ಮುಂಬರುವ ವರ್ಷಗಳಲ್ಲಿ ನಮಗೆ ಭಾರತವೇ ಗ್ರೋತ್ ಎಂಜಿನ್: ಎಸ್​ಐಜಿ ಸಿಇಒ ಸ್ಯಾಮುಯಲ್ ಸಿಗ್ರಿಸ್ಟ್

|

Updated on: Oct 21, 2024 | 12:33 PM

SIG CEO Samuel Sigrist: ಕಾರ್ಟನ್ ಪ್ಯಾಕ್​ಗಳನ್ನು ತಯಾರಿಸುವ ಸ್ವಿಟ್ಜರ್​ಲ್ಯಾಂಡ್ ಮೂಲದ ಎಸ್​ಐಜಿ ಸಂಸ್ಥೆಯ ಸಿಇಒ ಸ್ಯಾಮುಯಲ್ ಸಿಗ್ರಿಸ್ಟ್ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು. 2018ರಲ್ಲಿ ಭಾರತಕ್ಕೆ ಮರುಪ್ರವೇಶ ಮಾಡಿದ ತಮ್ಮ ಕಂಪನಿ ಕಳೆದ ನಾಲ್ಕೈದು ವರ್ಷಗಳಲ್ಲಿ ಉತ್ತಮ ತಳಹದಿ ನಿರ್ಮಿಸಿದೆ. ಮುಂಬರುವ ವರ್ಷಗಳಲ್ಲಿ ತಮ್ಮ ಕಂಪನಿಯ ಬೆಳವಣಿಗೆಗೆ ಒಳ್ಳೆಯ ಆರಂಭಿಕ ಬಿಂದು ಇದು ಎಂದು ಸ್ಯಾಮುಯಲ್ ಹೇಳಿದ್ದಾರೆ.

ಮುಂಬರುವ ವರ್ಷಗಳಲ್ಲಿ ನಮಗೆ ಭಾರತವೇ ಗ್ರೋತ್ ಎಂಜಿನ್: ಎಸ್​ಐಜಿ ಸಿಇಒ ಸ್ಯಾಮುಯಲ್ ಸಿಗ್ರಿಸ್ಟ್
ಎಸ್​​ಐಜಿ
Follow us on

ನವದೆಹಲಿ, ಅಕ್ಟೋಬರ್ 21: ಮುಂಬರುವ ವರ್ಷಗಳಲ್ಲಿ ತನ್ನ ಕಂಪನಿಯ ಬೆಳವಣಿಗೆಗೆ ಭಾರತವೇ ಆಧಾರವಾಗಿರಲಿದೆ ಎಂದು ಸ್ವಿಟ್ಜರ್​ಲ್ಯಾಂಡ್ ಮೂಲದ ಎಸ್​ಐಜಿ ಗ್ರೂಪ್ ಸಂಸ್ಥೆಯ ಸಿಇಒ ಸ್ಯಾಮುಯಲ್ ಸಿಗ್ರಿಸ್ಟ್ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಭಾರತದಲ್ಲಿ ತಮ್ಮ ಕಂಪನಿಯ ವ್ಯವಹಾರಗಳ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ತಮ್ಮ ಕಂಪನಿಯು ಭಾರತದಲ್ಲಿ ಒಳ್ಳೆಯ ಬುನಾದಿ ಹಾಕಿದೆ. ಹಲವು ಪ್ರಮುಖ ಡೈರಿ ಮತ್ತು ಪಾನೀಯ ಕಂಪನಿಗಳ ಜೊತೆ ಹೊಂದಾಣಿಕೆ ಮಡಿಕೊಂಡು ತನ್ನ ನೆಟ್ವರ್ಕ್ ಬಲಪಡಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಸ್ವಿಟ್ಜರ್​ಲ್ಯಾಂಡ್ ಮೂಲದ ಎಸ್​ಐಜಿ ಸಂಸ್ಥೆ ಉತ್ಕೃಷ್ಟ ಗುಣಮಟ್ಟದ ಕಾರ್ಟನ್ ಪ್ಯಾಕ್​ಗಳನ್ನು ತಯಾರಿಸುತ್ತದೆ. ಹಾಲು, ಪೆಪ್ಸಿ, ಕೋಕಾಕೋಲ ಇತ್ಯಾದಿ ದ್ರವ ಉತ್ಪನ್ನಗಳಿಗೆ ಟೆಟ್ರಾಪ್ಯಾಕ್ ಇತ್ಯಾದಿ ಕಾರ್ಟನ್ ಪ್ಯಾಕ್ ಒದಗಿಸುತ್ತದೆ. ಭಾರತದಲ್ಲಿ ಅಮುಲ್, ಪಾರ್ಲೆ ಆಗ್ರೋ, ಕೋಕಾ ಕೋಲಾ, ಪೆಪ್ಸಿಕೋ, ಮಿಲ್ಕಿ ಇಸ್ಟ್, ಹಮ್​ದರ್ದ್ ಮೊದಲಾದ ಪ್ರಮುಖ ಪಾನೀಯ ಕಂಪನಿಗಳ ಜೊತೆ ಎಸ್​ಐಜಿ ಸಹಯೋಗ ಹೊಂದಿದೆ.

2018ರಲ್ಲಿ ಭಾರತೀಯ ಮಾರುಕಟ್ಟೆಗೆ ಮರುಪ್ರವೇಶ ಮಾಡಿದ ಎಸ್​ಐಜಿ, ಕಳೆದ ನಾಲ್ಕೈದು ವರ್ಷದಲ್ಲಿ ಉತ್ತಮ ಪ್ಲಾಟ್​ಫಾರ್ಮ್ ರೂಪಿಸಿದೆ. ಡೈರಿ ಹಾಗೂ ಬವರೇಜ್ (ಪಾನೀಯ) ಉದ್ಯಮದ ಎಲ್ಲಾ ಪ್ರಮುಖ ಕಂಪನಿಗಳ ಜತೆ ಬಿಸಿನೆಸ್ ಹೊಂದಿದ್ದೇವೆ. ನಮ್ಮ ಕಂಪನಿಯ ಬಿಸಿನೆಸ್ ಬೆಳವಣಿಗೆಗೆ ಇದು ಉತ್ತಮ ಆರಂಭಿಕ ಹೆಜ್ಜೆ ಎಂದು ಎಸ್​ಐಜಿ ಸಿಇಒ ಸ್ಯಾಮುಯಲ್ ಸಿಗ್ರಿಸ್ಟ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸಿಲಿಕಾನ್ ಶಕ್ತಿಯಾಗುವತ್ತ ಭಾರತ; ಸೆಮಿಕಂಡಕ್ಟರ್ ಮಿಷನ್​ನ ಮೊದಲ ಹೆಜ್ಜೆ ಯಶಸ್ವಿ, ಎರಡನೇ ಹೆಜ್ಜೆಗೆ ಹೊಸ ಹುಮ್ಮಸ್ಸು

ಭಾರತದಲ್ಲಿಯಷ್ಟು ವೇಗವಾಗಿ ಬಿಸಿನೆಸ್ ಸ್ಥಾಪನೆ ನಮಗೆ ಬೇರಾವ ಮಾರುಕಟ್ಟೆಯಲ್ಲೂ ಸಾಧ್ಯವಾಗಿರಲಿಲ್ಲ. ಪಾರ್ಲೆ ಮತ್ತು ಅಮುಲ್ ಸಂಸ್ಥೆ ನಮ್ಮ ಶ್ರೇಷ್ಠ ತಂತ್ರಜ್ಞಾನವನ್ನು ಬಹಳ ಬೇಗ ಅಳವಡಿಸಿಕೊಂಡಿದ್ದರಿಂದ ಇದು ಸಾಧ್ಯವಾಯಿತು ಎಂದೂ ಅವರು ಹೇಳಿದ್ದಾರೆ.

ಭಾರತದಲ್ಲಿನ ಇದುವರೆಗಿನ ಅನುಭವ ಸಕಾರಾತ್ಮಕ ಎಂದ ಸ್ಯಾಮುಯಲ್

ಭಾರತದಲ್ಲಿ ಆಧುನೀಕರಣ ಪ್ರಕ್ರಿಯೆ ಮುಂದುವರಿಯುತ್ತಿರುವುದರಿಂದ ಸುಗಮ ವ್ಯವಹಾರ ವ್ಯವಸ್ಥೆ ಉತ್ತಮಗೊಳ್ಳುತ್ತಾ ಹೋಗುತ್ತದೆ. ಈಗ ಒಳ್ಳೆಯ ಅವಕಾಶ ಇದೆ. ಎಸ್​ಐಜಿಗೆ ಈವರೆಗೂ ಆಗಿರುವ ಅನುಭವ ಸಕಾರಾತ್ಮಕವಾಗಿದೆ ಎಂದಿದ್ದಾರೆ.

ಎಸ್​ಐಜಿ ಸಂಸ್ಥೆ ಗುಜರಾತ್​ನ ಅಹ್ಮದಾಬಾದ್​ನಲ್ಲಿ ಅಸೆಪ್ಟಿಂಗ್ ಪ್ಯಾಕೇಜಿಂಗ್ (Aseptic packaging) ಘಟಕವೊಂದನ್ನು ಸ್ಥಾಪಿಸುತ್ತಿದೆ. 100 ಮಿಲಿಯನ್ ಯೂರೋ (ಸುಮಾರು ಒಂದು ಸಾವಿರ ಕೋಟಿ ರೂ) ಹೂಡಿಕೆಯಲ್ಲಿ ನಿರ್ಮಾಣವಾಗುತ್ತಿರುವ ಈ ಫ್ಯಾಕ್ಟರಿ 2025ರ ವರ್ಷಾಂತ್ಯದೊಳಗೆ ಪೂರ್ಣ ಕಾರ್ಯಾರಂಭಕ್ಕೆ ಸಿದ್ಧವಾಗಿರುವ ನಿರೀಕ್ಷೆ ಇದೆ. ಇದು ಜಾಗತಿಕವಾಗಿ ಆ ಸಂಸ್ಥೆ ನಿರ್ಮಿಸಿರುವ 10ನೇ ಅಸೆಪ್ಟಿಕ್ ಪ್ಯಾಕೇಜಿಂಗ್ ಘಟಕವಾಗಿದೆ.

ಇದನ್ನೂ ಓದಿ: ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ ಭಾರತದಿಂದ ವಾಹನಗಳ ರಫ್ತು ಶೇ. 14ರಷ್ಟು ಹೆಚ್ಚಳ; ಜಾಗತಿಕವಾಗಿ ಮಿಂಚುತ್ತಿರುವ ಮೇಡ್ ಇನ್ ಇಂಡಿಯಾ ವಾಹನಗಳು

ಪರಿಸರ ಸ್ನೇಹಿ ಪ್ಯಾಕ್​ಗಳಿಗೆ ಒತ್ತು

ಸ್ಯಾಮುಯಲ್ ಸಿಗ್ರಿಸ್ಟ್ ಅವರು ತಮ್ಮ ಕಂಪನಿ ಸಾಧ್ಯವಾದಷ್ಟೂ ಪರಿಸರಸ್ನೇಹಿ ಉತ್ಪನ್ನಕ್ಕೆ ಒತ್ತು ಕೊಡುತ್ತದೆ ಎಂದಿದ್ದಾರೆ. ಪರಿಸರಕ್ಕೆ ಹಾನಿಯಾಗುವ ಅಲೂಮಿನಿಯಮ್ ಫಾಯಿಲ್ ಅನ್ನು ಬಳಸುವುದಿಲ್ಲ. ತಮ್ಮ ಪಾನೀಯ ಕಾರ್ಟನ್​ಗಳನ್ನು ಪೂರ್ಣವಾಗಿ ರೀಸೈಕಲ್ ಮಾಡಬಹುದು ಎನ್ನುತ್ತಾರೆ ಎಸ್​ಐಜಿ ಸಿಇಒ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ