ನೋಟು ಹಾಳಾಗುವ ಭಯ ಬೇಡ; ಕಾಗದದ ಬದಲು ಪಾಲಿಮರ್ ನೋಟು ಮುದ್ರಿಸಲು ಸರ್ಕಾರದ ಆಲೋಚನೆ

India May Soon Have Polymer Banknotes: ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಾಂಪ್ರದಾಯಿಕ ಕಾಗದದ ಕರೆನ್ಸಿ ಬದಲಿಗೆ ಅತ್ಯಾಧುನಿಕ ಪ್ಲಾಸ್ಟಿಕ್ ಅಥವಾ ಪೋಲಿಮರ್ ನೋಟುಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಲು ಸಿದ್ಧತೆ ನಡೆಸಿದೆ. ಈ ನೋಟುಗಳು ದೀರ್ಘ ಬಾಳಿಕೆ, ಜಲನಿರೋಧಕ ಸಾಮರ್ಥ್ಯ ಮತ್ತು ನಕಲಿ ನೋಟು ತಡೆಗಟ್ಟುವ ಅತ್ಯುನ್ನತ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿವೆ. ಆರಂಭದಲ್ಲಿ ದೇಶದ ಆಯ್ದ ಐದು ನಗರಗಳಲ್ಲಿ ಇವುಗಳನ್ನು ಪರೀಕ್ಷಾರ್ಥವಾಗಿ ಚಲಾವಣೆಗೆ ತರಲಾಗುವುದು.

ನೋಟು ಹಾಳಾಗುವ ಭಯ ಬೇಡ; ಕಾಗದದ ಬದಲು ಪಾಲಿಮರ್ ನೋಟು ಮುದ್ರಿಸಲು ಸರ್ಕಾರದ ಆಲೋಚನೆ
ರೂಪಾಯಿ ನೋಟುಗಳು
Image Credit source: Shutterstock

Updated on: May 29, 2026 | 3:25 PM

ನವದೆಹಲಿ, ಮೇ 29: ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದಲ್ಲಿ ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಕಾಗದದ ನೋಟುಗಳ ಬದಲಿಗೆ ಪ್ಲಾಸ್ಟಿಕ್ ಅಥವಾ ಪಾಲಿಮರ್ ಬ್ಯಾಂಕ್‌ನೋಟುಗಳನ್ನು (Polymer Banknotes) ಪರಿಚಯಿಸಲು ಗಂಭೀರ ಚಿಂತನೆ ನಡೆಸಿದೆ. ನೋಟು ಮುದ್ರಣದ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ನಕಲಿ ನೋಟುಗಳ ಹಾವಳಿಗೆ ಬ್ರೇಕ್ ಹಾಕುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆರಂಭದಲ್ಲಿ ದೇಶದ ಐದು ಆಯ್ದ ನಗರಗಳಲ್ಲಿ (ವಿವಿಧ ಹವಾಮಾನ ವಲಯಗಳನ್ನು ಆಧರಿಸಿ) ₹10 ಮುಖಬೆಲೆಯ ಪಾಲಿಮರ್ ನೋಟುಗಳನ್ನು ಪ್ರಾಯೋಗಿಕವಾಗಿ (Pilot Project) ಚಲಾವಣೆಗೆ ತರಲು ಸಿದ್ಧತೆಗಳು ನಡೆದಿವೆ.

ಕಾಗದದ ನೋಟುಗಳನ್ನು ಮುದ್ರಿಸಲು ಸರ್ಕಾರಕ್ಕೆ ಸಾಕಷ್ಟು ವೆಚ್ಚವಾಗುತ್ತದೆ. ಆರ್​ಬಿಐ ದತ್ತಾಂಶದ ಪ್ರಕಾರ 2023-24ರಲ್ಲಿ ನೋಟುಗಳ ಮುದ್ರಣಕ್ಕೆ 5,101.4 ಕೋಟಿ ರೂ ವೆಚ್ಚವಾಗಿತ್ತು. 2024-25ರಲ್ಲಿ ಇದು 6,372.8 ಕೋಟಿ ರೂಗೆ ಏರಿತ್ತು. ಪಾಲಿಮರ್​ನಿಂದ ನೋಟು ತಯಾರಿಸುವುದರಿಂದ ಸಾಕಷ್ಟು ಹಣ ಉಳಿಸಬಹುದು. ಇದರ ಜೊತೆಗೆ ಇನ್ನೂ ಹಲವು ರೀತಿಯ ಅನುಕೂಲಗಳನ್ನು ಪ್ಲಾಸ್ಟಿಕ್ ನೋಟುಗಳು ಒದಗಿಸುತ್ತವೆ.

ಇದನ್ನೂ ಓದಿ: ಭಾರತಕ್ಕೆ ಬರಲಿದೆ ಅತ್ಯಾಧುನಿಕ ಸಬ್‌ಸ್ಟ್ರೇಟ್ ತಂತ್ರಜ್ಞಾನ: ಒಡಿಶಾ ಸರ್ಕಾರ, ಇಂಟೆಲ್ ಮತ್ತು 3DGS ಒಪ್ಪಂದಕ್ಕೆ ಅಶ್ವಿನಿ ವೈಷ್ಣವ್ ಶ್ಲಾಘನೆ

ಕಾಗದದ ನೋಟುಗಳಿಗಿಂತ ಪಾಲಿಮರ್ ನೋಟುಗಳು ಹೇಗೆ ಉತ್ತಮ?

  • ದೀರ್ಘ ಬಾಳಿಕೆ: ಭಾರತದಲ್ಲಿ ಕಾಗದದ ನೋಟುಗಳ ಸರಾಸರಿ ಆಯಸ್ಸು ತುಂಬಾ ಕಡಿಮೆ. ಆದರೆ ಪ್ಲಾಸ್ಟಿಕ್ ನೋಟುಗಳು ಕಾಗದದ ನೋಟುಗಳಿಗಿಂತ ಕನಿಷ್ಠ 2 ರಿಂದ 4 ಪಟ್ಟು ಹೆಚ್ಚು ದಿನ ಬಾಳಿಕೆ (Durability) ಬರುತ್ತವೆ. ಇವುಗಳನ್ನು ಸುಲಭವಾಗಿ ಹರಿಯಲು ಅಥವಾ ಮಡಚಲು ಸಾಧ್ಯವಿಲ್ಲ.
  • ವಾಟರ್​ಪ್ರೂಫ್ ಮತ್ತು ಸ್ವಚ್ಛ: ಪಾಲಿಮರ್ ನೋಟುಗಳು ಸಂಪೂರ್ಣವಾಗಿ ಜಲನಿರೋಧಕ (Waterproof) ಆಗಿರುತ್ತವೆ. ಆಕಸ್ಮಿಕವಾಗಿ ಬಟ್ಟೆ ಒಗೆಯುವಾಗ ಜೇಬಿನಲ್ಲಿ ಉಳಿದರೂ ಇವು ಹಾಳಾಗುವುದಿಲ್ಲ. ಇವುಗಳ ಮೇಲ್ಮೈ ನಯವಾಗಿರುವುದರಿಂದ ಕೊಳಕು, ಎಣ್ಣೆ ಅಥವಾ ಬೆವರು ಇವುಗಳಿಗೆ ಅಂಟಿಕೊಳ್ಳುವುದಿಲ್ಲ. ಹೀಗಾಗಿ ಇವು ಕಾಗದದ ನೋಟುಗಳಿಗಿಂತ ಹೆಚ್ಚು ಸ್ವಚ್ಛವಾಗಿರುತ್ತವೆ.
  • ನಕಲಿ ನೋಟು ತಡೆ: ಪ್ಲಾಸ್ಟಿಕ್ ನೋಟುಗಳನ್ನು ನಕಲು ಮಾಡುವುದು (Counterfeit) ಅತ್ಯಂತ ಕಷ್ಟಕರ. ಇದರಲ್ಲಿ ಪಾರದರ್ಶಕ ವಿಂಡೋಗಳು (Transparent Windows), ಅಡಗಿದ ಅಕ್ಷರಗಳು ಮತ್ತು ಅತ್ಯಾಧುನಿಕ ಮೆಟಾಮೆರಿಕ್ ಶಾಯಿಗಳನ್ನು (Metameric Inks) ಬಳಸಲಾಗುವುದರಿಂದ ಸುರಕ್ಷತೆ ಹೆಚ್ಚಾಗಿರುತ್ತದೆ.
  • ಪರಿಸರ ಸ್ನೇಹಿ: ಈ ನೋಟುಗಳು ಹಳೆಯದಾದಾಗ ಅಥವಾ ಚಲಾವಣೆಯಿಂದ ಹೊರಗುಳಿದಾಗ ಇವುಗಳನ್ನು ಕರಗಿಸಿ ಮರುಬಳಕೆ (Recycle) ಮಾಡಬಹುದು. ಇದರಿಂದ ಪ್ಲಾಸ್ಟಿಕ್ ಬಕೆಟ್ ಅಥವಾ ಮಗ್‌ಗಳಂತಹ ಇತರ ವಸ್ತುಗಳನ್ನು ತಯಾರಿಸಬಹುದು. ಇವುಗಳ ಸಂಪೂರ್ಣ ಜೀವಿತಾವಧಿಯಲ್ಲಿ ಹಸಿರುಮನೆ ಅನಿಲಗಳ (Greenhouse Gases) ಹೊರಸೂಸುವಿಕೆ ಕಡಿಮೆಯಿರುತ್ತದೆ. ಈ ಮೂಲಕ ಪ್ಲಾಸ್ಟಿಕ್ ನೋಟುಗಳು ಪರಿಸರಸ್ನೇಹಿ (Eco-Friendly) ಕೂಡ ಹೌದು.
  • ಎಟಿಎಂ ಯಂತ್ರಗಳಿಗೆ ಸೂಕ್ತ: ಪ್ಲಾಸ್ಟಿಕ್ ನೋಟುಗಳು ಎಟಿಎಂ (ATM) ಮತ್ತು ನೋಟು ಎಣಿಕೆ ಯಂತ್ರಗಳಲ್ಲಿ ಅತ್ಯಂತ ಸುಗಮವಾಗಿ ಕಾರ್ಯನಿರ್ವಹಿಸುತ್ತವೆ. ಇವು ಹರಿದು ಯಂತ್ರಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುವುದಿಲ್ಲ.

ಇದನ್ನೂ ಓದಿ: ಶೇರುಗಳಂತೆ ರಿಯಲ್ ಎಸ್ಟೇಟ್ ಆಸ್ತಿಯಲ್ಲಿ ಪಾಲು ಖರೀದಿಸಿ… ಇದು REITs ಮತ್ತು InvITs ಕೊಡುವ ಅವಕಾಶ

ಯಾವೆಲ್ಲಾ ದೇಶಗಳಲ್ಲಿ ಪ್ಲಾಸ್ಟಿಕ್ ನೋಟುಗಳಿವೆ?

ವಿಶ್ವದಲ್ಲೇ ಮೊದಲ ಬಾರಿಗೆ 1988 ರಲ್ಲಿ ಆಸ್ಟ್ರೇಲಿಯಾ ದೇಶವು ಪಾಲಿಮರ್ ನೋಟುಗಳನ್ನು ಪರಿಚಯಿಸಿತು. ಪ್ರಸ್ತುತ ಬ್ರಿಟನ್ (UK), ಕೆನಡಾ, ನ್ಯೂಜಿಲೆಂಡ್, ರೊಮೇನಿಯಾ, ವಿಯೆಟ್ನಾಂ ಮತ್ತು ಮಾಲ್ಡೀವ್ಸ್ ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳು ಸಂಪೂರ್ಣವಾಗಿ ಅಥವಾ ಭಾಗಶಃ ಪ್ಲಾಸ್ಟಿಕ್ ಕರೆನ್ಸಿಯನ್ನು ಬಳಸುತ್ತಿವೆ.

ಭಾರತದಲ್ಲಿರುವ ಸವಾಲುಗಳೇನು?

ಭಾರತದಂತಹ ವೈವಿಧ್ಯಮಯ ಹವಾಮಾನ ಮತ್ತು ಅತಿ ಹೆಚ್ಚು ತಾಪಮಾನ ಹೊಂದಿರುವ ದೇಶದಲ್ಲಿ ಪ್ಲಾಸ್ಟಿಕ್ ನೋಟುಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದು ಪ್ರಮುಖ ಸವಾಲಾಗಿದೆ. ಅತಿಯಾದ ಉಷ್ಣಾಂಶಕ್ಕೆ ಇವು ಹಾನಿಗೊಳಗಾಗದಂತೆ ತಡೆಯಲು ಆರ್‌ಬಿಐ ದೀರ್ಘಾವಧಿಯ ಸಂಶೋಧನೆಗಳನ್ನು ನಡೆಸುತ್ತಿದೆ. ಮೊದಲ ಹಂತದ ಪ್ರಾಯೋಗಿಕ ಪರೀಕ್ಷೆಯು ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಭಾರತೀಯರ ಕೈಯಲ್ಲೂ ಪ್ಲಾಸ್ಟಿಕ್ ರೂಪಾಯಿ ನೋಟುಗಳು ಓಡಾಡಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us