Yashasvi Jaiswal: ಟೆಂಟ್​ನಲ್ಲಿ ವಾಸಿಸುತ್ತಿದ್ದ ಕ್ರಿಕೆಟ್ ಸ್ಟಾರ್ ಯಶಸ್ವಿ ಜೈಸ್ವಾಲ್​ರಿಂದ ಐಷಾರಾಮಿ ಮನೆ ಖರೀದಿ; ಪ್ರತಿಷ್ಠಿತ ಏರಿಯಾದಲ್ಲಿದೆ ಈ ಅಪಾರ್ಟ್ಮೆಂಟ್

Rag to Rich Story of Yashasvi Jaiswal: ಯಶಸ್ವಿ ಜೈಸ್ವಾಲ್ ಮುಂಬೈನ ಪ್ರತಿಷ್ಠಿತ ಬಾಂದ್ರಾ ಈಸ್ಟ್ ಏರಿಯಾದಲ್ಲಿ ಅದಾನಿ ಕಂಪನಿ ನಿರ್ಮಿತ ಲಕ್ಷುರಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. 1,110 ಚದರಡಿ ವಿಸ್ತೀರ್ಣದ ಈ ಮನೆಯ ಬೆಲೆ ಐದು ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ. ಒಂದು ಕಾಲದಲ್ಲಿ ಮುಂಬೈನಲ್ಲಿ ವಾಸಿಸಲು ಹಣ ಇಲ್ಲದೇ ಟೆಂಟ್​​ಗಳಲ್ಲಿ ಇದ್ದು ಪಾನಿ ಪುರಿ ಮಾರಿಕೊಂಡು ಕಲಿಯುತ್ತಿದ್ದವರು ಜೈಸ್ವಾಲ್.

Yashasvi Jaiswal: ಟೆಂಟ್​ನಲ್ಲಿ ವಾಸಿಸುತ್ತಿದ್ದ ಕ್ರಿಕೆಟ್ ಸ್ಟಾರ್ ಯಶಸ್ವಿ ಜೈಸ್ವಾಲ್​ರಿಂದ ಐಷಾರಾಮಿ ಮನೆ ಖರೀದಿ; ಪ್ರತಿಷ್ಠಿತ ಏರಿಯಾದಲ್ಲಿದೆ ಈ ಅಪಾರ್ಟ್ಮೆಂಟ್
ಯಶಸ್ವಿ ಜೈಸ್ವಾಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 21, 2024 | 5:46 PM

ಯಶಸ್ವಿ ಜೈಸ್ವಾಲ್ (Yashasvi Jaiswal) ಈಗ ಭಾರತ ಕ್ರಿಕೆಟ್ ಲೋಕದ ಹೊಸ ಸ್ಟಾರ್ ಆಗಿದ್ದಾರೆ. ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಆರು ಅಡಿ ಎತ್ತರದ ಈ 22 ವರ್ಷದ ಯುವ ಕ್ರಿಕೆಟಿಗನನ್ನು ನೋಡಿದರೆ ಮುಂಬೈನ ಮೇಲ್ಮಧ್ಯಮ ವರ್ಗದ ಕುಟುಂಬದಿಂದ ಬಂದವರು ಎಂದನಿಸಬಹುದು. ಆದರೆ, ವಾಸ್ತವ ಬೇರೆ. ಈಗ ಸುದ್ದಿ ಏನೆಂದರೆ, ಯಶಸ್ವಿ ಜೈಸ್ವಾಲ್ ಮುಂಬೈನಲ್ಲಿ ಬಹಳ ಸುಂದರವಾದ ಒಂದು ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಮನಿಕಂಟ್ರೋಲ್​ನಲ್ಲಿ ಬಂದಿರುವ ವರದಿ ಪ್ರಕಾರ 1,110 ಚದರಡಿ ವಿಸ್ತೀರ್ಣದ ಅಪಾರ್ಟ್ಮೆಂಟ್ ಅನ್ನು 5.38 ಕೋಟಿ ರೂಗೆ ಅವರು ಕೊಂಡುಕೊಂಡಿದ್ದಾರೆ. ಅದಾನಿ ರಿಯಾಲ್ಟಿ ಸಂಸ್ಥೆಯ ಟೆನ್ ಬಿಕೆಸಿ ಪ್ರಾಜೆಕ್ಟ್ ಅಡಿಯಲ್ಲಿ ಈ ಅಪಾರ್ಟ್ಮೆಂಟ್ ಇನ್ನೂ ನಿರ್ಮಾಣ ಹಂತದಲ್ಲಿದೆ. ಮುಂಬೈನ ಅತ್ಯಂತ ಪ್ರತಿಷ್ಠಿತ ಪ್ರದೇಶಗಳಲ್ಲಿ ಒಂದೆನಿಸಿದ ಬಾಂದ್ರಾ ಈಸ್ಟ್​ನಲ್ಲಿ (Bandra East) ಈ ಅಪಾರ್ಟ್ಮೆಂಟ್ ಇದೆ. ಈ ವರ್ಷವೇ ಜೈಸ್ವಾಲ್ ಈ ಅಪಾರ್ಟ್ಮೆಂಟ್​ಗೆ ಕಾಲಿಡಬಹುದು ಎನ್ನಲಾಗಿದೆ.

ಟೆಂಟ್​ನಲ್ಲಿ ವಾಸಿಸುತ್ತಿದ್ದ ಹುಡುಗನ ದೆಸೆ ಹೇಗೆ ಬದಲಾಗಿದೆ ನೋಡಿ…

ಉತ್ತರಪ್ರದೇಶದ ಸಂತ್ ರವಿದಾಸ್ ನಗರ್ ಜಿಲ್ಲೆಯವರಾದ ಯಶಸ್ವಿ ಜೈಸ್ವಾಲ್ ಸಾಧಾರಣ ಮಧ್ಯಮವರ್ಗದ ಕುಟುಂಬದವರು. 10ನೇ ವಯಸ್ಸಿನಲ್ಲಿ ಕ್ರಿಕೆಟ್ ತರಬೇತಿಗೆಂದು 2010ರಲ್ಲಿ ಮುಂಬೈಗೆ ಬಂದವರು. ಡೈರಿ ಶಾಪ್​ವೊಂದರಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಉಳಿದುಕೊಂಡು ಕ್ರಿಕೆಟ್ ಅನ್ನೂ ಪ್ರಾಕ್ಟೀಸ್ ಮಾಡುತ್ತಿದ್ದರು. ಆದರೆ, ಕೆಲಸ ಮಾಡಲು ಸರಿಯಾಗಿ ಸಮಯ ಸಿಗದಿದ್ದರಿಂದ ಶಾಪ್ ಮಾಲೀಕ ಈ ಜೈಸ್ವಾಲ್​ರನ್ನು ಹೊರಕಳುಹಿಸಿದರು.

Yashasvi Jaiswal Buys Luxury Apartment In Mumbai, Know His Rag to Rich Story From Living In a Tent

ಆಜಾದ್ ಮೈದಾನದ ಸಾಂದರ್ಭಿಕ ಚಿತ್ರ

ಆಗ ಯಶಸ್ವಿ ಜೈಸ್ವಾಲ್ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದುದು ಆಜಾದ್ ಮೈದಾನ್ ಗ್ರೌಂಡ್​ನಲ್ಲಿ. ವಸತಿಗೆ ಜಾಗ ಇರಲಿಲ್ಲ. ಲಾಡ್ಜ್, ಹೋಟೆಲ್​ಗಳಲ್ಲಿ ಉಳಿದುಕೊಳ್ಳಲು ದುಡ್ಡು ಇರಲಿಲ್ಲ. ಅವರು ಅನಿವಾರ್ಯವಾಗಿ ಆಜಾದ್ ಮೈದಾನ್​ನ ಗ್ರೌಂಡ್ಸ್​ಮನ್​ಗಳ ಜೊತೆ ಟೆಂಟ್​ನಲ್ಲಿ ವಾಸಿಸುತ್ತಿದ್ದರು. ಹಣಕ್ಕಾಗಿ ಅವರು ಪಾನಿಪುರಿ ಕೂಡ ಮಾರುತ್ತಿದ್ದರು.

ಇದನ್ನೂ ಓದಿ: ವಿರುಷ್ಕಾ ದಂಪತಿಗಳಿಗೆ ಗಂಡು ಮಗು ಜನನ; ಪಾಕಿಸ್ತಾನದಲ್ಲಿ ಮುಗಿಲು ಮುಟ್ಟಿದ ಸಂಭ್ರಮಾಚರಣೆ! ವಿಡಿಯೋ ವೈರಲ್

ಮೂರು ವರ್ಷ ಕಾಲ ಇದೇ ರೀತಿ ಟೆಂಟ್​ನಲ್ಲಿ ವಾಸಿಸುತ್ತಿದ್ದ ಯಶಸ್ವಿ ಜೈಸ್ವಾಲ್ ಅವರ ಲಕ್ ಬದಲಾಗಿದ್ದು ಜ್ವಾಲಾ ಸಿಂಗ್ ಅವರ ಕಣ್ಣಿಗೆ ಬಿದ್ದ ಮೇಲೆ. ಜೈಸ್ವಾಲ್ ಕ್ರಿಕೆಟ್ ಪ್ರತಿಭೆಯನ್ನು ಸಿಂಗ್ ಗುರುತಿಸಿದ್ದರು. ಸಾಂಟಾಕ್ರುಜ್​ನಲ್ಲಿ ಕ್ರಿಕೆಟ್ ಅಕಾಡೆಮಿ ನಡೆಸುತ್ತಿದ್ದ ಅವರು ಯಶಸ್ವಿ ಜೈಸ್ವಾಲ್​ಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು. ಅವರಿಗೆ ಗಾಡ್ ಫಾದರ್ ರೀತಿಯೇ ಆದರು.

Yashasvi Jaiswal Buys Luxury Apartment In Mumbai, Know His Rag to Rich Story From Living In a Tent

ಯಶಸ್ವಿ ಜೈಸ್ವಾಲ್ ಪಾನಿಪುರಿ ಮಾರುತ್ತಿದ್ದ ದಿನಗಳು

ಅಲ್ಲಿಂದ ಜೈಸ್ವಾಲ್ ಅವರ ಗಮನ ಸಂಪೂರ್ಣ ಕ್ರಿಕೆಟ್ ಕಡೆಗೇ ಹೋಯಿತು. ಮುಂಬೈ ಕಿರಿಯರ ತಂಡಗಳಿಗೆ ಸೇರಿದರು. ಭಾರತದ ಅಂಡರ್ 19 ಟೀಮ್​ಗೆ ಆಯ್ಕೆಯಾಗಿ ಅಲ್ಲಿಯೂ ಮಿಂಚಿದರು. 2018ರಲ್ಲಿ ಮುಂಬೈ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದರು. ವಿಜಯ್ ಹಜರೆ ಟ್ರೋಫಿಯಲ್ಲಿ 18ನೇ ವಯಸ್ಸಿನಲ್ಲಿ ಡಬಲ್ ಸೆಂಚುರಿ ಭಾರಿಸಿದರು. ಈ ದಾಖಲೆ ಮಾಡಿದ ಅತಿ ಕಿರಿಯ ಬ್ಯಾಟರ್ ಎನಿಸಿದ್ದಾರೆ.

ಇದನ್ನೂ ಓದಿ: ಕೆಲಸಗಾರರಿಗೆ ಮಾಲೀಕತ್ವ ಕೊಟ್ಟು ಮೃತರಾದ ಶ್ರೀಮಂತ; ಕಂಪನಿಯ ಎಲ್ಲಾ 700 ಉದ್ಯೋಗಿಗಳೂ ಈಗ ಮಾಲೀಕರು

ನಂತರ ಐಪಿಎಲ್​ನಲ್ಲೂ ಅವರು ಮಿಂಚಿ, ಬಳಿಕ ಈಗ ಟೀಮ್ ಇಂಡಿಯಾದಲ್ಲಿ ಸ್ಟಾರ್ ಬ್ಯಾಟರ್ ಎನಿಸಿದ್ದಾರೆ. ಕಿರಿಯ ವಯಸ್ಸಿನಲ್ಲಿ ಎರಡು ದ್ವಿಶತಕ ಭಾರಿಸಿದ ಆಟಗಾರರ ಸಾಲಿಗೆ ಸೇರಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ