Bob Moore: ಕೆಲಸಗಾರರಿಗೆ ಮಾಲೀಕತ್ವ ಕೊಟ್ಟು ಮೃತರಾದ ಶ್ರೀಮಂತ; ಕಂಪನಿಯ ಎಲ್ಲಾ 700 ಉದ್ಯೋಗಿಗಳೂ ಈಗ ಮಾಲೀಕರು

Employees Given Full Ownership: ಅಮೆರಿಕದ ರೆಡ್ ಹಿಲ್ ಕಂಪನಿಯ ಸಂಸ್ಥಾಪಕ ಬಾಬ್ ಮೂರ್ ನಿಧನರಾಗುವ ಮುನ್ನ ಕಂಪನಿಯ ಮಾಲೀಕತ್ವವನ್ನು ಉದ್ಯೋಗಿಗಳಿಗೆ ಹಂಚಿಕೆ ಮಾಡಿದ್ದಾರೆ. ಸುಮಾರು 700 ಮಂದಿ ಇರುವ ಉದ್ಯೋಗಿಗಳು ಈಗ ರೆಡ್ ಹಿಲ್ ಎಂಬ ಆಹಾರ ಮಾರಾಟ ಕಂಪನಿಯ ಒಡೆಯರೇ ಆಗಿದ್ದಾರೆ. ಬೇರೆಯವರಿಂದ ನೀವು ಅಪೇಕ್ಷಿಸುತ್ತೀಯೋ, ಅದನ್ನು ಬೇರೆಯವರಿಗೆ ನೀಡು ಎನ್ನುವ ಬೈಬಲ್ ವಾಕ್ಯವನ್ನು ತಾನು ಪರಿಪಾಲಿಸಿರುವುದಾಗಿ ಬಾಬ್ ಮೂರ್ ಹಿಂದೊಮ್ಮೆ ಹೇಳಿಕೊಂಡಿದ್ದರು.

Bob Moore: ಕೆಲಸಗಾರರಿಗೆ ಮಾಲೀಕತ್ವ ಕೊಟ್ಟು ಮೃತರಾದ ಶ್ರೀಮಂತ; ಕಂಪನಿಯ ಎಲ್ಲಾ 700 ಉದ್ಯೋಗಿಗಳೂ ಈಗ ಮಾಲೀಕರು
ಬಾಬ್ ಮೂರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 21, 2024 | 1:41 PM

ಹಣ ಸಂಪಾದಿಸುವವರಿಗೆ ಸಂತೃಪ್ತಿ ಎನ್ನುವುದಿರುವುದಿಲ್ಲ. ಒಂದು ಕೋಟಿ ಸಂಪಾದಿಸಿದವನಿಗೆ ಹತ್ತು ಕೋಟಿ ಪಡೆಯಬೇಕೆಂಬ ಆಸೆ. ನೂರು ಕೋಟಿ ಇದ್ದವನಿಗೆ ಸಾವಿರ ಕೋಟಿ ಬೇಕೆಂಬ ಆಸೆ. ಲಕ್ಷಾಂತರ ಕೋಟಿ ಇದ್ದವನಿಗೆ ವಿಶ್ವದ ನಂಬರ್ ಒನ್ ಶ್ರೀಮಂತನಾಗುವ ಆಸೆ. ನನಗೆ, ನನ್ನ ಕುಟುಂಬಕ್ಕೆ, ನನ್ನ ಜನರಿಗೆ ಸಂಪಾದಿಸಬೇಕೆಂದು ಹೇಳುವ ಇವರಿಗೆ ಈ ಹಣದ ಅಮಲು ಕೊನೆಯವರೆಗೂ ಇಳಿಯುವುದಿಲ್ಲ. ಇಂಥ ಜನರ ಮಧ್ಯೆ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ರೀತಿಯಲ್ಲಿ ಸಂಪಾದಿಸಿದ ಹಣವನ್ನು ಸಮಾಜಕ್ಕೆ ಮರಳಿಸುವ ದಾನವೀರರೂ ಇದ್ದಾರೆ. ಈ ಮಹಾನ್ ವ್ಯಕ್ತಿಗಳ ಸಾಲಿನಲ್ಲಿ ಎದ್ದು ನಿಲ್ಲುವಂಥವರು ಅಮೆರಿಕದ ಉದ್ಯಮಿ ಬಾಬ್ ಮೂರ್. ರೆಡ್ ಮಿಲ್ (Red Mill) ಕಂಪನಿಯ ಸಂಸ್ಥಾಪಕರಾದ ಬಾಬ್ ಮೂರ್ (Bob Moore) ಇತ್ತೀಚೆಗೆ (ಫೆ. 10) ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಉದ್ಯೋಗಿಗಳಿಗೆ ಕಂಪನಿಯ ಪೂರ್ಣ ಮಾಲಕತ್ವ ಕೊಟ್ಟಂತಹ ಧೀಮಂತ ವ್ಯಕ್ತಿ ಅವರು. ಕಾರ್ಲ್ ಮಾರ್ಕ್ಸ್ ಎಂಬ ವಿಚಾರವಾದಿ ಕಂಡಿದ್ದ ಮೂಲಭೂತ ಆಶಯ ಬಾಬ್ ಮೂರ್​ನಂಥವರ ಮೂಲಕ ಈಡೇರುತ್ತದೆ ಎಂದರೆ ಅತಿಶಯೋಕ್ತಿ ಆಗದು.

ಬಾಬ್ ಮೂರ್ ಅವರ ರೆಡ್ ಮಿಲ್ ಸಂಸ್ಥೆ ಆಹಾರ ಉತ್ಪನ್ನಗಳನ್ನು ಮಾರುತ್ತದೆ. ಕಳೆದ ಎರಡು ಮೂರು ದಶಕಗಳಿಂದ ರೆಡ್ ಮಿಲ್ ಗಮನಾರ್ಹವಾಗಿ ಬೆಳೆದಿದೆ. ವಯಸ್ಸಾದ ಕಾರಣ 2018ರಿಂದ ಕಂಪನಿಯ ಬಿಸಿನೆಸ್​ನಲ್ಲಿ ಅವರು ಪಾಲ್ಗೊಂಡಿರಲಿಲ್ಲ. ಮೂವರು ಮಕ್ಕಳು, ಒಂಬತ್ತು ಮೊಮ್ಮಕ್ಕಳು ಮತ್ತು ಆರು ಮರಿಮಕ್ಕಳನ್ನು ಹೊಂದಿದ್ದ ಬಾಬ್ ಮೂರ್ ತನ್ನ ಕಂಪನಿಯನ್ನು ಮಾರಿ ಆ ಹಣವನ್ನು ತಮ್ಮ ಕುಟುಂಬಕ್ಕೆ ನೀಡಬಹುದಿತ್ತು. ಅಥವಾ ಕಂಪನಿಯ ಮಾಲಕತ್ವವನ್ನು ಮಕ್ಕಳ ಕೈಗೆ ಒಪ್ಪಿಸಬಹುದಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಕಂಪನಿಯ ಇಡೀ ಮಾಲಕತ್ವವನ್ನು ಉದ್ಯೋಗಿಗಳಿಗೆ ನೀಡಿದ್ದಾರೆ.

ಇದನ್ನೂ ಓದಿ: ಊಟಕ್ಕೆ ದುಡ್ಡಿಲ್ಲದೆ ಹಸಿವಿನಿಂದ ಇದ್ದ ಆ ದಿನಗಳು; ಹಳೆಯ ಕಷ್ಟಗಳನ್ನು ನೆನೆವ ಶ್ರೀಮಂತ ಯುವಕ ಅನುಪಮ್ ಮಿತ್ತಲ್

ಉದ್ಯೋಗಿಗಳಿಗೆ ಮಾಲಕತ್ವ ಕೊಡುವ ಬಾಬ್ ಮೂರ್ ನಿರ್ಧಾರ ದಿಢೀರ್ ಆಗಿದ್ದಲ್ಲ. 2010ರಲ್ಲಿ ತಮ್ಮ 81ನೇ ಜನ್ಮದಿನದಂದೇ ಅವರು ಕಂಪನಿಯ ಪಾಲುದಾರಿಕೆಯನ್ನು ಉದ್ಯೋಗಿಗಳಿಗೆ ಹಂಚಿದ್ದರು. ಆಗ 209 ಉದ್ಯೋಗಿಗಳು ರೆಡ್ ಮಿಲ್ಸ್​ನಲ್ಲಿ ಇದ್ದರು. ಬಿಸಿನೆಸ್ ಚೆನ್ನಾಗಿ ಬೆಳೆದು ಹತ್ತು ವರ್ಷದಲ್ಲಿ, ಅಂದರೆ 2020ರಲ್ಲಿ ಉದ್ಯೋಗಿಗಳ ಸಂಖ್ಯೆ 700ಕ್ಕೆ ಬೆಳೆಯಿತು. ಅಷ್ಟರಲ್ಲಿ ಅವರು ಕಂಪನಿಯ ಇಡೀ ಮಾಲಕತ್ವವನ್ನು ಎಲ್ಲಾ 700 ಉದ್ಯೋಗಿಗಳಿಗೂ ಹಂಚಿಕೆ ಮಾಡಿದ್ದರು. ಮಾಲಕತ್ವವನ್ನು ಷೇರುಗಳ ಮೂಲಕ ಹಂಚಿದ್ದರು.

ಬಿಸಿನೆಸ್ ಮಾಡಲ್ ಬದಲಿಸಿದ್ದ ಬಾಬ್ ಮೂರ್…

ಅಪಾರ ದೈವಭಕ್ತರಾದ ಬಾಬ್ ಮೂರ್ ಅವರ ಈ ನಿಸ್ವಾರ್ಥ ಮನೋಭಾವಕ್ಕೆ ಬೈಬಲ್ ಪ್ರೇರಣೆಯಂತೆ. ಬೇರೆಯವರು ನಿಮಗೆ ಏನು ಸಹಾಯ ಮಾಡಬೇಕೆಂದು ನಿರೀಕ್ಷಿಸುತ್ತೀರೋ, ಆ ಸಹಾಯವನ್ನು ನೀವೇ ಬೇರೆಯವರಿಗೆ ಮಾಡಿ ಎನ್ನುವಂತಹ ಒಂದು ಬೈಬಲ್ ನೀತಿ ಪಾಠವನ್ನು ಒಮ್ಮೆ ಉಲ್ಲೇಖಿಸಿದ್ದ ಅವರು, ಉದ್ಯೋಗಿಗಳಿಗೆ ಕಂಪನಿಯ ಮಾಲೀಕತ್ವ ಕೊಡಲು ಅದೇ ಪ್ರೇರಣೆ ಎಂದಿದ್ದರು.

ಇದನ್ನೂ ಓದಿ: ಬಾಡಿಗೆ ಮನೆಯಲ್ಲಿ ಕೆಟ್ಟುಹೋದ ವಸ್ತುಗಳ ದುರಸ್ತಿ ಜವಾಬ್ದಾರಿ ಯಾರದ್ದು? ಈ ಕಾನೂನು ತಿಳಿದಿರಿ

ಸಾಂಪ್ರದಾಯಿಕವಾಗಿ ಬಿಸಿನೆಸ್ ಮಾಡಲ್ ಎಂಬುದು ಕಾರ್ಮಿಕರಿಗಿಂತ ಮಾಲೀಕರಿಗೆ ಅನುಕೂಲವಾಗುವಂತೆ ಇರುತ್ತದೆ. ತಾನು ಈ ಪ್ರವೃತ್ತಿಯಿಂದ ಹೊರಬಂದು ಉದ್ಯೋಗಿ ಕೇಂದ್ರಿತ ಬಿಸಿನೆಸ್ ಮಾಡಲ್ ಅನುಸರಿಸಿದೆ ಎಂದು ಕೆಲ ವರ್ಷದ ಹಿಂದಿನ ಸಂದರ್ಶನವೊಂದರಲ್ಲಿ ಬಾಬ್ ಮೂರ್ ಹೇಳಿಕೊಂಡಿದ್ದರು.

ಇಂಥವರು ಇವತ್ತಿನ ಕಾಲದಲ್ಲಿ ನಮ್ಮ ನಡುವೆ ಬದುಕಿದ್ದರು ಎನ್ನುವುದೇ ಇವತ್ತಿನ ತಲೆಮಾರಿನ ಜನರ ಸೌಭಾಗ್ಯ ಎನ್ನಬೇಕಾದೀತು..!

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ