
ನವದೆಹಲಿ, ಜೂನ್ 3: ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸಲು ಸುಮಾರು 12 ಬಿಲಿಯನ್ ಯುಎಸ್ ಡಾಲರ್ (ಸುಮಾರು ₹1 ಲಕ್ಷ ಕೋಟಿಗೂ ಅಧಿಕ) ಮೌಲ್ಯದ ಚಿನ್ನವನ್ನು (Gold) ಮಾರಾಟ ಮಾಡಿದೆ ಎಂಬ ಮಾಧ್ಯಮಗಳ ವರದಿಯನ್ನು ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಅಧಿಕೃತವಾಗಿ ತಿರಸ್ಕರಿಸಿವೆ. ಈ ವರದಿಗಳು ಸಂಪೂರ್ಣವಾಗಿ ಸುಳ್ಳು ಎಂದು ಸ್ಪಷ್ಟಪಡಿಸಿರುವ ಬ್ಯಾಂಕ್, ದೇಶದ ಭೌತಿಕ ಚಿನ್ನದ ದಾಸ್ತಾನು 880.52 ಮೆಟ್ರಿಕ್ ಟನ್‌ಗಳಷ್ಟು ಯಾವುದೇ ಬದಲಾವಣೆಯಿಲ್ಲದೆ ಸುರಕ್ಷಿತವಾಗಿದೆ ಎಂದು ತಿಳಿಸಿದೆ.
ಬ್ಲೂಮ್‌ಬರ್ಗ್ (Bloomberg) ಮಾಧ್ಯಮ ಸಂಸ್ಥೆಯು ಇತ್ತೀಚೆಗೆ ಪ್ರಕಟಿಸಿದ ವರದಿಯೊಂದರಲ್ಲಿ, ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಿಂದ ರೂಪಾಯಿ ಮೌಲ್ಯದ ಕುಸಿತವನ್ನು ತಡೆಯಲು ಆರ್‌ಬಿಐ ಮೇ 22 ಕ್ಕೆ ಕೊನೆಗೊಂಡ ಎರಡು ವಾರಗಳಲ್ಲಿ ಭಾರಿ ಪ್ರಮಾಣದ ಚಿನ್ನವನ್ನು ಮಾರಾಟ ಮಾಡಿರಬಹುದು ಎಂದು ಅಂದಾಜಿಸಿತ್ತು.
ಮಾಧ್ಯಮಗಳಲ್ಲಿ ಈ ಸುದ್ದಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಇದರ ಫ್ಯಾಕ್ಟ್-ಚೆಕ್ ನಡೆಸಿ, ಈ ವರದಿಯನ್ನು “ಫೇಕ್” (ಸುಳ್ಳು) ಎಂದು ಘೋಷಿಸಿದೆ.
PIB ಮಾಡಿರುವ ಟ್ವೀಟ್
A news report published by @Bloomberg states that RBI may have sold gold amounting to approximately USD 12 billion.#PIBFactCheck
❌ This claim is FAKE
✔️ According to @RBI, the share of gold in India’s foreign exchange reserves rose from 13.92% at end-September 2025 to 16.70%… pic.twitter.com/eVjxPxEv1i
— PIB Fact Check (@PIBFactCheck) June 3, 2026
ಇದನ್ನೂ ಓದಿ: ಅಮೆರಿಕ ಹೊಸ ‘ವರಸೆ’; ಫೋರ್ಸ್ಡ್ ಲೇಬರ್ ಹೆಸರಲ್ಲಿ ಭಾರತ ಸೇರಿ 60 ದೇಶಗಳ ಮೇಲೆ ಶೇ. 12.5 ಹೆಚ್ಚುವರಿ ಸುಂಕಕ್ಕೆ ಯೋಜನೆ
ಆರ್‌ಬಿಐ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ ಈ ಕೆಳಗಿನ ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ:
ಮಾಧ್ಯಮಗಳ ವರದಿಗೆ ಮೂಲ ಕಾರಣವಾಗಿದ್ದು ಆರ್‌ಬಿಐನ ಚಿನ್ನದ ಮೌಲ್ಯದಲ್ಲಾದ ಏರಿಳಿತ. ಮೇ 8 ರಂದು ಸುಮಾರು 120 ಬಿಲಿಯನ್ ಡಾಲರ್‌ನಷ್ಟಿದ್ದ ಆರ್‌ಬಿಐ ಚಿನ್ನದ ದಾಸ್ತಾನಿನ ಒಟ್ಟು ಮೌಲ್ಯವು, ಮೇ 22 ರ ವೇಳೆಗೆ 114.8 ಬಿಲಿಯನ್ ಡಾಲರ್‌ಗೆ ಕುಸಿದಿತ್ತು.
ಆದರೆ, ಈ ಫಾರೆಕ್ಸ್ ಮೌಲ್ಯದ ಕುಸಿತವು ಚಿನ್ನವನ್ನು ಮಾರಾಟ ಮಾಡಿದ್ದರಿಂದ ಆಗಿದ್ದಲ್ಲ. ಬದಲಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳಲ್ಲಿ ಉಂಟಾದ ಏರಿಳಿತಗಳು (International Gold Prices) ಮತ್ತು ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯದ ವ್ಯತ್ಯಾಸದಿಂದಾಗಿ ಈ ಮೌಲ್ಯ ಬದಲಾಗಿದೆಯೇ ಹೊರತು, ಬ್ಯಾಂಕಿನ ಬಳಿ ಇರುವ ಭೌತಿಕ ಚಿನ್ನದ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಆದಾಯ ತೆರಿಗೆ ಅಪ್ಡೇಟ್; ಐಟಿಆರ್-1 ನಮೂನೆ ಭರ್ತಿ ಮಾಡಿ, ಸಲ್ಲಿಸುವ ಕ್ರಮ; 16 ಹಂತಗಳ ವಿವರಣೆ
ಆರ್‌ಬಿಐ ಹೊಂದಿರುವ ಒಟ್ಟು 880.52 ಮೆಟ್ರಿಕ್ ಟನ್ ಚಿನ್ನದಲ್ಲಿ, ಶೇಕಡಾ 77 ರಷ್ಟು ಭಾಗವನ್ನು ಭಾರತದ ಒಳಗೇ ಸುರಕ್ಷಿತವಾಗಿ ಇಡಲಾಗಿದೆ. ವಿದೇಶಗಳಲ್ಲಿರುವ ಇನ್ನುಳಿದ ಭಾರತೀಯ ಚಿನ್ನದ ದಾಸ್ತಾನುಗಳನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ (Bank of England) ಮತ್ತು ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ಸ್ (BIS) ಸಂಸ್ಥೆಗಳಲ್ಲಿ ಇರಿಸಲಾಗಿದೆ.
ಇಂತಹ ಸೂಕ್ಷ್ಮ ಆರ್ಥಿಕ ವಿಷಯಗಳ ಕುರಿತು ಸಾರ್ವಜನಿಕರು ಮಾಧ್ಯಮಗಳ ಊಹಾಪೋಹಗಳನ್ನು ನಂಬದೆ, ಆರ್‌ಬಿಐ ನಿಯತಕಾಲಿಕವಾಗಿ ಬಿಡುಗಡೆ ಮಾಡುವ ಅಧಿಕೃತ ಬುಲೆಟಿನ್ ಹಾಗೂ ಮಾಹಿತಿಗಳನ್ನು ಮಾತ್ರ ಅವಲಂಬಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ಜನರಲ್ಲಿ ಮನವಿ ಮಾಡಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:24 pm, Wed, 3 June 26