ಮಧ್ಯಂತರ ಟ್ರೇಡ್ ಡೀಲ್ಗೆ ಮಾತುಕತೆ: ಭಾರತ ತಂಡದ ಅಮೆರಿಕ ಭೇಟಿ ಮುಂದೂಡಿಕೆ
India US interim trade deal talks, Indian delegation's US visit postponed: ಭಾರತದ ವ್ಯಾಪಾರ ಮಾತುಕತೆ ನಿಯೋಗದ ಅಮೆರಿಕ ಭೇಟಿಯನ್ನು ಮುಂದೂಡಲಾಗಿದೆ. ಮಧ್ಯಂತರ ವ್ಯಾಪಾರ ಒಪ್ಪಂದ ಅಂತಿಮಗೊಳಿಸಲು ಮಾತುಕತೆಗೆಂದು ಅಮೆರಿಕಕ್ಕೆ ಈ ತಂಡ ಹೋಗಬೇಕಿತ್ತು. ಫೆ. 23ರಿಂದ 25ರವರೆಗೆ ಮೂರು ದಿನಗಳ ಕಾಲ ಮಾತುಕತೆ ನಡೆಯುವುದಿತ್ತು. ಆದರೆ, ಅಮೆರಿಕದ ಸುಪ್ರೀಂಕೋರ್ಟ್ ಹಾಗೂ ಅಲ್ಲಿಯ ಸರ್ಕಾರದ ನಡುವೆ ಟ್ಯಾರಿಫ್ ಸಂಬಂಧ ಏರ್ಪಟ್ಟಿರುವ ಘರ್ಷಣೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ನವದೆಹಲಿ, ಫೆಬ್ರುವರಿ 23: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ಕ್ರಮವನ್ನು ಅವರ ದೇಶದ ಸುಪ್ರೀಂಕೋರ್ಟ್ ಅಸಿಂಧುಗೊಳಿಸಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ರೂಪುರೇಖೆಯಲ್ಲಿ (India US interim trade deal framework) ಬದಲಾವಣೆಗಳಾಗುವ ಸಾಧ್ಯತೆ ಇದೆ. ಮಧ್ಯಂತರ ಒಪ್ಪಂದಕ್ಕೆ ನಿಯಮಾವಳಿಗಳನ್ನು ಅಂತಿಮಗೊಳಿಸಲು ಎರಡೂ ದೇಶಗಳ ತಂಡಗಳ ಮಧ್ಯೆ ನಡೆಯಬೇಕಿದ್ದ ಮಾತುಕತೆ ಸದ್ಯಕ್ಕೆ ಸ್ಥಗಿತಗೊಂಡಿದೆ. ಭಾರತ ತಂಡದ ಅಮೆರಿಕ ಭೇಟಿಯು ಮುಂದೂಡಿಕೆ ಆಗಿದೆ.
ಮಾತುಕತೆ ಮುಂದೂಡಿಕೆ ಮಾಡಬೇಕೆನ್ನುವ ನಿರ್ಧಾರ ಭಾರತದ ವತಿಯಿಂದ ಮಾತ್ರವೇ ಅಲ್ಲ, ಅಮೆರಿಕನ್ ನಿಯೋಗದ್ದೂ ಆಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಪರಿಣಾಮಗಳು ಹಾಗೂ ಸರ್ಕಾರದ ಹೊಸ ಕ್ರಮಗಳು ಇವೆಲ್ಲವೂ ಸ್ಪಷ್ಟಗೊಂಡ ಬಳಿಕ ಮಾತುಕತೆ ಪುನಾರಂಭಿಸುವುದು ಉತ್ತಮ ಎನ್ನುವ ಅಭಿಪ್ರಾಯಕ್ಕೆ ಎರಡೂ ಕಡೆಯವರು ಬಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದ ಟ್ರಂಪ್; ಅಮೆರಿಕದ ಸುಂಕ ಮತ್ತೆ ಶೇ. 15ಕ್ಕೆ ಹೆಚ್ಚಳ
ಕೇಂದ್ರ ವಾಣಿಜ್ಯ ಸಚಿವಾಲಯದ ಅಧಿಕಾರಿಯಾಗಿರುವ ದರ್ಪಣ್ ಜೈನ್ ಅವರು ಅಮೆರಿಕದೊಂದಿಗೆ ಟ್ರೇಡ್ ಡೀಲ್ ಕುದುರಿಸಲು ಸಂಧಾನ ನಡೆಸುತ್ತಿರುವ ಭಾರತೀಯ ನಿಯೋಗದ ಮುಖ್ಯಸ್ಥರಾಗಿದ್ದಾರೆ. ಅವರ ತಂಡವು ಇಂದಿನಿಂದ (ಫೆ. 23) ಮೂರು ದಿನಗಳ ಕಾಲ ಅಮೆರಿಕದಲ್ಲಿ ಸಂಧಾನ ಮತ್ತು ಮಾತುಕತೆ ನಡೆಸುವುದಿತ್ತು. ಈಗ ಈ ಭೇಟಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಮಾರ್ಚ್ ತಿಂಗಳಲ್ಲಿ ಮಧ್ಯಂತರ ಒಪ್ಪಂದ ಏರ್ಪಟ್ಟು, ಏಪ್ರಿಲ್ ತಿಂಗಳಿಂದ ಹೊಸ ಟ್ಯಾರಿಫ್ ಕ್ರಮಗಳು ಜಾರಿಗೆ ಬರುವ ನಿರೀಕ್ಷೆ ಇತ್ತು. ಆದರೆ, ಈಗ ಮಾತುಕತೆ ಮುಂದೂಡಿಕೆ ಆಗಿರುವುದರಿಂದ ಮಾರ್ಚ್ ಟೈಮ್ಲೈನ್ ಕೂಡ ಮುಂದೂಡಿಕೆ ಆಗಬಹುದು. ಏಪ್ರಿಲ್ ನಂತರ ಒಪ್ಪಂದ ಏರ್ಪಟ್ಟರೆ ಅಚ್ಚರಿ ಇಲ್ಲ.
ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪೇನು?
ಡೊನಾಲ್ಡ್ ಟ್ರಂಪ್ ಅವರು ಹೆಚ್ಚಿನ ದೇಶಗಳ ಸರಕುಗಳ ಮೇಲೆ ಶೇ. 10ರಿಂದ ಶೇ. 50ರವರೆಗೆ ಟ್ಯಾರಿಫ್ಗಳನ್ನು ಘೋಷಿಸಿದ್ದರು. ಭಾರತದ ಮೇಲೆ ಶೇ. 25 ಪ್ರತಿಸುಂಕ ಹಾಗೂ ಶೇ. 25 ದಂಡಸುಂಕವನ್ನು ಅಮೆರಿಕ ಹಾಕಿತ್ತು. ಆದರೆ, ರಷ್ಯನ್ ತೈಲ ಖರೀದಿಗೆ ಪ್ರತಿಯಾಗಿ ವಿಧಿಸುತ್ತಿದ್ದ ಶೇ. 25 ದಂಡಸುಂಕವನ್ನು ಅಮೆರಿಕ ಹಿಂಪಡೆದಿದೆ. ಪ್ರತಿಸುಂಕವನ್ನು ಶೇ. 25ರಿಂದ ಶೇ. 18ಕ್ಕೆ ಇಳಿಸಲು ನಿರ್ಧರಿಸಿದೆ. ಮಧ್ಯಂತರ ಡೀಲ್ ಏರ್ಪಟ್ಟ ನಂತರ ಈ ಶೇ. 18 ಪ್ರತಿಸುಂಕ ಜಾರಿಗೆ ಬರುವುದಿತ್ತು.
ಇದನ್ನೂ ಓದಿ: ಟ್ರಂಪ್ ಸೊಕ್ಕು ಮುರಿದ ಅಮೆರಿಕ ಸುಪ್ರೀಂ ಕೋರ್ಟ್: ಭಾರತದ ಉತ್ಪನ್ನಗಳ ಮೇಲಿನ ತೆರಿಗೆಯೂ ಶೇ 10ಕ್ಕೆ ಇಳಿಕೆ!
ಆದರೆ, ಅಮೆರಿಕದ ಸುಪ್ರೀಂಕೋರ್ಟ್ ಒಟ್ಟಾರೆಯಾಗಿ ಅಲ್ಲಿಯ ಸರ್ಕಾರದ ಟ್ಯಾರಿಫ್ ನೀತಿಯನ್ನೇ ಅಲ್ಲಗಳೆದಿದೆ. ಕಾನೂನು ಪ್ರಕಾರ ಟ್ಯಾರಿಫ್ ಹಾಕುವಂತಿಲ್ಲ ಎಂದು ಹೇಳಿದೆ. ಇದೇ ವೇಳೆ ಡೊನಾಲ್ಡ್ ಟ್ರಂಪ್ ಅವರು ಲಭ್ಯ ಇರುವ ಕೆಲ ಕಾನೂನು ಮಾರ್ಗ ಬಳಸಿ ಟ್ಯಾರಿಫ್ ಅನ್ನು ಶೇ. 10ರಿಂದ ಶೇ. 15ಕ್ಕೆ ಏರಿಸಿದ್ದಾರೆ. ಸುಪ್ರೀಂಕೋರ್ಟ್ ಇದನ್ನೂ ಅಸಿಂಧುಗೊಳಿಸುತ್ತಾ ಕಾದುನೋಡಬೇಕು. ಈ ಕಾರಣಕ್ಕೆ ಭಾರತವು ಮಧ್ಯಂತರ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ಮುಂದಕ್ಕೆ ಹಾಕಿರುವುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
