Indus: ಆಂಡ್ರಾಯ್ಡ್ ಮಾರುಕಟ್ಟೆಗೆ ಭಾರತದ್ದೇ ಇಂಡಸ್ ಆ್ಯಪ್​ಸ್ಟೋರ್ ಲಗ್ಗೆ; ದೇಶೀಯ ಮೊಬೈಲ್ ಬ್ರ್ಯಾಂಡ್ ಅಭಿವೃದ್ಧಿಗೆ ಸರ್ಕಾರ ಆಸಕ್ತಿ

|

Updated on: Feb 22, 2024 | 6:14 PM

PhonePe Releases Indus Appstore: ಗೂಗಲ್​ನ ಪ್ಲೇಸ್ಟೋರ್​ಗೆ ಸ್ಪರ್ಧೆ ಒಡ್ಡಬಲ್ಲಂತಹ ಮತ್ತು ದೇಶೀಯವಾಗಿ ನಿರ್ಮಿತವಾದ ಇಂಡಸ್ ಆ್ಯಪ್​ಸ್ಟೋರ್ ಅನ್ನು ಫೋನ್​ಪೆ ಅನಾವರಣಗೊಳಿಸಿದೆ. 2025ರ ಏಪ್ರಿಲ್ 1ರವರೆಗೂ ಈ ಪ್ಲೇಸ್ಟೋರ್​ನಲ್ಲಿ ಆ್ಯಪ್ ಲಿಸ್ಟಿಂಗ್​ಗೆ ಯಾವುದೇ ಶುಲ್ಕ ನೀಡುವಂತಿಲ್ಲ. ಸ್ಯಾಮ್ಸುಂಗ್, ಆ್ಯಪಲ್ ಇತ್ಯಾದಿಯಂತೆ ಭಾರತದ್ದೇ ಒಂದು ಮೊಬೈಲ್ ಫೋನ್ ಬ್ರ್ಯಾಂಡ್ ಅನ್ನು ಸ್ಥಾಪಿಸಲು ಸರ್ಕಾರ ಆಸಕ್ತಿ ತೋರಿದೆ.

Indus: ಆಂಡ್ರಾಯ್ಡ್ ಮಾರುಕಟ್ಟೆಗೆ ಭಾರತದ್ದೇ ಇಂಡಸ್ ಆ್ಯಪ್​ಸ್ಟೋರ್ ಲಗ್ಗೆ; ದೇಶೀಯ ಮೊಬೈಲ್ ಬ್ರ್ಯಾಂಡ್ ಅಭಿವೃದ್ಧಿಗೆ ಸರ್ಕಾರ ಆಸಕ್ತಿ
ಅಶ್ವಿನಿ ವೈಷ್ಣವ್
Follow us on

ನವದೆಹಲಿ, ಫೆಬ್ರುವರಿ 22: ಗೂಗಲ್​ನ ಪ್ಲೇ ಸ್ಟೋರ್ ಮತ್ತು ಆ್ಯಪಲ್​ನ ಆಪ್​ಸ್ಟೋರ್ ಪ್ರಾಬಲ್ಯ ಇರುವ ಮೊಬೈಲ್ ಆ್ಯಪ್​ಗಳ ಮಾರುಕಟ್ಟೆಸ್ಥಳಕ್ಕೆ ಈಗ ಇಂಡಸ್ ಆ್ಯಪ್​ಸ್ಟೋರ್ (Indus Appstore) ಲಗ್ಗೆ ಇಟ್ಟಿದೆ. ಭಾರತದ ನಂಬರ್ ಒನ್ ಯುಪಿಐ ಆ್ಯಪ್ ಎನಿಸಿರುವ ಫೋನ್​ಪೇ (PhonePe) ಇದೀಗ ಇಂಡಸ್ ಆ್ಯಪ್​ಸ್ಟೋರ್ ಅನ್ನು ಅನಾವರಣಗೊಳಿಸಿದೆ. ಆಂಡ್ರಾಯ್ಡ್ ಆ್ಯಪ್​ಗಳಿಗೆ ಪ್ಲಾಟ್​ಫಾರ್ಮ್ ಆಗಿರುವ ಇಂಡಸ್ ಆ್ಯಪ್​ಸ್ಟೋರ್ ಅನ್ನು ಸಂಪೂರ್ಣ ದೇಶೀಯವಾಗಿಯೇ ನಿರ್ಮಿಸಲಾಗಿದೆ. ಭಾರತೀಯ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿರುವ ಈ ಆ್ಯಪ್ ಸ್ಟೋರ್​ನಲ್ಲಿ 12 ಭಾರತೀಯ ಭಾಷೆಗಳಲ್ಲಿ 2,00,000ಕ್ಕೂ ಹೆಚ್ಚು ಆ್ಯಪ್ ಮತ್ತು ಗೇಮ್​ಗಳಿವೆ.

ಈ ಮಾರುಕಟ್ಟೆಯಲ್ಲಿ ಆರಂಭಿಕ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಲಾಗಿದೆ. ಆ್ಯಪ್ ಡೆವಲಪರುಗಳು ಈ ಸ್ಟೋರ್​ನಲ್ಲಿ ತಮ್ಮ ಆ್ಯಪ್​ಗಳನ್ನು ಲಿಸ್ಟ್ ಮಾಡಲು ಯಾವುದೇ ಶುಲ್ಕ ಕಟ್ಟುವ ಅವಶ್ಯಕತೆ ಇಲ್ಲ. ಈ ವಿನಾಯಿತಿ ಒಂದು ವರ್ಷ ಇರುತ್ತದೆ. 2025ರ ಏಪ್ರಿಲ್ 1ರವರೆಗೂ ಲಿಸ್ಟಿಂಗ್ ಉಚಿತವಾಗಿರುತ್ತದೆ. ಹಾಗೆಯೇ, ಥರ್ಡ್ ಪಾರ್ಟಿ ಪಾವತಿ ಅವಕಾಶ ಕೊಡಲಾಗುತ್ತದೆ.

ಇದನ್ನೂ ಓದಿ: ನಲವತ್ತಕ್ಕೂ ಹೆಚ್ಚು ಕಂಪನಿಗಳ ಒಡೆಯರಾಗಿದ್ದಾರೆ ಫ್ಲಿಪ್​ಕಾರ್ಟ್​ನ ಮಾಜಿ ಉದ್ಯೋಗಿಗಳು

ಭಾರತದ್ದೇ ಸ್ವಂತ ಮೊಬೈಲ್ ಫೋನ್ ಬ್ರ್ಯಾಂಡ್​ಗೆ ಸರ್ಕಾರದ ಚಿಂತನೆ

ಭಾರತದಲ್ಲಿ ಈಗ ಸಾಕಷ್ಟು ಮೊಬೈಲ್ ಫೋನ್​ಗಳ ಉತ್ಪಾದನೆ ಕಾರ್ಯ ನಡೆಯುತ್ತಿದೆ. ಬಹಳಷ್ಟು ಬಿಡಿಭಾಗಗಳೂ ಕೂಡ ಭಾರತದಲ್ಲಿ ಈಗ ತಯಾರಾಗುತ್ತಿವೆ. ಈ ಯಶಸ್ಸಿನ ಉಮೇದಿನಲ್ಲಿ ಭಾರತದ್ದೇ ಮೊಬೈಲ್ ಫೋನ್ ಬ್ರ್ಯಾಂಡ್ ಅಭಿವೃದ್ಧಿಪಡಿಸಲು ಸರ್ಕಾರ ಆಸಕ್ತಿ ತೋರಿದೆ. ಫೋನ್​ಪೇ ವತಿಯಿಂದ ಇಂಡಸ್ ಆ್ಯಪ್​ಸ್ಟೋರ್​ನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಅಶ್ವಿನಿ ವೈಷ್ಣವ್ ಅವರು ದೇಶೀಯ ಮೊಬೈಲ್ ಬ್ರ್ಯಾಂಡ್ ತಯಾರಿಸುವ ಸುಳಿವು ನೀಡಿದ್ದಾರೆ.

‘ಭಾರತೀಯ ಮೊಬೈಲ್ ಫೋನ್ ಬ್ರ್ಯಾಂಡ್ ಅನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಈ ದೇಶದಲ್ಲಿ ಸಮಗ್ರ ಮೊಬೈಲ್ ಇಕೋಸಿಸ್ಟಂ ನಿರ್ಮಿಸುವುದು ನಮ್ಮ ಗುರಿ. ದೊಡ್ಡ ಮಟ್ಟದಲ್ಲಿ ಮೊಬೈಲ್ ತಯಾರಿಕೆಯಲ್ಲಿ ನಮಗೆ ಸಿಕ್ಕಿರುವ ಆರಂಭಿಕ ಯಶಸ್ಸಿನಿಂದಾಗಿ ಉದ್ಯಮದ ಆತ್ಮವಿಶ್ವಾಸ ಹೆಚ್ಚಾಗಿದೆ. ಈ ಮೊಬೈಲ್ ಉತ್ಪಾದನೆಯ ವ್ಯವಸ್ಥೆಯಲ್ಲಿರುವ ಪಾಲುದಾರರು ಭಾರತಕ್ಕೆ ಬರಲು ಬಯಸಿದ್ದಾರೆ. ಮುಂದಿನ ಐದು ವರ್ಷದಲ್ಲಿ ಈ ಪ್ರಯಾಣ ಪೂರ್ಣಗೊಳ್ಳುತ್ತದೆ,’ ಎಂದು ಸಚಿವ ಎ ವೈಷ್ಣವ್ ಹೇಳಿದ್ದಾರೆ.

ಇದನ್ನೂ ಓದಿ: ಬೈಜುಸ್ ಸಿಇಒಗೆ ಲುಕ್ ಔಟ್ ಸರ್ಕುಲಾರ್ ನೋಟೀಸ್ ಹೊರಡಿಸಲು ಇಡಿ ಯತ್ನ

ಇದೇ ವೇಳೆ, ಬಹಳ ಶೀಘ್ರದಲ್ಲೇ ಎರಡರಿಂದ ಮೂರು ಸೆಮಿಕಂಡಕ್ಟರ್ ಚಿಪ್ ಘಟಕಗಳಿಗೆ ಸರ್ಕಾರ ಅನುಮೋದನೆ ಕೊಡಲಿದೆ. ಮುಂದಿನ ಐದು ವರ್ಷದಲ್ಲಿ ಮೂರ್ನಾಲ್ಕು ಉಚ್ಚ ಗುಣಮಟ್ಟದ ಬೃಹತ್ ಫ್ಯಾಬ್ರಿಕೇಶನ್ ಯೂನಿಟ್​ಗಳನ್ನು ಸ್ಥಾಪಿಸಲು ಉದ್ದೇಶಿಸಿದೆ. ಒಂದಾದರೂ ಉತ್ಪನ್ನ ಕ್ಷೇತ್ರದಲ್ಲಿ ಭಾರತ ಮುಂಚೂಣಿಗೆ ಬರಲು ಬಯಸಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಸಚಿವರು ವಿವರಿಸಿದ್ಧಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ