆ ಈಗ 1,600 ರೂಗೆ ಇಳಿದಿದೆ. ರಫ್ತು ನಿಷೇಧ ಮುಂದುವರಿಸಲಾಗುವುದು ಎಂದು ಸರ್ಕಾರ ನೀಡಿದ ಹೇಳಿಕೆಯ ಪರಿಣಾಮ ಇದಾಗಿದೆ. ಹಲವು ರಫ್ತುದಾರರು ಈರುಳ್ಳಿ ಖರೀದಿಸುವುದನ್ನು ನಿಲ್ಲಿಸಿದ ಪರಿಣಾಮವಾಗಿ ಎಪಿಎಂಸಿಯಲ್ಲಿ ಬೆಲೆ ಇಳಿಕೆ ಆಗಿದೆ. ರೈತರು ಕಡಿಮೆ ಬೆಲೆಗೆ ಮಂಡಿಗಳಿಗೆ ಮಾರುವಂತಾಗಿದೆ.

‘ರೈತರಿಗೆ ನಷ್ಟವಾಗುತ್ತಿದೆ. ಸರ್ಕಾರ ಮಧ್ಯ ಪ್ರವೇಶಿಸಿ ರೈತರಿಗೆ ನೆರವಾಗಬೇಕು’ ಎಂದು ಮಹಾರಾಷ್ಟ್ರ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಭರತ್ ದಿಘೋಳೆ ಒತ್ತಾಯಿಸಿದ್ದಾರೆ. ಕಳೆದ ವಾರ ಈರುಳ್ಳಿ ಬೆಲೆ ಹೆಚ್ಚಾಗಿತ್ತು. ಈಗ ಕಡಿಮೆಗೊಂಡಿದೆ. ಆದರೆ, ಮುಂಬರುವ ಕೆಲ ವಾರಗಳಲ್ಲಿ ಈರುಳ್ಳಿ ತುಟ್ಟಿಯಾಗಲಿದೆ ಎನ್ನುವಂತಹ ಸುದ್ದಿ ಇದೇ ವೇಳೆ ಕೇಳಿಬರುತ್ತಿದೆ.

ಇದನ್ನೂ ಓದಿ: ತೈವಾನ್​ನಲ್ಲಿ ಭಾರತೀಯರಿಗೆ ಉದ್ಯೋಗಾವಕಾಶ; ಭಾರತದ ಜೊತೆ ತೈವಾನ್ ಒಡಂಬಡಿಕೆ

ಈ ಸೀಸನ್​ನಲ್ಲಿ ಈರುಳ್ಳಿ ಆವಕದಲ್ಲಿ ಬಹಳಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. ಒಂದು ಅಂದಾಜು ಪ್ರಕಾರ ಈ ಬಾರಿ ಮಳೆ ಅಭಾವದ ಕಾರಣದಿಂದ ಈರುಳ್ಳಿ ಉತ್ಪಾದನೆ ಶೇ. 30ರಷ್ಟು ಕಡಿಮೆ ಆಗಲಿದೆ. ಮಾರ್ಚ್ ಮೊದಲ ವಾರದಿಂದಲೇ ಮಾರುಕಟ್ಟೆಯಲ್ಲಿ ಈರುಳ್ಳಿ ಅಭಾವ ಹೆಚ್ಚಲಿದ್ದು, ಬೆಲೆ ಏರಿಕೆ ಶುರುವಾಗಲಿದೆ ಎಂದು ಈ ಉದ್ಯಮದವರು ಹೇಳುತ್ತಾರೆ.

ಈರುಳ್ಳಿ ಬೆಳೆ ಈ ಬಾರಿ ಕಡಿಮೆ ಆಗುವ ಕಾರಣಕ್ಕೆ ಸರ್ಕಾರ ಈರುಳ್ಳಿ ರಫ್ತು ನಿಷೇಧವನ್ನು ಸದ್ಯಕ್ಕೆ ಹಿಂತೆಗೆದುಕೊಳ್ಳುವಂತೆ ಕಾಣುವುದಿಲ್ಲ. ವರದಿ ಪ್ರಕಾರ, ಮಾರ್ಚ್ 31ರ ಬಳಿಕವೂ ರಫ್ತು ನಿಷೇಧ ಮುಂದುವರಿಯಬಹುದು.

ಇದನ್ನೂ ಓದಿ: ಝೀಗೆ ನಿಲ್ಲದ ತಲೆನೋವು; 240 ಮಿಲಿಯನ್ ಡಾಲರ್​ಗೂ ಹೆಚ್ಚು ಅವ್ಯವಹಾರ ಪತ್ತೆ ಮಾಡಿದ ಸೆಬಿ

ಮಹಾರಾಷ್ಟ್ರ ಭಾರತದಲ್ಲಿ ಅತಿಹೆಚ್ಚು ಈರುಳ್ಳಿ ಬೆಳೆಯುವ ರಾಜ್ಯ. ಶೇ. 40ರಷ್ಟು ಈರುಳ್ಳಿ ಉತ್ಪಾದನೆ ಮಹಾರಾಷ್ಟ್ರದಲ್ಲಿ ಆಗುತ್ತದೆ. ಈರುಳ್ಳಿ ಉತ್ಪಾದನೆಯಲ್ಲಿ ಮಧ್ಯಪ್ರದೇಶ ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಗುಜರಾತ್, ಬಿಹಾರ್, ಪಶ್ಚಿಮ ಬಂಗಾಳ ಮೊದಲಾದವು ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳು. ಈ ಋತುವಿನಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ಮೊದಲಾದ ರಾಜ್ಯಗಳಲ್ಲಿ ಈರುಳ್ಳಿ ಆವಕ ಎಷ್ಟಾಗಬಹುದು ಎಂಬುದನ್ನು ಕೇಂದ್ರ ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ.

ಅಗತ್ಯ ಎನಿಸಿದರೆ ಮಾತ್ರವೇ ಮಾರ್ಚ್ 31ರಬಳಿಕ ಅನುಮತಿ ಮೇರೆಗೆ ಈರುಳ್ಳಿ ರಫ್ತಿಗೆ ಅವಕಾಶ ಕೊಡಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ