Inflation: ಡಿಸೆಂಬರ್​ನಲ್ಲಿ ಹಣದುಬ್ಬರ ಶೇ. 5.9ಕ್ಕೆ ಏರಿಕೆಯಾಗಿರುವ ಸಾಧ್ಯತೆ: 18 ಆರ್ಥಿಕ ತಜ್ಞರ ಸರಾಸರಿ ಅಂದಾಜು

|

Updated on: Jan 11, 2024 | 11:41 AM

December Retail Inflation: ಭಾರತದ ಹೆಡ್​ಲೈನ್ ಅಥವಾ ರೀಟೇಲ್ ಹಣದುಬ್ಬರ ಡಿಸೆಂಬರ್ ತಿಂಗಳಲ್ಲಿ ಶೇ. 5.9ರಷ್ಟಿರಬಹುದು ಎಂದು ವಿವಿಧ ಆರ್ಥಿಕ ತಜ್ಞರ ಸರಾಸರಿ ಅಭಿಪ್ರಾಯ ಇದೆ. ಮನಿಕಂಟ್ರೋಲ್ ನಡೆಸಿದ ಸಮೀಕ್ಷೆಯಲ್ಲಿ 18 ಹಣಕಾಸು ಸಂಸ್ಥೆಗಳ ಆರ್ಥಿಕ ತಜ್ಞರು ಭಾಗವಹಿಸಿ ಹಣದುಬ್ಬರ ದರದ ಅಂದಾಜು ಮಾಡಿದ್ದಾರೆ. ನವೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 5.55ರಷ್ಟಿತ್ತು. ಜ. 12ರಂದು ಸರ್ಕಾರದಿಂದ ಅಧಿಕೃತ ಹಣದುಬ್ಬರ ಮಾಹಿತಿ ಪ್ರಕಟವಾಗಲಿದೆ.

Inflation: ಡಿಸೆಂಬರ್​ನಲ್ಲಿ ಹಣದುಬ್ಬರ ಶೇ. 5.9ಕ್ಕೆ ಏರಿಕೆಯಾಗಿರುವ ಸಾಧ್ಯತೆ: 18 ಆರ್ಥಿಕ ತಜ್ಞರ ಸರಾಸರಿ ಅಂದಾಜು
ಹಣದುಬ್ಬರ
Follow us on

ನವದೆಹಲಿ, ಜನವರಿ 11: ಭಾರತದ ರೀಟೇಲ್ ಹಣದುಬ್ಬರ ನವೆಂಬರ್​ನದ್ದಕ್ಕಿಂತ ಡಿಸೆಂಬರ್​ನಲ್ಲಿ ಹೆಚ್ಚಿರಬಹುದು ಎಂದು ಸಮೀಕ್ಷೆಯೊಂದರಲ್ಲಿ ಅಂದಾಜು ಮಾಡಲಾಗಿದೆ. ಮನಿಕಂಟ್ರೋಲ್ 18 ಆರ್ಥಿಕ ತಜ್ಞರ ಅಭಿಪ್ರಾಯ ಸಂಗ್ರಹಿಸಿದ್ದು, ಅದರ ಪ್ರಕಾರ ಡಿಸೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 5.9ರಷ್ಟಿರಬಹುದು ಎನ್ನಲಾಗಿದೆ. ಈ 18 ಎಕನಾಮಿಸ್ಟ್​ಗಳ ಸರಾಸರಿ ಅಂದಾಜು ಇದು. ನವೆಂಬರ್ ತಿಂಗಳಲ್ಲಿ ಹಣದುಬ್ಬರ ಶೇ. 5.55ರಷ್ಟಿತ್ತು. ಡಿಸೆಂಬರ್​ನಲ್ಲಿ ಇದು ಏರಿಕೆ ಆಗಬಹುದು ಎನ್ನಲಾಗಿದೆ. ನಾಳೆ ಶುಕ್ರವಾರ (ಜ. 12) ಕೇಂದ್ರದ ಸಾಂಖ್ಯಿಕ ಮತ್ತು ಯೋಜನಾ ಸಚಿವಾಲಯ ಡಿಸೆಂಬರ್ ತಿಂಗಳ ಹಣದುಬ್ಬರ ವಿವರವನ್ನು ಬಿಡುಗಡೆ ಮಾಡುತ್ತದೆ. ಹಾಗೆಯೇ, ನವಂಬರ್ ತಿಂಗಳ ಔದ್ಯಮಿಕ ಉತ್ಪಾದನೆ ಸೂಚಿ (IIP- Index of Industrial Production) ದತ್ತಾಂಶವನ್ನೂ ಬಿಡುಗಡೆ ಮಾಡುತ್ತದೆ.

ಮನಿಕಂಟ್ರೋಲ್​ನ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಆರ್ಥಿಕ ತಜ್ಞರ ಪ್ರಕಾರ ನವೆಂಬರ್​ನಲ್ಲಿ ಔದ್ಯಮಿಕ ಉತ್ಪಾದನೆ ಶೇ. 3.5ಕ್ಕೆ ಕುಸಿದಿರಬಹುದು ಎಂಬ ಸರಾಸರಿ ಅಂದಾಜು ಇದೆ. ಇದು ನಿಜವೇ ಆದಲ್ಲಿ ಕಳೆದ ಎಂಟು ತಿಂಗಳಲ್ಲೇ ಐಐಪಿ ವೃದ್ಧಿದರ ಕನಿಷ್ಠ ಮಟ್ಟದಲ್ಲಿ ಇರಲಿದೆ.

ಇಂಡಸ್ಟ್ರಿಯಲ್ ಪ್ರೊಡಕ್ಷನ್ ಅಥವಾ ಔದ್ಯಮಿಕ ಉತ್ಪಾದನೆ ಕಡಿಮೆ ಆದಲ್ಲಿ ಹಣದುಬ್ಬರದ ಮೇಲೆ ಪರಿಣಾಮ ಬೀರುತ್ತದೆ. ಆಹಾರ ಮತ್ತಿತರ ಬೆಲೆಗಳು ಕಡಿಮೆ ಆದರೂ ಕೂಡ ಐಐಪಿ ಪರಿಣಾಮ ಹಣದುಬ್ಬರದ ಮೇಲಾಗುತ್ತದೆ. ನವೆಂಬರ್​ನಲ್ಲಿನ ಐಐಪಿ ದರ ಡಿಸೆಂಬರ್​ನ ಹಣದುಬ್ಬರವನ್ನು ಪ್ರಭಾವಿಸುತ್ತದೆ. ಅಂದರೆ, ನವೆಂಬರ್​ನಲ್ಲಿ ಐಐಪಿ ದರ ಕಡಿಮೆ ಆದಲ್ಲಿ ಡಿಸೆಂಬರ್​ನಲ್ಲಿ ಹಣದುಬ್ಬರ ಹೆಚ್ಚುವಂತೆ ಮಾಡಬಹುದು.

ಇದನ್ನೂ ಓದಿ: Powerful Passports: ವಿಶ್ವದ ಅತ್ಯಂತ ಪ್ರಬಲ ಪಾಸ್​ಪೋರ್ಟ್​ಗಳ ದೇಶಗಳ್ಯಾವುವು? ಭಾರತದ ಪಾಸ್​ಪೋರ್ಟ್ ಪ್ರಭಾವ ಎಷ್ಟು?

ಮನಿಕಂಟ್ರೋಲ್​ನ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 18 ಆರ್ಥಿಕ ತಜ್ಞರ ಪೈಕಿ ಏಳು ಮಂದಿ ಡಿಸೆಂಬರ್​ನ ರೀಟೇಲ್ ಹಣದುಬ್ಬರ ಶೇ. 6ಕ್ಕಿಂತ ಹೆಚ್ಚಿರಬಹುದು ಎಂದು ಅಂದಾಜಿಸಿದ್ದಾರೆ. ಹಿಂದಿನ ಶೇ. 5.55ಕ್ಕಿಂತ ಕಡಿಮೆ ಹಣದುಬ್ಬರ ಸಾಧ್ಯತೆಯನ್ನು ಬ್ಯಾಂಕ್ ಆಫ್ ಬರೋಡಾದ ಆರ್ಥಿಕ ತಜ್ಞರು ತಿಳಿಸಿದ್ದಾರೆ. ಇವರ ಪ್ರಕಾರ ಡಿಸೆಂಬರ್​ನಲ್ಲಿ ಹಣದುಬ್ಬರ ಶೇ. 5.50 ಇರಬಹುದು.

ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್ ಮತ್ತು ಸೊಸೈಟೆ ಜನರೇಲ್ ಸಂಸ್ಥೆಗಳ ಆರ್ಥಿಕ ತಜ್ಞರು ಕ್ರಮವಾಗಿ ಶೇ. 6.3 ಮತ್ತು ಶೇ. 6.4ರಷ್ಟು ಹಣದುಬ್ಬರ ಇರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ