ಮುಕೇಶ್ ಅಂಬಾನಿ ಅವರ ಆಂಟಿಲಾ (Antilla House) ಬಂಗಲೆ ಬಗ್ಗೆ ಕೇಳಿರಬಹುದು. ಅದು ವಿಶ್ವದ ಎರಡನೇ ಅತಿದುಬಾರಿ ಬಂಗಲೆ ಎನಿಸಿದೆ. ಈಗ ಇಂಥ ಹತ್ತು ದುಬಾರಿ ಬಂಗಲೆ ಮಾಲೀಕರ ಪಟ್ಟಿಗೆ ಮತ್ತೊಂದು ಭಾರತೀಯ ಹೆಸರು ಸೇರಿಕೊಂಡಿದೆ. ಭಾರತದ ಬಿಲಿಯನೇರ್ ಪಂಕಜ್ ಓಸ್ವಾಲ್ (Pankaj Oswal) ಕುಟುಂಬ ಸ್ವಿಟ್ಜರ್ಲ್ಯಾಂಡ್ನಲ್ಲಿ ಭವ್ಯವಾದ ವಿಲ್ಲಾವೊಂದನ್ನು ಖರೀದಿಸಿದೆ. ಅಮೋಘ ನೈಸರ್ಗಿಕ ಸೌಂದರ್ಯಕ್ಕೆ ಹೆಸರಾದ ಸ್ವಿಟ್ಜರ್ಲೆಂಡ್ನ ಅತಿ ಸುಂದರ ಪ್ರದೇಶದಲ್ಲಿರುವ ಗಿಂಗಿನ್ಸ್ (Gingins village) ಎಂಬ ಗ್ರಾಮದಲ್ಲಿ ವಿಲ್ಲಾ ವರಿ (Villa Vari) ಎಂಬ ಬಂಗಲೆಯನ್ನು ಓಸ್ವಾಲ್ ಫ್ಯಾಮಿಲಿ ಖರೀದಿಸಿದೆ. 4.3 ಲಕ್ಷ ಚದರ ಅಡಿಯಷ್ಟು ವಿಸ್ತೀರ್ಣ ಇರುವ ಈ ಪ್ರಾಪರ್ಟಿಯನ್ನು ಇವರು 200 ಮಿಲಿಯನ್ ಡಾಲರ್ ತೆತ್ತು ಪಡೆದುಕೊಂಡಿದ್ದಾರೆ. ಅಂದರೆ ಭಾರತೀಯ ರೂಪಾಯಿಯಲ್ಲಿ ಇದರ ಬೆಲೆ ಅಂದಾಜು 1,650 ಕೋಟಿ ರೂ ಆಗುತ್ತದೆ. ಈ ಬಂಗಲೆಯಿಂದ ಕೂತು ನೋಡಿದರೆ ವಿಶ್ವಖ್ಯಾತ ಆಲ್ಪ್ಸ್ ಹಿಮಪರ್ವತಗಳ ಸಾಲುಗಳು ಭವ್ಯವಾಗಿ ಕಾಣುತ್ತವೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಇದು ವಿಶ್ವದ 10 ದುಬಾರಿ ಮನೆಗಳಲ್ಲಿ ಒಂದಾಗಿದೆ. ವಿಲ್ಲಾ ವಾರಿ ಬಂಗಲೆ ಈ ಮೊದಲು ಕ್ರಿಸ್ಟಿನಾ ಒನಾಸಿಸ್ ಎಂಬಾಕೆಯ ಒಡೆತನದಲ್ಲಿತ್ತು. ಗ್ರೀಕ್ ದೇಶದ ಹಡಗು ಉದ್ಯಮಿ ಅರಿಸ್ಟಾಟಲ್ ಓನಾಸಿಸ್ ಎಂಬುವರ ಮಗಳು ಈಕೆ.
ಪಂಕಜ್ ಓಸ್ವಾಲ್ ಮತ್ತು ರಾಧಿಕಾ ಓಸ್ವಾಲ್ ಅವರು ಈ ಬಂಗಲೆ ಖರೀದಿಸಿದ ಬಳಿಕ ಸಾಕಷ್ಟು ವ್ಯಯಿಸಿ ಅದರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಭಾರತದ ಸಾಂಪ್ರದಾಯಿಕತೆ ಮತ್ತು ಆಧುನಿಕತೆ ಎರಡನ್ನೂ ಬಿಂಬಿಸುವ ರೀತಿಯಲ್ಲಿ ಬದಲಾವಣೆ ತಂದಿದ್ದಾರೆ. ಓಸ್ವಾಲ್ ಕುಟುಂಬದ ಬೇಡಿಕೆ ತಕ್ಕಂತೆ ಬಂಗಲೆಯ ವಿನ್ಯಾಸ ಮತ್ತು ಸೌಂದರ್ಯ ಹೆಚ್ಚಿಸಿದ್ದು ಖ್ಯಾತ ಒಳಾಂಗಣ ವಿನ್ಯಾಸಗಾರ ಜೆಫ್ರಿ ವಿಲ್ಕೆಸ್. ಅಂದಹಾಗೆ ಈ ಬಂಗಲೆಗೆ ವಿಲ್ಲಾ ವಾರಿ ಎಂಬ ಹೆಸರು ಬಂದಿದ್ದು ಓಸ್ವಾಲ್ ಕುಟುಂಬ ಇದನ್ನು ಖರೀದಿಸಿದ ಬಳಿಕವೇ. Vari ಎಂಬುದು ರಾಧಿಕಾ ಮತ್ತು ಪಂಕಜ್ ಓಸ್ವಾಲ್ ಅವರ ಇಬ್ಬರು ಮುದ್ದಿನ ಹೆಣ್ಮಕ್ಕಳ ಹೆಸರಿನ ಸಂಯೋಜನೆ. ಇವರ ಮೊದಲ ಮಗಳು 24 ವರ್ಷದ ವಸುಂಧರಾ ಓಸ್ವಾಲ್. ಎರಡನೇ ಮಗಳು 19 ವರ್ಷದ ರಿದಿ ಓಸ್ವಾಲ್.
ಓಸ್ವಾಲ್ ಆಗ್ರೋ ಮಿಲ್ಸ್, ಓಸ್ವಾಲ್ ಗ್ರೀನ್ಟೆಕ್ ಸಂಸ್ಥೆಗಳ ಸ್ಥಾಪಕ ಅಭಯ್ ಕುಮಾರ್ ಓಸ್ವಾಲ್ ಅವರ ಮಗ ಪಂಕಜ್ ಓಸ್ವಾಲ್. ಅಭಯ್ ಕುಮಾರ್ 2016ರಲ್ಲಿ ನಿಧನಗೊಂಡ ಬಳಿಕ ಪಂಕಜ್ ಅವರು ಎಲ್ಲಾ ಉದ್ಯಮ ನಿಭಾಯಿಸುತ್ತಿದ್ದಾರೆ. ಓಸ್ವಾಲ್ ಗ್ರೂಪ್ ಗ್ಲೋಬಲ್ ಸಂಸ್ಥೆ ಮೂಲಕ ಜಾಗತಿಕವಾಗಿ ವಿವಿಧೆಡೆ ಇವರ ವ್ಯವಹಾರ ಇದೆ. ಪೆಟ್ರೋಕೆಮಿಕಲ್ಸ್, ರಿಯಲ್ ಎಸ್ಟೇಟ್, ಮೈನಿಂಗ್, ಫರ್ಟಿಲೈಸರ್ಸ್ ಕ್ಷೇತ್ರದಲ್ಲಿ ಇವರ ಉದ್ದಿಮೆಗಳಿವೆ. 2013ರಲ್ಲಿ ಇವರು ಆಸ್ಟ್ರೇಲಿಯಾದಿಂದ ಸ್ವಿಟ್ಜರ್ಲೆಂಡ್ಗೆ ಹೋಗಿ ನೆಲಸಿದ್ದರು.
2019ರಲ್ಲೇ ಇವರು ಈ ಬಂಗಲೆ ಖರೀದಿಸಿದ್ದರೂ ಅಲ್ಲಿ ಹೋಗಿ ವಾಸಿಸಲು ಆರಂಭಿಸಿದ್ದು 2022ರಲ್ಲಂತೆ. ಇದೀಗ ಇವರ ಅಗತ್ಯಕ್ಕೆ ತಕ್ಕಂತೆ ಇಂಟೀರಿಯರ್ ಡೆಕೋರೇಶನ್ ಎಲ್ಲವನ್ನೂ ಮಾಡಿಸಿಕೊಂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ