Ownership: ನಲವತ್ತಕ್ಕೂ ಹೆಚ್ಚು ಕಂಪನಿಗಳ ಒಡೆಯರಾಗಿದ್ದಾರೆ ಫ್ಲಿಪ್ಕಾರ್ಟ್ನ ಮಾಜಿ ಉದ್ಯೋಗಿಗಳು
Ex Flipkart Employees Are Boss Of 44 Companies: ಫ್ಲಿಪ್ಕಾರ್ಟ್ನ ಮಾಜಿ ಉದ್ಯೋಗಿಗಳಲ್ಲಿ ಅನೇಕರು ತಮ್ಮದೇ ಹೊಸ ಕಂಪನಿಗಳನ್ನು ಆರಂಭಿಸಿದ್ದಾರೆ. ವರದಿ ಪ್ರಕಾರ ಇಂಥ 44 ಕಂಪನಿಗಳಿವೆ. ಮಾಜಿ ಫ್ಲಿಪ್ಕಾರ್ಟ್ ಉದ್ಯೋಗಿಗಳಿಂದ ನಡೆಸಲಾಗುತ್ತಿರುವ 44 ಕಂಪನಿಗಳ ಒಟ್ಟು ಮೌಲ್ಯ 25 ಬಿಲಿಯನ್ ಡಾಲರ್ ಇರಬಹುದು. ಫ್ಲಿಪ್ಕಾರ್ಟ್ ತನ್ನ ಸಾವಿರಾರು ಉದ್ಯೋಗಿಗಳಿಗೆ ಹಂಚಿಕೆ ಮಾಡಿದ್ದ ಷೇರುಗಳನ್ನು ವಾಪಸ್ ಖರೀದಿಸಲು ಆರಂಭಿಸಿದಾಗಿನಿಂದ ಈ ಟ್ರೆಂಡ್ ಇದೆ.
ನವದೆಹಲಿ, ಫೆಬ್ರುವರಿ 22: ಮಾಲೀಕ ಸದಾ ಮಾಲೀಕನಾಗಬೇಕಿಲ್ಲ, ಉದ್ಯೋಗಿ ಯಾವಾಗಲೂ ಉದ್ಯೋಗಿಯಾಗಿಯೇ ಉಳಿದುಕೊಳ್ಳಬೇಕಿಲ್ಲ. ಯಾರೊಳಗಿನ ಉದ್ಯಮಶೀಲತಾ ಮನೋಭಾವ (entrepreneurship) ಯಾವಾಗ ಪೊರೆಕಳಚಿ ಹೊರಬಂದು ಅರಳುತ್ತದೋ ಅಂದಾಜಿಸುವುದು ಕಷ್ಟ. ಅದೆಷ್ಟೋ ವರ್ಷ ಕೆಲಸ ಮಾಡಿ ಆ ಬಳಿಕ ಉದ್ಯಮಿಗಳಾದವರು ಇದ್ದಾರೆ. ಟೆಕ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರು ತಮ್ಮದೇ ಹೊಸ ಕಂಪನಿ ಕಟ್ಟಿ ಹೋದ ನಿದರ್ಶನಗಳು ಹಲವುಂಟು. ಫ್ಲಿಪ್ಕಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದವರು (Flipkart employees) ಬರೋಬ್ಬರಿ 40ಕ್ಕೂ ಸ್ಟಾರ್ಟಪ್ಗಳನ್ನು ಆರಂಭಿಸಿರುವ ಒಂದು ವಿಶೇಷ ಸಂಗತಿ ಬೆಳಕಿಗೆ ಬಂದಿದೆ. ಬಹುಶಃ ಒಂದೇ ಕಂಪನಿಯ ಮಾಜಿ ಉದ್ಯೋಗಿಗಳಿಂದ ಇಷ್ಟೊಂದು ಕಂಪನಿಗಳು ಶುರುವಾಗಿದ್ದು ದಾಖಲೆಯೇ ಇರಬಹುದು. ಫೋನ್ಪೇ, ಉಡಾನ್, ಗ್ರೋ ಇತ್ಯಾದಿ ಯೂನಿಕಾರ್ನ್ ಕಂಪನಿಗಳನ್ನು ಕಟ್ಟಿದವರು ಫ್ಲಿಪ್ಕಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದವರೇ.
ಹಿಂದೂ ಬ್ಯುಸಿನೆಸ್ಲೈನ್ ಪತ್ರಿಕೆಯಲ್ಲಿ ಬಂದಿರುವ ವರದಿ ಪ್ರಕಾರ ಫ್ಲಿಪ್ಕಾರ್ಟ್ನ ಮಾಜಿ ಉದ್ಯೋಗಿಗಳಿಂದ ಆರಂಭವಾಗಿರುವ ಸ್ಟಾರ್ಟಪ್ಗಳ ಸಂಖ್ಯೆ ಸುಮಾರು 44 ಇರಬಹುದು. ಇವುಗಳ ಒಟ್ಟಾರೆ ಮೌಲ್ಯ ಬರೋಬ್ಬರಿ 25 ಬಿಲಿಯನ್ ಡಾಲರ್ ಇರಬಹುದು ಎಂದು ಅಂದಾಜಿಸಲಾಗಿದೆ. ಈ 44 ಕಂಪನಿಗಳಲ್ಲಿ 15 ಇಕಾಮರ್ಸ್ ಕ್ಷೇತ್ರದವೇ ಆಗಿವೆ. ಎಂಟು ಫಿನ್ಟೆಕ್ ಕಂಪನಿಗಳಿವೆ. ಪ್ರೈವೇಟ್ ಸರ್ಕಲ್ ರೀಸರ್ಚ್ ಎಂಬ ಸಂಸ್ಥೆ ಹೆಕ್ಕಿದ ಮಾಹಿತಿಯನ್ನು ಆಧರಿಸಿ ಮಾಧ್ಯಮದಲ್ಲಿ ಇದರ ವರದಿಯಾಗಿದೆ.
ಕುತೂಹಲವೆಂದರೆ, ಫ್ಲಿಪ್ಕಾರ್ಟ್ನ ಮಾಜಿ ಉದ್ಯೋಗಿಗಳಿಂದ ಆರಂಭವಾದ ಹೊಸ ಕಂಪನಿಗಳ ಸಂಖ್ಯೆ 44 ಮಾತ್ರವಲ್ಲ, ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ.
ಯಥಾ ಮಾಲೀಕ, ತಥಾ ಉದ್ಯೋಗಿ…
ಫ್ಲಿಪ್ಕಾರ್ಟ್ ಕಂಪನಿಯನ್ನು ಹುಟ್ಟುಹಾಕಿದವರು ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಎಂಬಿಬ್ಬರು. ಇವರಿಬ್ಬರೂ ಕೂಡ ಅಮೇಜಾನ್ ವೆಬ್ ಸರ್ವಿಸಸ್ನಲ್ಲಿ ಕೆಲಸ ಮಾಡುತ್ತಿದ್ದರು. ಕೇವಲ ಆರು ತಿಂಗಳು ಕೆಲಸ ಮಾಡಿ, ರಾಜೀನಾಮೆ ಕೊಟ್ಟು 2007ರಲ್ಲಿ ಬೆಂಗಳೂರಿನಲ್ಲಿ ಫ್ಲಿಪ್ಕಅರ್ಟ್ ಆರಂಭಿಸಿದ್ದರು.
ಇದನ್ನೂ ಓದಿ: ಲಂಡನ್ನಲ್ಲಿ ಜನಿಸಿದ ಕೊಹ್ಲಿ ಮಗ ಅಕಾಯ್ಗೆ ಬ್ರಿಟನ್ ಪೌರತ್ವ ಸಿಗುತ್ತಾ? ನಿಯಮಗಳೇನು ನೋಡಿ
ಈಗ ಎರಡು ದಶಕಗಳ ಬಳಿಕ ಇದೇ ಫ್ಲಿಪ್ಕಾರ್ಟ್ನಲ್ಲಿ ಕೆಲಸ ಮಾಡುತ್ತಿದ್ದವರು ತಮ್ಮದೇ ಸ್ವಂತ ಕಂಪನಿ ಕಟ್ಟಿದ್ದಾರೆ. ಕುತೂಹಲವೆಂದರೆ ಎಂಟು ಕಂಪನಿಗಳಿಗೆ ಬಿನ್ನಿ ಬನ್ಸಾಲ್ ಅವರೇ ಹೂಡಿಕೆಯ ಮೂಲಕ ಬೆಂಬಲ ಕೊಟ್ಟಿದ್ದಾರೆ.
ಉದ್ಯೋಗಿ ಷೇರು ಮಾಲಿಕತ್ವ ಮತ್ತು ಹೊಸ ಸ್ಟಾರ್ಟಪ್ಗಳು…
ಫ್ಲಿಪ್ಕಾರ್ಟ್ನ ಮಾಜಿ ಉದ್ಯೋಗಿಗಳು ಹೊಸ ಸ್ಟಾರ್ಟಪ್ಗಳು ಮತ್ತು ಆ ಕಂಪನಿಯ ಉದ್ಯೋಗಿ ಷೇರು ಮಾಲಿಕತ್ವ ಯೋಜನೆಗೂ ನಂಟಿದೆ. ಫ್ಲಿಪ್ಕಾರ್ಟ್ ತಮ್ಮ ಕೆಲ ವಿಶೇಷ ಉದ್ಯೋಗಿಗಳಿಗೆ ಸ್ಟಾಕ್ ಓನರ್ಶಿಪ್ ನೀಡುತ್ತದೆ. 2017ರಿಂದ ನಾಲ್ಕೈದು ಬಾರಿ ಅದು ಉದ್ಯೋಗಿಗಳ ಷೇರುಗಳನ್ನು ವಾಪಸ್ ಖರೀದಿಸಿದ್ದಿದೆ. ಈ ಸಂದರ್ಭದಲ್ಲೇ ಅಲ್ಲಿನ ಉದ್ಯೋಗಿಗಳು ತಮ್ಮದೇ ಹೊಸ ಸ್ಟಾರ್ಟಪ್ ಕಟ್ಟುವ ಧೈರ್ಯ ತೋರಿದ್ದಂತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ