ನವದೆಹಲಿ, ಜನವರಿ 5: ಹಿಂದಿನ ಕೆಲ ವರ್ಷಗಳಲ್ಲಿಯಂತೆ ಈ ವರ್ಷವೂ (2024ರ ಕ್ಯಾಲಂಡರ್ ವರ್ಷ) ಆರ್ಥಿಕ ಬೆಳವಣಿಗೆಯಲ್ಲಿ (India GDP Growth) ಭಾರತ ಬೇರೆ ದೇಶಗಳಿಗಿಂತ ಮುಂದಿರುತ್ತದೆ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ. ಅದರ ಪ್ರಕಾರ 2024ರಲ್ಲಿ ಭಾರತದ ಜಿಡಿಪಿ ಶೇ. 6.2ರಷ್ಟು ಹೆಚ್ಚುವ ನಿರೀಕ್ಷೆ ಇದೆ. ಸರ್ವಿಸ್ ಸೆಕ್ಟರ್ ಜೊತೆಗೆ ತಯಾರಿಕಾ ಕ್ಷೇತ್ರವೂ ಪ್ರಬಲವಾಗಿ ಬೆಳೆಯಲಿದೆ. ಇದು ಭಾರತದ ಆರ್ಥಿಕತೆಗೆ ಈ ವರ್ಷ ಹೆಚ್ಚು ಪುಷ್ಟಿ ಕೊಡಬಹುದು ಎನ್ನುವುದು ವಿಶ್ವಸಂಸ್ಥೆಯ ವೆಸ್ಪ್ 2024 (UN WESP- World Economic Situation and Prospects) ವರದಿಯಲ್ಲಿ ವ್ಯಕ್ತವಾಗಿರುವ ಅನಿಸಿಕೆ.
ಜನವರಿ 4ರಂದು ವಿಶ್ವಸಂಸ್ಥೆ ಈ ಡಬ್ಲ್ಯುಇಎಸ್ಪಿ ವರದಿಯನ್ನು ಬಿಡುಗಡೆ ಮಾಡಿದೆ. ದಕ್ಷಿಣ ಏಷ್ಯಾದ ಒಟ್ಟಾರೆ ಆರ್ಥಿಕತೆ ಶೇ. 5.2ರಷ್ಟು ಬೆಳೆಯಬಹುದು. ಭಾರತದ ಪ್ರಬಲ ಆರ್ಥಿಕ ಬೆಳವಣಿಗೆಯು ದಕ್ಷಿಣ ಏಷ್ಯಾದ ಪ್ರಗತಿಗೆ ಪ್ರಮುಖ ಕಾರಣವಾಗಿರುತ್ತದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ವಿಶ್ವಸಂಸ್ಥೆ ವರದಿ ಪ್ರಕಾರ, ಭಾರತದ ಆರ್ಥಿಕ ಬೆಳವಣಿಗೆ 2023ರಲ್ಲಿ ಶೇ. 6.3; 2024ರಲ್ಲಿ ಶೇ. 6.2; 2025ರಲ್ಲಿ ಶೇ. 6.6ರಷ್ಟು ಇರಬಹುದು ಎನ್ನಲಾಗಿದೆ.
ಈ ವರ್ಷ (2024ರಲ್ಲಿ) ಭಾರತದ ಆರ್ಥಿಕ ಬೆಳವಣಿಗೆ ಶೇ. 6.2ರಷ್ಟು ಇರಬಹುದು. ಸಾರ್ವಜನಿಕ ಹೂಡಿಕೆ ಮತ್ತು ಖಾಸಗಿ ಅನುಭೋಗ ಹೆಚ್ಚಿರುವುದು ಈ ಪ್ರಬಲ ಬೆಳವಣಿಗೆಗೆ ಕಾರಣವಾಗಬಹುದು. ಮ್ಯಾನುಫ್ಯಾಕ್ಚರಿಂಗ್ ಮತ್ತು ಸರ್ವಿಸ್ ಸೆಕ್ಟರ್ಗಳಿಂದಲೂ ಪೂರಕ ಬೆಂಬಲ ಸಿಗುತ್ತದೆ ಎಂದು ಹೇಳಲಾಗಿದೆ.
ಹಾಗೆಯೇ, ಅತಿವೃಷ್ಟಿ, ಅನಾವೃಷ್ಟಿಗಳಿಂದ ಕೃಷಿ ಉತ್ಪಾದನೆಗೆ ಹಿನ್ನಡೆ ಆದರೂ ಆಗಬಹುದು ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ