
ನವದೆಹಲಿ, ಡಿಸೆಂಬರ್ 16: ಭಾರತದ ಆರ್ಥಿಕತೆ (Economy) ಮತ್ತು ಆಂತಾರಾಷ್ಟ್ರೀಯ ವ್ಯವಹಾರಗಳು ಉತ್ತಮವಾಗಿದೆ ಎನ್ನುವುದಕ್ಕೆ ನಿದರ್ಶನವೆಂಬಂತೆ ನವೆಂಬರ್ ತಿಂಗಳ ವ್ಯಾಪಾರ ದತ್ತಾಂಶ ಭರ್ಜರಿಯಾಗಿದೆ. ಅಕ್ಟೋಬರ್ನಲ್ಲಿ ಶೇ. 11.8ರಷ್ಟು ಕುಸಿದಿದ್ದ ಸರಕುಗಳ ರಫ್ತು (India’s Merchandise Exports) ನವೆಂಬರ್ ತಿಂಗಳಲ್ಲಿ ಶೇ. 19.38ರಷ್ಟು ಏರಿ 38.13 ಬಿಲಿಯನ್ ಡಾಲರ್ ಆಗಿದೆ. ಇದು ಒಂದು ತಿಂಗಳಲ್ಲಿ ಭಾರತದಿಂದ ರಫ್ತಾದ ಸರಕುಗಳ ಮೌಲ್ಯ. 2022ರ ಜೂನ್ ನಂತರ ಯಾವುದೇ ತಿಂಗಳಲ್ಲಿ ಶೇಕಡವಾರು ಲೆಕ್ಕದಲ್ಲಿ ಭಾರತದ ರಫ್ತು ಕಂಡ ಅತಿಹೆಚ್ಚಳ ಇದಾಗಿದೆ. ಕಳೆದ 10 ವರ್ಷದಲ್ಲಿ ಯಾವುದೇ ನವೆಂಬರ್ ತಿಂಗಳಲ್ಲಿ ಭಾರತದ ರಫ್ತು 38 ಬಿಲಿಯನ್ ಡಾಲರ್ ದಾಟಿರಲಿಲ್ಲ ಎಂದು ಹೇಳಲಾಗುತ್ತಿದೆ.
ಅದೇ ವೇಳೆ, ಭಾರತದ ಆಮದು ತಗ್ಗಿದೆ. ಶೇ. 1.88ರಷ್ಟು ಕಡಿಮೆಗೊಂಡು 62.66 ಬಿಲಿಯನ್ ಡಾಲರ್ ಮುಟ್ಟಿದೆ. ಇದರೊಂದಿಗೆ ಟ್ರೇಡ್ ಡೆಫಿಸಿಟ್ ಅಥವಾ ರಫ್ತು ಮತ್ತು ಆಮದು ನಡುವಿನ ಅಂತರ (trade deficit) 24.53 ಬಿಲಿಯನ್ ಡಾಲರ್ಗೆ ಇಳಿದಿದೆ. ಇದು ಕಳೆದ ಐದು ತಿಂಗಳಲ್ಲೇ ಕಂಡ ಅತ್ಯಂತ ಕಡಿಮೆ ಟ್ರೇಡ್ ಡೆಫಿಸಿಟ್ ಎನಿಸಿದೆ. ನವೆಂಬರ್ನಲ್ಲಿ ಕಡಿಮೆಗೊಂಡಿರುವ ಆಮದಿನಲ್ಲಿ ಚಿನ್ನದ ಪಾತ್ರ ಹೆಚ್ಚಿದೆ. ಭಾರತ ಚಿನ್ನದ ಆಮದನ್ನು ಕಡಿಮೆಗೊಳಿಸಿದ್ದರಿಂದ ಒಟ್ಟಾರೆ ಆಮದು ತಗ್ಗಲು ಸಾಧ್ಯವಾಗಿದೆ.
ಕೆಲ ತಿಂಗಳ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು ಡೆಡ್ ಎಕನಾಮಿ (ಸತ್ತ ಆರ್ಥಿಕತೆ) ಎಂದು ಕುಚೋದ್ಯ ಮಾಡಿದ್ದರು. ಆದರೆ, ಅಮೆರಿಕ ಶೇ 50ರಷ್ಟು ಟ್ಯಾರಿಫ್ ಹಾಕಿದ್ದರೂ ನವೆಂಬರ್ ತಿಂಗಳಲ್ಲಿ ಆ ದೇಶಕ್ಕೆ ಭಾರತದ ರಫ್ತಿನಲ್ಲಿ ಶೇ. 22ರಷ್ಟು ಏರಿದೆ.
ಇದನ್ನೂ ಓದಿ: 2025ರಲ್ಲಿ 44,000 ಹೊಸ ಸ್ಟಾರ್ಟಪ್ಗಳು; ಮಾನ್ಯ ಪಡೆದ ನವೋದ್ದಿಮೆಗಳ ಸಂಖ್ಯೆ ಎರಡು ಲಕ್ಷಕ್ಕೂ ಅಧಿಕ
ದತ್ತಾಂಶದ ಪ್ರಕಾರ 2024ರ ನವೆಂಬರ್ನಲ್ಲಿ ಅಮೆರಿಕಕ್ಕೆ ಭಾರತದಿಂದ ಆದ ರಫ್ತು 5.70 ಬಿಲಿಯನ್ ಡಾಲರ್ ಇತ್ತು. ಈ ನವೆಂಬರ್ನಲ್ಲಿ ಅದು 6.98 ಬಿಲಿಯನ್ ಡಾಲರ್ಗೆ ಏರಿದೆ. ಅಕ್ಟೋಬರ್ನಲ್ಲಿ ಇಳಿಕೆ ಕಂಡಿದ್ದ ರಫ್ತು ಈಗ ತಿರುಗಿ ಎದ್ದಿದೆ. ಅಮೆರಿಕದ 50 ಪರ್ಸೆಂಟ್ ಟ್ಯಾರಿಫ್ ನಡುವೆಯೂ ಭಾರತದ ರಫ್ತು ಉತ್ತಮಗೊಂಡಿರುವುದು ಜಿಡಿಪಿ ಬೆಳವಣಿಗೆಗೆ ಪುಷ್ಟಿಕೊಡುವ ನಿರೀಕ್ಷೆ ಇದೆ.
ಭಾರತದ ರಫ್ತು ಅಮೆರಿಕಕ್ಕೆ ಮಾತ್ರವಲ್ಲ, ಹಲವು ದೇಶಗಳಿಗೂ ಹೆಚ್ಚಿದೆ. ಶೇಕಡಾವಾರ ಲೆಕ್ಕದಲ್ಲಿ ಸ್ಪೇನ್ ದೇಶಕ್ಕೆ ಭಾರತದ ರಫ್ತು ನವೆಂಬರ್ನಲ್ಲಿ ಬರೋಬ್ಬರಿ 181.2ರಷ್ಟು ಏರಿದೆ. ಚೀನಾಗೆ ಶೇ. 90ರಷ್ಟು ರಫ್ತು ಹೆಚ್ಚಿಸಿದೆ ಭಾರತ. ಹಾಂಕಾಂಗ್, ಅಮೆರಿಕ ಹಾಗೂ ಯುಎಇ ದೇಶಗಳಿಗೂ ಭಾರತದ ರಫ್ತಿನಲ್ಲಿ ಗಮನಾರ್ಹ ಹೆಚ್ಚಳವಾಗಿದೆ.
ಇದನ್ನೂ ಓದಿ: ವಿಐಗೆ ಸರ್ಕಾರದಿಂದ ನೆರವಿನ ಹಸ್ತ?; ಎಜಿಆರ್ ಬಾಕಿ ಪಾವತಿಯಲ್ಲಿ ಹಲವು ರಿಯಾಯಿತಿ?
ರಫ್ತು ಮೌಲ್ಯದಲ್ಲಿ ಭಾರತಕ್ಕೆ ಅಮೆರಿಕವೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ನವೆಂಬರ್ನಲ್ಲಿ ಅಮೆರಿಕಕ್ಕೆ ಭಾರತದಿಂದ ಶೇ. 6.98 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳ ರಫ್ತಾಗಿದೆ. ಈ ಟಾಪ್-3ನಲ್ಲಿ 2 ಮತ್ತು 3ನೇ ಸ್ಥಾನ ಯುಎಇ ಮತ್ತು ಚೀನಾ ಇವೆ. ಭಾರತದಿಂದ ಯುಎಇಗೆ ಶೇ. 3.4 ಹಾಗೂ ಚೀನಾಗೆ ಶೇ 2.2 ಬಿಲಿಯನ್ ಡಾಲರ್ ರಫ್ತಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ