ಭಾರತದಲ್ಲಿ ಕ್ವಿಕ್ ಡೆಲಿವರಿ 10 ನಿಮಿಷ, ಅಮೆರಿಕದಲ್ಲಿ 24 ಗಂಟೆ; ಡೆಲಿವರಿ ಚಾರ್ಜ್ 1,000 ರೂ?
India vs US quick commerce market: ಅಮೆರಿಕದಲ್ಲಿ ಆನ್ಲೈನ್ನಲ್ಲಿ ದಿನಸಿ ವಸ್ತುಗಳಿಗೆ ಆರ್ಡರ್ ಕೊಟ್ಟರೆ ಬರೋದು 10 ನಿಮಿಷ ಅಲ್ಲ, 30 ನಿಮಿಷ ಅಲ್ಲ, 24 ಗಂಟೆ ಆಗುತ್ತದೆ. ಭಾರತದಲ್ಲಿ ಕ್ವಿಕ್ ಕಾಮರ್ಸ್ ಕಂಪನಿಗಳು ಕೇವಲ 10 ನಿಮಿಷದಲ್ಲಿ ಡೆಲಿವರಿ ಕೊಡುತ್ತವೆ. ಇದಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಕ್ವಿಕ್ ಕಾಮರ್ಸ್ ಕಂಪನಿಗಳ ಡೆಲಿವರಿ ವೇಗ ಮಂದವಾಗಿಯೇ ಇದೆ.

ನವದೆಹಲಿ, ಆಗಸ್ಟ್ 18: ಭಾರತದಲ್ಲಿ ಇನ್ಸ್ಟಾಮಾರ್ಟ್, ಝೆಪ್ಟೋ, ಬ್ಲಿಂಕಿಟ್ ಇತ್ಯಾದಿ ಕ್ವಿಕ್ ಕಾಮರ್ಸ್ (quick commerce) ಕಂಪನಿಗಳು ದಿನಸಿ ವಸ್ತುಗಳನ್ನು (groceries) ಆನ್ಲೈನ್ನಲ್ಲಿ ಬುಕ್ ಮಾಡಿದ ಕೇವಲ 10 ನಿಮಿಷದಲ್ಲಿ ಮನೆಗೆ ತಲುಪಿಸುತ್ತವೆ. ಇಲ್ಲಿ ಕ್ವಿಕ್ ಕಾಮರ್ಸ್ ಎಂದರೆ 10 ನಿಮಿಷದಲ್ಲಿ ಡೆಲಿವರಿ ಕೊಡುವ ಉದ್ಯಮ. ಆದರೆ, ಅಮೆರಿಕದಲ್ಲಿ ತೀರ ಇತ್ತೀಚಿನವರೆಗೂ ಆನ್ಲೈನ್ನಲ್ಲಿ ಬುಕ್ ಮಾಡಿದ ದಿನಸಿ ವಸ್ತುಗಳನ್ನು ಮನೆಗೆ ತಲುಪಿಸಲು ಕನಿಷ್ಠ ಒಂದು ದಿನವಾದರೂ ಆಗುತ್ತಿತ್ತು. ಇತ್ತೀಚೆಗಷ್ಟೇ ಅಲ್ಲಿ ಬುಕ್ ಮಾಡಿದ ದಿನವೇ ಡೆಲಿವರಿ ಮಾಡಲಾಗುತ್ತಿದೆ.
ಅಮೇಜಾನ್, ಇನ್ಸ್ಟಾಕಾರ್ಟ್, ವಾಲ್ಮಾರ್ಟ್ ಮೊದಲಾದ ಕಂಪನಿಗಳು ಅದೇ ದಿನ ಡೆಲಿವರಿ ಮಾಡುವ ಸೇವೆ ಕೊಡುತ್ತಿವೆ. ಮೊನ್ನೆಯಷ್ಟೇ ಅಮೇಜಾನ್ ಸಂಸ್ಥೆ ಅಮೆರಿಕದ 1,000 ನಗರಗಳಿಗೆ ಈ ಕ್ವಿಕ್ ಡೆಲಿವರಿ ಸರ್ವಿಸ್ ಅನ್ನು ವಿಸ್ತರಿಸಿರುವುದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಇದನ್ನು 2,300 ನಗರಗಳಿಗೆ ವಿಸ್ತರಿಸುವ ಆಲೋಚನೆಯಲ್ಲಿ ಇದೆ.
ಡೆಲಿವರಿ ಶುಲ್ಕ ಸಾವಿರ ರೂಗೂ ಹೆಚ್ಚು
ಭಾರತದಲ್ಲಿ ಬಹುತೇಕ ಎಲ್ಲಾ ಕ್ವಿಕ್ ಕಾಮರ್ಸ್ ಕಂಪನಿಗಳು ಉಚಿತವಾಗಿ ಡೆಲಿವರಿ ನೀಡುತ್ತವೆ. ಅಥವಾ 100 ರೂವರೆಗೆ ಶುಲ್ಕ ವಿಧಿಸುತ್ತವೆ. ಆದರೆ, ಅಮೆರಿಕದಲ್ಲಿ ಅಮೇಜಾನ್ ಸಂಸ್ಥೆ ಪ್ರತೀ ಡೆಲಿವರಿಗೆ 12.99 ಡಾಲರ್ (ಸುಮಾರು 1,200 ರೂ) ವಸೂಲಿ ಮಾಡುತ್ತದೆ. ವಾಲ್ಮಾರ್ಟ್, ಇನ್ಸ್ಟಾಕಾರ್ಟ್ ಕಂಪನಿಗಳೂ ಕೂಡ ದೊಡ್ಡ ಮೊತ್ತದ ಡೆಲಿವರಿ ಫೀ ಪಡೆಯುತ್ತವೆ.
ಇದನ್ನೂ ಓದಿ: ಜಿಎಸ್ಟಿಯಿಂದ ಹಿಡಿದು ರುಪಾಯಿವರೆಗೆ ಷೇರು ಮಾರುಕಟ್ಟೆಗೆ ಉತ್ಸಾಹ ಹೆಚ್ಚಿಸಿದ ಅಂಶಗಳು
ದಿನಸಿ ಸರಬರಾಜು ಕ್ಷೇತ್ರಕ್ಕೆ ಅಮೇಜಾನ್ ಹೊಸಬ
ಅಮೇಜಾನ್ ಸಂಸ್ಥೆ ದಿನಸಿ ವಸ್ತುಗಳ ಮಾರುಕಟ್ಟೆಗೆ ಹೊಸ ಆಟಗಾರ ಎನಿಸಿದೆ. ವಾಲ್ಮಾರ್ಟ್, ಕ್ರೋಗರ್, ಮೇಪಲ್ಬೀರ್ ಇತ್ಯಾದಿ ಕಂಪನಿಗಳು ಈ ಕ್ಷೇತ್ರದಲ್ಲಿ ಪಳಗಿವೆ. ಆದರೆ, ಒಟ್ಟಾರೆ ಇಕಾಮರ್ಸ್ನಲ್ಲಿ ಮುಂಚೂಣಿಯಲ್ಲಿರುವ ಅಮೇಜಾನ್ ಈಗ ಕ್ವಿಕ್ ಕಾಮರ್ಸ್ ಅಥವಾ ಆನ್ಲೈನ್ ದಿನಸಿ ಕ್ಷೇತ್ರವನ್ನು ವ್ಯಾಪಿಸುತ್ತಿರುವುದು ಇತರ ಕಂಪನಿಗಳಿಗೆ ದಿಗಿಲು ಮೂಡಿಸಿದೆ.
ಸದ್ಯ ದಿನಸಿ ಆನ್ಲೈನ್ ಮಾರುಕಟ್ಟೆಯಲ್ಲಿ ವಾಲ್ಮಾರ್ಟ್ ಶೇ. 31.6 ಪಾರಮ್ಯ ಹೊಂದಿದೆ. ಅಮೇಜಾನ್ ಈಗಾಗಲೇ ಶೇ. 22.6 ಮಾರುಕಟ್ಟೆ ಆಕ್ರಮಿಸಿದೆ.
ಅಮೆರಿಕದಲ್ಲಿ ಕ್ವಿಕ್ ಕಾಮರ್ಸ್ ಮಾರುಕಟ್ಟೆ 2024ರಲ್ಲಿ 80 ಬಿಲಿಯನ್ ಡಾಲರ್ ಇತ್ತು. ಇದು 2030ರೊಳಗೆ 162 ಬಿಲಿಯನ್ ಡಾಲರ್ಗೆ ಬೆಳೆಯುವ ನಿರೀಕ್ಷೆ ಇದೆ.
ಇದನ್ನೂ ಓದಿ: ಭಾರತದ ಕ್ರೆಡಿಟ್ ರೇಟಿಂಗ್ ಹೆಚ್ಚಳದ ಬಳಿಕ ಎಸ್ಬಿಐ ಸೇರಿದಂತೆ 10 ಬ್ಯಾಂಕುಗಳ ರೇಟಿಂಗ್ ಅಪ್ಗ್ರೇಡ್ ಮಾಡಿದ ಎಸ್ ಅಂಡ್ ಪಿ
ಸ್ಟ್ರಾಬೆರಿಗಳಿಗೆ ಆನ್ಲೈನ್ನಲ್ಲಿ ಡಿಮ್ಯಾಂಡ್
ಅಮೇಜಾನ್ನಲ್ಲಿ ಎಲೆಕ್ಟ್ರಾನಿಕ್ಸ್ ಸರಕುಗಳು ಬಹಳ ಹೆಚ್ಚು ಮಾರಾಟವಾಗುತ್ತವೆ. ಆದರೆ, ಈಗ ಆ ಪ್ಲಾಟ್ಫಾರ್ಮ್ನಲ್ಲಿ ಅತಿಹೆಚ್ಚು ಮಾರಾಟವಾಗುವ ಸರಕಿನಲ್ಲಿ ಸ್ಟ್ರಾಬೆರಿ ಹಣ್ಣು ಇದೆ. ಬಾಳೆಹಣ್ಣು, ಸೇಬು, ನಿಂಬೆ, ಅವೋಕಾಡೊ ಹಣ್ಣುಗಳು ಹೆಚ್ಚು ಮಾರಾಟವಾಗುತ್ತವಂತೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




