ಜಿಎಸ್ಟಿ ಬಗ್ಗೆ ಹೇಳುವಾಗ ಪ್ರಧಾನಿ ಮೋದಿ ಬೆಂಗಳೂರನ್ನು ಪ್ರಸ್ತಾಪಿಸಿದ್ದು ಯಾಕೆ? ಇಲ್ಲಿದೆ ಅದರ ಹಿನ್ನೆಲೆ
Know why Modi mentions Bangalore while speaking on GST: ನರೇಂದ್ರ ಮೋದಿ ಇವತ್ತು ಭಾಷಣದಲ್ಲಿ ನಾಳೆಯಿಂದ ಜಾರಿಯಾಗಲಿರುವ ಜಿಎಸ್ಟಿ ಸುಧಾರಣೆ ಬಗ್ಗೆ ಮಾತನಾಡಿದರು. ಈ ವೇಳೆ ಅವರು ಬೆಂಗಳೂರು ನಗರವನ್ನು ಪ್ರಸ್ತಾಪ ಮಾಡಿದ್ದು ಕುತೂಹಲ ಮೂಡಿಸಿತು. ತಾವು ಪ್ರಧಾನಿಯಾದ ಹೊಸದರಲ್ಲಿ ವಿದೇಶೀ ಪತ್ರಿಕೆಯಲ್ಲಿ ಬಂದ ವರದಿಯೊಂದನ್ನು ಉಲ್ಲೇಖಿಸುತ್ತಾ ಅಂದಿನ ಸಂದರ್ಭವನ್ನು ಸ್ಮರಿಸಿದರು.

ನವದೆಹಲಿ, ಸೆಪ್ಟೆಂಬರ್ 21: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ದೇಶವನ್ನುದ್ದೇಶಿಸಿ ಮಾತನಾಡುತ್ತಾ, ತಮ್ಮ ಸರ್ಕಾರದ ಹೊಸ ಜಿಎಸ್ಟಿ ಸುಧಾರಣಾ (GST reforms) ಕ್ರಮದ ಮಹತ್ವವನ್ನು ವಿವರಿಸಿದರು. ಮುಂದಿನ ತಲೆಮಾರಿನ ಜಿಎಸ್ಟಿ ಟ್ಯಾಕ್ಸ್ ಸಿಸ್ಟಂನಿಂದ ದೇಶದ ಜನರಿಗೆ ಅದೆಷ್ಟು ಅನುಕೂಲವಾಗುತ್ತಿದೆ ಎಂದು ತಿಳಿಸಿದರು. ಜಿಎಸ್ಟಿ ಮತ್ತು ಆದಾಯ ತೆರಿಗೆ ಇಲಾಖೆಯಿಂದ ದೇಶದ ಜನರಿಗೆ ವರ್ಷಕ್ಕೆ 2.5 ಲಕ್ಷ ಕೋಟಿ ರೂ ಉಳಿತಾಯವಾಗುತ್ತದೆ ಎಂದು ಮಾಹಿತಿ ನೀಡಿದರು. ಈ ಭಾಷಣದಲ್ಲಿ ನರೇಂದ್ರ ಮೋದಿ ಅವರು ಬೆಂಗಳೂರಿನ ಹೆಸರನ್ನು ಪ್ರಸ್ತಾಪಿಸಿದರು.
ಜಿಎಸ್ಟಿ ಬರುವ ಮುನ್ನ ಅಸ್ತಿತ್ವದಲ್ಲಿದ್ದ ಹಳೆಯ ಟ್ಯಾಕ್ಸ್ ಸಿಸ್ಟಂ ಹಾಗೂ ಅದರಿಂದ ಉಂಟಾಗಿದ್ದ ರಗಳೆ ಮತ್ತು ಗೋಜಲುಗಳಿಗೆ ಅದೆಷ್ಟಿತ್ತು ಎಂದು ತಿಳಿಸಿದರು. ಇದಕ್ಕೆ ನಿದರ್ಶನವೊಂದನ್ನು ನೀಡುವಾಗ ಅವರು ಬೆಂಗಳೂರು, ಹೈದರಾಬಾದ್ ಹೆಸರನ್ನು ಪ್ರಸ್ತಾಪಿಸಿದರು.
‘2014ರಲ್ಲಿ ನಾನು ಪ್ರಧಾನಿಯಾಗಿ ಆಯ್ಕೆಯಾದಾಗ ವಿದೇಶದ ಪತ್ರಿಕೆಯೊಂದರಲ್ಲಿ ಒಂದು ಸುದ್ದಿ ಓದಿದ ನೆನಪಿದೆ. ಬೆಂಗಳೂರಿನಿಂದ 570 ಕಿಮೀ ದೂರದಲ್ಲಿರುವ ಹೈದರಾಬಾದ್ಗೆ ಸರಕುಗಳನ್ನು ಕಳುಹಿಸುವುದು ಬಹಳ ಕಷ್ಟಕರ ಎಂದು ಕಂಪನಿಯೊಂದು ಹೇಳಿತ್ತು. ಆ ಕಂಪನಿಯು ಮೊದಲಿಗೆ ಬೆಂಗಳೂರಿನಿಂದ ಯೂರೋಪ್ಗೆ ಸರಕುಗಳನ್ನು ಕಳುಹಿಸಿ, ನಂತರ ಅದೇ ಸರಕುಗಳನ್ನು ಯೂರೋಪ್ನಿಂದ ಹೈದರಾಬಾದ್ಗೆ ಕಳುಹಿಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿತ್ತು’ ಎಂದು ನರೇಂದ್ರ ಮೋದಿ ಅಂದಿನ ವರದಿಯ ಅಂಶಗಳನ್ನು ಸ್ಮರಿಸಿಕೊಂಡರು.
ಇದನ್ನೂ ಓದಿ: ಚ್ಯಾಟ್ಜಿಪಿಟಿ, ಡೀಪ್ಸೀಕ್ಗೆ ಸಮನಾದ ಎಲ್ಎಲ್ಎಂ ನಿರ್ಮಿಸಲಿರುವ ಭಾರತ; ಮಹತ್ವಾಕಾಂಕ್ಷಿ ಎಐ ಮಿಷನ್ಗೆ 8 ಸಂಸ್ಥೆಗಳ ಆಯ್ಕೆ
ಭಾರತದಲ್ಲಿ ವಿವಿಧ ರೀತಿಯ ಟ್ಯಾಕ್ಸ್ಗಳು ಅಸ್ತಿತ್ವದಲ್ಲಿದ್ದವು. ಈ ಸಂಕೀರ್ಣ ತೆರಿಗೆ ವ್ಯವಸ್ಥೆಯಿಂದ ಜನರು ಮತ್ತು ಕಂಪನಿಗಳು ದಿನನಿತ್ಯ ಸಮಸ್ಯೆ ಎದುರಿಸುತ್ತಿದ್ದರು ಎಂದು ನರೇಂದ್ರ ಮೋದಿ ತಿಳಿಸಿದರು.
ಬೆಂಗಳೂರಿನಿಂದ ಯೂರೋಪ್ ಮುಖಾಂತರ ಹೈದರಾಬಾದ್ಗೆ ತನ್ನ ಸರಕುಗಳನ್ನು ಕಳುಹಿಸುತ್ತಿದ್ದ ಕಂಪನಿಯು ಫ್ರಾನ್ಸ್ ದೇಶದ ಒಂದು ತಂತ್ರಜ್ಞಾನ ಕಂಪನಿ. ಫ್ರಾನ್ಸ್ನ ಬ್ಯುಸಿನೆಸ್ ಪತ್ರಿಕೆಯಾದ ಲೆಸ್ ಎಖೋಸ್ (Les Echos) ಈ ಬಗ್ಗೆ ವರದಿ ಮಾಡಿತ್ತು.
ಬೆಂಗಳೂರಿನಿಂದ ಹೈದರಾಬಾದ್ಗೆ ನೇರವಾಗಿ ಸರಕು ಸಾಗಿಸುವುದಕ್ಕಿಂತ ಯೂರೋಪ್ಗೆ ಸಾಗಿಸಿ, ನಂತರ ಅಲ್ಲಿಂದ ಹೈದರಾಬಾದ್ಗೆ ಸಾಗಿಸುವುದರಿಂದ ಹೆಚ್ಚು ಹಣ ಉಳಿಸಬಹುದು ಎಂಬುದು ಆ ಫ್ರೆಂಚ್ ಕಂಪನಿಯ ಎಣಿಕೆಯಾಗಿತ್ತು.
ಇದನ್ನೂ ಓದಿ: PM Modi on GST: ನಾಳೆಯಿಂದ ದೇಶದ ಜನರಿಗೆ ಉಳಿತಾಯ ಉತ್ಸವ: ಹೊಸ ಜಿಎಸ್ಟಿ ಸುಧಾರಣೆ ಬಗ್ಗೆ ಮೋದಿ
2014ಕ್ಕೆ ಮುಂಚೆ ಭಾರತದಲ್ಲಿ ಲಾಜಿಸ್ಟಿಕ್ಸ್ ಸಿಸ್ಟಂ ತುಂಬಾ ಹಿಂದುಳಿದಿತ್ತು. ರಸ್ತೆ ಮೂಲಕ ಸರಕುಗಳನ್ನು ಸಾಗಿಸುವುದು ಬಹಳ ಕಷ್ಟಕರವಾಗಿತ್ತು. ಕಳಪೆ ರಸ್ತೆ ಇತ್ಯಾದಿ ಕಾರಣಕ್ಕೆ ಸರಕು ಸಾಗಣೆ ವೆಚ್ಚವನ್ನು ಶೇ. 30-40ರಷ್ಟು ಹೆಚ್ಚಿಸುತ್ತದೆ ಎಂದು ವಿಶ್ವಬ್ಯಾಂಕ್ನ ಹೇಳಿಕೆಯನ್ನು ಫ್ರೆಂಚ್ ಪತ್ರಿಕೆಯಲ್ಲಿ ಉಲ್ಲೇಖಿಸಿ ವರದಿ ಮಾಡಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




