ಚ್ಯಾಟ್​ಜಿಪಿಟಿ, ಡೀಪ್​ಸೀಕ್​ಗೆ ಸಮನಾದ ಎಲ್​ಎಲ್​ಎಂ ನಿರ್ಮಿಸಲಿರುವ ಭಾರತ; ಮಹತ್ವಾಕಾಂಕ್ಷಿ ಎಐ ಮಿಷನ್​ಗೆ 8 ಸಂಸ್ಥೆಗಳ ಆಯ್ಕೆ

India to build massive 1 trillion parameter AI model: ಚ್ಯಾಟ್​ಜಿಪಿಟಿಗೆ ಸಮನಾದ ಲಾರ್ಜ್ ಲ್ಯಾಂಗ್ವೇಜ್ ಎಐ ಮಾಡಲ್ ಅನ್ನು ನಿರ್ಮಿಸಲು ಭಾರತ ಹೊರಟಿದೆ. ಮಹತ್ವಾಕಾಂಕ್ಷಿ ಎಐ ಮಿಷನ್ ಅಡಿಯಲ್ಲಿ ವಿವಿಧ ಎಐ ಮಾಡಲ್​ಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ 8 ಸಂಸ್ಥೆಗಳನ್ನು ಆಯ್ಕೆ ಮಾಡಿದೆ. ಟೆಕ್ ಮಹೀಂದ್ರ, ಐಐಟಿ ಬಾಂಬೆ ಮೊದಲಾದ ಸಂಸ್ಥೆಗಳು ಈ ಹೊಣೆ ಪಡೆದಿವೆ.

ಚ್ಯಾಟ್​ಜಿಪಿಟಿ, ಡೀಪ್​ಸೀಕ್​ಗೆ ಸಮನಾದ ಎಲ್​ಎಲ್​ಎಂ ನಿರ್ಮಿಸಲಿರುವ ಭಾರತ; ಮಹತ್ವಾಕಾಂಕ್ಷಿ ಎಐ ಮಿಷನ್​ಗೆ 8 ಸಂಸ್ಥೆಗಳ ಆಯ್ಕೆ
ಎಐ ಮಿಷನ್

Updated on: Sep 21, 2025 | 3:21 PM

ನವದೆಹಲಿ, ಸೆಪ್ಟೆಂಬರ್ 21: ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಸ್ವಾವಲಂಬನೆ ಸಾಧಿಸಲು ಹಾಗೂ ಬೃಹತ್ ಮಾರುಕಟ್ಟೆಯಾಗಿ ಬೆಳೆಯಲು ಸಕಲ ಪ್ರಯತ್ನಗಳನ್ನೂ ಹಾಕುತ್ತಿದೆ. ಈಗಾಗಲೇ ಬಹಳ ಮಹತ್ವ ಪಡೆದಿರುವ ಎಐ ಇತ್ಯಾದಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೆರಿಕ, ಚೀನಾದ ಮುನ್ನಡೆಯ ಮಟ್ಟ ತಲುಪಲು ಭಾರತ ದೊಡ್ಡ ಯೋಜನೆ ಹಾಕಿದೆ. ಚ್ಯಾಟ್​ಜಿಪಿಟಿಯ ಸುಧಾರಿತ ಆವೃತ್ತಿಯಷ್ಟು ಪ್ರಬಲವಾದ ಎಐ ಮಾಡಲ್ ಅಥವಾ ಎಲ್​ಎಲ್​ಎಂಗಳನ್ನು (LLM- Large Language Model) ನಿರ್ಮಿಸಲು ಸರ್ಕಾರ ಸಂಕಲ್ಪ ತೊಟ್ಟಿದೆ. ಈ ನಿಟ್ಟಿನಲ್ಲಿ ಎಂಟು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

ಕೇಂದ್ರ ಐಟಿ ಸಚಿವ ಡಾ. ಅಶ್ವಿನಿ ವೈಷ್ಣವ್ ಅವರು ಇತ್ತೀಚೆಗೆ (ಸೆ. 18) ನಡೆದ ಎಐ ಇಂಪ್ಯಾಕ್ಟ್ ಸಮಿಟ್ 2026 (AI Impact Summit) ಸಂದರ್ಭದಲ್ಲಿ ಪ್ರಬಲ ಎಲ್​ಎಲ್​ಎಂಗಳನ್ನು ನಿರ್ಮಿಸಲು ಆಯ್ಕೆ ಮಾಡಲಾಗಿರುವ ಎಂಟು ಸಂಸ್ಥೆಗಳನ್ನು ಹೆಸರಿಸಿದ್ದಾರೆ. ಐಐಟಿ ಬಾಂಬೆ, ಟೆಕ್ ಮಹೀಂದ್ರ ಸಂಸ್ಥೆಗಳು ಇದರಲ್ಲಿ ಸೇರಿವೆ.

ಇದನ್ನೂ ಓದಿ: ಗಗನಕ್ಕೇರಿತು ರಾಜ್ಯಗಳ ಸಾಲ; ಮಿತಿಮೀರಿದ ಪಂಜಾಬ್ ಸಾಲ; ಕರ್ನಾಟಕದ್ದು ಎಷ್ಟು?

ಇಂಡಿಯಾ ಎಐ ಮಿಷನ್ ಮೂಲಕ ಈ ಪ್ರಯತ್ನಗಳಿಗೆ ಬೆಂಬಲ ನೀಡಲಾಗುತ್ತಿದೆ. ಸುಮಾರು 988.6 ಕೋಟಿ ರೂ ಮೊತ್ತದ ಧನಸಹಾಯಕ್ಕೆ ಅನುಮೋದನೆ ಕೊಡಲಾಗಿದೆ. ಈ ಮಿಷನ್​ನಲ್ಲಿ ಹಲವು ಪ್ರಾಜೆಕ್ಟ್​ಗಳನ್ನು ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಐಐಟಿ ಬಾಂಬೆ ಬಹಳ ಮಹತ್ವದ ಪ್ರಾಜೆಕ್ಟ್ ಮುನ್ನಡೆಸಲಿದೆ. ಭಾರತ್​ಜೆನ್ ಕನ್ಸಾರ್ಟಿಯಂ ಮೂಲಕ ಐಐಟಿ ಬಾಂಬೆ ಬಹಳ ಶಕ್ತಿಶಾಲಿ ಎಲ್​ಎಲ್​ಎಂ ಅನ್ನು ಅಭಿವೃದ್ದಿಪಡಿಸಲಿದೆ.

ಎಐ ಪ್ರಾಜೆಕ್ಟ್​ಗಳನ್ನು ಕೈಗೊಳ್ಳಲು ಸರ್ಕಾರ ಆಯ್ಕೆ ಮಾಡಿದ 8 ಸಂಸ್ಥೆಗಳು

  1. ಐಐಟಿ ಬಾಂಬೆ (ಭಾರತ್ ಜೆನ್ ಕನ್ಸಾರ್ಟಿಯಂ)
  2. ಟೆಕ್ ಮಹೀಂದ್ರ
  3. ಫ್ರಾಕ್ಟಲ್ ಅನಾಲಿಟಿಕ್ಸ್
  4. ಅವತಾರ್ಎಐ
  5. ಜೇನ್​ಟೇಕ್ ಎಐಟೆಕ್ ಇನ್ನೋವೇಶನ್ಸ್
  6. ಜೆನ್​ಲೂಪ್ ಇಂಟೆಲಿಜೆನ್ಸ್ ಪ್ರೈ ಲಿ
  7. ನ್ಯೂರೋ ಡಿಎಕ್ಸ್ (ಇಂಟೆಲಿಹೆಲ್ತ್)
  8. ಶೋಧ್ ಎಐ

ಒಂದು ಟ್ರಿಲಿಯನ್ ಪ್ಯಾರಮೀಟರ್​ನ ಎಲ್​ಎಲ್​ಎಂ

ಈ ಮೇಲಿನ ಎಂಟೂ ರಾಜ್ಯಗಳು ಬೇರೆ ಬೇರೆ ಗುರಿಗಳಿರುವ ಫೌಂಡೇಶನಲ್ ಎಐ ಮಾಡಲ್​ಗಳನ್ನು ನಿರ್ಮಿಸಲು ನೆರವಾಗಲಿವೆ. ಭಾರತ್​ಜೆನ್ ಕನ್ಸಾರ್ಟಿಯಂ (BharatGen Consortium) ಮೂಲಕ ಐಐಟಿ ಬಾಂಬೆ ನಡೆಸಲಿರುವ ಎಐ ಪ್ರಾಜೆಕ್ಟ್ ಮಹತ್ವದ್ದಾಗಿದೆ. ಒಂದು ಟ್ರಿಲಿಯನ್ ಪ್ಯಾರಮೀಟರ್​ಗಳಿರುವ ಎಲ್​ಎಲ್​ಎಂ ಅನ್ನು ಇದು ಅಭಿವೃದ್ಧಿಪಡಿಸಲಿದೆ. ಡೀಪ್​ಸೀಕ್, ಚ್ಯಾಟ್​ಜಿಪಿಟಿಯಂತಹ ಕೆಲವೇ ಕೆಲವು ಎಐ ಮಾಡಲ್​ಗಳು ಮಾತ್ರ ಒಂದು ಟ್ರಿಲಿಯನ್ (ಒಂದು ಲಕ್ಷ ಕೋಟಿ) ಪ್ಯಾರಮೀಟರ್ ಹೊಂದಿವೆ.

ಇದನ್ನೂ ಓದಿ: ಏಷ್ಯನ್ ಪೇಂಟ್ಸ್ ಕಥೆ… 1942ರಲ್ಲಿ ನಾಲ್ವರು ಹುಡುಗರು ಕಟ್ಟಿದ ಕಂಪನಿ; ಆರು ದಶಕಗಳಿಂದ ಇದು ನಂ. 1

ಪ್ಯಾರಮೀಟರ್ ಪ್ರಮಾನ ಹೆಚ್ಚಿದಷ್ಟೂ ಭಾಷೆಯನ್ನು ಅರಿಯುವ ನಿಖರತೆ ಹೆಚ್ಚುತ್ತದೆ. ಹೀಗಾಗಿ, ಭಾರತದ ಮಟ್ಟಿಗೆ ಒಂದು ಟ್ರಿಲಿಯನ್ ಪ್ಯಾರಮೀಟರ್​ನ ಎಐ ಮಾಡಲ್ ನಿಜಕ್ಕೂ ಶ್ಲಾಘನೀಯ. ವಿದೇಶಗಳ ಎಐ ಮಾಡಲ್ ಬದಲು ದೇಶೀಯವಾದ ವಿಶ್ವಶ್ರೇಷ್ಠ ಎಐ ಬಳಸುವ ಅವಕಾಶ ಸಿಕ್ಕಲಿದೆ.

ಈಗಾಗಲೇ ಸರ್ವಂ ಎಐ ಇತ್ಯಾದಿ ಕೆಲ ಭಾರತೀಯ ಎಐ ಮಾಡಲ್​ಗಳು ನಿರ್ಮಾಣವಾಗಿವೆಯಾದರೂ ಅವು ಬೇರೆ ದೇಶದ ಪ್ಲಾಟ್​ಫಾರ್ಮ್​ಗಳಲ್ಲಿ ಅಭಿವೃದ್ಧಿಯಾಗಿರುವಂತಹವು. ಸರ್ವಂ ಎಐ ಅನ್ನು ಓಪನ್ ಸೋರ್ಸ್​ನ ಹಾಗೂ 24 ಬಿಲಿಯನ್ ಪ್ಯಾರಮೀಟರ್ ಇರುವ ಮಿಸ್ಟ್ರಾಲ್ ಎಐ ಪ್ಲಾಟ್​ಫಾರ್ಮ್ ಬಳಸಿ ನಿರ್ಮಿಸಲಾಗಿದೆ. ಈಗ ಸಂಪೂರ್ಣ ಸ್ವಂತವಾಗಿ ಎಲ್​ಎಲ್​ಎಂಗಳನ್ನು ನಿರ್ಮಿಸಲು ಹೊರಟಿದೆ. ಬೇರೆ ಪ್ಲಾಟ್​ಫಾರ್ಮ್​ಗಳ ಅವಶ್ಯಕತೆ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ